Badlapur sexual abuse : ‘ಅತ್ಯಂತ ಆಘಾತಕಾರಿʼ- ಬಾಂಬೆ ಹೈಕೋರ್ಟ್‌

ʻಶಾಲೆಗಳು ಸುರಕ್ಷಿತ ಸ್ಥಳವಲ್ಲದಿದ್ದರೆ, ಶಿಕ್ಷಣದ ಹಕ್ಕಿನ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇನಿದೆ? ಘಟನೆ ಬಗ್ಗೆ ವರದಿ ಮಾಡದ ಶಾಲಾಧಿಕಾರಿಗಳ ವಿರುದ್ಧ ಏಕೆ ಪೋಸ್ಕೋ ಕಾಯಿದೆಯಡಿ ಕ್ರಮ ಕೈಗೊಂಡಿಲ್ಲ? ಶಾಲೆ ಮೇಲೆ ಏಕೆ ಎಫ್‌ಐಆರ್‌ ದಾಖಲಿಸಿಲ್ಲʼ ಎಂದು ನ್ಯಾಯಾಲಯ ಪ್ರಶ್ನಿಸಿತು.

Update: 2024-08-22 12:43 GMT

ಬದ್ಲಾಪುರ ಪಟ್ಟಣದ ಶಾಲೆಯೊಂದರಲ್ಲಿ ನಡೆದ ಲೈಂಗಿಕ ಅಪರಾಧಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿರುವ ಬಾಂಬೆ ಹೈಕೋರ್ಟ್‌, ʻಇದು ಎಂತಹ ಪರಿಸ್ಥಿತಿ. ಇದು ಅತ್ಯಂತ ಆಘಾತಕಾರಿ,ʼ ಎಂದು ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು ಪೊಲೀಸರ ವಿರುದ್ಧ ಕಟು ಟೀಕೆ ಮಾಡಿದ್ದು, ಶಾಲೆಗಳು ಸುರಕ್ಷಿತವಾಗಿಲ್ಲದಿದ್ದರೆ ಶಿಕ್ಷಣದ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ.

ʻಶಾಲೆಗಳು ಸುರಕ್ಷಿತ ಸ್ಥಳವಲ್ಲದಿದ್ದರೆ, ಶಿಕ್ಷಣದ ಹಕ್ಕಿನ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇನಿದೆ? ಘಟನೆ ಬಗ್ಗೆ ತಿಳಿದಿದ್ದರೂ ವರದಿ ಮಾಡದ ಶಾಲಾಧಿಕಾರಿಗಳ ವಿರುದ್ಧ ಏಕೆ ಪೋಸ್ಕೋ ಕಾಯಿದೆಯಡಿ ಕ್ರಮ ಕೈಗೊಂಡಿಲ್ಲ?ಶಾಲೆ ಮೇಲೆ ಏಕೆ ಎಫ್‌ಐಆರ್‌ ದಾಖಲಿಸಿಲ್ಲʼ ಎಂದು ಪ್ರಶ್ನಿಸಿ, ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಕಿಡಿಕಾರಿದರು. 

ʻಪ್ರಕರಣ ದಾಖಲಿಸಲಾಗುವುದುʼ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಹೇಳಿದಾಗ, ಇದರಿಂದ ತೃಪ್ತರಾಗಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. 

ಕೌನ್ಸೆಲಿಂಗ್ ಅಗತ್ಯ: ಸಂತ್ರಸ್ತ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಎಲ್ಲ ಬೆಂಬಲ ನೀಡುವುದನ್ನು ಖಚಿತಪಡಿಸಿಕೊಳ್ಳಲು ಪೀಠವು ಪೊಲೀಸರಿಗೆ ನಿರ್ದೇಶನ ನೀಡಿದೆ. ʻಸಂತ್ರಸ್ತರನ್ನು ಮತ್ತಷ್ಟು ಬಲಿಪಶು ಮಾಡಬಾರದು,ʼ ಎಂದು ಹೇಳಿದೆ. 

ʻಪ್ರಕರಣದಲ್ಲಿ ಹುಡುಗಿಯರು ದೂರು ನೀಡಿದ್ದಾರೆ. ಆದರೆ, ಗಮನಕ್ಕೆ ಬಾರದೆ ಹೋಗಿರುವ ಇಂಥ ಹಲವಾರು ಪ್ರಕರಣಗಳು ಇರಬಹುದು. ಬಾಲಕಿಯರ ಕುಟುಂಬಗಳಿಗೆ ಪೊಲೀಸರು ಬೆಂಬಲ ನೀಡಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ,ʼ ಎಂದು ಹೇಳಿದೆ.

