ಕೇಂದ್ರದ ಪಿಎಂ ಶ್ರೀ ಅಸ್ತ್ರಕ್ಕೆ ಮಣಿಯದ ಕೇರಳ: ಸೈದ್ದಾಂತಿಕ ನಿರ್ಬಂಧದ ಹುನ್ನಾರ

(ಸಮಗ್ರ ಶಿಕ್ಷಾ ನಿಧಿ ಪಡೆಯಬೇಕಿದ್ದರೆ ಪಿಎಂ ಶ್ರೀ ಒಪ್ಪಂದಕ್ಕೆ ಸಹಿ ಹಾಕಲೇಬೇಕು ಎಂದು ಕೇಂದ್ರ ಸರ್ಕಾರವು ಕೇರಳಕ್ಕೆ ತಾಕೀತು ಮಾಡಿರುವುದು, ಭಾರತದ ಒಕ್ಕೂಟ ವ್ಯವಸ್ಥೆಯ ಸಮತೋಲನ ಮತ್ತು ಸರ್ಕಾರಿ ನೇತೃತ್ವದ ಶಿಕ್ಷಣದ ಸ್ವಾಯತ್ತತೆಯ ಬಗ್ಗೆ ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿದೆ.

Update: 2025-11-02 01:30 GMT
ಕೇರಳದ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಮೂಲಕ ಈಗಾಗಲೇ ಹೂಡಿಕೆ ಮಾಡಿರುವುದಕ್ಕೆ ಹೋಲಿಕೆ ಮಾಡಿದರೆ ಕೇಂದ್ರ ಪಿಎಂ ಶ್ರೀ ಮೂಲಕ ನೀಡಲು ಹೊರಟಿರುವ ನಿಧಿ ಅತ್ಯಂತ ಸಾಧಾರಣವಾದುದು. ಆದರೆ ಈ ಯೋಜನೆಯು ಹಣಕಾಸು ಸಂಗತಿಯನ್ನು ಮೀರಿ ನಿಂತಿದೆ.

ಪಿಎಂ ಶ್ರೀ (ಪ್ರೈಮ್ ಮಿನಿಸ್ಟರ್ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯು ಮತ್ತೊಮ್ಮೆ ಕೇರಳದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯ ಸರ್ಕಾರವು ಈ ಕಾರ್ಯಕ್ರಮವನ್ನು ಪರಿಗಣಿಸಲು ಸಿದ್ಧವಿರುವ ಹೊತ್ತಿನಲ್ಲೇ ಸಿಪಿಐ(ಎಂ) ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಆದರೆ ಯಾವುದಕ್ಕಾಗಿ?

ನಮ್ಮ ನಿಲುವು ಬದಲಾಗಿಲ್ಲ; ರಾಷ್ಟ್ರೀಯ ಶಿಕ್ಷಣ ನೀತಿ (NEP)ಯ ಕೇಂದ್ರೀಕೃತ ನೀತಿ ಮತ್ತು ಬಹಿಷ್ಕಾರದ ವಿನ್ಯಾಸದ ವಿರುದ್ಧ ನಮ್ಮ ವಿರೋಧ ಮುಂದುವರಿಯುತ್ತದೆ ಮತ್ತು ನಮ್ಮ ವಿಮರ್ಶಾತ್ಮಕ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತೇವೆ ಎಂಬುದು ಕೇರಳ ಸರ್ಕಾರದ ಸ್ಪಷ್ಟ ನಿಲುವಾಗಿದೆ. ಬಿಜೆಪಿಯ ಹೇಳಿಕೆಗಳನ್ನೇ ಪ್ರತಿಧ್ವನಿಸುತ್ತಿರುವ ಕಾಂಗ್ರೆಸ್ ಪಕ್ಷವು, ಕೇರಳವು ಪಿಎಂ ಶ್ರೀ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದು ಎರಡು ಪಕ್ಷಗಳ ನಡುವಿನ ರಹಸ್ಯ ಒಪ್ಪಂದಕ್ಕೆ ಸಾಕ್ಷಿ ಎಂದು ಆರೋಪಿಸಿದೆ. ಈ ವಾದವು ಸಂಪೂರ್ಣ ನಿರಾಧಾರ. ಕಾಂಗ್ರೆಸ್ ನೇತೃತ್ವದ ಪ್ರತಿಯೊಂದು ರಾಜ್ಯವೂ ಈಗಾಗಲೇ ಪಿಎಂ ಶ್ರೀಯನ್ನು ಜಾರಿಗೆ ತಂದಿದೆ, ಆದರೂ ಕೇರಳ ಮಾತ್ರ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗುತ್ತಿದೆ.

