Encounter: ಪಾಕ್ ಉಗ್ರರ ಜತೆ ಗುಂಡಿನ ಚಕಮಕಿ: ಭಾರತೀಯ ಸೇನಾಧಿಕಾರಿ ಹುತಾತ್ಮ
ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ನುಸುಳುಕೋರ ಉಗ್ರರು ಹಾರಿಸಿದ ಗುಂಡು ಸೇನೆಯ ಜೆಸಿಒಗೆ ತಗುಲಿತು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶನಿವಾರ ಮುಂಜಾನೆ ಅವರು ಹುತಾತ್ಮರಾದರು ಎಂದು ಸೇನಾ ಮೂಲಗಳು ತಿಳಿಸಿವೆ.;
ಹುತಾತ್ಮ ಸೇನಾಧಿಕಾರಿ.
ಜಮ್ಮುವಿನ ಅಕ್ನೂರ್ ವಲಯದ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯ ಬಳಿ ಭಯೋತ್ಪಾದಕರು ಹಾಗೂ ಭದ್ರತಾಪಡೆಗಳ ನಡುವೆ ಶುಕ್ರವಾರ ರಾತ್ರಿ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ(Encounter) ಗಾಯಗೊಂಡಿದ್ದ ಭಾರತೀಯ ಸೇನೆಯ ಜೆಸಿಒ(ಜ್ಯೂನಿಯರ್ ಕಮಿಷನ್ಡ್ ಆಫೀಸರ್)ವೊಬ್ಬರು ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.
ಗಡಿಯ ಮೂಲಕ ಭಾರತದೊಳಕ್ಕೆ ನುಸುಳಲು ಉಗ್ರರು ಪ್ರಯತ್ನಿಸುತ್ತಿದ್ದರು. ಅವರ ಚಲನವಲನಗಳನ್ನು ಗಮನಿಸಿದ ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಕ್ಷಣ ಅಲರ್ಟ್ ಆದರು. ಹೀಗಾಗಿ ಕೇರಿ ಬಟ್ಟಾಲ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಆರಂಭವಾಯಿತು. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ನುಸುಳುಕೋರ ಉಗ್ರರು ಹಾರಿಸಿದ ಗುಂಡು ಸೇನೆಯ ಜೆಸಿಒಗೆ ತಗುಲಿತು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶನಿವಾರ ಮುಂಜಾನೆ ಅವರು ಹುತಾತ್ಮರಾದರು ಎಂದು ಸೇನಾ ಮೂಲಗಳು ತಿಳಿಸಿವೆ.
ಅಕ್ನೂರ್ ಎನ್ಕೌಂಟರ್ ನಡೆದ ಕೆಲವೇ ಗಂಟೆಗಳ ಬಳಿಕ, ಪೂಂಚ್ ಸೆಕ್ಟರ್‌ನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿದೆ. ಶುಕ್ರವಾರ ರಾತ್ರಿ 11:30 ರ ಸುಮಾರಿಗೆ ಪಾಕಿಸ್ತಾನಿ ಪಡೆಗಳು ಹಾಥಿ ಪೋಸ್ಟ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಪಾಕ್ ಪಡೆಗಳ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿವೆ. ಮಧ್ಯರಾತ್ರಿ 12: 30 ರವರೆಗೂ ಈ ಗುಂಡಿನ ಚಕಮಕಿ ಮುಂದುವರಿದಿತ್ತು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸೇನೆಯು ಸತತ ನಾಲ್ಕನೇ ದಿನವೂ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರಿಸಿರುವಂತೆಯೇ ಈ ಬೆಳವಣಿಗೆಗಳು ನಡೆದಿವೆ. ಇಂದು ಬೆಳಗ್ಗೆಯಷ್ಟೇ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದ್ದವು. ಶುಕ್ರವಾರ ಒಬ್ಬ ಉಗ್ರನನ್ನು ಪಡೆಗಳು ಹೊಡೆದುರುಳಿಸಿದ್ದವು. ಹೀಗಾಗಿ ಈ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಒಟ್ಟು ಸಂಖ್ಯೆ 3ಕ್ಕೇರಿದಂತಾಗಿದೆ. ಈ ಪ್ರದೇಶದಲ್ಲಿ ಇನ್ನೂ ಹಲವು ಉಗ್ರರು ಅವಿತಿರುವ ಸಾಧ್ಯತೆಯಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಶನಿವಾರ ಬೆಳಗ್ಗೆ ನಡೆದ ಎನ್‌ಕೌಂಟರ್ ವೇಳೆ ಉಗ್ರರ ಬಳಿಯಿದ್ದ ಒಂದು ಎಕೆ-47 ರೈಫಲ್ ಮತ್ತು ಒಂದು ಎಂ4 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ 19 ದಿನಗಳಲ್ಲಿ ಕಥುವಾ, ಉಧಾಂಪುರ ಮತ್ತು ಕಿಶ್ತ್ವಾರ್ ನಲ್ಲ ಒಟ್ಟು 5 ಎನ್‌ಕೌಂಟರ್‌ಗಳು ನಡೆದಿವೆ. ಇವುಗಳಲ್ಲಿ ಒಟ್ಟು 3 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಆದರೆ, ಒಂದು ಕಾರ್ಯಾಚರಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವಿಗೀಡಾಗಿದ್ದು, ಹೆಣ್ಣುಮಗು ಹಾಗೂ ಮೂವರು ನಾಗರಿಕರು ಗಾಯಗೊಂಡಿದ್ದಾರೆ.
ಏಪ್ರಿಲ್ 1ರಂದೂ ನುಸುಳುಕೋರರನ್ನು ಭಾರತದೊಳಕ್ಕೆ ನುಗ್ಗಿಸುವ ಸಲುವಾಗಿ ಪಾಕಿಸ್ತಾನವು ಪೂಂಛ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿತ್ತು. ಈ ವೇಳೆ ಭಾರತೀಯ ಪಡೆಗಳೂ ಪ್ರತಿದಾಳಿ ನಡೆಸಿದ್ದವು. ಪ್ರತಿದಾಳಿಯಲ್ಲಿ ಪಾಕಿಸ್ತಾನದ 4-5 ಸೇನಾ ಸಿಬ್ಬಂದಿ ಹತರಾಗಿದ್ದರು ಎಂದು ಮೂಲಗಳು ತಿಳಿಸಿವೆ