ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್ ಶಕ್ತಿ ಕಂಡಿದ್ದೀರಿ, ಸಾಕಾಗದಿದ್ದರೆ ಪಾಕಿಸ್ತಾನಿಯರನ್ನು ಕೇಳಿ': ಯೋಗಿ ಲೇವಡಿ

ಭಯೋತ್ಪಾದನೆಗೆ ನಿರ್ಣಾಯಕ ಹೊಡೆತ ನೀಡುವ ಸಮಯ ಬಂದಿದೆ ಎಂದು ಒತ್ತಿಹೇಳಿದ ಆದಿತ್ಯನಾಥ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಡೀ ದೇಶವು ಈ ಉದ್ದೇಶಕ್ಕಾಗಿ ಒಂದಾಗಬೇಕು ಎಂದು ಕರೆ ನೀಡಿದರು.;

Update: 2025-05-11 11:56 GMT

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಶಕ್ತಿಯನ್ನು ಇತ್ತೀಚಿನ 'ಆಪರೇಷನ್ ಸಿಂದೂರ್'ನಲ್ಲಿ ಕಂಡಿದ್ದೇವೆ. ಒಂದು ವೇಳೆ ಅದು ಸಾಕಾಗದಿದ್ದರೆ, ಆ ಕ್ಷಿಪಣಿಯ ಶಕ್ತಿಯ ಬಗ್ಗೆ ಪಾಕಿಸ್ತಾನಿಯರನ್ನೇ ಕೇಳಬೇಕು ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ನೇರ ಸವಾಲು ಹಾಕಿದ್ದಾರೆ. ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ ಈ ರೀತಿ ವ್ಯಂಗ್ಯ ಮಾಡಿದ್ದಾರೆ.

ಭಯೋತ್ಪಾದನೆಗೆ ನಿರ್ಣಾಯಕ ಹೊಡೆತ ನೀಡುವ ಸಮಯ ಬಂದಿದೆ ಎಂದು ಒತ್ತಿಹೇಳಿದ ಆದಿತ್ಯನಾಥ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಡೀ ದೇಶವು ಈ ಉದ್ದೇಶಕ್ಕಾಗಿ ಒಂದಾಗಬೇಕು ಎಂದು ಕರೆ ನೀಡಿದರು. ಭಯೋತ್ಪಾದನೆಯು ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ, ಅದಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕು. 'ಆಪರೇಷನ್ ಸಿಂದೂರ್' ಮೂಲಕ ಭಾರತವು ವಿಶ್ವಕ್ಕೆ ಈ ಸಂದೇಶವನ್ನು ನೀಡಿದೆ ಎಂದು ಅವರು ಬಣ್ಣಿಸಿದರು. ಮೋದಿಯವರು ಯಾವುದೇ ಭಯೋತ್ಪಾದಕ ಕೃತ್ಯವನ್ನು ಯುದ್ಧವೆಂದು ಪರಿಗಣಿಸುವ ಘೋಷಣೆಯನ್ನು ಸ್ಮರಿಸಿದ ಅವರು, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಪಡಿಸದ ಹೊರತು ಈ ಸಮಸ್ಯೆಗೆ ಪರಿಹಾರವಿಲ್ಲ ಎಂದರು.

ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಸ್ಥಳಗಳನ್ನು ಗುರಿಯಾಗಿಸಲು ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗೆ ಯೋಗಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು.

ರಾಷ್ಟ್ರವು ರಕ್ಷಣಾ ಸರಬರಾಜಿಗಾಗಿ ಇತರ ದೇಶಗಳನ್ನು ಅವಲಂಬಿಸದೆ ಸ್ವಾವಲಂಬನೆಯನ್ನು ಸಾಧಿಸಬೇಕು ಎಂದು ಇಸ್ರೇಲ್ ಉದಾಹರಣೆ ನೀಡಿ ಆದಿತ್ಯನಾಥ್ ಹೇಳಿದರು. ಲಕ್ನೋದಲ್ಲಿನ ಬ್ರಹ್ಮೋಸ್ ಉತ್ಪಾದನಾ ಘಟಕವು ಮೋದಿಯವರ 'ಆತ್ಮನಿರ್ಭರ್ ಭಾರತ' ಉಪಕ್ರಮದ ಭಾಗವಾಗಿದ್ದು, ಇದು ರಕ್ಷಣಾ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಿದೆ ಎಂದರು. 2018 ರಲ್ಲಿ ಘೋಷಿಸಲಾದ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಈ ಘಟಕ ಸ್ಥಾಪನೆಯಾಗಿದೆ.

ಉತ್ತರ ಪ್ರದೇಶದ ಆರು ರಕ್ಷಣಾ ಉತ್ಪಾದನಾ ಕಾರಿಡಾರ್‌ಗಳಲ್ಲಿ 50,000 ಕೋಟಿ ರೂಪಾಯಿ ಹೂಡಿಕೆ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಆದಿತ್ಯನಾಥ್ ಅವರು ಉಲ್ಲೇಖಿಸಿದರು. ಈಗಾಗಲೇ 57 ಒಪ್ಪಂದಗಳ ಮೂಲಕ 30,000 ಕೋಟಿ ರೂಪಾಯಿ ಹೂಡಿಕೆಯಾಗಿದ್ದು, 60,000 ಯುವಕರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದರು. ಹಿಂದಿನ ಸರ್ಕಾರಗಳ ಅವಧಿಗೆ ಹೋಲಿಸಿದರೆ ಈಗ ರಾಜ್ಯವು ಹೂಡಿಕೆಯನ್ನು ಆಕರ್ಷಿಸುತ್ತಿದೆ ಮತ್ತು ಜನ ಹಾಗೂ ಹೂಡಿಕೆಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದೆ ಎಂದು ಅವರು ಹೇಳಿದರು. 

Tags:    

Similar News