ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ: ಜೈಷ್ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರ ಹತ್ಯೆ
ಏಪ್ರಿಲ್ 9ರಂದು ಸಂಜೆ ಭಯೋತ್ಪಾದಕರೊಂದಿಗೆ ಸೇನೆ ಮುಖಾಮುಖಿಯಾಯಿತು. ಈ ವೇಳೆ ತೀವ್ರ ಗುಂಡಿನ ಚಕಮಕಿ ಆರಂಭವಾಯಿತು. ಮೊದಲ ದಿನದಂದೇ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು.;
ಕಿಶ್ತ್ವಾರ್ನಲ್ಲಿ ಸೈನಿಕರಿಂದ ಭಯೋತ್ಪಾದಕ ವಿರುದ್ಧ ಕಾರ್ಯಾಚರಣೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂ ಕಾಡುಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಜೈಷ್-ಎ-ಮೊಹಮ್ಮದ್ (JeM) ಕಮಾಂಡರ್ ಸೈಫುಲ್ಲಾಹ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಶುಕ್ರವಾರ (ಏಪ್ರಿಲ್ 11, 2025) ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಭದ್ರತಾ ಪಡೆಗಳು ಉಗ್ರರನ್ನು ಮಟ್ಟ ಹಾಕಿದೆ.
ಏಪ್ರಿಲ್ 9ರಂದು ಆರಂಭವಾದ ಈ ಕಾರ್ಯಾಚರಣೆಯು ಕಿಶ್ತ್ವಾರ್ ಚತ್ರೂ ಕಾಡಿನಲ್ಲಿ ಭಯೋತ್ಪಾದಕರ ಚಲನವಲನ ಕುರಿತಾದ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆರಂಭಗೊಂಡಿತ್ತು. ಭಯೋತ್ಪಾದಕರು ಈ ಪ್ರದೇಶದಲ್ಲಿ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸುವ ಸಾಧ್ಯತೆಯಿತ್ತು ಎಂದು ಗುಪ್ತಚರ ವರದಿಗಳು ಸೂಚಿಸಿದ್ದವು. ಈ ಮಾಹಿತಿಯ ಆಧಾರದ ಮೇಲೆ, ಸೇನೆ, ಪೊಲೀಸ್, ವಿಶೇಷ ಕಾರ್ಯಾಚರಣಾ ತಂಡ (SOG) ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದವು.
ಗುಂಡಿನ ಚಕಮಕಿ
ಏಪ್ರಿಲ್ 9ರಂದು ಸಂಜೆ ಭಯೋತ್ಪಾದಕರೊಂದಿಗೆ ಸೇನೆ ಮುಖಾಮುಖಿಯಾಯಿತು. ಈ ವೇಳೆ ತೀವ್ರ ಗುಂಡಿನ ಚಕಮಕಿ ಆರಂಭವಾಯಿತು. ಮೊದಲ ದಿನದಂದೇ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಶುಕ್ರವಾರ ಎರಡನೇ ದಿನದಂದು, ಚಕಮಕಿಯು ಮುಂದುವರೆಯಿತು, ಈ ಸಂದರ್ಭದಲ್ಲಿ ಇನ್ನಿಬ್ಬರು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯಿತು, ಇವರಲ್ಲಿ ಜೈಷ್-ಎ-ಮೊಹಮ್ಮದ್‌ನ ಕಮಾಂಡರ್ ಸೈಫುಲ್ಲಾಹ್ ಸಹ ಸೇರಿದ್ದಾನೆ ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸೈನಿಕನಿಕರೊಬ್ಬರಿಗೆ ಗಾಯವಾಗಿದ್ದು, ಅವರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆಯ ವಿಶೇಷತೆ
ಈ ಕಾರ್ಯಾಚರಣೆಯು ಕಿಶ್ತ್ವಾರ್, ಉಧಂಪುರ್ ಮತ್ತು ಕಠುವಾ ಜಿಲ್ಲೆಗಳನ್ನು ಸಂಪರ್ಕಿಸುವ ಎತ್ತರದ ಪ್ರದೇಶಗಳಲ್ಲಿ ನಡೆಯಿತು. ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳ ಮೂಲಕ ಈ ಪ್ರದೇಶದಲ್ಲಿ ತೀವ್ರ ನಿಗಾವಹಿಸಲಾಗಿತ್ತು.
ಸೇನೆಯ ಹೇಳಿಕೆ
ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತಮ್ಮ ಎಕ್ಸ್‌ನಲ್ಲಿ, “ಕಿಶ್ತ್ವಾರ್ನ ಚತ್ರೂ ಕಾಡಿನಲ್ಲಿ ಏಪ್ರಿಲ್ 9ರಂದು ಆರಂಭವಾದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ವಾತಾವರಣದ ನಡುವೆಯೂ ನಮ್ಮ ಧೈರ್ಯಶಾಲಿ ಸೈನಿಕರು ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ,” ಎಂದು ತಿಳಿಸಿದೆ. ಸೇನೆಯ ಉತ್ತರ ಕಮಾಂಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂ.ವಿ. ಸುಚಿಂದ್ರ ಕುಮಾರ್ ಅವರು ಈ ಕಾರ್ಯಾಚರಣೆಯಲ್ಲಿ ತೋರಿದ ಚಾಕಚಕ್ಯತೆಗಾಗಿ ಸೈನಿಕರನ್ನು ಶ್ಲಾಘಿಸಿದ್ದಾರೆ.
ಕಳೆದ 19 ದಿನಗಳಲ್ಲಿ ಕಠುವಾ-ಉಧಂಪುರ್-ಕಿಷ್ಟ್ವಾರ್ ಪರ್ವತೀಯ ಪ್ರದೇಶಗಳಲ್ಲಿ ಒಟ್ಟು ಐದು ಗುಂಡಿನ ಚಕಮಕಿಗಳು ನಡೆದಿವೆ. ಈ ಘಟನೆಗಳಲ್ಲಿ ಒಟ್ಟು ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಆದರೆ, ಈ ಚಕಮಕಿಗಳಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಬಾಲಕಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತೆ ಗುಂಪುಗೂಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.