ರೈತರಿಗೆ ದಸರಾ ಬಂಪರ್‌| ಬೇಳೆ, ಕಡಲೆ, ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆ; ಯಾವ ಬೆಳೆಗೆ ಎಷ್ಟು ಲಾಭ?

ಈ ದಿಟ್ಟ ಹೆಜ್ಜೆಯು ರೈತರ ಆದಾಯವನ್ನು ದ್ವಿಗುಣಗೊಳಿಸುವ, ಬೆಳೆ ವೈವಿಧ್ಯೀಕರಣವನ್ನು ಖಚಿತಪಡಿಸುವ ಮತ್ತು ಭಾರತದ ಕೃಷಿ-ಆರ್ಥಿಕತೆಯನ್ನು ಬಲಪಡಿಸುವ ಪ್ರಧಾನಿ ಮೋದಿ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

Update: 2025-10-02 08:50 GMT
ರಬಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ.
Click the Play button to listen to article

ಚಳಿಗಾಲದ ಬೆಳೆಗಳಿಗೆ (ರಬಿ) 2026-27 ರ ಮಾರುಕಟ್ಟೆ ಹಂಗಾಮಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. 

ಕೇಂದ್ರ ಸರ್ಕಾರದ ಈ ಆದೇಶದಿಂದಾಗಿ ಕಡಲೆ, ತೊಗರಿ, ಕುಸುಬೆ ಹಾಗೂ ಸಾಸಿವೆ ಬೆಳೆಯುವ ಉತ್ತರ ಕರ್ನಾಟಕ ಜಿಲ್ಲೆಗಳ ರೈತರಿಗೆ ದಸರಾ ಹಬ್ಬದ ಕೊಡುಗೆ ನೀಡಿದಂತಾಗಿದೆ. ಉತ್ತರ ಕರ್ನಾಟಕದಲ್ಲಿ ಚಳಿಗಾಲದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಈ ಬೆಳೆಗಳಿಗೆ ಆಗಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರು ನಷ್ಟ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಕೇಂದ್ರ ಸರ್ಕಾರವು ರಬಿ ಬೆಳೆಗಳಿಗೆ ಮಾರುಕಟ್ಟೆ ಹಂಗಾಮಿನ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.  

ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತಂತೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ನಿರ್ಧಾರದಿಂದ ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಗಣನೀಯ ಲಾಭ ಸಿಗುವುದು ಖಾತ್ರಿಯಾಗಲಿದೆ. ಗೋಧಿಗೆ ಶೇ.109, ಸಾಸಿವೆ ಶೇ. 93, ಬೇಳೆ (ಮಸೂರ) ಶೇ.89, ಕಡಲೆ ಶೇ. 59, ಬಾರ್ಲಿ ಶೇ.58 ಮತ್ತು ಕುಸುಬೆಗೆ ಶೇ.50 ರಷ್ಟು ಲಾಭಾಂಶ ಸಿಗಲಿದೆ ಎಂದು ‌ಖರ್ಗೆ ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಈ ದಿಟ್ಟ ಹೆಜ್ಜೆಯು ರೈತರ ಆದಾಯ ದ್ವಿಗುಣಗೊಳಿಸುವ, ಬೆಳೆ ವೈವಿಧ್ಯೀಕರಣ ಖಚಿತಪಡಿಸುವ ಮತ್ತು ಭಾರತದ ಕೃಷಿ-ಆರ್ಥಿಕತೆ ಬಲಪಡಿಸುವಲ್ಲಿ ಅಚಲ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

ಎಂಎಸ್‌ಪಿ ಎಂದರೇನು ? 

ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಎಂದರೆ ರೈತರು ಬೆಳೆದ ಬೆಳೆಗೆ ಸರ್ಕಾರವು ನೀಡುವ ಖಾತರಿ ಬೆಲೆಯಾಗಿದೆ. ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆ ಕುಸಿದಾಗ ರೈತರು ನಷ್ಟ ಅನುಭವಿಸುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರವು ನಿರ್ದಿಷ್ಟ ಬೆಳೆಗಳಿಗೆ ಈ ಬೆಲೆಯನ್ನು ಪ್ರಕಟಿಸುತ್ತದೆ, ಇದು ರೈತರಿಗೆ ಕನಿಷ್ಠ ಲಾಭವನ್ನು ಖಚಿತಪಡಿಸುತ್ತದೆ ಮತ್ತು ದೇಶದ ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ.

ಎಂಎಸ್‌ಪಿ ಉದ್ದೇಶವೇನು ?

ಬೆಲೆ ಕುಸಿತದಿಂದ ರೈತರನ್ನು ರಕ್ಷಿಸುವುದು, ಬೆಳೆ ಉತ್ಪಾದನೆ ಉತ್ತೇಜಿಸುವುದು ಮತ್ತು ಆಹಾರ ಭದ್ರತೆ ಹೆಚ್ಚಿಸುವುದು ಕನಿಷ್ಠ ಬೆಂಬಲ ಬೆಲೆಯ ಉದ್ದೇಶವಾಗಿದೆ. ಸಾಮಾನ್ಯವಾಗಿ ಪ್ರತಿ ಹಂಗಾಮಿನ ಮೊದಲು ಕನಿಷ್ಠ ಬೆಂಬಲ ಬೆಲೆ ಪ್ರಕಟಿಸಲಾಗುತ್ತದೆ. 

