ಅದಾನಿ ಗ್ರೂಪ್‌ನಿಂದ ಮುಂಬೈ, ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಟರ್ಕಿಯ ಸೆಲೆಬಿ ಜೊತೆಗಿನ ಸಹಭಾಗಿತ್ವ ಅಂತ್ಯ
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಪ್ರಸ್ತುತ ಮುಂಬೈ, ಅಹಮದಾಬಾದ್, ಮಂಗಳೂರು, ಗುವಾಹಟಿ, ಜೈಪುರ, ಲಕ್ನೋ ಮತ್ತು ತಿರುವನಂತಪುರಂ ಸೇರಿದಂತೆ ದೇಶದ ಏಳು ಪ್ರಮುಖ ವಿಮಾನ ನಿಲ್ದಾಣಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಹೊಂದಿದೆ.;
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ತನ್ನ ಮುಂಬೈ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿನ ಗ್ರೌಂಡ್ ಹ್ಯಾಂಡ್ಲಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಟರ್ಕಿಯ ವಿಮಾನಯಾನ ಸೇವಾ ಕಂಪನಿ ಸೆಲೆಬಿಯೊಂದಿಗಿನ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ಗುರುವಾರ ಪ್ರಕಟಿಸಿದೆ.
ಕೇಂದ್ರ ಸರ್ಕಾರವು ಟರ್ಕಿಯ ಸೆಲೆಬಿ ಕಂಪನಿಯ ಭದ್ರತಾ ಅನುಮತಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ. ಒಪ್ಪಂದ ರದ್ದುಗೊಂಡ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಗ್ರೌಂಡ್ ಹ್ಯಾಂಡ್ಲಿಂಗ್ ಸೌಲಭ್ಯಗಳನ್ನು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ಗೆ ಹಸ್ತಾಂತರಿಸುವಂತೆ ಸೆಲೆಬಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಇದು ಖಚಿತಪಡಿಸುತ್ತದೆ ಎಂದು ಕಂಪನಿ ಹೇಳಿದೆ.
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಪ್ರಸ್ತುತ ಮುಂಬೈ, ಅಹಮದಾಬಾದ್, ಮಂಗಳೂರು, ಗುವಾಹಟಿ, ಜೈಪುರ, ಲಕ್ನೋ ಮತ್ತು ತಿರುವನಂತಪುರಂ ಸೇರಿದಂತೆ ದೇಶದ ಏಳು ಪ್ರಮುಖ ವಿಮಾನ ನಿಲ್ದಾಣಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಹೊಂದಿದೆ.
"ಭಾರತ ಸರ್ಕಾರವು ಸೆಲೆಬಿಯ ಭದ್ರತಾ ಅನುಮತಿ ಹಿಂತೆಗೆದುಕೊಂಡ ನಂತರ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA) ಮತ್ತು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (SVPIA) ಗಳಲ್ಲಿ ಸೆಲೆಬಿಯೊಂದಿಗಿನ ನಮ್ಮ ಗ್ರೌಂಡ್ ಹ್ಯಾಂಡ್ಲಿಂಗ್ ಒಪ್ಪಂದಗಳನ್ನು ನಾವು ರದ್ದುಗೊಳಿಸಿದ್ದೇವೆ. ಇದರ ಅನ್ವಯ, ಸೆಲೆಬಿಯನ್ನು ಎಲ್ಲಾ ಗ್ರೌಂಡ್ ಹ್ಯಾಂಡ್ಲಿಂಗ್ ಸೌಲಭ್ಯಗಳನ್ನು ತಕ್ಷಣವೇ ನಮಗೆ ಹಸ್ತಾಂತರಿಸಲು ಸೂಚಿಸಲಾಗಿದೆ," ಎಂದು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾವು ಹೊಸದಾಗಿ ಆಯ್ಕೆ ಮಾಡಿರುವ ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಗಳ ಮೂಲಕ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಅಡಚಣೆಯಿಲ್ಲದೆ ಸೇವೆಯನ್ನು ಮುಂದುವರಿಸುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.
"ನಮ್ಮ ವಿಮಾನ ನಿಲ್ದಾಣಗಳಲ್ಲಿನ ಗ್ರೌಂಡ್ ಹ್ಯಾಂಡ್ಲಿಂಗ್ ಕಾರ್ಯಾಚರಣೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಉನ್ನತ ಮಟ್ಟದ ಸೇವೆಯನ್ನು ಕಾಪಾಡಿಕೊಳ್ಳಲು ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ," ಎಂದು ವಕ್ತಾರರು ಪುನರುಚ್ಚರಿಸಿದ್ದಾರೆ.