ಪಶ್ಚಿಮ ಬಂಗಾಳ: ಸರ್ಕಾರ, ರಾಜ್ಯಪಾಲರ ಕಿತ್ತಾಟದಿಂದ ಶಾಸಕರ ಪ್ರಮಾಣವಚನಕ್ಕೆ ಅಡ್ಡಿ

ಪಶ್ಚಿಮ ಬಂಗಾಳದ ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ವೈಮನಸ್ಸಿನಿಂದಾಗಿ, ಇಬ್ಬರು ಹೊಸ ಶಾಸಕರು ಚುನಾಯಿತರಾಗಿ 22 ದಿನ ನಂತರವೂ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿಲ್ಲ.;

Update: 2024-06-27 10:00 GMT
ಮಮತಾ ಬ್ಯಾನರ್ಜಿ ಸರ್ಕಾರವು ಮುಖ್ಯಮಂತ್ರಿಯನ್ನು ವಿಶ್ವವಿದ್ಯಾನಿಲಯಗಳ ಕುಲಪತಿಯನ್ನಾಗಿ ಮಾಡುವ ಮಸೂದೆಯನ್ನು ತೆರವುಗೊಳಿಸಲು ಗವರ್ನರ್ ಬೋಸ್ ಅವರ ಮೇಲೆ ಒತ್ತಡ ಮುಂದುವರಿಸಲು ನಿರ್ಧರಿಸಿದೆ.

ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ವೈಮನಸ್ಸಿನಿಂದ, ಹೊಸದಾಗಿ ಆಯ್ಕೆಯಾದ ಇಬ್ಬರು ಶಾಸಕರ ಪ್ರಮಾಣವಚನಕ್ಕೆ ಅಡಚಣೆಯಾಗಿದೆ.

ಭಗವಾನ್‌ಗೋಳ ಶಾಸಕ ರೇಯತ್ ಹೊಸೈನ್ ಸರ್ಕಾರ್ ಮತ್ತು ಬಾರಾನಗರದ ಸಯಾಂತಿಕಾ ಬ್ಯಾನರ್ಜಿ ಚುನಾಯಿತರಾಗಿ 22 ದಿನ ಕಳೆದಿ ದ್ದರೂ, ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿಲ್ಲ. ಇದರಿಂದ ಜನಪ್ರತಿನಿಧಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. 

ಪ್ರಮಾಣವಚನ ಎಲ್ಲಿ ನಡೆಯಬೇಕು ಎಂಬ ಕುರಿತ ವಿವಾದದಿಂದಾಗಿ, ಪ್ರಮಾಣವಚನ ಸ್ವೀಕರಿಸದ ಈ ಶಾಸಕರು ಗುರುವಾರ (ಜೂನ್ 27) ಪಶ್ಚಿಮಬಂಗಾಳ ವಿಧಾನಸಭೆ ಹೊರಗೆ ಧರಣಿ ನಡೆಸಿದರು.

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ವಿಧಾನಸಭೆಯೊಳಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸುವ ಮೂಲಕ ಜನಪ್ರತಿನಿಧಿ ಗಳು ತಮ್ಮ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಬ್ಯಾನರ್ಜಿ ಮತ್ತು ಸರ್ಕಾರ್ ಒತ್ತಾಯಿಸುತ್ತಿದ್ದಾರೆ.

ಪ್ರಮಾಣವಚನ ಸ್ಥಳದ ವಿವಾದ: ಶಾಸಕರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಒತ್ತಾಯಿಸಿದಾಗ ಸಮಸ್ಯೆ ಆರಂಭವಾಯಿತು. ಪ್ರಮಾಣವಚನ ಬೋಧಿಸುವವರು ಯಾರು ಎಂಬುದನ್ನು ನಮೂದಿಸದೆ, ಜೂನ್ 26 ರಂದು ಪ್ರಮಾಣವಚನ ಕಾರ್ಯಕ್ರಮವನ್ನು ನಿಗದಿಪಡಿಸಲಾಯಿತು.

