ಹಿರಿಯ ವಕೀಲರನ್ನು ರಾಜ್ಯಸಭೆಗೆ ಕಳುಹಿಸಲು ಕೇಜ್ರಿವಾಲ್ ಯೋಜನೆ: ಬಿಜೆಪಿ
ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೇಶದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಏಕೆ ಅವಕಾಶ ನೀಡಿತು? ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಗೊತ್ತಾದ ಬಳಿಕವೂ ಬ್ರಿಜ್ ಭೂಷಣ್ ಪರ ನಿಂತಿದ್ದೇಕೆ? ಅವರ ಮಗನಿಗೆ ಏಕೆ ಟಿಕೆಟ್ ನೀಡಿದೆ? ಎಂದು ಆಪ್ ಪ್ರಶ್ನಿಸಿದೆ.;
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಿರಿಯ ವಕೀಲರೊಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಬಯಸಿದ್ದರು. ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆಗೂ ಇದಕ್ಕೂ ಸಂಬಂಧವಿದೆ ಎಂದು ಬಿಜೆಪಿಯ ದೆಹಲಿ ಘಟಕ ದೂರಿದೆ.
ಬಿಜೆಪಿ ಹೇಳಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ,ʻಬಿಜೆಪಿಗೆ ಜನರಿಗೆ ನೀಡಲು ಯಾವುದೇ ಸಾಧನೆ ಅಥವಾ ಮುನ್ನೋಟ ಇಲ್ಲ. ಆದ್ದರಿಂದ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಲು ಮತ್ತು ಪ್ರತಿದಿನ ಇಂಥ ಹಾಸ್ಯಾಸ್ಪದ ಆರೋಪ ಮಾಡುತ್ತಿದೆʼ ಎಂದು ಹೇಳಿದೆ.
'ಕೇಜ್ರಿವಾಲ್ ರಾಜಕೀಯ ನಾಟಕ: ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ,ʻ ಕೇಜ್ರಿವಾಲ್ ಅವರ ನಿವಾಸದಲ್ಲಿ ಮಲಿವಾಲ್ ಮೇಲೆ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ಪಾಲ್ಗೊಳ್ಳುವಿಕೆ ಬಗ್ಗೆ ಎಎಪಿ ಹೇಗೆ ತೀರ್ಮಾನಕ್ಕೆ ಬಂದಿತು? ಕೇಜ್ರಿವಾಲ್ ಅವರು ರಾಜಕೀಯ ನಾಟಕವನ್ನು ರೂಪಿಸುತ್ತಿದ್ದಾರೆ,ʼ ಎಂದು ಹೇಳಿದರು. ಮಲಿವಾಲ್ ಅವರ ಆರೋಪ ಕೇಜ್ರಿವಾಲ್ ಅವರನ್ನು ಬಲೆಗೆ ಬೀಳಿಸಲು ಬಿಜೆಪಿಯ ಪಿತೂರಿ ಎಂದು ಎಎಪಿ ನಾಯಕರು ಹೇಳಿದ್ದರು.
ಆಪ್ ಪ್ರತಿಭಟನೆ: ʻಬಿಜೆಪಿ ಆಪ್ ಅನ್ನು ಹತ್ತಿಕ್ಕಲು ಆಪರೇಷನ್ ಜಾಡೂ ಆರಂಭಿಸಿದೆʼ ಎಂದು ಕೇಜ್ರಿವಾಲ್ ಭಾನುವಾರ ಹೇಳಿದ್ದರು. ಕೇಜ್ರಿವಾಲ್ ಮತ್ತುಇತರ ಎಎಪಿ ನಾಯಕರು ಬಿಜೆಪಿ ಪ್ರಧಾನ ಕಚೇರಿ ಬಳಿ ಬೆಳಗ್ಗೆ ಪ್ರತಿಭಟನೆ ನಡೆಸಿದರು. ʻ ಪ್ರಧಾನಿ ಅವರು ಎಎಪಿ ನಾಯಕರನ್ನು ಜೈಲಿಗೆ ಕಳುಹಿಸುವ ಆಟವಾಡುತ್ತಿದ್ದಾರೆ. ಪಕ್ಷದ ಶಾಸಕರು, ಸಂಸದರು ಮತ್ತು ಮಂತ್ರಿಗಳೊಂದಿಗೆ ಬಿಜೆಪಿ ಕೇಂದ್ರ ಕಚೇರಿಗೆ ಮೆರವಣಿಗೆ ನಡೆಸಲಾಗುತ್ತದೆ. ಪ್ರಧಾನಿ ಬೇಕಾದವರನ್ನು ಬಂಧಿಸಿ ಜೈಲಿಗೆ ಕಳುಹಿಸಬಹುದು,ʼ ಎಂದರು.
ಮೇ 13 ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದ ವೇಳೆ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಲಿವಾಲ್ ಆರೋಪಿಸಿದ್ದಾರೆ. ಶನಿವಾರ ಕುಮಾರ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಎಎಪಿ ಸಿದ್ಧಾಂತ ಬೋಗಸ್: ಬಿಜೆಪಿ- ʻಮಲಿವಾಲ್ ಹಲ್ಲೆ ಪ್ರಕರಣ ಕೇಜ್ರಿವಾಲ್ ಅವರನ್ನು ಬಹಿರಂಗಗೊಳಿಸಿದೆ ಮತ್ತು ಎಎಪಿ ಒಂದು ಸಿದ್ಧಾಂತ ಎಂಬ ಅವರ ಹೇಳಿಕೆ ʻಬೋಗಸ್ʼ. ಅವರ ಏಕೈಕ ಸಿದ್ಧಾಂತವೆಂದರೆ ಲೂಟಿ ಮತ್ತು ಭ್ರಷ್ಟಾಚಾರ ಎಂದು ಸಚ್ ದೇವ ಆರೋಪಿಸಿದರು. ಪ್ರತಿಕ್ರಿಯಿಸಿದ ಎಎಪಿ, ʻರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೇಶದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಏಕೆ ಅವಕಾಶ ನೀಡಿತು? ಬ್ರಿಜ್ ಭೂಷಣ್ ಸಿಂಗ್ ಅವರ ಮಗನಿಗೆ ಏಕೆ ಟಿಕೆಟ್ ನೀಡಿದೆ? ನಮ್ಮ ಚಾಂಪಿಯನ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಗೊತ್ತಾದ ಬಳಿಕವೂ ಬ್ರಿಜ್ ಭೂಷಣ್ ಪರ ನಿಂತಿದ್ದೇಕೆ?,ʼ ಎಂದು ಕೇಳಿದೆ