ದೆಹಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಆತಿಶಿ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡಿರುವ ಮಾಜಿ ಸಿಎಂ ಆತಿಶಿ, ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ರಾಜೀನಾಮೆ ಪ್ರತಿಯನ್ನು ಸಲ್ಲಿಸಿದರು.;
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (AAP) ಹೀನಾಯ ಸೋಲು ಅನುಭವಿಸಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ಆತಿಶಿ ರಾಜೀನಾಮೆ ಸಲ್ಲಿಸಿದ್ದಾರೆ. ಫೆಬ್ರವರಿ 9 (ಭಾನುವಾರ) ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿಯಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಆತಿಶಿ ಅವರು ರಾಜಭವನದಲ್ಲಿ ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರೆಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
26 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು,70 ಸ್ಥಾನಗಳ ಪೈಕಿ 48 ಸ್ಥಾನಗಳನ್ನು ಗೆದ್ದು ಸಂಭ್ರಮಿಸಿದೆ. ಆಪ್ 22 ಸ್ಥಾನಗಳನ್ನುತನ್ನದಾಗಿಸಿಕೊಂಡರೆ, ಕಾಂಗ್ರೆಸ್ ಸಾಧನೆ ಶೂನ್ಯ.
ಪರ್ವೇಶ್ ವರ್ಮಾ ಮುಂಚೂಣಿಯಲ್ಲಿ
ಬಿಜೆಪಿಯಿಂದ ದೆಹಲಿ ಮುಂದಿನ ಮುಖ್ಯಮಂತ್ರಿಯಾಗಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಪರ್ವೇಶ್ ವರ್ಮಾ ಮುಂಚೂಣಿಯಲ್ಲಿದ್ದಾರೆ. ಎಎಪಿಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು 4,089 ಮತಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಅವರು ರಾಜಕೀಯ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ.
ಆತಿಶಿ ಅವರು 2024ರ ಸೆಪ್ಟೆಂಬರ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪಗಳ ನಡುವೆ ರಾಜೀನಾಮೆ ನೀಡಿದ ನಂತರ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.