ರಾತ್ರೋರಾತ್ರಿ ಬುಲ್ಡೋಜರ್ ಮೂಲಕ ಅತಿಕ್ರಮಣ ತೆರವು ನಿಲ್ಲಿಸಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ರಸ್ತೆ ವಿಸ್ತರಣೆ ನೆಪದಲ್ಲಿ ರಾತ್ರೊರಾತ್ರಿ ಅತಿಕ್ರಮಣಗಳ ತೆರವಿಗಾಗಿ ಬುಲ್ಡೋಜರ್ ಕಾರ್ಯಾಚರಣೆ ಮಾಡುವುದು ಸರಿಯಲ್ಲ. ಇಂಥ ಪ್ರಕ್ರಿಯೆಗಳನ್ನು ಮುಂದುವರಿಸಬಾರದು ಎಂದು ಕೋರ್ಟ್ ಹೇಳಿದೆ.
2019ರಲ್ಲಿ ನಡೆಸಿದ "ಕಾನೂನುಬಾಹಿರ" ತೆರವು ಕ್ರಮಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ರಸ್ತೆ ವಿಸ್ತರಣೆ ಮತ್ತು ಅತಿಕ್ರಮಣಗಳನ್ನು ತೆರವು ಮಾಡುವ ವೇಳೆ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಬೇಕು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು.
ರಸ್ತೆ ವಿಸ್ತರಣೆ ನೆಪದಲ್ಲಿ ರಾತ್ರೊರಾತ್ರಿ ಅತಿಕ್ರಮಣಗಳ ತೆರವಿಗಾಗಿ ಬುಲ್ಡೋಜರ್ ಕಾರ್ಯಾಚರಣೆ ಮಾಡುವುದು ಸರಿಯಲ್ಲ. ಇಂಥ ಪ್ರಕ್ರಿಯೆಗಳನ್ನು ಮುಂದುವರಿಸಬಾರದು ಎಂದು ಕೋರ್ಟ್ ಹೇಳಿದೆ. ಇದೇ ವೇಳೆ ರಸ್ತೆ ವಿಸ್ತರಣೆ ವೇಳೆ ಅತಿಕ್ರಮಣಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇದ್ರಾಡಳಿತ ಪ್ರದೇಶಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ವಿವರಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನ್ಯಾಯಪೀಠವು ಅರ್ಜಿಗಳ ವಿಚಾರಣೆ ವೇಳೆ ಮಧ್ಯಂತರ ಆದೇಶ ನೀಡಿತು. ರಸ್ತೆ ವಿಸ್ತರಣಾ ಯೋಜನೆಗಾಗಿ 2019ರಲ್ಲಿ ಮನೆ ನೆಲಸಮಗೊಳಿಸಿದ ವ್ಯಕ್ತಿಗೆ 25 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಯುಪಿ ಸರ್ಕಾರಕ್ಕೆ ಆದೇಶಿಸಿತು.
"ನೀವು ಬುಲ್ಡೋಜರ್‌ಗಳೊಂದಿಗೆ ಬಂದು ರಾತ್ರೋರಾತ್ರಿ ನಿರ್ಮಾಣಗಳನ್ನು ನೆಲಸಮ ಮಾಡುವುದು ಸರಿಯಲ್ಲ. ನೀವು ಅವರ ಕುಟುಂಬಗಳಿಗೆ ಮನೆ ಖಾಲಿ ಮಾಡಲು ಯಾಕೆ ಸಮಯ ಕೊಟ್ಟಿಲ್ಲ . ಮನೆಯೊಳಗಿನ ಗೃಹೋಪಯೋಗಿ ವಸ್ತುಗಳ ಬಗ್ಗೆಯೂ ಕಾಳಜಿ ವಹಿಸದೇ ಇರುವುದು ಯಾಕೆ ಎಂದು ನ್ಯಾಯಪೀಠ ಯುಪಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರನ್ನು ಪ್ರಶ್ನಿಸಿತು.
