ಲೋಕಸಭೆ ಚುನಾವಣೆ: ಕಾಂಗ್ರೆಸ್ ಪ್ರಚಾರ ಆರಂಭಕ್ಕೆ ನಾಗಪುರವೇ ಏಕೆ?
-ದ ಫೆಡರಲ್
……………………..
ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಕಚೇರಿ ಮಹಾರಾಷ್ಟ್ರದ ನಾಗಪುರದಲ್ಲಿದೆ. ಕಾಂಗ್ರೆಸ್ ಇಲ್ಲಿಂದಲೇ 2024 ರ ಲೋಕಸಭೆ ಚುನಾವಣೆ ಪ್ರಚಾರವನ್ನು ಡಿಸೆಂಬರ್ 28ರಂದು ಆರಂಭಿಸಿದೆ. ಕಾಂಗ್ರೆಸ್ ಸ್ಥಾಪನೆಯ 139ನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ʻನಾವು ಸಿದ್ಧರಿದ್ದೇವೆ(ಹೈ ತಯ್ಯಾರ್ ಹಂ)ʼ ಎಂದು ಹೆಸರಿಡಲಾಗಿತ್ತು. ಸಂಸದ ರಾಹುಲ್ ಗಾಂಧಿ, ಆರ್ಎಸ್ಎಸ್ ಭಾರತವನ್ನು ʻಸ್ವಾತಂತ್ರ್ಯಪೂರ್ವ ಯುಗʼದತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.
ʻದೇಶದಲ್ಲಿ ನಡೆಯುತ್ತಿರುವುದು ಸಿದ್ಧಾಂತಗಳ ಕದನ. ಆದರೆ, ಇದನ್ನು ರಾಜಕೀಯ ಹೋರಾಟ, ಅಧಿಕಾರಕ್ಕಾಗಿ ಹೋರಾಟ ಎಂದು ನೋಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರಲಿಲ್ಲ ಮತ್ತು ದಲಿತರು ಅಂಚಿನಲ್ಲಿದ್ದರು. ಈ ಆರ್ಎಸ್ಎಸ್ ಸಿದ್ಧಾಂತವನ್ನು ನಾವು ಬದಲಿಸಿದ್ದೇವೆ. ಆದರೆ, ಅವರು ನಮ್ಮನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕರೆದೊಯ್ಯಲು ಬಯಸಿದ್ದಾರೆ, ʼಎಂದು ಹೇಳಿದರು.
ಕಾರ್ಯಕ್ರಮಕ್ಕೆ ನಾಗ್ಪುರದ ಆಯ್ಕೆ ಆಶ್ಚರ್ಯ ಹುಟ್ಟಿಸುವುದಿಲ್ಲ. ಏಕೆಂದರೆ, ನಾಗಪುರ ಪ್ರಮುಖ ರಾಜಕೀಯ ಘಟನೆಗಳಿಗೆ ತಾಣವಾದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಕೇಶವ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ಆರ್ಎಸ್ಎಸ್ ನ ಪ್ರಧಾನ ಕಚೇರಿ ನಾಗ್ಪುರದಲ್ಲಿದೆ. ನಾಗ್ಪುರದವರಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆರ್ಎಸ್ಎಸ್, ʻಬಿಜೆಪಿಯ ಶಕ್ತಿ ಕೇಂದ್ರʼ ಎಂದು ವ್ಯಾಖ್ಯಾನಿಸಿದ್ದರು.
ಬಿಜೆಪಿ-ಆರ್ಎಸ್ಎಸ್ ನ ʻಭಾರತದ ಪರಿಕಲ್ಪನೆʼಯೊಂದಿಗೆ ನಮ್ಮದು ಸೈದ್ಧಾಂತಿಕ ಯುದ್ಧ ಎಂದು ಕಾಂಗ್ರೆಸ್ ಹೇಳುತ್ತದೆ. ʼಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ. ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಇದು ಹೋರಾಟ, ಸಹಾನುಭೂತಿ, ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಂಥದ್ದು. ಪಕ್ಷದ ಸಂಸ್ಥಾಪನೆ ದಿನದಂದು ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತೇವೆʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಂಚಿತ್ ಬಹುಜನ ಅಘಾಡಿ (ವಿಬಿಎ) ಅಧ್ಯಕ್ಷ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, ‘ ಸಮಾನ ಮನಸ್ಕ ಪಕ್ಷಗಳು ತಮ್ಮ ಅಹಂ ಬದಿಗೊತ್ತಿ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಒಟ್ಟಾಗಿ ವಿರೋಧಿಸಬೇಕು. ಇದು 2024 ರ ಚುನಾವಣೆಗೆ ಸೀಮಿತವಾಗಬಾರದು. ಸಂವಿಧಾನಕ್ಕೆ ವಿರೋಧ ಇರುವುದು ವಾಸ್ತವ. ಅದು ಆರೆಸ್ಸೆಸ್-ಬಿಜೆಪಿಯ ಹಿಡನ್ ಅಜೆಂಡಾ,ʼ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ನಾಗಪುರ:
ದೇಶದ ಭೌಗೋಳಿಕ ಕೇಂದ್ರವೆಂದು ಪರಿಗಣಿಸಲಾದ ನಾಗ್ಪುರ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧ ಸ್ವಾತಂತ್ರ್ಯ ಪೂರ್ವ ಕಾಲದಿಂಲೂ ಇರುವಂಥದ್ದು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಡಿಸೆಂಬರ್ 1920 ರಲ್ಲಿ ನಾಗ್ಪುರ ಅಧಿವೇಶನ ನಡೆಯಿತು. ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಲಾಯಿತು. ಅದೇ ಸಭೆಯಲ್ಲಿ, ಕಾಂಗ್ರೆಸ್ ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಂಡಿತು. ಎಐಸಿಸಿಯನ್ನು 350 ಸದಸ್ಯರೊಂದಿಗೆ ಬಲಪಡಿಸಲು ಮತ್ತು ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳಲು
15 ಸದಸ್ಯರ ಸಿಡಬ್ಲ್ಯೂಸಿಯನ್ನು ರಚಿಸಲಾಯಿತು.
