ಸೈಬರ್ ಅಪರಾಧ ಪರಿಶೀಲನೆಗೆ ಎಐ ಬಳಸಿ: ಅಮಿತ್ ಶಾ

ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ನ್ನು ಜನಪ್ರಿಯಗೊಳಿಸಬೇಕಿದೆ. ಸೈಬರ್ ಅಪರಾಧಗಳಿಗೆ ಗಡಿಗಳಿಲ್ಲ. ಈ ಅಪರಾಧಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಶಾ ಹೇಳಿದರು.;

Update: 2024-09-10 13:07 GMT

ಹೊಸದಿಲ್ಲಿ: ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿ ಹರಡುವಿಕೆ, ಮಹಿಳೆಯರು-ಮಕ್ಕಳ ಮೇಲೆ ದೌರ್ಜನ್ಯ ಹಾಗೂ ವಂಚಿಸಿ ಹಣ ಕೀಳುವ ಕ್ರಿಮಿನಲ್‌ಗಳ ಕಾರ್ಯವೈಖರಿಯನ್ನು ಗುರುತಿಸಲು ಕೃತಕ ಬುದ್ಧಿಮತ್ತೆ(ಎಐ)ಯನ್ನು ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಒತ್ತಾಯಿಸಿದ್ದಾರೆ. 

ಐ4ಸಿ( ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ) ಮೊದಲ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ ಭಾರತದ ಪಾಲು ಶೇ. 46 ಇದೆ. ಇದರಿಂದ ಈ ಏಜೆನ್ಸಿಗಳ ಕೆಲಸ ಸವಾಲಾಗಿದೆ ಎಂದು ಹೇಳಿದರು. 

2018 ರಲ್ಲಿ ಸ್ಥಾಪನೆಯಾದ ಐ4ಸಿ, ಗೃಹ ವ್ಯವಹಾರಗಳ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸೈಬರ್ ಅಪರಾಧಗಳನ್ನು ಬಗೆಹರಿಸಲು ರಾಷ್ಟ್ರೀಯ ಮಟ್ಟದ ಸಮನ್ವಯ ಕೇಂದ್ರವನ್ನು ಸ್ಥಾಪಿಸುವ ಉದ್ಧೇಶ ಹೊಂದಿದೆ. ಶಾ ಅವರು ಐ4ಸಿಯ ನಾಲ್ಕು ವೇದಿಕೆಗಳನ್ನು ಪ್ರಾರಂಭಿಸಿದರು; ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ (CFMC), ಸಮನ್ವಯ ವೇದಿಕೆ, ಸೈಬರ್ ಕಮಾಂಡೋಸ್ ಪ್ರೋಗ್ರಾಂ ಮತ್ತು ಶಂಕಿತರ ನೋಂದಣಿ ಪುಸ್ತಕ. 

ʻಅಪರಾಧಿಗಳ ಕಾರ್ಯನಿರ್ವಹಣೆಯನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಒತ್ತಾಯಿಸುತ್ತೇನೆ. ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ,ʼ ಎಂದು ಹೇಳಿದರು.

ದೇಶದಲ್ಲಿ ಇಂಟರ್ನೆಟ್ ಬಳಕೆ ಕುರಿತು ಮಾತನಾಡಿ,ʼ 2014 ರಲ್ಲಿ 25 ಕೋಟಿ ಇದ್ದ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ 95 ಕೋಟಿಗೆ ಹೆಚ್ಚಿದೆ. 2014 ರಲ್ಲಿ 600 ಪಂಚಾಯತ್‌ಗಳು ಇಂಟರ್ನೆಟ್‌ ಸಂಪರ್ಕ ಹೊಂದಿದ್ದವು. ಈಗ ಅದು 2.13 ಲಕ್ಷಕ್ಕೆ ಹೆಚ್ಚಿದೆ. ಇಂಟರ್ನೆಟ್ ಬಳಕೆ ಶೇ. 78 ರಷ್ಟು ಏರಿಕೆಯಾಗಿದೆ,ʼ ಎಂದು ಹೇಳಿದರು.

ʻ2024 ರಲ್ಲಿ ದೇಶದಲ್ಲಿ ಅಂದಾಜು 20,64,000 ಕೋಟಿ ರೂ.ಮೌಲ್ಯದ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ನಡೆದಿದೆ. ಇದು ಜಾಗತಿಕ ಡಿಜಿಟಲ್ ವಹಿವಾಟಿನ ಶೇ.46. ಇದರಿಂದಾಗಿ ಸೈಬರ್ ವಂಚನೆ ವಿರುದ್ಧ ರಕ್ಷಣೆ ಅಗತ್ಯವಿದೆ. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ನ್ನು ಜನಪ್ರಿಯಗೊಳಿಸಬೇಕಿದೆ,ʼ ಎಂದು ಹೇಳಿದರು.

ʻಸೈಬರ್ ಅಪರಾಧಗಳಿಗೆ ಗಡಿಗಳಿಲ್ಲ. ಈ ಅಪರಾಧಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಈ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ. ಸೈಬರ್‌ ಅಪರಾಧ ಎದುರಿಸಲು ಮುಂದಿನ ಐದು ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳಿಗೆ ತರಬೇತಿ ನೀಡಲು ಸರ್ಕಾರ ಯೋಜಿಸಿದೆ,ʼ ಎಂದು ಅವರು ಹೇಳಿದರು. 

Tags:    

Similar News