ಮಹಾರಾಜ್‌ಗಂಜ್ ಜಿಲ್ಲೆಯ ಮನೆಯೊಂದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು. ರಸ್ತೆ ವಿಸ್ತರಣೆ ಯೋಜನೆಗೆ ಅನುಸಾರವಾಗಿ ಕ್ರಮ ತೆಗೆದುಕೊಳ್ಳುವ ಮೊದಲು ರಾಜ್ಯ ಅಥವಾ ಅದರ ಆಡಳಿತ ವ್ಯವಸ್ಥೆಯು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯಪೀಠ ವಿವರಿಸಿತು.
ಸಮೀಕ್ಷೆಗಳನ್ನು ನಡೆಸಿ
ಸುಪ್ರೀಂ ಕೋರ್ಟ್ ದಾಖಲೆಗಳು ಅಥವಾ ನಕ್ಷೆಗಳ ಪ್ರಕಾರ ರಸ್ತೆಯ ಅಸ್ತಿತ್ವದಲ್ಲಿರುವ ಅಗಲ ಖಚಿತಪಡಿಸಿಕೊಳ್ಳಲು ಮತ್ತು ಸಮೀಕ್ಷೆಯನ್ನು ನಡೆಸುವಂತೆ ರಾಜ್ಯಗಳಿಗೆ ಸೂಚಿಸಿತು.
ಅತಿಕ್ರಮಣ ಕಂಡುಬಂದರೆ ಅದನ್ನು ತೆಗೆಯಲು ರಾಜ್ಯ ಸರ್ಕಾರವು ಅತಿಕ್ರಮಣದಾರರಿಗೆ ನೋಟಿಸ್ ನೀಡಬೇಕು. ನೋಟಿಸ್‌ನ ನಿಖರತೆ ಮತ್ತು ಸಿಂಧುತ್ವದ ಬಗ್ಗೆ ಆಕ್ಷೇಪಿಸಿದರೆ ಸಹಜ ನ್ಯಾಯದ ತತ್ವಗಳ ಆಧಾರದಲ್ಲಿ ಮೌಖಿಕ ಆದೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಆದೇಶ ತಿರಸ್ಕರಿಸಿದ ಸನ್ನಿವೇಶದಲ್ಲಿ ಅತಿಕ್ರಮಣ ತೆಗೆದುಹಾಕಲು ನೋಟಿಸ್ ನೀಡಬೇಕು ಎಂದು ಕೋರ್ಟ್ ಹೇಳಿದೆ. ಸಂಬಂಧಪಟ್ಟ ವ್ಯಕ್ತಿಯು ಅದನ್ನು ಅನುಸರಿಸಲು ವಿಫಲವಾದರೆ ಮತ್ತು ನ್ಯಾಯಾಲಯದಿಂದ ತಡೆ ತರದ ಸಂದರ್ಭದಲ್ಲಿ ಅತಿಕ್ರಮಣ ತೆಗೆದುಹಾಕಬಹುದು ಎಂದು ನ್ಯಾಯಪೀಠ ಹೇಳಿದೆ.
ರಸ್ತೆ ವಿಸ್ತರಣೆಗೆ ಹೊಂದಿಕೊಂಡಿರುವ ಸರ್ಕಾರಿ ಭೂಮಿ ಸೇರಿದಂತೆ ಪ್ರಸ್ತುತ ಇರುವ ರಸ್ತೆಯ ಅಗಲವು ಸಾಕಾಗುವುದಿಲ್ಲ ಎಂದಾದರೆ. ತೆರವು ಕೈಗೊಳ್ಳುವ ಮೊದಲು ರಾಜ್ಯವು ಕಾನೂನಿನ ಪ್ರಕಾರ ತನ್ನ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಅರ್ಜಿಯ ವಿಚಾರಣೆಯ ವೇಳೆ ಸಂಬಂಧಪಟ್ಟ ಪ್ರದೇಶದಲ್ಲಿ ನಡೆಸಿದ 123 ನಿರ್ಮಾಣಗಳ ನೆಲಸಮಗಳ ಬಗ್ಗೆ ನ್ಯಾಯಪೀಠಕ್ಕೆ ಮಾಹಿತಿ ನೀಡಲಾಯಿತು. ಅತಿಕ್ರಮಣವು 3.7 ಚದರ ಮೀಟರ್ ಎಂದು ನ್ಯಾಯಾಲಯದ ದಾಖಲೆಯಲ್ಲಿ ಪತ್ತೆಯಾಯಿತು.