ರಾಜ್ಯದ ವಿಷಯದ ಮೇಲೆ ಕೇಂದ್ರದ ಹಿಡಿತ

ಕೇರಳವು ಭಾರತೀಯ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಕಾನೂನಿನ ಪ್ರಕಾರ, ಶಿಕ್ಷಣವು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದಲ್ಲಿ ಹಸ್ತಕ್ಷೇಪಕ್ಕೆ ದಾರಿ ಮಾಡಿಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿ ಕೇವಲ ಆ ಅವಕಾಶವನ್ನು ಬಳಸಿ ಕೋಮುವಾದಿ, ಕೇಂದ್ರೀಕೃತ ಶಿಕ್ಷಣ ಕಾರ್ಯಸೂಚಿಯನ್ನು ಮುಂದುವರಿಸಿದೆ ಅಷ್ಟೇ.

ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ಜಾರಿಗೆ ತರಲು ನಿರಾಕರಿಸಿದ ಕೇರಳವು, ಅದಕ್ಕೆ ಬದಲಾಗಿ ತನ್ನದೇ ಆದ ಸಾರ್ವಜನಿಕ ಶಿಕ್ಷಣ ಮಾದರಿಯನ್ನು ಬಲಪಡಿಸುವ ನಿರ್ಧಾರ ಕೈಗೊಂಡಿತು. ಕಳೆದ ದಶಕದಲ್ಲಿ, ಮೂಲಸೌಕರ್ಯದಿಂದ ಆರಂಭಿಸಿ ಎಲ್ಲರನ್ನೂ ಒಳಗೊಳ್ಳುವ ಶಾಲಾ ಶಿಕ್ಷಣದವರೆಗೆ ರಾಜ್ಯದ ಸಾಧನೆಗಳು, ವಿಕೇಂದ್ರೀಕೃತ ನೀತಿಯಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಪಿಎಂಶ್ರೀ ಯೋಜನೆಯ ಜಾರಿ

ಈಗ ಕೇಂದ್ರವು ಪಿಎಂ ಶ್ರೀ ಎಂಬ ಯೋಜನೆಯನ್ನು ಪ್ರಸ್ತಾಪಿಸಿದೆ. ಇದು ಪ್ರತಿ ಬ್ಲಾಕ್‌ನಲ್ಲಿ ಎರಡು ಶಾಲೆಗಳನ್ನು ಮಾದರಿ ಸಂಸ್ಥೆಗಳಾಗಿ ಗೊತ್ತುಪಡಿಸುವ ಯೋಜನೆಯಾಗಿದೆ. ದೇಶಾದ್ಯಂತ 14,500 ಶಾಲೆಗಳು ಇದರ ವ್ಯಾಪ್ತಿಯಲ್ಲಿ ಬರಲಿವೆ, ಇದಕ್ಕಾಗಿ ಕೇಂದ್ರವು ಐದು ವರ್ಷಗಳಲ್ಲಿ 18,128 ಕೋಟಿ ರೂ. ಮತ್ತು ರಾಜ್ಯಗಳು 29,232 ಕೋಟಿ ರೂ. (40 ಪ್ರತಿಶತ) ಕೊಡುಗೆ ನೀಡಲಿವೆ.

ಪ್ರತಿ ಪಿಎಂ ಶ್ರೀ ಶಾಲೆಯು ಆ ಅವಧಿಯಲ್ಲಿ ಸುಮಾರು 2 ಕೋಟಿ ರೂಪಾಯಿ ಪಡೆಯಬಹುದು. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಮೂಲಕ ಆ ರಾಜ್ಯವು ಈಗಾಗಲೇ ಹೂಡಿಕೆ ಮಾಡಿರುವುದಕ್ಕೆ ಹೋಲಿಸಿದರೆ, ಇದು ಸಾಧಾರಣ ಮೊತ್ತ. ಈ ನಿಧಿಗಳು ಇಲ್ಲದಿದ್ದರೂ ಕೇರಳದ ಶಾಲಾ-ಸುಧಾರಣಾ ಪ್ರಯತ್ನಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತವೆ.