ಸ್ವಾತಂತ್ರ್ಯಾನಂತರ 1959 ರ ನಾಗ್ಪುರ ಕಾಂಗ್ರೆಸ್ ಸಮಾವೇಶದಲ್ಲಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ನಿರ್ಗಮಿತ ಅಧ್ಯಕ್ಷ ಯು.ಎನ್.ದೇಬರ್ ಅವರು ಕೇವಲ 41 ವರ್ಷ ವಯಸ್ಸಿನ ಇಂದಿರಾ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಶಿಫಾರಸು ಮಾಡಿದರು.
ನಾಗ್ಪುರ ಯಾವಾಗಲೂ ಕಾಂಗ್ರೆಸ್ನ ಭದ್ರಕೋಟೆ. ತುರ್ತು ಪರಿಸ್ಥಿತಿಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ʻಇಂದಿರಾ ಹಟಾವೋ , ದೇಶ್ ಬಚಾವೋʼ ಅಭಿಯಾನದ ನೇತೃತ್ವದ ಸಮಾಜವಾದಿ ಚಳವಳಿ ನಡೆಯುತ್ತಿದ್ದಾಗಲೂ ಕಾಂಗ್ರೆಸ್ ನಾಗ್ಪುರದಲ್ಲಿ ಗೆಲುವು ಸಾಧಿಸಿತ್ತು.
ಕಳೆದ ನಾಲ್ಕು ದಶಕಗಳಲ್ಲಿ, ಬಿಜೆಪಿ ನಾಗ್ಪುರ ಲೋಕಸಭಾ ಕ್ಷೇತ್ರವನ್ನು ಕೇವಲ ಮೂರು ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ - 1996, 2014 ಮತ್ತು 2019. ಆರ್ಎಸ್ಎಸ್ಗೆ ನಿಕಟವಾಗಿರುವ ಕ್ಯಾಬಿನೆಟ್ ಸಚಿವ ನಿತಿನ್ ಗಡ್ಕರಿ, ಈಗ ಅಲ್ಲಿನ ಸಂಸದ.
ಅಂಬೇಡ್ಕರರ ದೀಕ್ಷಾಭೂಮಿ:
1956 ರಲ್ಲಿ, ಬಿ.ಆರ್. ಅಂಬೇಡ್ಕರ್ ಅವರು ತಮ್ಮಲಕ್ಷಾಂತರ ಅನುಯಾಯಿಗಳೊಂದಿಗೆ ದಸರಾ ಹಬ್ಬದ ಸಮಯದಲ್ಲಿ ನಾಗ್ಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಈಗ ಈ ಐತಿಹಾಸಿಕ ಸ್ಥಳದಲ್ಲಿ ದೀಕ್ಷಾಭೂಮಿ ಎಂಬ ಸ್ಮಾರಕವಿದೆ.
ಆರ್ಎಸ್ಎಸ್ನ ತತ್ವಗಳು ಮತ್ತು ಸಂವಿಧಾನದ ಮುಖ್ಯ ಶಿಲ್ಪಿಯೊಂದಿಗಿನ ಸಂಬಂಧದಿಂದಾಗಿ, ಕಾಂಗ್ರೆಸ್ ನಾಗ್ಪುರದಲ್ಲಿ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲು ಆಯ್ಕೆ ಮಾಡಿಕೊಂಡಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಪ್ರಗತಿಪರ ಚಿಂತನೆಯನ್ನು ಹಾಗೂ
ಕಾಂಗ್ರೆಸ್ ಆರೋಪಿಸುವ ಆರೆಸ್ಸೆಸ್ ಚಿಂತನೆ - ಈ ಎರಡನ್ನೂ ನಾಗಪುರ ಒಳಗೊಂಡಿದೆ. ಅಂಬೇಡ್ಕರ್ ಅವರ ಪರಂಪರೆಯನ್ನು ಎತ್ತಿ ಹಿಡಿಯುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್, ಮೋದಿ ನೇತೃತ್ವದ ಆಡಳಿತಾರೂಢ ಬಿಜೆಪಿ ʻಸಂವಿಧಾನವನ್ನು ಬದಲಾಯಿಸಲುʼ ಮುಂದಾಗಿದೆ ಎಂದು ಆರೋಪಿಸಿದೆ.
ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, 2024 ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಗಣತಿ ನಡೆಸುವುದಾಗಿ ಪುನರುಚ್ಚರಿಸಿದರು. ಎಲ್ಲ ಜಾತಿಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತೇವೆ. ಬಡವರಿಗೆ ಒಂದು, ಶ್ರೀಮಂತರಿಗೆ ಒಂದು ಹಿಂದೂಸ್ಥಾನ ಬೇಡ ಎಂದರು.
2024 ಲೋಕಸಭೆ ಚುನಾವಣೆ:
ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು.
ಮುಂಬರುವ 2024 ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮತ್ತು ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ.
ʻಭ್ರಷ್ಟಾಚಾರ ಮತ್ತು ಸಂವಿಧಾನ ವಿರೋಧಿ ರಾಜಕಾರಣದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದೇವೆ. ಬಿಜೆಪಿಯು ಕೇಂದ್ರೀಯ ಸಂಸ್ಥೆಗಳ ನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಸಂಸತ್ತಿನ ಒಳಗೆ ಹಾಗೂ ಹೊರಗೆ ವಿರೋಧದ ಧ್ವನಿಯನ್ನು ಹತ್ತಿಕ್ಕುತ್ತಿದೆ. ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಮತ್ತು ಕೃಷಿ ಸಂಕಷ್ಟಕ್ಕೆ ಕಾರಣವಾಗಿದೆʼ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿ ಸಿದ್ದಾರೆ. ನಾಗ್ಪುರ ಸಮಾವೇಶವು ರಾಹುಲ್ ಗಾಂಧಿ ಅವರ ಭಾರತ ನ್ಯಾಯ ಯಾತ್ರೆ 2.0 ರ ಭಾಗ. ʻಇಂಡಿಯಾ ಜಸ್ಟೀಸ್ ಜರ್ನಿʼ ಜನವರಿ 14 ರಂದು ಪೂರ್ವದಲ್ಲಿ ಮಣಿಪುರದಿಂದ ಪಶ್ಚಿಮದಲ್ಲಿ ಮುಂಬೈಯಿಂದ ಪ್ರಾರಂಭವಾಗಲಿದೆ.
ಮಹಾರಾಷ್ಟ್ರದ ಮಹತ್ವ:
48 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದ ನಂತರ ಎರಡನೇ ಸ್ಥಾನ ಪಡೆದುಕೊಂ ಡಿದೆ. ಹಿಂದೆ ಮಹಾರಾಷ್ಟ್ರದಲ್ಲಿ ಪ್ರಬಲ ಶಕ್ತಿಯಾಗಿದ್ದ ಕಾಂಗ್ರೆಸ್, 1999 ರ ನಂತರ ಶರದ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ರಚಿಸಿದ ನಂತರ ಕುಸಿಯಲಾರಂಭಿಸಿತು. 1999 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನ, ಮಿತ್ರಪಕ್ಷ ಎನ್ಸಿಪಿ 6, ಬಿಜೆಪಿ 13 ಮತ್ತು ಶಿವಸೇನೆ 15 ಸ್ಥಾನ ಗೆದ್ದುಕೊಂಡವು. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನ ಮತ್ತು
ಎನ್ಸಿಪಿ 4 ಸ್ಥಾನ ಗಳಿಸಿದವು. ಬಿಜೆಪಿ 23 ಹಾಗೂ ಶಿವಸೇನೆ 18 ಸ್ಥಾನ ಗಳಿಸಿದವು.
ಕಾಂಗ್ರೆಸ್ ಜೊತೆಗೆ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ಉಳಿದಿದೆ. ಎನ್ಸಿಪಿ(ಅಜಿತ್ ಪವಾರ್ ಬಣ) ಮತ್ತು ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಇದೆ. ಹೆಚ್ಚುವರಿಯಾಗಿ, ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿದೆ. ಕಾಂಗ್ರೆಸ್ 2024 ರ ಸಂಸತ್ತಿನ ಚುನಾವಣೆಯಲ್ಲಿ ಈ ಎಲ್ಲಾ ವಿಷಯಗಳನ್ನು ಬಳಸಿಕೊಳ್ಳಲಿದೆ. ʻನಾವು ವಿದರ್ಭದಲ್ಲಿ ಬಲವಾದ ಹಿಡಿತ ಹೊಂದಿದ್ದೇವೆ; ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ ಪ್ರಾಂತ್ಯ ಹಾಗೂ ಉತ್ತರ ಮಹಾರಾಷ್ಟ್ರದ ಆದಿವಾಸಿಗಳಿರುವ ಪ್ರದೇಶದಲ್ಲಿ ಗಮನಾರ್ಹ ಉಪಸ್ಥಿತಿ ಹೊಂದಿದ್ದೇವೆ. 15-20 ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಪಾಲುದಾರರು 10 ಸ್ಥಾನ ಗೆಲ್ಲಬಹುದುʼ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದರು.
……………………………….