ರಾಜ್ಯಪಾಲರು ಶಾಸಕರಿಗೆ ಬರೆದ ಪತ್ರದಲ್ಲಿ ʻಮಧ್ಯಾಹ್ನ 3.30ರವರೆಗೆ ಕಾಯುವುದಾಗಿʼ ತಿಳಿಸಿದ್ದರು. ಆದರೆ, ತಾವು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ವಚನವನ್ನು ಬೋಧಿಸಬೇಕೆಂದು ಶಾಸಕರು ರಾಜಭವನಕ್ಕೆ ತಿಳಿಸಿ ದರು.

ಶಾಸಕರು ವಿಧಾನಸಭೆ ಸಂಕೀರ್ಣದಲ್ಲಿ ಬುಧವಾರ ʻಗೌರವಾನ್ವಿತ ರಾಜ್ಯಪಾಲರು ಪ್ರಮಾಣವಚನಕ್ಕೆ ಆಗಮಿಸುವುದಕ್ಕೆ ಕಾಯುತ್ತಿದ್ದೇವೆʼ ಎಂಬ ಫಲಕ ಹಿಡಿದು ವಿಧಾನಸಭೆ ಸಂಕೀರ್ಣದಲ್ಲಿ ಬುಧವಾರ ಧರಣಿ ಕುಳಿತರು.

ಸಂಸದೀಯ ವ್ಯವಹಾರಗಳ ಸಚಿವ ಸೋವಂದೇ‌ವ್‌ ಚಟ್ಟೋಪಾಧ್ಯಾಯ ಶಾಸಕರನ್ನು ಸೇರಿಕೊಂಡರು. ಮೂವರೂ 12 ರಿಂದ ಸಂಜೆ 4 ರವರೆಗೆ ರಾಜ್ಯಪಾಲರಿಗಾಗಿ ಕಾಯ್ದು ಕುಳಿತಿದ್ದರು.

ಶಾಸಕರು ಧರಣಿ ನಿರತರಾಗಿದ್ದಾಗಲೇ ರಾಜ್ಯಪಾಲರು ದೆಹಲಿಗೆ ತೆರಳಿದರು.

ಕಾನೂನು ಸಲಹೆ: ಸ್ಪೀಕರ್ ಬಿಕ್ಕಟ್ಟು ಬಗೆಹರಿಸಲು ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದಾರೆ. ʻಅಗತ್ಯವಿದ್ದರೆ, ನಾನು ರಾಷ್ಟ್ರಪತಿ ಅವರನ್ನು ಭೇಟಿ ಮಾಡುತ್ತೇನೆ,ʼ ಎಂದು ಸ್ಪೀಕರ್ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದರು. ರಾಜ್ಯಪಾಲರು ಪ್ರಮಾಣವಚನ ಸಮಾರಂಭವನ್ನು ಪ್ರತಿಷ್ಠೆ ಪ್ರಶ್ನೆಯಾಗಿಸಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಸಮಸ್ಯೆಯನ್ನು ಸಂಕೀರ್ಣಗೊಳಿಸಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನದ ಪ್ರಕಾರ, ರಾಜ್ಯಪಾಲರು ಶಾಸಕರಿಗೆ ಪ್ರಮಾಣವಚನ ಬೋಧಿಸಬೇಕು. ಆದರೆ, ರಾಜ್ಯಪಾಲರು ಪ್ರಮಾಣವಚನ ಬೋಧಿಸಲು ಸ್ಪೀಕರ್ ಅಥವಾ ಉಪನಾಯಕರನ್ನು ನಿಯೋಜಿಸುತ್ತಾರೆ.

ʻಶಾಸಕರಿಗೆ ಪ್ರಮಾಣವಚನವನ್ನು ಸ್ಪೀಕರ್‌ ಬೋಧಿಸುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ಕೂಡ ಇದನ್ನು ಪ್ರಸ್ತಾಪಿಸಿದ್ದಾರೆ. ಆದರೆ, ರಾಜ್ಯಪಾಲರು ಸ್ಪೀಕರ್‌ಗೆ ಈ ಮಾಹಿತಿ ತಿಳಿಸುವುದು ಅಗತ್ಯವೆಂದು ಪರಿಗಣಿಸದಿರುವುದು ದುರದೃಷ್ಟಕರ,ʼ ಎಂದು ಬ್ಯಾನರ್ಜಿ ಹೇಳಿದರು.

