ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಪಲ್ಟಿ: ಮೂವರು ಯೋಧರು ಸಾವು
ಟ್ರಕ್ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರಣ ವಾಹನವು ರಸ್ತೆಯಿಂದ ಜಾರಿ 700 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.;
ಗೂಗಲ್ ಚಿತ್ರ.
ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ಸೇನಾ ವಾಹನ ಅಪಘಾತದಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH-44) ಮೇಲೆ ಸಾಗುತ್ತಿದ್ದ ಸೇನಾ ಟ್ರಕ್ ರಸ್ತೆಯಿಂದ ಜಾರಿ ಸುಮಾರು 700 ಅಡಿ ಆಳದ ಕಮರಿಗೆ ಬಿದ್ದು ಛಿದ್ರವಾಗಿದೆ.
ಜಮ್ಮುವಿನಿಂದ ಶ್ರೀನಗರದತ್ತ ಸಾಗುತ್ತಿದ್ದ ಸೇನಾ ವಾಹನಗಳ ಸರದಿಯ ಭಾಗವಾಗಿದ್ದ ಈ ಟ್ರಕ್, ರಂಬನ್ ಜಿಲ್ಲೆಯ ಬ್ಯಾಟರಿ ಚಶ್ಮಾ ಎಂಬ ಸ್ಥಳದಲ್ಲಿ ಬೆಳಿಗ್ಗೆ 11. 30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಟ್ರಕ್ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರಣ ವಾಹನವು ರಸ್ತೆಯಿಂದ ಜಾರಿ 700 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಸಿಬ್ಬಂದಿ ಅಮಿತ್ ಕುಮಾರ್, ಸುಜೀತ್ ಕುಮಾರ್, ಮನ್ ಬಹದ್ದೂರ್ ಮೃತಪಟ್ಟವರು. ಈ ಯೋಧರು ಭಾರತೀಯ ಸೇನೆಯ ಗರ್ವಾಲ್ ರೈಫಲ್ಸ್ ತಂಡದ ಸದಸ್ಯರಾಗಿದ್ದರು. ಘಟನೆಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಗಿದೆ.
"ಟ್ರಕ್ ತಿರುವಿನಲ್ಲಿ ತುಂಬಾ ವೇಗವಾಗಿ ಸಾಗುತ್ತಿತ್ತು. ಚಾಲಕನಿಗೆ ನಿಯಂತ್ರಣ ತಪ್ಪಿದ ಕೂಡಲೇ ವಾಹನವು ರಸ್ತೆಯಿಂದ ಜಾರಿ ನೇರವಾಗಿ ಪ್ರಪಾತಕ್ಕೆ ಬಿತ್ತು. ಬಿದ್ದ ರಭಸಕ್ಕೆ ಧೂಳಿನ ಮೋಡವೊಂದು ಸೃಷ್ಟಿಯಾಗಿತ್ತು," ಎಂದು ಹೇಳಿದ್ದಾರೆ. ಮತ್ತೊಬ್ಬರು ಮಾತನಾಡಿ "ಈ ರಸ್ತೆಯಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿವೆ. ಆದರೆ ಸೇನಾ ವಾಹನಕ್ಕೆ ಇಂತಹ ಘಟನೆ ಸಂಭವಿಸಿರುವುದು ಆತಂಕಕಾರಿ" ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಪುನರಾವರ್ತಿತ ಅಪಘಾತಗಳು
ರಂಬನ್ ಜಿಲ್ಲೆಯ ಈ ಭಾಗದಲ್ಲಿ ಸೇನಾ ವಾಹನಗಳ ಅಪಘಾತಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಘಟನೆಗಳು ಈ ಪ್ರದೇಶದಲ್ಲಿ ಸಂಭವಿಸಿವೆ. 2024ರ ಡಿಸೆಂಬರ್ 24ರಂದು ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನವೊಂದು 350 ಅಡಿ ಆಳದ ಕಮರಿಗೆ ಬಿದ್ದು ಐವರು ಯೋಧರು ಮೃತಪಟ್ಟಿದ್ದರು. ಈ ಘಟನೆಯನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಕಳೆದ ನವೆಂಬರ್ನಲ್ಲಿ ರಜೌರಿ ಜಿಲ್ಲೆಯಲ್ಲಿ ಸೇನಾ ವಾಹನವೊಂದು ರಸ್ತೆಯಿಂದ ಜಾರಿ ಖಾಡಿಗೆ ಬಿದ್ದಾಗ ಒಬ್ಬ ಯೋಧ ಮೃತಪಟ್ಟಿದ್ದರು ಮತ್ತು ಮತ್ತೊಬ್ಬರು ಗಾಯಗೊಂಡಿದ್ದರು. 2025ರ ಜನವರಿ 4ರಂದು ಬಂಡಿಪೊರ ಜಿಲ್ಲೆಯ ಸದರ್ ಕೂಟ್ ಪಯೆನ್ ಪ್ರದೇಶದಲ್ಲಿ ಸೇನಾ ಟ್ರಕ್ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಿದ್ದಾಗ ನಾಲ್ವರು ಯೋಧರು ಮೃತಪಟ್ಟಿದ್ದರು ಮತ್ತು ಮೂವರು ಗಾಯಗೊಂಡಿದ್ದರು.