Kolkata rape-murder| ʻಅಪರಾಜಿತಾ ಮಸೂದೆ’ ಅಂಗೀಕೃತ; ಪ್ರತಿಪಕ್ಷಗಳಿಂದ ಸಂಪೂರ್ಣ ಬೆಂಬಲ
ʻಅಪರಾಜಿತಾ ಮಸೂದೆʼಯು ತ್ವರಿತ ತನಿಖೆ, ತ್ವರಿತ ನ್ಯಾಯ ವಿತರಣೆ ಮತ್ತು ಅಧಿಕ ಶಿಕ್ಷೆಯ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.;
ಪಶ್ಚಿಮ ಬಂಗಾಳ ವಿಧಾನಸಭೆಯು ಅಪರಾಜಿತಾ ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಗಳವಾರ (ಸೆಪ್ಟೆಂಬರ್ 3) ಸರ್ವಾನುಮತದಿಂದ ಅಂಗೀಕರಿಸಿತು. ಪ್ರತಿಪಕ್ಷಗಳು ಮಸೂದೆಗೆ ಸಂಪೂರ್ಣ ಬೆಂಬಲ ನೀಡಿದವು.
ಅತ್ಯಾಚಾರ ವಿರೋಧಿ ಮಸೂದೆಯು ತ್ವರಿತ ತನಿಖೆ, ತ್ವರಿತ ನ್ಯಾಯ ವಿತರಣೆ ಮತ್ತು ಅಧಿಕ ಶಿಕ್ಷೆಯ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ಇತ್ತೀಚೆಗೆ ಹೆಚ್ಚಿದ್ದು, ಮಹಿಳೆಯರ ರಕ್ಷಣೆಗೆ ಪರಿಣಾಮಕಾರಿ ಕಾನೂನು ಜಾರಿಗೊಳಿಸುವಲ್ಲಿ ವಿಫಲರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆ ಸಂಭವಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ರಾಜೀನಾಮೆಗೆ ಮಮತಾ ಅವರು ಒತ್ತಾಯಿಸಿದ್ದರು.
ʻಅತ್ಯಾಚಾರ ಮಾನವೀಯತೆಯ ವಿರುದ್ಧದ ಶಾಪ. ಅಂತಹ ಅಪರಾಧಗಳನ್ನು ತಡೆಯಲು ಸಾಮಾಜಿಕ ಸುಧಾರಣೆಗಳು ಅಗತ್ಯವಿದೆ. ಅಪರಾಜಿತಾ ಮಸೂದೆಗೆ ಸಹಿ ಹಾಕುವಂತೆ ಪ್ರತಿಪಕ್ಷಗಳು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರನ್ನು ಕೇಳಬೇಕು. ಆನಂತರ ಮಸೂದೆ ಜಾರಿಗೊಳಿಸುವುದು ನಮ್ಮ ಜವಾಬ್ದಾರಿ ,ʼಎಂದು ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಹೇಳಿದರು.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಕಾನೂನು ಸಚಿವ ಮೊಲೊಯ್ ಘಟಕ್ ಅವರು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಿದರು.
ಪ್ರಮುಖ ಲಕ್ಷಣ: ಒಂದುವೇಳೆ ಅತ್ಯಾಚಾರ ಕ್ರಿಯೆಯಿಂದ ಬಲಿಪಶು ಮೃತಪಟ್ಟರೆ ಇಲ್ಲವೇ ಪ್ರಜ್ಞೆ ಬಾರದಂತೆ ಆದರೆ, ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎನ್ನುತ್ತದೆ. ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಯನ್ನು ನಿಗದಿಪಡಿಸುತ್ತದೆ.
'ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024' ಎಂಬ ಹೆಸರಿನ ಈ ಶಾಸನವು ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ನಿಬಂಧನೆಗಳನ್ನು ಪರಿಷ್ಕರಿಸುವ ಮತ್ತು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಕಳೆದ ತಿಂಗಳು ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡು ದಿನಗಳ ವಿಧಾನಸಭೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.