ʻಮೊದಲನೆಯದಾಗಿ, ಪೊಲೀಸರು ಎಫ್‌ಐಆರ್ ದಾಖಲಿಸಬೇಕು. ಜನರು ಪೊಲೀಸ್ ಅಥವಾ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ಸಾರ್ವಜನಿಕರು ಪ್ರತಿಭಟಿಸಿ ಬೀದಿಗೆ ಇಳಿದಿದ್ದಾರೆ ಎಂದರೆ, ಭವಿಷ್ಯದ ಬಗ್ಗೆ ಯೋಚಿಸಬೇಕಾಗುತ್ತದೆ,ʼ ಎಂದು ನ್ಯಾಯಾಲಯ ಹೇಳಿದೆ. 

ಪೊಲೀಸರನ್ನು ಸಂವೇದನಾಶೀಲಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಕೌನ್ಸೆಲಿಂಗ್ ನೀಡಲಾಗಿದೆಯೇ? ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ಯಾವಾಗ ರಚಿಸಲಾಯಿತು ಮತ್ತು ಪೊಲೀಸರು ಏಕೆ ಎಲ್ಲ ದಾಖಲೆಗಳನ್ನು ಹಸ್ತಾಂತರಿಸಲಿಲ್ಲ? ಎಂಬ ವಿವರ ನೀಡುವಂತೆ ಹೈಕೋರ್ಟ್ ಸೂಚಿಸಿದೆ. 

ಆ.27ರೊಳಗೆ ವರದಿ ಸಲ್ಲಿಸಲು ಸೂಚನೆ: ಎಸ್‌ಐಟಿ ಆಗಸ್ಟ್ 27 ರೊಳಗೆ ವರದಿ ಸಲ್ಲಿಸಬೇಕು. ಬಾಲಕಿಯರು ಮತ್ತು ಅವರ ಕುಟುಂಬ ದವರ ಹೇಳಿಕೆಗಳನ್ನು ದಾಖಲಿಸುವ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? ಬದ್ಲಾಪುರ ಪೊಲೀಸರು ಎಫ್‌ಐಆರ್ ದಾಖಲಿಸಲು ಮತ್ತು ಎರಡನೇ ಸಂತ್ರಸ್ತೆ ಹೇಳಿಕೆಯನ್ನು ದಾಖಲಿಸುವಲ್ಲಿ ಏಕೆ ವಿಳಂಬ ಮಾಡಿದ್ದಾರೆ ಎಂಬುದನ್ನು ವರದಿಯಲ್ಲಿ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. 

ʻಬದ್ಲಾಪುರ ಪೊಲೀಸರು ಇಲ್ಲಿಯವರೆಗೆ ಎರಡನೇ ಹುಡುಗಿಯ ಹೇಳಿಕೆ ತೆಗೆದುಕೊಳ್ಳದೆ ಇರುವುದು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿರುವುದು ಗೊತ್ತಾದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ? ಇದರಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ' ಎಂದು ಹೈಕೋರ್ಟ್‌ ಹೇಳಿದೆ. 

2ನೇ ಹುಡುಗಿಯನ್ನು ಎಫ್‌ಐಆರ್‌ನಲ್ಲಿ ಏಕೆ ಪಟ್ಟಿ ಮಾಡಿಲ್ಲ?: ಒಬ್ಬಳು ಬಾಲಕಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ಎರಡನೆಯವಳ ಹೇಳಿಕೆಯನ್ನು ಗುರುವಾರ ತೆಗೆದುಕೊಳ್ಳಲಾಗುವುದು ಎಂದು ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ತಿಳಿಸಿದರು. 

ʻಎಫ್‌ಐಆರ್‌ನಲ್ಲಿ ಎರಡನೇ ಹುಡುಗಿಯನ್ನು ಏಕೆ ಪಟ್ಟಿ ಮಾಡಿಲ್ಲ? ಬದ್ಲಾಪುರ ಪೊಲೀಸರು ಸಂಪೂರ್ಣ ದಾಖಲೆಯನ್ನು ಎಸ್‌ಐಟಿಗೆ ಏಕೆ ಸಲ್ಲಿಸಿಲ್ಲ? ನೀವು ನಮ್ಮಿಂದ ಸತ್ಯವನ್ನು ಏಕೆ ಮುಚ್ಚಿಡುತ್ತೀರಿ? ಬದ್ಲಾಪುರ ಪೊಲೀಸರ ಮೂಲ ಕೇಸ್ ಡೈರಿ, ಎಫ್‌ಐಆರ್ ಪ್ರತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಸಲ್ಲಿಸಬೇಕು,ʼ ಎಂದು ಪೀಠ ಎಸ್‌ಐಟಿಗೆ ಸೂಚಿಸಿದೆ.

ಬದ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರಾಫ್ ನ್ಯಾಯಾಲಯಕ್ಕೆ ತಿಳಿಸಿದರು. ಅದು ಸಾಕಾಗುವುದಿಲ್ಲ ಎಂದು ಪೀಠ ಪ್ರತಿಕ್ರಿಯಿಸಿತು.

Tags:    

Similar News