ಇದೇ ಮೊದಲ ಬಾರಿ ಅಲ್ಲ: ಇಂತಹ ಹಗ್ಗಜಗ್ಗಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಚುನಾಯಿತರಾದ ಶಾಸಕರು ರಾಜ್ಯಪಾಲ ರಿಂದ ಪ್ರಮಾಣವಚನ ಸ್ವೀಕರಿಸಿದ ನಿದರ್ಶನಗಳಿವೆ. ಧೂಪ್ಗುರಿ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕ ನಿರ್ಮಲ್ ಚಂದ್ರ ರಾಯ್ ಅವರು 2023ರ ಸೆಪ್ಟೆಂಬರ್‌ನಲ್ಲಿ ರಾಜಭವನದಲ್ಲಿ ಗವರ್ನರ್ ಬೋಸ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಒಂದೆರಡು ವರ್ಷಗಳ ಹಿಂದೆ ಟಿಎಂಸಿಯ ಬ್ಯಾಲಿಗುಂಜ್‌ ಶಾಸಕ ಬಾಬುಲ್ ಸುಪ್ರಿಯೊ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಅಧ್ಯಕ್ಷತೆಯನ್ನು ಯಾರು ವಹಿಸಬೇಕು ಎಂಬ ಬಗ್ಗೆ ವಿಧಾನಸಭೆ ಸ್ಪೀಕರ್ ಹಾಗೂ ಅಂದಿನ ರಾಜ್ಯಪಾಲ ಜಗದೀಪ್ ಧನ್ಕರ್‌ ನಡುವಿನ ಕಿತ್ತಾಟ ನಡೆದಿತ್ತು. ಇದರಿಂದ ಕಾರ್ಯಕ್ರಮ ಎರಡು ವಾರಗಳಿಗೂ ಹೆಚ್ಚು ಕಾಲ ವಿಳಂಬಗೊಂಡಿತ್ತು.

ʻಶಾಸಕಾಂಗ ಸಭೆಗಳ ಹೊಸ ಸದಸ್ಯರು ರಾಜ್ಯಪಾಲರ ಮುಂದೆ ಅಥವಾ ಅವರು ನಿಯೋಜಿಸಿದ ವ್ಯಕ್ತಿಯಿಂದ ಪ್ರಮಾಣವಚನ ಸ್ವೀಕರಿಸ ಬೇಕುʼ ಎಂಬ ಸಂವಿಧಾನದ 188 ನೇ ವಿಧಿಯನ್ನು ಉಲ್ಲೇಖಿಸಿದ್ದ ಧನ್ಖರ್‌, ಉಪ ಸ್ಪೀಕರ್ ಆಶಿಶ್ ಬ್ಯಾನರ್ಜಿ ಅವರನ್ನು ಇದಕ್ಕಾಗಿ ನಿಯೋಜಿಸಿ ದ್ದರು.

ರಾಜ್ಯಪಾಲರ ಪ್ರಸ್ತಾವನೆಗೆ ಸಭಾಧ್ಯಕ್ಷರು ಒಪ್ಪಿಗೆ ಸೂಚಿಸಿದ್ದರಿಂದ, ಗೊಂದಲ ಬಗೆಹರಿಯಿತು.

ಲೈಂಗಿಕ ಕಿರುಕುಳ ಆರೋಪ: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವುದರಿಂದ, ಗವರ್ನರ್ ಮತ್ತು ಟಿಎಂಸಿ ಸರ್ಕಾರದ ಸಂಬಂಧ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ.

ಗವರ್ನರ್ ಬೋಸ್ ಅವರು ಇರುವವರೆಗೆ ರಾಜಭವನಕ್ಕೆ ಭೇಟಿ ನೀಡುವುದಿಲ್ಲ ಎಂದು ಚುನಾವಣೆ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದರು. ಟಿಎಂಸಿ ಈ ಆರೋಪವನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತು.

ತಾವು ಮುಖ್ಯಮಂತ್ರಿ ಅವರೊಂಗಿಗೆ ಮಾತಿನ ಚಕಮಕಿ ನಡೆಸುವುದಿಲ್ಲ. ಇದರಿಂದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧ ಸಂಪೂರ್ಣ ಹದಗೆಡುತ್ತದೆ ಎಂದು ಬೋಸ್ ಇತ್ತೀಚೆಗೆ ಹೇಳಿದ್ದಾರೆ.

Tags:    

Similar News