ನಿಜವಾದ ಸಮಸ್ಯೆಯೇ ಬೇರೆ. ಕೇಂದ್ರ ಸರ್ಕಾರವು ಪಿಎಂ ಶ್ರೀ ಒಪ್ಪಂದವನ್ನು ಸಮಗ್ರ ಶಿಕ್ಷಾ ಅಭಿಯಾನ (SSA) ಅಡಿಯಲ್ಲಿ ನಿಧಿ ಬಿಡುಗಡೆಗೆ ಜೋಡಿಸಿದೆ. 2023-24ರಲ್ಲಿ, ಕೇರಳಕ್ಕೆ ಎಸ್.ಎಸ್.ಎ ಮೂಲಕ 1,031 ಕೋಟಿ ರೂ. ಲಭಿಸಿತ್ತು. ಆದರೆ, 2024-25ರಲ್ಲಿ ರಾಜ್ಯವು ಪಿಎಂ ಶ್ರೀ ಒಡಂಬಡಿಕೆಗೆ ಸಹಿ ಹಾಕದ ಕಾರಣ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ಎಸ್ಎಸ್ಎ ನಿಧಿಯಾದ 37,000-38,000 ಕೋಟಿ ರೂ.ಗಳಲ್ಲಿ, ಕೇರಳದ ಪಾಲು ಕೇವಲ 0.8-2.5% ರಷ್ಟು ಮಾತ್ರ. ಈ ನಿಧಿ ಹೀಗೇ ಸ್ಥಗಿತಗೊಂಡರೆ, ಪಿಎಂ ಶ್ರೀ ಯೋಜನೆಯ ಅವಧಿಯಷ್ಟೇ ಅಂದರೆ, ಐದು ವರ್ಷಗಳಲ್ಲಿ ರಾಜ್ಯವು 5,000 ಕೋಟಿ ರೂ.ಗಳನ್ನು ಕಳೆದುಕೊಳ್ಳಬಹುದು.

ಈಗಾಗಲೇ ಹಣಕಾಸಿನ ಒತ್ತಡದಲ್ಲಿರುವ ಕೇರಳವು ಇಂತಹ ದೊಡ್ಡ ಮೊತ್ತವನ್ನು ಕೈಬಿಡಲು ಶಕ್ತವಾಗಿದೆಯೇ? ಪ್ರಸ್ತುತ ಎಸ್ಎಸ್ಎ ಅಡಿಯಲ್ಲಿ ಉದ್ಯೋಗದಲ್ಲಿರುವ ಸಾವಿರಾರು ಶಿಕ್ಷಕರ ಗತಿ ಏನು? ಈ ಸೇವೆಗಳು ಸ್ಥಗಿತಗೊಂಡರೆ, ಕೇರಳದ ಸಾರ್ವಜನಿಕ ಶಿಕ್ಷಣದ ಗುಣಮಟ್ಟದ ಮೇಲೆ ಇದರ ಪರಿಣಾಮ ಏನಾಗಲಿದೆ?

ಮರೆಯಾದ ಸಹಕಾರಿ ತತ್ವ

ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು (CSS) ಮೂಲತಃ ರಾಜ್ಯಗಳನ್ನು ಬೆಂಬಲಿಸಲು, ಒಂದು ಹಣಕಾಸಿನ ಸೇತುವೆಯಾಗಿ ರೂಪಿಸಲಾಗಿತ್ತು. ಇದು, ರಾಜ್ಯಗಳ ನೀತಿ ಸ್ವಾಯತ್ತತೆಯನ್ನು ಗೌರವಿಸುತ್ತಲೇ, ಹಂಚಿಕೆಯಾದ ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರವು ನೆರವಾಗಲು ಅವಕಾಶ ನೀಡುತ್ತಿತ್ತು. ಇದರ ಮೂಲ ತತ್ವವು ಸಹಕಾರಿ ಒಕ್ಕೂಟ ವ್ಯವಸ್ಥೆಯಾಗಿತ್ತು. ಅಂದರೆ, ಕೇಂದ್ರ ಮತ್ತು ರಾಜ್ಯಗಳು ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು, ಮೇಲಧಿಕಾರಿಗಳು ಮತ್ತು ಅಧೀನರಾಗಿ ಅಲ್ಲ.

