ಮೋದಿ, ಪೋಪ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್

Update: 2024-06-17 13:37 GMT

ಇತ್ತೀಚಿನ ಪೋಪ್ ಫ್ರಾನ್ಸಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿರುವುದನ್ನು ತರಾಟೆ ತೆಗೆದುಕೊಂಡ ಕೇರಳ ರಾಜ್ಯ ಕಾಂಗ್ರೆಸ್‌ ಘಟಕ ಒಂದು ಪೋಸ್ಟ್ ಮಾಡಿತ್ತು. ಅದು ರಾಜ್ಯ ರಾಜಕೀಯಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಹಾಗಾಗಿ ಕಾಂಗ್ರೆಸ್‌ ಕೇರಳ ಘಟಕ ಸಾಮಾಜಿಕ ಜಾಲತಾನದ ಮೂಲಕ ಸೋಮವಾರ (ಜೂನ್ 17) ಕ್ಷಮೆಯಾಚಿಸಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಪಕ್ಷ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್‌ ಮಾಡಿದೆ.

ಕೇರಳ ರಾಜ್ಯ ಕಾಂಗ್ರೆಸ್ ತನ್ನ X ಹ್ಯಾಂಡಲ್‌ನಲ್ಲಿನ ಹೊಸ ಪೋಸ್ಟ್‌ನಲ್ಲಿ, ‌ʻʻಕಾಂಗ್ರೆಸ್‌ ಪಕ್ಷ ಮಾಡಿರುವ ಹಿಂದಿನ ಪೋಸ್ಟ್ ನಲ್ಲಿ ಕ್ರಿಶ್ಚಿಯನ್ ನಿಷ್ಠರಿಗೆ ಯಾವುದೇ ಭಾವನಾತ್ಮಕ ಅಥವಾ ಮಾನಸಿಕ ನೋವು ಉಂಟುಮಾಡಿದ್ದರೆ ಅವರಿಗೆ ಬೇಷರತ್ ಕ್ಷಮೆಯಾಚಿಸುತ್ತದೆʼʼ ಎಂದು ಹೇಳಿದೆ.

ʻʻಯಾವುದೇ ಧರ್ಮ, ಧಾರ್ಮಿಕ ಪುರೋಹಿತರು ಅಥವಾ ವಿಗ್ರಹಗಳನ್ನು ಅವಮಾನಿಸುವುದು ಮತ್ತು ಅವಹೇಳನ ಮಾಡುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂಪ್ರದಾಯವಲ್ಲ ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿದೆʼʼ ಎಂದು ವಿವರಣಾತ್ಮಕ ಪೋಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷ ಹೇಳಿದೆ.

ʻʻಪ್ರಪಂಚದಾದ್ಯಂತದ ಕ್ರೈಸ್ತರು ದೇವರಂತೆ ಪರಿಗಣಿಸುವ ಪೋಪ್ ಅವರನ್ನು ಅವಮಾನಿಸುವ ಆಲೋಚನೆಯನ್ನು ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಸಹ ಒಪ್ಪುವುದಿಲ್ಲʼʼ ಎಂದು ಪಕ್ಷ ಹೇಳಿದೆ.

ಮೋದಿಯನ್ನು ಅಪಹಾಸ್ಯ ಮಾಡಲು ಹಿಂಜರಿಯುವುದಿಲ್ಲ

ʻʻಆದಾಗ್ಯೂ, ತನ್ನನ್ನು ತಾನು ದೇವರು ಎಂದು ಕರೆದುಕೊಳ್ಳುವ ಮೂಲಕ ದೇಶದ ನಿಷ್ಠಾವಂತರನ್ನು ಅವಮಾನಿಸುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಹಾಸ್ಯ ಮಾಡಲು ಪಕ್ಷವು ಹಿಂಜರಿಯುವುದಿಲ್ಲʼʼ ಎಂದು ಕಾಂಗ್ರೆಸ್ ಹೇಳಿದೆ.

ʻʻಮೋದಿಯ ʻನಾಚಿಕೆಗೇಡಿನ ರಾಜಕೀಯದಾಟʼವನ್ನು ಅಣಕಿಸುವ ಕಾಂಗ್ರೆಸ್ ಪ್ರಯತ್ನವನ್ನು ಪೋಪ್‌ಗೆ ಮಾಡಿದ ಅವಮಾನ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಮತ್ತು ಇತರರ ಕೋಮುವಾದಿ ಮನಸ್ಸಿನವರು ಬಿಂಬಿಸಿದ್ದಾರೆ. ಆದರೆ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆʼʼ ಎಂದು ಅದು ಹೇಳಿದೆ.

ಸುರೇಂದ್ರನ್ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ʻʻಕ್ರೈಸ್ತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ, ಮಣಿಪುರದಲ್ಲಿ ಅವರ ಚರ್ಚ್‌ಗಳನ್ನು ಸುಟ್ಟುಹಾಕಿದಾಗ ಮೌನವಾಗಿರುವ ಮೋದಿ ಮತ್ತು ಅವರ ಸಂಗಡಿಗರು ಮೊದಲು ಕ್ರಿಶ್ಚಿಯನ್ನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕುʼʼ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

Tags:    

Similar News