ಬಂಗಾಳ-ಬಿಹಾರದಲ್ಲಿ ಪ್ರವಾಹ ಸ್ಥಿತಿ ಗಂಭೀರ; ಕೇಂದ್ರ ಸಹಾಯ ಮಾಡುತ್ತಿಲ್ಲ-ಮಮತಾ

Update: 2024-09-30 10:59 GMT
ಪ್ರಾತಿನಿಧಿಕ ಚಿತ್ರ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಉತ್ತರ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಆತಂಕಕಾರಿ ಎಂದಿದ್ದು, ನೈಸರ್ಗಿಕ ವಿಕೋಪವನ್ನು ಎದುರಿಸಲು ಕೇಂದ್ರ ನೆರವು ನೀಡುತ್ತಿಲ್ಲ ಎಂದು ದೂರಿದ್ದಾರೆ.

ʻತಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಪ್ರವಾಹವನ್ನು ಎದುರಿಸುತ್ತಿದೆ. ಕೂಚ್ ಬೆಹಾರ್, ಜಲ್‌ಪೈಗುರಿ ಮತ್ತು ಅಲಿಪುರ್ದೂರ್ ಜಿಲ್ಲೆಗಳು ಹಾನಿಗೊಳಗಾಗಿವೆ. ಕೋಸಿ ನದಿಯ ಜಲಾನಯನ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಹಾಗೂ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪರಿಣಾಮವುಂಟಾಗಲಿದೆ,ʼ ಎಂದು ಅವರು ಸಿಲಿಗುರಿಗೆ ಹೋಗುವ ದಾರಿಯಲ್ಲಿ ಹೇಳಿದರು. 

ಫರಕ್ಕಾ ಬ್ಯಾರೇಜ್ ಕಾಮಗಾರಿ: ವಿಪತ್ತುಗಳ ವಿರುದ್ಧ ಹೋರಾಡಲು ಕೇಂದ್ರ ಸಹಾಯ ಮಾಡುತ್ತಿಲ್ಲ. ಫರಕ್ಕಾ ಬ್ಯಾರೇಜ್‌ನ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡಿಲ್ಲ. ಇದರಿಂದ ಅದರ ನೀರು ಶೇಖರಣೆ ಸಾಮರ್ಥ್ಯ ಸಾಕಷ್ಟು ಕಡಿಮೆಯಾಗಿದೆ,ʼ ಎಂದು ಹೇಳಿದರು. 

ಸಿಲಿಗುರಿಯಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿದರು. ಸಭೆ ನಂತರ ಸುದ್ದಿಗಾರರ ʻಕೇಂದ್ರವನ್ನು ಸಂಪರ್ಕಿಸುತ್ತೀರಾ?ʼ ಎಂಬ ಪ್ರಶ್ನೆಗೆ, ʻನಾನು ಪ್ರಧಾನಿಗೆ ಪತ್ರ ಬರೆದರೆ, ಅವರ ಮಂತ್ರಿಯೊಬ್ಬರು ಉತ್ತರಿಸುತ್ತಾರೆ. ಇದು ಸರಿಯಲ್ಲ. ಆನಂತರ ಇನ್ನೊಂದು ಪತ್ರವನ್ನು ಕಳುಹಿಸುತ್ತೇನೆ,ʼ ಎಂದರು. 

ರಾಜ್ಯದಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ. 

6 ಜಿಲ್ಲೆಗಳಲ್ಲಿ ಎಚ್ಚರಿಕೆ: ಕೋಸಿಯಿಂದ ನೀರು ಬಿಡುತ್ತಿರುವುದರಿಂದ ಮಾಲ್ಡಾ, ಉತ್ತರ ಮತ್ತು ದಕ್ಷಿಣ ದಿನಾಜ್‌ಪುರ, ಮುರ್ಷಿದಾಬಾದ್ ಮತ್ತು ಕೂಚ್‌ಬೆಹಾರ್ ಸೇರಿದಂತೆ ಆರು ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. 

“ಬಂಗಾಳ ಮಾತ್ರವಲ್ಲದೆ, ಬಿಹಾರವೂ ಪ್ರವಾಹದ ಭೀತಿ ಎದುರಿಸುತ್ತಿದೆ. ನಾವು ಈ ಪ್ರತಿಯೊಂದು ಜಿಲ್ಲೆಗಳಲ್ಲೂ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಅಕ್ಟೋಬರ್ 2 ರವರೆಗೆ ಜಾಗರೂಕರಾಗಿರುತ್ತೇವೆ. ಪ್ರವಾಹ ಪೀಡಿತ ಜನರೊಂದಿಗೆ ಇರುವಂತೆ ಜನ ಮತ್ತು ಪೂಜಾ ಸಮಿತಿಗಳನ್ನು ಕೋರುತ್ತೇನೆ,ʼ ಎಂದು ಹೇಳಿದರು.

ಸಿಲಿಗುರಿಗೆ ಹೋಗುವ ಮಾರ್ಗದಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿ, ʻಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡುತ್ತಾರೆ. ಆದರೆ, ಅಗತ್ಯವಿರುವಾಗ ರಾಜ್ಯವನ್ನು ಮರೆತುಬಿಡುತ್ತಾರೆ. ಬಂಗಾಳ ಮಾತ್ರ ಪ್ರವಾಹದ ಅನುದಾನದಿಂದ ವಂಚಿತವಾಗುತ್ತಿದೆ,ʼ ಎಂದು ಹೇಳಿದರು.

ಡಾರ್ಜಿಲಿಂಗ್‌ನಲ್ಲಿ ಭೂಕುಸಿತ: ʻನದಿಗಳ ಬಳಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಡಾರ್ಜಿಲಿಂಗ್ ಬೆಟ್ಟಗಳು ಭೂಕುಸಿತದಿಂದ ಹಾನಿಗೊಳಗಾಗಿವೆ; ಸೇನೆ ಸಹಾಯದಿಂದ ರಾಜ್ಯವು ರಸ್ತೆ ಸಂಪರ್ಕವನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿದೆ,ʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇತ್ತೀಚೆಗೆ ಪ್ರವಾಹದಲ್ಲಿ ಮುಳುಗಿ ಇಬ್ಬರು ಮುಳುಗಿ ಸಾವನ್ನಪ್ಪಿದರೆ, ಇಬ್ಬರು ವಲಸೆ ಕಾರ್ಮಿಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಜಲಪೈಗುರಿಯಲ್ಲಿ ವಿದ್ಯುದಾಘಾತದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಎಲ್ಲರೂ ಎಚ್ಚರದಿಂದ ಇರಬೇಕು,ʼ ಎಂದು ಕೋರಿದರು. 

ಬೆಳೆ ವಿಮೆ ಗಡುವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ. ದುರ್ಗಾಪೂಜೆ ಬರುತ್ತಿದೆ. ಇದು ದೊಡ್ಡ ಹಬ್ಬ. ಆದರೆ, ಪ್ರವಾಹದಲ್ಲಿ ತತ್ತರಿಸುತ್ತಿರುವವರನ್ನು ನಾವು ಮರೆಯಬಾರದು ಮತ್ತು ಶಾಂತಿ ಮೇಲುಗೈ ಸಾಧಿಸಲು ಬಯಸುತ್ತೇವೆ,ʼ ಎಂದು ಹೇಳಿದರು.

ಬಿಹಾರದ ಪ್ರವಾಹ ಪರಿಸ್ಥಿತಿ ಗಂಭೀರ: ಬಿಹಾರದಲ್ಲಿ ನದಿ ಒಡ್ಡುಗಳ ಒಡೆಯುವಿಕೆಯಿಂದ, ಇಂಡೋ-ನೇಪಾಳದ ಗಡಿ ಸಮೀಪವಿರುವ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. 

ಬಿಹಾರದ ಕೋಸಿ ಮೇಲಿನ ಬಿರ್‌ಪುರ್ ಬ್ಯಾರೇಜಿನಿಂದ 6.61 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಇದು 56 ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣ. 1968 ರಲ್ಲಿ 7.88 ಲಕ್ಷ ಕ್ಯೂಸೆಕ್‌ ನೀರು ಬಿಡಲಾಗಿತ್ತು ಎಂದು ಬಿಹಾರದ ಜಲಸಂಪನ್ಮೂಲ ಇಲಾಖೆ ಹೇಳಿದೆ. ಅದೇ ರೀತಿ, ಗಂಡಕ್ ಮೇಲಿನ ವಾಲ್ಮೀಕಿನಗರ ಬ್ಯಾರೇಜ್ 5.62 ಲಕ್ಷ ಕ್ಯೂಸೆಕ್ ಬಿಡುಗಡೆ ಮಾಡಿದೆ.ಮುನ್ನೆಚ್ಚರಿಕೆಯಾಗಿ ಕೋಸಿ ಬ್ಯಾರೇಜ್ ಬಳಿ ಸಾರ್ವಜನಿಕರ ಸಂಚಾರ ಸ್ಥಗಿತಗೊಳಿಸಲಾಗಿದೆ.ಪ್ರವಾಹದಿಂದ 16 ಲಕ್ಷಕ್ಕೂ ಹೆಚ್ಚು ಜನ ಪೀಡಿತರಾಗಿದ್ದಾರೆ.

ಎರಡು-ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಡಕ್, ಕೋಸಿ, ಬಾಗ್ಮತಿ, ಬುರ್ಹಿ ಗಂಡಕ್, ಕಮಲಾ ಬಾಲನ್ ಮತ್ತು ಮಹಾನಂದ, ಬಾಗ್ಮತಿ ಮತ್ತು ಗಂಗಾ ನೀರಿನ ಮಟ್ಟ ಏರುತ್ತಿದೆ. ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಮಳೆಯಿಂದ ಗಡಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಜಲಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.

ಐಎಂಡಿ ಭಾರಿ ಮಳೆ ಮತ್ತು ರಾಜ್ಯದ ಕೆಲವೆಡೆ ಹಠಾತ್ ಪ್ರವಾಹದ ಎಚ್ಚರಿಕೆ ನೀಡಿದೆ.

Tags:    

Similar News