ಆದರೆ, ಕಾಲಾನಂತರದಲ್ಲಿ ಈ ತತ್ವವು ವ್ಯವಸ್ಥಿತವಾಗಿ ಸವಕಲಾಗುತ್ತ ಹೋಯಿತು. ಒಂದು ಕಾಲದಲ್ಲಿ ಸಹಭಾಗಿತ್ವದ ಸಂಕೇತವಾಗಿದ್ದ ಸಿಎಸ್ಎಸ್ ಚೌಕಟ್ಟು, ಕ್ರಮೇಣ ಹೆಚ್ಚೆಚ್ಚು ನಿಯಂತ್ರಣದ ಸಾಧನವಾಗಿ ಮಾರ್ಪಟ್ಟಿದೆ. ಇಂದು, ಈ ಯೋಜನೆಗಳನ್ನು ಕೇವಲ ಅಭಿವೃದ್ಧಿ ಆದ್ಯತೆಗಳನ್ನು ಜೋಡಿಸಲು ಮಾತ್ರವಲ್ಲದೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ರಾಜಕೀಯ ಮತ್ತು ಸೈದ್ಧಾಂತಿಕ ಕಾರ್ಯಸೂಚಿಗಳನ್ನು ರಾಜ್ಯಗಳ ಮೇಲೆ ಹೇರಲು ಬಳಸಲಾಗುತ್ತಿದೆ.

ಸೈದ್ಧಾಂತಿಕ ಬಲಾತ್ಕಾರವೇ?

ಇಂತಹುದೊಂದು ಪ್ರವೃತ್ತಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಣ್ಣಿಗೆ ಗೋಚರಿಸುತ್ತಿದೆ. ಶಿಕ್ಷಣದಲ್ಲಿ ಪಿಎಂ ಶ್ರೀ ಯೋಜನೆಯ ಅಡಿಯಲ್ಲಿ, ಮತ್ತು ಅದೇ ರೀತಿ ಆರೋಗ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ, ಕೇಂದ್ರ ಸರ್ಕಾರವು ಸೈದ್ಧಾಂತಿಕ ಬಲಾತ್ಕಾರದ ಸಾಧನವಾಗಿ ಹಣಕಾಸು ಕಾರ್ಯವಿಧಾನಗಳನ್ನು ಬಳಸಲು ಪ್ರಾರಂಭಿಸಿದೆ. ಕೇಂದ್ರದ ನೀತಿ ಚೌಕಟ್ಟುಗಳಿಗೆ ಅನುಮೋದನೆ ನೀಡದೇ ಹೋದರೆ ರಾಜ್ಯಗಳಿಗೆ ಬರಬೇಕಾದ ಹಣಕಾಸು ಹಂಚಿಕೆಗಳನ್ನು ತಡೆಹಿಡಿಯಲಾಗುವುದು ಎಂದು ರಾಜ್ಯಗಳಿಗೆ ತಿಳಿಸಲಾಗುತ್ತದೆ. ಒಂದು ಕಾಲದಲ್ಲಿ ಸ್ವಯಂಪ್ರೇರಿತ ಪಾಲುದಾರಿಕೆಯಾಗಿದ್ದದ್ದು ಈಗ ಷರತ್ತುಬದ್ಧ ಅನುಸರಣೆಯಾಗಿ ಬದಲಾಗಿದೆ.

ರಾಜ್ಯಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದ ಇಂತಹ ಹಣಕಾಸು ಬಲಾತ್ಕಾರವು ಸಂವಿಧಾನಕ್ಕೆ ವಿರುದ್ಧವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ, ಕೇರಳಕ್ಕೆ ಕೇಂದ್ರದ ಹಂಚಿಕೆಯಲ್ಲಿ ಏರಿಕೆ ಉಂಟಾಗಿಲ್ಲ, ಬದಲಾಗಿ ಅದು ಶೇ. 25ರಷ್ಟು ಕಡಿಮೆಯಾಗಿದೆ. ಆದರೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ತುಟಿಪಿಟಕ್ಕೆನ್ನುತ್ತಿಲ್ಲ, ಈ ಮೂಲಕ ಒಕ್ಕೂಟ ವ್ಯವಸ್ಥೆಯ ಸವೆತವನ್ನು ಪರಿಣಾಮಕಾರಿಯಾಗಿ ಅನುಮೋದಿಸುತ್ತಿವೆ.