ನೀವು ಜನರ ಮನೆಗಳನ್ನು ಆ ರೀತಿ ನೆಲಸಮ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ನ್ಯಾಯಾಲಯ, ನೀವು ಮನೆಯ ಒಳಗೆ ಹೋಗಿ ಮನೆಯನ್ನು ನೆಲಸಮ ಮಾಡುವುದು ಸರಿಯೇ? ಯಾವುದೇ ಗಡಿರೇಖೆಯಿಲ್ಲದೆ ಅಥವಾ ಸ್ವಾಧೀನವಿಲ್ಲದೆ ಯಾರೊಬ್ಬರ ಆಸ್ತಿಯನ್ನು ನಾಶಪಡಿಸಲು ಸಾಧ್ಯವೇ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.
ನ್ಯಾಯಾಲಯದ ಕಂಡುಕೊಂಡ ಪ್ರಕಾರ ಮನೆ ನೆಲಸಮಗೊಳಿಸುವ ಮೊದಲು ವ್ಯಕ್ತಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಬದಲಾಗಿ ಡಂಗುರ ಸಾರಿದ್ದೇವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನಿರ್ಮಾಣವನ್ನು ಯಾವ ಆಧಾರದ ಮೇಲೆ ಅನಧಿಕೃತ ಪರಿಗಣಿಸಲಾಗಿದೆ ಎಂದು ಪ್ರಶ್ನಿಸಿತು.
ರಸ್ತೆ ವಿಸ್ತರಣೆ ಯೋಜನೆಯ ಬಗ್ಗೆ ರಾಜ್ಯದ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದಾಗ. ನ್ಯಾಯಪೀಠ "ವಿಸ್ತರಣೆ ಕೇವಲ ನೆಪವಾಗಿತ್ತು. ಅದು ನಿಜವಾದ ಕಾರಣವೆಂದು ತೋರುತ್ತಿಲ್ಲ. "ನೀವು ತಮಟೆ ಬಾರಿಸಿ ಯಾರಿಗಾದರೂ ಮನೆಯನ್ನು ಖಾಲಿ ಮಾಡುವಂತೆ ಹೇಳುವುದು ಯಾವ ನ್ಯಾಯ ಎಂದು ಕೇಳಿತು.
ಶಿಸ್ತು ಕ್ರಮಕ್ಕೆ ಸೂಚನೆ
ಅರ್ಜಿದಾರರ ಮನೆ ನೆಲಸಮಗೊಳಿಸುವಲ್ಲಿ ಯಾವುದೇ ಅಧಿಕಾರಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಸಹ ಕೈಗೊಳ್ಳಬಹುದು. ಈ ಪ್ರದೇಶದಲ್ಲಿ ನೆಲಸಮಗೊಳಿಸಿದ ಇತರ ಮನೆಗಳಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿತು. ಕಾನೂನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಸೇರಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
"ಉತ್ತರ ಪ್ರದೇಶ ಸರ್ಕಾರವು ಅರ್ಜಿದಾರರಿಗೆ ಪರಿಹಾರ ಪಾವತಿಸಬೇಕು. ಅದನ್ನು ನಾವು ಸದ್ಯ 25 ಲಕ್ಷ ರೂಪಾಯಿಗೆ ನಿಗದಿಪಡಿಸುತ್ತೇವೆ ಎಂದು ನ್ಯಾಯಪೀಠ ಹೇಳಿತು. ಇದು ಮಧ್ಯಂತರ ಸ್ವರೂಪದ್ದಾಗಿರುತ್ತದೆ. ಪರಿಹಾರಕ್ಕಾಗಿ ಅರ್ಜಿದಾರರು ಬೇರೆ ಕಾನೂನು ಪರಿಹಾರಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿತು.