ರೈತರ ಪ್ರತಿಭಟನೆ ಹೇಳಿಕೆ: ಕಂಗನಾಗೆ ಛೀಮಾರಿ ಹಾಕಿದ ಬಿಜೆಪಿ

Update: 2024-08-26 13:26 GMT

ಸಂಸದೆ ಕಂಗನಾ ರನೌತ್ ಅವರು ಆಡಳಿತ ಪಕ್ಷದ ಕಾರ್ಯನೀತಿ ಕುರಿತು ಪ್ರತಿಕ್ರಿಯಿಸಲು ಅನುಮತಿ ಅಥವಾ ಅಧಿಕಾರ ಹೊಂದಿಲ್ಲ ಹಾಗೂ ರೈತರ ಪ್ರತಿಭಟನೆ ಕುರಿತ ಅವರ ಹೇಳಿಕೆಗಳನ್ನು ಪಕ್ಷ ಒಪ್ಪುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. 

ಕಂಗನಾ(38) ಅವರಿಗೆ ಛೀಮಾರಿ ಹಾಕಿರುವ ಪಕ್ಷ, ಭವಿಷ್ಯದಲ್ಲಿ ಅಂತಹ ಹೇಳಿಕೆ ನೀಡದಂತೆ ಆದೇಶಿಸಿದೆ.

ಉನ್ನತ ನಾಯಕತ್ವವು ಸಾಕಷ್ಟು ಬಲವಾಗಿರದಿದ್ದರೆ, ರೈತರ ಪ್ರತಿಭಟನೆಗಳು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗ ಬಹುದು ಎಂಬ ಕಂಗನಾ ಅವರ ಹೇಳಿಗೆ ವಿವಾದ ಹುಟ್ಟುಹಾಕಿದೆ. ಕಂಗನಾ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಂದರ್ಭದಲ್ಲಿ ʻದೇಹಗಳು ನೇತಾಡಿದವು ಮತ್ತು ಅತ್ಯಾಚಾರಗಳು ನಡೆದವುʼ ಎಂದು ಹೇಳಿದ್ದರು. ಹಾನಿಯ ದುರಸ್ತಿಗೆ ಮುಂದಾದ ಬಿಜೆಪಿ, ಪಕ್ಷದ ಕಾರ್ಯನೀತಿ ಕುರಿತು ಹೇಳಿಕೆ ನೀಡಲು ಕಂಗನಾ ಅವರಿಗೆ ಅನುಮತಿ ಅಥವಾ ಅಧಿಕಾರವಿಲ್ಲ ಎಂದು ಹೇಳಿದೆ. 

ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆ ನೀಡದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ. ಬಿಜೆಪಿ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ʼ ಮತ್ತು ಸಾಮಾಜಿಕ ಸಾಮರಸ್ಯ ತತ್ವಕ್ಕೆ ಬದ್ಧವಾಗಿದೆ‌ ಎಂದು ಹೇಳಿದೆ.

ಪಂಜಾಬ್ ಬಿಜೆಪಿ ಸಲಹೆ: ಇದಕ್ಕೂ ಮೊದಲು ಹರಿಯಾಣ ಮತ್ತು ಪಂಜಾಬ್‌ನ ಬಿಜೆಪಿ ನಾಯಕರು, ಸಂಯಮದಿಂದಿರಿ ಮತ್ತು ಪ್ರಚೋದಕ ಹೇಳಿಕೆಗಳನ್ನು ನೀಡಬೇಡಿ ಎಂದು ಸಂಸದೆಗೆ ಸಲಹೆ ನೀಡಿದ್ದರು. 

ʻಕಂಗನಾ ಅವರ ಹೇಳಿಕೆ ವೈಯಕ್ತಿಕ. ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತಸ್ನೇಹಿಯಾಗಿದೆ. ವಿರೋಧ ಪಕ್ಷಗಳು ನಮ್ಮ ವಿರುದ್ಧ ಕೆಲಸ ಮಾಡುತ್ತಿವೆ ಮತ್ತು ಕಂಗನಾ ಹೇಳಿಕೆ ಅದನ್ನೇ ಮಾಡುತ್ತದೆ. ಇಂಥ ಸೂಕ್ಷ್ಮ ವಿಷಯ, ಧಾರ್ಮಿಕ ವಿಷಯಗಳು, ಧಾರ್ಮಿಕ ಸಂಘಟನೆ ಬಗ್ಗೆ ಅವರು ಹೇಳಿಕೆ ನೀಡಬಾರದು,ʼ ಎಂದು ಪಂಜಾಬ್ ಬಿಜೆಪಿ ನಾಯಕ ಹರ್ಜಿತ್ ಗ್ರೆವಾಲ್ ಹೇಳಿದರು. 

ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಕಂಗನಾ ಅವರನ್ನು ಅಣಕಿಸಿದ್ದಾರೆ. ಹರಿಯಾಣದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸುರ್ಜೆವಾಲಾ, ʻಇದು ಕಂಗನಾ ಅವರ ಮಾತುಗಳೇ ಅಥವಾ ಅವರು ಬೇರೆಯವರ ಮಾತುಗಳನ್ನು ನಕಲು ಮಾಡಿದ್ದಾರೆಯೇ? ಇಲ್ಲದಿದ್ದರೆ ಬಿಜೆಪಿ ಈ ವಿಚಾರದಲ್ಲಿ ಮೌನವಾಗಿರುವುದೇಕೆ?,ʼ ಎಂದು ಕೇಳಿದರು. 

ಕೆರಳಿಸುವ ಹೇಳಿಕೆಗಳು: ಕಂಗನಾ ಅವರು 2020 ರಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಂಜಾಬ್‌ನ ರೈತ ಮಹಿಳೆಯೊಬ್ಬ ರನ್ನು ಗುಜರಾತ್ ಗಲಭೆ ಸಂತ್ರಸ್ತರಾದ ಬಿಲ್ಕಿಸ್ ಬಾನೊ ಎಂದು ತಪ್ಪಾಗಿ ಗ್ರಹಿಸಿದ್ದರು. ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆ ʻ100 ರೂ.ಗೆ ಲಭ್ಯವಿದ್ದಾಳೆʼ ಎಂದು ಹೇಳಿದ್ದರು. ಈ ಹೇಳಿಕೆ ಸಂಚಲನ ಸೃಷ್ಟಿಸಿತ್ತು. 

ಜೂನ್ 6 ರಂದು ದೆಹಲಿಗೆ ತೆರಳುತ್ತಿದ್ದ ಕಂಗನಾ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದರು. ʻರೈತರ ಪ್ರತಿಭಟನೆಯಲ್ಲಿ ತನ್ನ ತಾಯಿ ಭಾಗವಹಿಸಿದ್ದರು,ʼ ಎಂದು ಕಾನ್‌ಸ್ಟೆಬಲ್ ಹೇಳಿದ್ದರು. 

Tags:    

Similar News