ವಿರಳ ಲೋಹವೆಂಬ ಅನರ್ಘ್ಯ ರತ್ನದ ಮೇಲೆ ಚೀನಾ ಸವಾರಿ: ಹೈರಾಣಾದ ಸುಂಕದ ದೊರೆ, ಭಾರತವಿನ್ನೂ ಕುಕ್ಕುರುಗಾಲು!

ಚೀನಾ ಜಾಗತಿಕ ವಿರಳ-ಲೋಹ ಪೂರೈಕೆ ಜಾಲವನ್ನು ನಿಯಂತ್ರಿಸುತ್ತಿರುವ ಕಾರಣ, ಭಾರತ ಹೊಸ ಅಭಿಯಾನ ಆರಂಭಿಸಿದೆ. ಈ ಪ್ರಯತ್ನಕ್ಕೆ 15 ವರ್ಷಗಳಷ್ಟು ಹಿಂದೆ ಚಾಲನೆ ನೀಡಬೇಕಾಗಿತ್ತು. ಅಮೆರಿಕ ಕೂಡ ನಿದ್ರೆಗೆ ಜಾರಿದೆ.

Update: 2025-10-29 02:30 GMT
ಮುಂಬರುವ ದಿನಗಳಲ್ಲಿ ವಿರಳ-ಲೋಹ ಖನಿಜಗಳು ಜಾಗತಿಕ ಆರ್ಥಿಕ ಪೈಪೋಟಿಗೆ ದಾರಿ ಮಾಡಿಕೊಡುವುದು ನಿಶ್ಚಿತ. ಈ ಜಿದ್ದಾಜಿದ್ದಿನಲ್ಲಿ ಇಬ್ಬರು ದೊಡ್ಡಣ್ಣಗಳಾದ ಅಮೆರಿಕ ಮತ್ತು ಚೀನಾ ಕಾದಾಟಕ್ಕಿಳಿದಿರುವುದು ಈಗಾಗಲೇ ಗೋಚರಿಸುತ್ತಿದೆ.

‘ಮಧ್ಯಪ್ರಾಚ್ಯದಲ್ಲಿ ತೈಲವಿದ್ದರೆ, ಚೀನಾದಲ್ಲಿ ವಿರಳ-ಲೋಹದ ಕಣಜಗಳಿವೆ’ ಹಾಗೆಂದು ಖಡಕ್ಕಾಗಿ ಹೇಳುತ್ತಿದ್ದ ಚೀನಾದ ಅತ್ಯಂತ ಪ್ರಭಾವಶಾಲಿ ನಾಯಕ ಎಂದರೆ ಡೆಂಗ್ ಕ್ಷಿಯೋಪಿಂಗ್. ಅವರು 1978ರಿಂದ 1997ರ ವರೆಗಿನ ತಮ್ಮ ನಿಧನದ ವರೆಗೂ ಚೀನಾದ ಶ್ರೇಷ್ಠ ನಾಯಕರಾಗಿದ್ದರು. ಅದು 1992ರ ವರ್ಷ. ಅವರು ಚೀನಾ ಕ್ರಾಂತಿಯ ನಾಯಕರಾದ ಮಾವೋ ಝೆಡಾಂಗ್ ಸ್ಥಾಪಿಸಿದ ವ್ಯವಸ್ಥೆಯನ್ನೇ ಬದಲಿಸಿದ್ದರು. ಅಂತಹ ಮಹಾನ್ ದೂರದೃಷ್ಟಿಯ ನಾಯಕರಾಗಿದ್ದರು.

