ಪಶ್ಚಿಮ ಬಂಗಾಳದಲ್ಲಿ ಘೋರ ಕೃತ್ಯ: 4 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ
ಮರುದಿನ ಮಧ್ಯಾಹ್ನ ತಾರಕೇಶ್ವರ ರೈಲ್ವೆ ನಿಲ್ದಾಣದ ಸಮೀಪವಿರುವ ಚರಂಡಿಯ ಬಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾಳೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ರೈಲ್ವೆ ಶೆಡ್‌ನಲ್ಲಿ ಅಜ್ಜಿಯೊಂದಿಗೆ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ತಡರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ.
ಬಂಜಾರ ಸಮುದಾಯಕ್ಕೆ ಸೇರಿದ ಈ ಬಾಲಕಿ, ತನ್ನ ಅಜ್ಜಿಯೊಂದಿಗೆ ರೈಲ್ವೆ ಶೆಡ್‌ನಲ್ಲಿ ಸೊಳ್ಳೆ ಪರದೆಯೊಳಗೆ ಮಲಗಿದ್ದಳು. ಮಧ್ಯರಾತ್ರಿ ದುಷ್ಕರ್ಮಿಯೊಬ್ಬ ಸೊಳ್ಳೆ ಪರದೆಯನ್ನು ಕತ್ತರಿಸಿ, ಮಗುವನ್ನು ಅಪಹರಿಸಿದ್ದಾನೆ. "ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯಾರೋ ಕರೆದುಕೊಂಡು ಹೋಗಿದ್ದಾರೆ. ನನಗೆ ಗೊತ್ತಾಗಲೇ ಇಲ್ಲ," ಎಂದು ಬಾಲಕಿಯ ಅಜ್ಜಿ ಕಣ್ಣೀರಿಡುತ್ತಾ ಹರಿದ ಸೊಳ್ಳೆ ಪರದೆಯನ್ನು ತೋರಿಸಿದ್ದಾರೆ.
ಮರುದಿನ ಮಧ್ಯಾಹ್ನ ತಾರಕೇಶ್ವರ ರೈಲ್ವೆ ನಿಲ್ದಾಣದ ಸಮೀಪವಿರುವ ಚರಂಡಿಯ ಬಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾಳೆ. ಅವಳ ದೇಹದ ಮೇಲೆ ಗಾಯದ ಗುರುತುಗಳಿದ್ದವು. ತಕ್ಷಣವೇ ತಾರಕೇಶ್ವರ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಂದನನಗರ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆ ವಿರುದ್ಧ ಆಕ್ರೋಶ
ಬಾಲಕಿಯ ಖಾಸಗಿ ಅಂಗಗಳಿಂದ ರಕ್ತಸ್ರಾವವಾಗುತ್ತಿದ್ದರೂ, ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡದೆ ಪ್ರಕರಣವನ್ನು ನಿರ್ಲಕ್ಷಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಹೋದಾಗ, ಅಧಿಕಾರಿಗಳು ದೂರು ದಾಖಲಿಸಿಕೊಳ್ಳುವ ಬದಲು ತಮ್ಮನ್ನು ವಾಪಸ್ ಕಳುಹಿಸಲು ಯತ್ನಿಸಿದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸರು ಮತ್ತು ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.
ರಾಜಕೀಯ ತಿರುವು
ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರು, "ತಾರಕೇಶ್ವರ ಪೊಲೀಸರು ಎಫ್‌ಐಆರ್ ದಾಖಲಿಸಲು ಆರಂಭದಲ್ಲಿ ಹಿಂದೇಟು ಹಾಕಿದ್ದರು. ರಾಜ್ಯ ಸರ್ಕಾರದ ವರ್ಚಸ್ಸನ್ನು ಉಳಿಸಲು ಪೊಲೀಸರು ಈ ಅಪರಾಧವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದು, ಅವರ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಟೀಕಿಸಿದ್ದಾರೆ.
ಸ್ಥಳೀಯ ಶಾಸಕ ರಾಮೇಂದು ಸಿಂಘಾ ರಾಯ್ ಘಟನೆಯನ್ನು "ಅತ್ಯಂತ ವಿಷಾದನೀಯ" ಎಂದು ಕರೆದಿದ್ದು, ರೈಲ್ವೆ ಪೊಲೀಸರ "ಭದ್ರತಾ ಲೋಪ"ವೇ ಇದಕ್ಕೆ ಕಾರಣ ಎಂದು ದೂರಿದ್ದಾರೆ. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.