ಧಾನ್ಯಗಳು, ಬೇಳೆಗಳು, ಎಣ್ಣೆಬೀಜಗಳು ಮತ್ತು ವಾಣಿಜ್ಯ ಬೆಳೆ ಒಳಗೊಂಡಂತೆ ಸುಮಾರು 23 ಬೆಳೆಗಳಿಗೆ ಎಂಎಸ್‌ಪಿ ನೀಡಲಾಗುತ್ತದೆ. ಮಾರುಕಟ್ಟೆ ಬೆಲೆಗಳು ನಿರ್ದಿಷ್ಟ ಎಂಎಸ್‌ಪಿಗಿಂತ ಕಡಿಮೆಯಾದಾಗ ಸರ್ಕಾರವು ರೈತರಿಂದ ಎಂಎಸ್‌ಪಿ ದರದಲ್ಲಿ ಬೆಳೆ ಖರೀದಿಸುತ್ತದೆ. ಇದು ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಒಂದು ಪ್ರಮುಖ ನೀತಿಯಾಗಿದೆ.

ರಾಜ್ಯದಲ್ಲಿ ಸಾಸಿವೆ ಎಲ್ಲಿ ಬೆಳೆಯಲಾಗುತ್ತದೆ? 

ಕರ್ನಾಟಕದಲ್ಲಿ ವಿಶೇಷವಾಗಿ ತುಂಗಭದ್ರಾ ಕಣಿವೆ ಪ್ರದೇಶದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಾಸಿವೆ ಬೆಳೆಯಲಾಗುತ್ತದೆ. ಇದು ಮುಖ್ಯವಾಗಿ ಕೃಷಿಕರು ಮುಂಗಾರು ವೈಫಲ್ಯದ ನಂತರ ಭತ್ತ ಬೆಳೆಯಲು ಸಾಧ್ಯವಾಗದಿದ್ದಾಗ, ರಾಸಾಯನಿಕ ಅವಲಂಬಿಸದೆ ಎರಡನೇ ಬೆಳೆಯಾಗಿ ಬೆಳೆಯುತ್ತಾರೆ.

ಸಾಸಿವೆಯನ್ನು ಮುಖ್ಯ ಬೆಳೆಯೊಂದಿಗೆ ಬೆಳೆಯುವ ಪದ್ಧತಿಯೂ ಕರ್ನಾಟಕದ ಹಲವೆಡೆ ಪ್ರಚಲಿತದಲ್ಲಿದೆ. ಇದು ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತುಂಗಭದ್ರಾ ಜಲಾಶಯದ ಅಡಿ ಪ್ರದೇಶದ ಕರಟಕಲು ಹೋಬಳಿಯಲ್ಲಿ ಸಾಸಿವೆ ಬೆಳೆಯಲಾಗುತ್ತದೆ.

ಇಲ್ಲಿ ಸುಮಾರು 7,000 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಯಲಾಗುತ್ತದೆ. ಜಲಾಶಯದ ನೀರಿನ ಕೊರತೆಯಿಂದ ಭತ್ತ ಬೆಳೆಯಲು ಸಾಧ್ಯವಾಗದಿದ್ದಾಗ ರೈತರು ಸಾಸಿವೆಯನ್ನು ಎರಡನೇ ಬೆಳೆಯಾಗಿ ಬೆಳೆಯುತ್ತಾರೆ.

ಕಡಲೆ ಬೆಳೆಯುವ ಪ್ರದೇಶಗಳು

ರಾಜ್ಯದಲ್ಲಿ ಕಲಬುರಗಿ, ಧಾರವಾಡ, ವಿಜಾಪುರ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳ 9.62 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತದೆ. ಇದು ಭಾರತದ ಒಟ್ಟು ಕಡಲೆ ಬೆಳೆಯುವ ಪ್ರದೇಶದ ಸುಮಾರು ಶೇ.10.70 ರಷ್ಟಿದೆ. ಕರ್ನಾಟಕವು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ನಂತರದ ಪ್ರಮುಖ ಕಡಲೆ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದೆ.

ಕುಸುಬೆ ಬೆಳೆಯುವ ಪ್ರದೇಶಗಳು?

ರಾಜ್ಯದಲ್ಲಿ ಬೀದ‌ರ್, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸುಬೆ ಬೆಳೆಯಲಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಕಟಾವು ಪ್ರಕ್ರಿಯೆ ನಡೆಯಲಿದ್ದು, ಕುಸುಬೆ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ರಕ್ತದ ಕೊಬ್ಬಿನಾಂಶ ಮಟ್ಟ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಕುಸುಬೆ ಹೊಟ್ಟಿನಿಂದ (ತೌಡ) ದನ ಕರುಗಳಿಗೆ ಹಿಂಡಿ ಕೂಡ ತಯಾರಿಸಲಾಗುತ್ತದೆ.

Tags:    

Similar News