ಹಾಗಂತ ಕೇರಳ ಸರ್ಕಾರ ಸುಮ್ಮನೆ ಕುಳಿತಿಲ್ಲ. ಈ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗಿದೆ ಮತ್ತು ಕೇಂದ್ರದ ಇಂತಹ ಪ್ರವೃತ್ತಿಗಳನ್ನು ಬಹಿರಂಗಪಡಿಸುವ ಕೆಲಸವನ್ನು ಅನೂಚಾನವಾಗಿ ಮುಂದುವರೆಸಿದೆ, ಆದರೆ ಈ ಚರ್ಚೆಗೆ ಮಾಧ್ಯಮಗಳು ಮತ್ತು ವಿರೋಧ ಪಕ್ಷದಿಂದ ಸಾಕಷ್ಟು ಗಮನ ಸಿಕ್ಕಿಲ್ಲ.

ಶೈಕ್ಷಣಿಕ ಸ್ವಾಯತ್ತತೆ

ಹಣಕಾಸಿನ ಅಗತ್ಯದಲ್ಲಿ ಸಿಲುಕಿದ ಕೇರಳವನ್ನು ಪಿಎಂ ಶ್ರೀ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಡ ಹೇರಿದರೆ, ರಾಜ್ಯವು ತನ್ನ ಶೈಕ್ಷಣಿಕ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಲು ಸ್ಪಷ್ಟವಾದ ಸುರಕ್ಷತಾ ಕ್ರಮಗಳೊಂದಿಗೆ ಹೆಜ್ಜೆ ಇಡಬೇಕಾಗುತ್ತದೆ. ಮೊದಲನೆಯದಾಗಿ, ಪ್ರತಿ ಬ್ಲಾಕ್‌ನಲ್ಲಿ ಎರಡು ಶಾಲೆಗಳನ್ನು ಪಿಎಂ ಶ್ರೀ ಸಂಸ್ಥೆಗಳಾಗಿ ಗೊತ್ತುಪಡಿಸಲಾಗಿದ್ದರೂ, ಕೇರಳವು ತನ್ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು, ಆ ಶಾಲೆಗಳಿಗೆ ಸಾಮಾಜಿಕ ಸುಧಾರಕರು ಮತ್ತು ನವೋದಯ ನಾಯಕರ ಹೆಸರಿಡುವ ತನ್ನ ದೀರ್ಘಕಾಲದ ಅಭ್ಯಾಸವನ್ನು ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ.

ಎರಡನೆಯದಾಗಿ ಸ್ವಯಂ ಹಣಕಾಸು ಶಾಲೆಗಳನ್ನು ಕೇಂದ್ರ ಸರ್ಕಾರವು ಯೋಜನೆಯಡಿ ಸೇರಿಸಬಹುದೇ ಎಂಬ ಪ್ರಶ್ನೆ ಇದೆ. ಇಲ್ಲಿಯವರೆಗೆ, ದೇಶಾದ್ಯಂತ ಆಯ್ಕೆಯಾದ 10,000 ಕ್ಕೂ ಹೆಚ್ಚು ಶಾಲೆಗಳಲ್ಲಿ, ಯಾವುದೂ ಸ್ವಯಂ ಹಣಕಾಸಿನ ಸೌಲಭ್ಯವನ್ನು ಹೊಂದಿದ ಶಾಲೆಗಳಾಗಿಲ್ಲ. ಇಂತಹ ಶಾಲೆಗಳನ್ನು ಕೇರಳದಲ್ಲಿ ಸೇರಿಸಲು ಕೇಂದ್ರ ಸರ್ಕಾರವು ಮಾಡುವ ಯಾವುದೇ ಪ್ರಯತ್ನವನ್ನು ದೃಢವಾಗಿ ವಿರೋಧಿಸಬೇಕು.

ಮೂರನೆಯದಾಗಿ, ಈ ಯೋಜನೆಯು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಅಳವಡಿಸಿಕೊಳ್ಳಲು ಅಗತ್ಯವಿದ್ದರೂ, ಸ್ಥಳೀಯ ವಿಷಯ ಮತ್ತು ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಅವಕಾಶವಿದೆ. ಕೇರಳದ ಶಿಕ್ಷಕರು, ಪೋಷಕ-ಶಿಕ್ಷಕರ ಸಂಘಗಳು (PTA) ಮತ್ತು ಸಮುದಾಯದ ಮೇಲ್ವಿಚಾರಣೆಯು ಈ ಶಾಲೆಗಳು ಸೈದ್ಧಾಂತಿಕ ಆಕ್ರಮಣಕ್ಕೆ ಒಳಗಾಗದಂತೆ ಖಚಿತಪಡಿಸುತ್ತದೆ.

ನಾಲ್ಕನೆಯದಾಗಿ, ತಮಿಳುನಾಡಿನಲ್ಲಿ ವಿವಾದವನ್ನು ಹುಟ್ಟುಹಾಕಿರುವ ಭಾಷಾ ವಿಷಯವು ಕೇರಳದಲ್ಲಿ ಬಹುತೇಕ ಅಪ್ರಸ್ತುತವಾಗಿದೆ. ಇಲ್ಲಿ ಹಿಂದಿಯನ್ನು ದಶಕಗಳಿಂದಲೂ ಹಿರಿಯ-ಪ್ರಾಥಮಿಕ ಹಂತದಿಂದ ಕಲಿಸಲಾಗುತ್ತಿದೆ ಮತ್ತು ಇದು ಇಲ್ಲಿ ವಿವಾದದ ಪ್ರಮುಖ ವಿಷಯವಾಗಿಲ್ಲ.

ಸೈದ್ಧಾಂತಿಕ ರಾಜಿ ಇಲ್ಲ

ಪಿಎಂ ಶ್ರೀ ಯೋಜನೆಗೆ ಸಹಿ ಹಾಕುವುದು ಎಂದರೆ ಸೈದ್ಧಾಂತಿಕ ನೆಲೆಯನ್ನು ಬಿಟ್ಟುಕೊಡುವುದು ಎಂದರ್ಥವಲ್ಲ. ಕೇರಳವು ಭಾರತದ ಒಕ್ಕೂಟ ವ್ಯವಸ್ಥೆಯ ಮಿತಿಯೊಳಗೆ ಕೆಲಸ ಮಾಡುವಾಗಲೂ, ಬಿಜೆಪಿಯ ಕೋಮುವಾದಿ ಶಿಕ್ಷಣದ ಕಾರ್ಯಸೂಚಿಯನ್ನು ವಿರೋಧಿಸುವುದನ್ನೇನೂ ನಿಲ್ಲಿಸುವುದಿಲ್ಲ.

ಕೇರಳದ ಇತಿಹಾಸವು ಭೂಸುಧಾರಣೆಯಿಂದ ಹಿಡಿದು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದವರೆಗಿನ ಕೇಂದ್ರದ ನಿರ್ಬಂಧಗಳ ನಡುವೆಯೂ ಸಾಧಿಸಲಾದ ಪ್ರಗತಿಪರ ಪರ್ಯಾಯಗಳಿಂದ ಸಮೃದ್ಧವಾಗಿದೆ. ಶಿಕ್ಷಣದಲ್ಲಿ ನಮ್ಮ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳುವುದು ಅದೇ ಪರಂಪರೆಯ ಒಂದು ಭಾಗವಾಗಿದೆ. ಆದ್ದರಿಂದ, ಪಿಎಂ ಶ್ರೀ ಕುರಿತಾದ ಈ ಚರ್ಚೆಯು ಕೇವಲ ಒಂದು ಹಣಕಾಸು ಯೋಜನೆಯನ್ನು ಮೀರಿ ನಿಂತಿದೆ. ಇದು, ಭಾರತೀಯ ರಾಜ್ಯಗಳು ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ಇನ್ನೂ ಹೊಂದಿವೆಯೇ ಎಂಬುದನ್ನು ಪರೀಕ್ಷೆಗೆ ಒಡ್ಡುತ್ತದೆ. ಕೇರಳವು ಸ್ಪಷ್ಟತೆ, ಎಚ್ಚರಿಕೆ ಮತ್ತು ದೃಢ ವಿಶ್ವಾಸದಿಂದ ಆ ಹಕ್ಕನ್ನು ಎತ್ತಿಹಿಡಿಯುವ ಕೆಲಸವನ್ನು ಮುಂದುವರಿಸಬೇಕು.

Tags:    

Similar News