ಜಾಗತಿಕ ನಾಯಕತ್ವಕ್ಕಾಗಿ ಅಮೆರಿಕಕ್ಕೆ ಪ್ರತಿ ಹಂತದಲ್ಲೂ ತೀವ್ರ ಪೈಪೋಟಿ ನೀಡುತ್ತಿರುವ ಇಂದಿನ ಚೀನಾಕ್ಕೆ ಅಡಿಪಾಯ ಹಾಕಿದವರು ಡೆಂಗ್. ಇದು ವಿರಳ-ಲೋಹ ಕುರಿತ ಅವರ ಹೇಳಿಕೆ ನಿಜವೇ ಆಗಿದ್ದರೆ, ಭವಿಷ್ಯದಲ್ಲಿ ವಿರಳ-ಲೋಹದ ಮತ್ತು ನಿರ್ಣಾಯಕ ಖನಿಜಗಳು (critical minerals) ಎಷ್ಟು ಮಹತ್ವಪೂರ್ಣ ರತ್ನವಾಗಿ ಪರಿಣಮಿಸುತ್ತವೆ ಎಂಬುದರ ಬಗ್ಗೆ ಅವರಿಗೆ ಅಸಾಧಾರಣ ಒಳನೋಟವಿತ್ತು ಎಂಬುದು ಜಗತ್ತಿಗೆ ಅರಿವಾಗುತ್ತದೆ.

ಚೀನಾ ಬಳಿ ಅತಿ ದೊಡ್ಡ ವಿರಳ-ಲೋಹ ನಿಕ್ಷೇಪ

ಚೀನಾ ಪ್ರಸ್ತುತ ಅಂದಾಜು 44 ದಶಲಕ್ಷ ಟನ್ ವಿರಳ-ಲೋಹವನ್ನು ಒಳಗೊಂಡ ವಿಶ್ವದ ಅತಿದೊಡ್ಡ ನಿಕ್ಷೇಪಗಳನ್ನು ಹೊಂದಿದೆ. ವಿರಳ-ಲೋಹದ ಎರಡನೇ ಅತಿದೊಡ್ಡ ನಿಕ್ಷೇಪವಿರುವುದು ಬ್ರೆಜಿಲ್ (21 ದಶಲಕ್ಷ ಟನ್)ನಲ್ಲಿ. ಭಾರತದ ಬಳಿ ಸುಮಾರು 6.9 ದಶಲಕ್ಷ ಟನ್ ಸಂಗ್ರಹವಿದೆ. ಇತರ ದೇಶಗಳಿಗೆ ಹೋಲಿಸಿದರೆ ಚೀನಾ ವಿರಳ-ಲೋಹವನ್ನು ನಿರಂತರವಾಗಿ ಗಣಿಗಾರಿಕೆ ಮಾಡಿದೆ, ಸಂಸ್ಕರಿಸಿದೆ ಮತ್ತು ಸಂಸ್ಕರಿಸಿದ ಉತ್ಪನ್ನವನ್ನು ಮ್ಯಾಗ್ನೆಟ್‌ಗಳು ಮತ್ತು ಇತರ ವಸ್ತುಗಳನ್ನು ಉತ್ಪಾದಿಸಲು ಬಳಸಿದೆ.

ಏಷ್ಯಾದ ಈ ದೈತ್ಯ ದೇಶವು ಪ್ರಸ್ತುತ ವಿಶ್ವದ ಶೇ 60 ರಷ್ಟು ವಿರಳ-ಲೋಹದ ಗಣಿಗಾರಿಕೆ ಮಾಡುತ್ತದೆ. ಅದಕ್ಕಿಂತ ಮುಖ್ಯವಾಗಿ, ಜಾಗತಿಕವಾಗಿ ಗಣಿಗಾರಿಕೆ ಮಾಡಿದ ವಿರಳ-ಲೋಹದಲ್ಲಿ ಶೇ 91ರಷ್ಟನ್ನು ಸಂಸ್ಕರಿಸುತ್ತದೆ ಮತ್ತು ಶೇ 94ರಷ್ಟು ವಿರಳ-ಲೋಹದ ಮ್ಯಾಗ್ನೆಟ್‌ಗಳನ್ನು ಉತ್ಪಾದಿಸುತ್ತದೆ.

ಇತ್ತೀಚೆಗೆ ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA)ಯ ವೆಬ್‌ಸೈಟ್‌ನಲ್ಲಿನ ಒಂದು ಲೇಖನವು ಹೀಗೆ ಹೇಳಿದೆ: “ಎರಡು ದಶಕಗಳ ಹಿಂದೆ ಕಾರು, ವಿಂಡ್ ಟರ್ಬೈನ್‌ಗಳು, ಕೈಗಾರಿಕಾ ಮೋಟಾರ್‌ಗಳು, ಡೇಟಾ ಕೇಂದ್ರಗಳು ಮತ್ತು ರಕ್ಷಣಾ ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಬಳಸುವ ಹೆಪ್ಪುಗಟ್ಟಿಸಲಾದ ಶಾಶ್ವತ ಅಯಸ್ಕಾಂತ (sintered permanent magnets)ಗಳ ಉತ್ಪಾದನೆಯಲ್ಲಿ ಚೀನಾ ಸುಮಾರು ಶೇ 50ರಷ್ಟು ಪಾಲು ಹೊಂದಿತ್ತು. ಈ ಪಾಲು ಇಂದು ಗಣನೀಯವಾಗಿ ಏರಿಕೆ ಉಂಟಾಗಿ ಶೇ.90ಕ್ಕೆ ತಲುಪಿದೆ, ಇದರಿಂದಾಗಿ ಚೀನಾ ಅನೇಕ ಅತ್ಯಾಧುನಿಕ-ಅಪ್ಲಿಕೇಶನ್-ಗಳಲ್ಲಿ ಬಳಸಲಾಗುವ ಅತ್ಯಂತ ಶಕ್ತಿಶಾಲಿ ಮೋಟಾರ್‌ಗಳ ತಯಾರಿಕೆಗೆ ನಿರ್ಣಾಯಕವಾದ ಈ ಘಟಕದ ವಿಶ್ವದ ಏಕೈಕ-ಅತಿ ದೊಡ್ಡ ಪೂರೈಕೆದಾರನಾಗಿ ರೂಪುಗೊಳ್ಳುವಂತೆ ಮಾಡಿದೆ.

ಅಮೆರಿಕಕ್ಕೆ ತಪ್ಪಿನ ಅರಿವು

ಮತ್ತೊಂದೆಡೆ, ಕಳೆದ ಮೂರು ದಶಕಗಳ ಅವಧಿಯಲ್ಲಿ ಅಮೆರಿಕವು ಪರಿಸರವನ್ನು ಕಲುಷಿತಗೊಳಿಸುತ್ತದೆ ಎಂಬ ಕಾರಣಕ್ಕೆ ವಿರಳ-ಲೋಹದ ಸಂಸ್ಕರಣೆಯನ್ನು ಕೈಬಿಟ್ಟಿತು. ಈ ವರ್ಷ ಏಪ್ರಿಲ್‌ನಿಂದ ಚೀನಾ ತನ್ನ ಆಮದುಗಳ ಮೇಲೆ ನಿಯಂತ್ರಣ ಹೇರಲು ಪ್ರಾರಂಭಿಸುವವರೆಗೂ ವಿರಳ-ಲೋಹದ ಉತ್ಪನ್ನಗಳ ಬಗ್ಗೆ ತೆಪ್ಪಗೆ ಕುಳಿತಿದ್ದ ಅಮೆರಿಕ ಇಂದು ನಿಶ್ಚಿತವಾಗಿಯೂ ತನ್ನ ನಿರ್ಧಾರದ ಬಗ್ಗೆ ವಿಷಾದಿಸುತ್ತಿರಬಹುದು.

"ಚೀನಾ ಸರ್ಕಾರವು ಏಳು ಬೃಹತ್ ವಿರಳ-ಲೋಹದ ಘಟಕಗಳು, ಜೊತೆಗೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಸಂಯುಕ್ತಗಳು, ಲೋಹಗಳು ಮತ್ತು ಆಯಸ್ಕಾಂತಗಳ ಮೇಲೆ ರಫ್ತು ನಿಯಂತ್ರಣಗಳನ್ನು ಪರಿಚಯಿಸಿತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಫ್ತು ಪ್ರಮಾಣವು ತೀವ್ರ ಕುಸಿದ ಹಿನ್ನೆಲೆಯಲ್ಲಿ ಅಮೆರಿಕ, ಯುರೋಪ್ ಮತ್ತು ಇತರ ಕಡೆಗಳ ಅನೇಕ ಕಾರು ತಯಾರಕರು ಶಾಶ್ವತ ಆಯಸ್ಕಾಂತಗಳನ್ನು ಪಡೆಯಲು ಸಾಧ್ಯವಾಗದೆ ಹೈರಾಣಾಗಿ ಹೋದರು, ಕೆಲವರು ಉತ್ಪಾದನಾ ಪ್ರಮಾಣವನ್ನು ಕಡಿತಗೊಳಿಸಲು ಅಥವಾ ತಾತ್ಕಾಲಿಕವಾಗಿ ಕಾರ್ಖಾನೆಗಳನ್ನು ಮುಚ್ಚಬೇಕಾದ ಒತ್ತಡಕ್ಕೆ ಸಿಲುಕಿದರು” ಎಂದು ಐಇಎ ವರದಿಯು ಹೇಳುತ್ತದೆ.

ವಿರಳ-ಲೋಹ ಆಯಸ್ಕಾಂತಗಳ ರಫ್ತಿನ ಮೇಲೆ ಚೀನಾ ನಿಯಂತ್ರಣ ಹೇರಿದ ಪರಿಣಾಮ ಭಾರತದ ಎಲೆಕ್ಟ್ರಿಕ್ ವಾಹನಗಳ (EV) ತಯಾರಕರ ಮೇಲೂ ಬಿದ್ದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

ಅಮೆರಿಕದ ಜೊತೆಗೆ ತನ್ನ ವ್ಯಾಪಾರದ ಸಮಸ್ಯೆಗಳು ಮಿತಿಮೀರಿದ ಕಾರಣ, ಸುಮಾರು ಹದಿನೈದು ದಿನಗಳ ಹಿಂದೆ ಚೀನಾ ಮತ್ತೊಮ್ಮೆ ವಿರಳ-ಲೋಹದ ಉತ್ಪನ್ನಗಳ ರಫ್ತಿನ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣಗಳನ್ನು ಹೇರಿತು. ಈ ಹೊಸ ನಿಯಂತ್ರಣಗಳು ಜಾಗತಿಕ ಕೈಗಾರಿಕೆಗೆ ಸಂಬಂಧಿಸಿದ ಅನೇಕ ಕ್ಷೇತ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಐಇಎ ಅಭಿಪ್ರಾಯವನ್ನು ಮತ್ತೊಮ್ಮೆ ತಿಳಿದುಕೊಳ್ಳುವುದು ಉತ್ತಮ.

ಇಷ್ಟು ದೊಡ್ಡ ಉಲ್ಲೇಖ ನೀಡಿದ್ದಕ್ಕೆ ಓದುಗರು ನನ್ನನ್ನು ಕ್ಷಮಿಸಬಹುದು ಎಂದು ಭಾವಿಸುತ್ತೇನೆ. ಆದರೆ ಇದು ಅಧಿಕೃತ ಸಂಗತಿಯಾದ ಕಾರಣ ಮತ್ತು ಭಾರತದ ಮೇಲೂ ಪರಿಣಾಮ ಬೀರುವುದರಿಂದ ನಾನು ಅದನ್ನು ಪ್ರಸ್ತಾಪ ಮಾಡಲೇಬೇಕಾಗಿದೆ. ಐಇಎ ತನ್ನ ವೆಬ್‌ಸೈಟ್‌ನಲ್ಲಿ ಹೀಗೆ ಹೇಳುತ್ತದೆ: “ಹೊಸ ನಿಯಂತ್ರಣಗಳ ಪ್ರಕಾರ ವಿದೇಶಿ ಕಂಪನಿಗಳು “ಚೀನಾದಿಂದ ಪಡೆದ ವಿರಳ-ಲೋಹದ ವಸ್ತುಗಳು ಅಥವಾ ಚೀನಾದ ವಿರಳ-ಲೋಹದ ತಂತ್ರಜ್ಞಾನಗಳನ್ನು ಬಳಸಿ ಉತ್ಪಾದಿಸಿದ 'ಭಾಗಗಳು, ಘಟಕಗಳು ಮತ್ತು ಜೋಡಣೆಗಳನ್ನು ರಫ್ತು ಮಾಡಲು ಚೀನಾದಿಂದ ಪರವಾನಗಿ ಪಡೆಯುವುದು ಅತ್ಯಗತ್ಯವಾಗಿದೆ.

ಈ ನಿಯಮವನ್ನು ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ತಕ್ಷಣದಿಂದಲೇ ಜಾರಿಗೆ ತರಲಾಯಿತು. ಆದಾಗ್ಯೂ, 2025ರ ಡಿಸೆಂಬರ್ ಒಂದರಿಂದ, ಈ ನಿಯಂತ್ರಣಗಳನ್ನು ದೇಶೀಯವಾಗಿ ಲಾಗೂ ಮಾಡಿದರೂ ಸಹ, 'ಚೀನಾದಿಂದ ಪಡೆದ ವಸ್ತುಗಳನ್ನು ಒಳಗೊಂಡಿರುವ ಅಥವಾ ಚೀನಾದ ತಂತ್ರಜ್ಞಾನಗಳನ್ನು ಬಳಸಿ ತಯಾರಿಸಿದ ಅಂತಾರಾಷ್ಟ್ರೀಯವಾಗಿ ತಯಾರಿಸಿದ' ಉತ್ಪನ್ನಗಳನ್ನು ಸೇರಿಸಲೂ ವಿಸ್ತರಿಸಲಾಗುತ್ತದೆ.

ಆಯ್ದ ವಿರಳ-ಲೋಹದ ಆಯಸ್ಕಾಂತಗಳು ಮತ್ತು ವಸ್ತುಗಳ ಮೇಲಿನ ಹಿಂದಿನ ಪ್ರತ್ಯೇಕ ನಿಯಂತ್ರಣಗಳಿಗಿಂತ ಹೆಚ್ಚಾಗಿ “ಬಿಡಿಭಾಗಗಳು, ಘಟಕಗಳು ಮತ್ತು ಜೋಡಣೆಗಳನ್ನು” ಸೇರಿಸುವುದರಿಂದ ಜಾಗತಿಕ ಪೂರೈಕೆ ಜಾಲದ ಮೇಲೆ ಗಂಭೀರ ಪರಿಣಾಮ ಬೀರಬಹುದು, ಏಕೆಂದರೆ ಅನೇಕ ಕಾರ್ಯತಂತ್ರದ ವಲಯಗಳು ನಿಯಂತ್ರಿತ ಚೀನೀ ವಿರಳ-ಲೋಹದ ಘಟಕಗಳನ್ನು ಒಳಗೊಂಡಿರುವ ಉತ್ಪನ್ನಗಳು ಮತ್ತು ಘಟಕಗಳನ್ನು ಅವಲಂಬಿಸಿವೆ. ಈ ವಲಯಗಳಲ್ಲಿ ಇಂಧನ, ಆಟೋಮೋಟಿವ್, ರಕ್ಷಣೆ, ಸೆಮಿಕಂಡಕ್ಟರ್‌ಗಳು, ಏರೋಸ್ಪೇಸ್, ಕೈಗಾರಿಕಾ ಮೋಟಾರ್‌ಗಳು ಮತ್ತು ಎಐ ಡೇಟಾ ಕೇಂದ್ರಗಳು ಸೇರಿವೆ.

ಸುಂಕದ ದೊರೆಗೆ ಅಚ್ಚರಿ ಯಾಕೆ?

ನಿರ್ಣಾಯಕ ವಸ್ತುಗಳು ಮತ್ತು ವಿರಳ-ಲೋಹಗಳ ಮೇಲಿನ ಚೀನಾದ ನಿಯಂತ್ರಣಗಳಿಗೆ ಅಮೆರಿಕದ ಪ್ರತಿಕ್ರಿಯೆ ತೀಕ್ಷ್ಣವಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು “ಆಘಾತಕಾರಿ” ಎಂದು ಕರೆದರು, ಆದರೆ ಚೀನಾ ಮತ್ತು ಪ್ರಪಂಚದ ಇತರ ರಾಷ್ಟ್ರಗಳ ವಿರುದ್ಧದ ವಾಣಿಜ್ಯ ಕದನಕ್ಕೆ ಅವರೇ ಕಿಡಿ ಹೊತ್ತಿಸಿರುವುದರಿಂದ ಅವರಿಗೆ ಇದರಿಂದ ಆಘಾತವಾಗಿರುವುದು ನಿಜಕ್ಕೂ ಅಚ್ಚರಿ.

ಅವರು ಸುಂಕಗಳನ್ನು ಒಂದು ಅಸ್ತ್ರವಾಗಿ ಬಳಸಿದ್ದಾರೆ. ಅನೇಕ ದೇಶಗಳು ಅಮೆರಿಕದ ಮಾರುಕಟ್ಟೆ ಮತ್ತು ತಂತ್ರಜ್ಞಾನಗಳನ್ನು ಅವಲಂಬಿಸಿರುವ ಪರಿಣಾಮ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೆ, ಚೀನಾ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಂಡಿದೆ. ವಿರಳ-ಲೋಹದ ಮೇಲಿನ ಈ ನಿರ್ಬಂಧಗಳು ಅದರ ಪ್ರತೀಕಾರದ ಭಾಗವೇ ಆಗಿದೆ. ಚೀನಾವು ವಿರಳ-ಲೋಹದ ಮೇಲಿನ ತನ್ನ ನಿರ್ಬಂಧಗಳನ್ನು ತೆಗೆದುಹಾಕದಿದ್ದರೆ ಅದರ ಮೇಲೆ ಶೇ. 100ರಷ್ಟು ಸುಂಕ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ, ನಿರ್ಣಾಯಕ ಖನಿಜಗಳನ್ನು ಹೊಂದಿರುವ ಆಸ್ಟ್ರೇಲಿಯಾದಂತಹ ದೇಶಗಳ ಜೊತೆ ಅಮೆರಿಕ ಉತ್ಸಾಹದಿಂದ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ, ಅಮೆರಿಕವು ತನ್ನ ಕಂಪನಿಯಾದ, ಯುಎಸ್ ಸ್ಟ್ರಾಟೆಜಿಕ್ ಮೆಟಲ್ಸ್, ಪಾಕಿಸ್ತಾನಿ ಸೇನಾ ಮಾಲೀಕತ್ವದ ಕಂಪನಿಯಾದ ಪಾಕಿಸ್ತಾನ ಫ್ರಾಂಟಿಯರ್ ವರ್ಕ್ಸ್ ಜೊತೆ ಸಂಬಂಧ ಕುದುರಿಸಲು ಪ್ರೋತ್ಸಾಹಿಸಿದೆ.

ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಆಸಿನ್ ಮುನೀರ್ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದಾಗ ಬಲೂಚಿಸ್ತಾನದ ನಿರ್ಣಾಯಕ ಖನಿಜಗಳ ಸಾಮರ್ಥ್ಯವನ್ನು ಟ್ರಂಪ್‌ಗೆ ತೋರಿಸಲು ಒಂದು ಬಾಕ್ಸ್ ಖನಿಜಗಳನ್ನು ತೆಗೆದುಕೊಂಡು ಹೋಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಚೀನಾ ಅಂಕುಶಕ್ಕೆ ದಶಕ ಬೇಕಾದೀತು

ಕೆಲವು ವಿಶ್ಲೇಷಕರ ಪ್ರಕಾರ, ಈ ಕ್ಷೇತ್ರದಲ್ಲಿ ಚೀನಾವನ್ನು ಕಟ್ಟಿಹಾಕಲು, ಅಮೆರಿಕಕ್ಕೆ 10 ವರ್ಷಗಳಾದರೂ ಬೇಕಾಗುತ್ತದೆ. ಗಣಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಶುದ್ಧೀಕರಣ ಹಾಗೂ ಉತ್ಪನ್ನ-ತಯಾರಿಕಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ತೆಗೆದುಕೊಳ್ಳುವ ಸಮಯ ಇದಾಗಿದೆ. ಆದ್ದರಿಂದ, ನಿರ್ಣಾಯಕ ವಸ್ತುಗಳು ಮತ್ತು ವಿರಳ-ಲೋಹದ ವಿಚಾರದಲ್ಲಿ ಚೀನಾವು ಪ್ರಪಂಚದ ಮೇಲೆ ಹೇರುವ ನಿರ್ಬಂಧವು ಹಲವು ವರ್ಷಗಳ ಕಾಲ ಮುಂದುವರಿಯಲಿದೆ. ಇದು ಬ್ಯಾಟರಿಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ.

ವಿರಳ-ಲೋಹದ ಮೇಲಿನ ಚೀನಾ ರಫ್ತು ನಿಯಂತ್ರಣ ಹೇರಿರುವುದರ ವಿರುದ್ಧ ಬಹುಪಕ್ಷೀಯ ಪ್ರತಿಕ್ರಿಯೆ ಪಡೆಯಲು ಅಮೆರಿಕ ಕೂಡ ಪ್ರಯತ್ನಿಸುತ್ತಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು ಚೀನಾದ ಕ್ರಮದ ವಿರುದ್ಧ "ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತ ಹಾಗೂ ಇತರ ಏಷ್ಯಾದ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಕೆಲಸ ಮಾಡುವುದಾಗಿ" ಹೇಳಿದ್ದಾರೆ. ಇಲ್ಲಿ ಮತ್ತೆ ಎದುರಾಗುವ ಸಮಸ್ಯೆ ಏನೆಂದರೆ, ಇತರ ದೇಶಗಳ ಜೊತೆ ತಾನು ಮಾತ್ರ ಸುಂಕದ ಆಟವಾಡುತ್ತ ಚೀನಾ ವಿರುದ್ಧದ ಆಟಕ್ಕೆ ನೀವೂ ಬನ್ನಿ ಎಂದು ಅಮೆರಿಕ ಹೇಳಲು ಸಾಧ್ಯವಿಲ್ಲ.

ಭಾರತದ ನಿರ್ಣಾಯಕ ಖನಿಜ ಅಭಿಯಾನ

ಭಾರತ ಸರ್ಕಾರವು ಈ ವರ್ಷ ರಾಷ್ಟ್ರೀಯ ನಿರ್ಣಾಯಕ ಖನಿಜ ಅಭಿಯಾನ ಆರಂಭಿಸಿತು. ಇದರ ಉದ್ದೇಶವು ದೇಶದ ನಿರ್ಣಾಯಕ ಖನಿಜಗಳ ಪೂರೈಕೆ ಜಾಲವನ್ನು ಭದ್ರಪಡಿಸುವುದು. ಇದಕ್ಕಾಗಿ, ದೇಶೀಯ ಮತ್ತು ವಿದೇಶಿ ಮೂಲಗಳಿಂದ ಖನಿಜಗಳ ಲಭ್ಯತೆಯನ್ನು ಖಚಿತಪಡಿಸುವುದು ಮತ್ತು ಖನಿಜಗಳ ಸಂಶೋಧನೆ, ಗಣಿಗಾರಿಕೆ, ಶುದ್ಧೀಕರಣ, ಸಂಸ್ಕರಣೆ ಮತ್ತು ಮರುಬಳಕೆಯಲ್ಲಿ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಉತ್ತೇಜಿಸಲು ತಾಂತ್ರಿಕ, ನಿಯಂತ್ರಕ ಮತ್ತು ಆರ್ಥಿಕ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಮೌಲ್ಯ ಸರಪಳಿಗಳನ್ನು ಬಲಪಡಿಸುವುದು.

ಈಗಿನಿಂದ ಮಾರ್ಚ್ 2031ರ ವರೆಗೆ 1,200 ವಿರಳ ಲೋಹದ ಸ್ಥಳಗಳ ಪರಿಶೋಧನೆ ನಡೆಸುವಂತೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ಆದೇಶ ನೀಡಲಾಗಿದೆ. ಇದು ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ಮುಂಬರುವ ಕೈಗಾರಿಕಾ ಯುಗದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬೇಕಾದರೆ ಇದನ್ನು ಸಾಧಿಸುವುದು ಅತ್ಯಗತ್ಯ.

15 ವರ್ಷ ಹಿಂದೆಯೇ ಆರಂಭವಾಗಬೇಕಿತ್ತು

ಗಣಿಗಾರಿಕೆಯ ಜೊತೆಗೆ, ವಿರಳ ಲೋಹದ ಘಟಕಗಳು ಮತ್ತು ನಿರ್ಣಾಯಕ ಖನಿಜಗಳನ್ನು ಬಳಸಿಕೊಂಡು ಶುದ್ಧೀಕರಣ ಮತ್ತು ಉತ್ಪನ್ನ ತಯಾರಿಕೆಯ ಸಾಮರ್ಥ್ಯವನ್ನೂ ಸೃಷ್ಟಿಸಬೇಕಾಗಿದೆ. ಈ ಅಭಿಯಾನವನ್ನು ಈಗಲಾದರೂ ಆರಂಭಿಸಿರುವುದು ಒಳ್ಳೆಯದೇ ಆಯಿತು, ಆದರೆ ಇದನ್ನು ಕನಿಷ್ಠ 15 ವರ್ಷಗಳ ಹಿಂದೆಯೇ ಮಾಡಬೇಕಾಗಿತ್ತು.

ಈ ಕ್ಷೇತ್ರದಲ್ಲಿ ಭಾರತ ಮತ್ತು ವಿಶ್ವವು ಚೀನಾದಿಂದ ಕಠಿಣ ಸವಾಲನ್ನು ಎದುರಿಸುತ್ತಿವೆ ಎಂಬುದು ಮಾತ್ರ ಸತ್ಯ.

ಆದರೆ, ವಿರಳ ಲೋಹದ ಘಟಕಗಳ ಸಮಸ್ಯೆಯು ಬಿಂಬಿಸುವ ಒಂದು ವಿಷಯವೇನೆಂದರೆ ದಾರ್ಶನಿಕ ನಾಯಕತ್ವದ ಮಹತ್ವ. ಚೀನಾ ವಿಷಯದಲ್ಲಿ ಡೆಂಗ್ ಕ್ಸಿಯೋಪಿಂಗ್ ಅವರ ನಾಯಕತ್ವವು ಇದಕ್ಕೊಂದು ಉತ್ತಮ ಉದಾಹರಣೆ. ಅದು ಮುಂದಾಲೋಚನೆಯಿಂದ ಕೂಡಿತ್ತು ಮತ್ತು ಚೀನಾದ ಪ್ರಾಚೀನ ನಾಗರಿಕತೆಯ ವೈಭವಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿರಲಿಲ್ಲ ಎಂಬುದು ಗಮನಾರ್ಹ.

Tags:    

Similar News