Shah Rukh Khan | ಸಲ್ಮಾನ್‌ಗೆ ಆಯಿತು, ಈಗ ಶಾರುಖ್‌ ಖಾನ್‌ಗೂ ಜೀವ ಬೆದರಿಕೆ ಕರೆ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್ ಇತ್ತೀಚೆಗೆ 5 ಕೋಟಿ ರೂ.ಗಳ ಬೇಡಿಕೆ ಇಟ್ಟಿತ್ತು. ಇದೀಗ ಶಾರುಖ್‌ಗೂ ಬೆದರಿಕೆಗಳು ಬರಲು ಆರಂಭವಿಸಿವೆ.;

Update: 2024-11-07 11:15 GMT
ಬಾಲಿವುಡ್‌ ನಟ ಶಾರುಖ್‌ ಖಾನ್

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದ ಸ್ಟಾರ್‌ ನಟರಾದ ಶಾರುಖ್‌ ಮತ್ತು ಸಲ್ಮಾನ್‌ ಖಾನ್‌ ಬಗ್ಗೆ ಒಂದು ವರ್ಗದ ಜನರಿಗೆ ಆಕ್ರೋಶವಿದೆ. ಇನ್ನು ಕೆಲವು ಕಿಡಿಗೇಡಿಗಳು ಅವರಿಬ್ಬರ ಏಳಿಗೆ ಸಹಿಸುತ್ತಿಲ್ಲ. ಹೀಗಾಗಿ ಸ್ಟಾರ್‌ ನಟರಾಗಿ ಮಿಂಚಿದ ಕಾಲದಿಂದ ಹಿಡಿದು ಇದುವರೆಗೂ ಅವರಿಗೆ ಕಾಟ ಕೊಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಿನಿಂದ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಲ್ಲಿ ನಿರಂತರ ಬೆದರಿಕೆಗಳು ಬರಲು ಆರಂಭಿಸಿವೆ. ಇದೀಗ ಅದೇ ಮಾದರಿಯ ಬೆದರಿಕೆ ಶಾರುಖ್‌ಗೂ ಬರಲು ಆರಂಭಗೊಂಡಿದೆ. 50 ಲಕ್ಷ ರೂಪಾಯಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಶಾರುಖ್‌ ಖಾನ್‌ಗೆ ಬೆದರಿಕೆ ಹಾಕಿದ್ದಾರೆ.

ಬೆದರಿಕೆ ಹಾಕಿದ ಸಂಬಂಧ ಮುಂಬೈ ಪೊಲೀಸರು ರಾಯ್‌ಪುರದ ವ್ಯಕ್ತಿಯೊಬ್ಬರಿಗೆ ಸಮನ್ಸ್ ನೀಡಿದ್ದಾರೆ ಎಂದು ಛತ್ತೀಸ್‌ಗಢದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂದ್ರಾ ಪೊಲೀಸ್ ಠಾಣೆಗೆ ಶಾರುಖ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿದೆ. 50 ಲಕ್ಷ ರೂಪಾಯಿಗಳನ್ನು ಕೇಳಿದ್ದುಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾರುಖ್ ಖಾನ್ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 308 (4) (ಕೊಲೆ ಅಥವಾ ಗಂಭೀರ ಗಾಯದ ಬೆದರಿಕೆಗಳನ್ನು ಒಳಗೊಂಡ ಸುಲಿಗೆ) ಮತ್ತು 351 (3) (4) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸ್ ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರೆ ಛತ್ತೀಸ್‌ಗಢದಿಂದ ಬಂದಿದೆ ಎಂಬ ವರದಿಗಳ ಬಗ್ಗೆ ಮುಂಬೈ ಪೊಲೀಸರಿಂದ ಯಾವುದೇ ಹೇಳಿಕೆ ಪ್ರಕಟಗೊಂಡಿಲ್ಲ. ಮುಂಬೈ ಪೊಲೀಸರು ಗುರುವಾರ ನಗರದ ವ್ಯಕ್ತಿಗೆ ನೋಟಿಸ್ ನೀಡಿದ್ದಾರೆ ಎಂದು ರಾಯ್ಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾರುಖ್ ಖಾನ್ ಅವರಿಗೆ ಬೆದರಿಕೆ ಇರುವ ಬಗ್ಗೆ ತನಿಖೆಯ ಭಾಗವಾಗಿ ಮುಂಬೈ ಪೊಲೀಸರು ರಾಯ್ಪುರಕ್ಕೆ ಭೇಟಿ ನೀಡಿ ಇಲ್ಲಿನ ಪಾಂಡ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುವ ಫಯಾಜ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ ಎಂದು ರಾಯ್ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಫಯಾಜ್ ಎಂಬಾತನ ಹೆಸರಿನಲ್ಲಿ ನೋಂದಾಯಿಸಲಾದ ಫೋನ್ ಸಂಖ್ಯೆಯಿಂದ ನಟನಿಗೆ ಬೆದರಿಕೆ ಕರೆ ಮಾಡಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಫಯಾಜ್‌ಗೆ ಸೂಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. 

Tags:    

Similar News