ವಜ್ರ ಮುಷ್ಠಿಯೂ, ಸಂಧಾನ ಸೂತ್ರವೂ; ನಾಗಾ ಬಂಡುಕೋರರ ದಮನಕ್ಕೆ ಸರ್ಕಾರದ ಕೌಟಿಲ್ಯ ನೀತಿ
ಒಂದು ಕಡೆ ಮ್ಯಾನ್ಮಾರ್‌ನಲ್ಲಿ ನಾಗಾ ಬಂಡುಕೋರರ ಮೇಲೆ ಡ್ರೋನ್ ದಾಳಿ. ಇನ್ನೊಂದು ಕಡೆ ನಾಗಾ ನಾಯಕ ತುಯಿಂಗಲೇಂಗ್ ಮುಯಿವಾ ಅವರ ಜೊತೆ ಮಾತುಕತೆ ಹಾಗೂ ಅವರ ಗ್ರಾಮ ಭೇಟಿಗೆ ಅವಕಾಶ. ಸಶಸ್ತ್ರ ದಂಗೆಯನ್ನು ನಿಭಾಯಿಸಲು ಸರ್ಕಾರ ಬಲ ಮತ್ತು ಸಂಧಾನ ಸೂತ್ರದ ಮೂಲಕ ಚಾಣಕ್ಯ ನೀತಿಯನ್ನು ಅನುಸರಿಸುತ್ತಿರುವುದು ಗಮನಾರ್ಹ.
ಅಕ್ಟೋಬರ್‌ನಲ್ಲಿ ನಡೆದ ನಾಗಾ ಬಂಡುಕೋರರ ಗುಂಪುಗಳು ಶಾಮೀಲಾಗಿರುವ ಘಟನೆಗಳು, ನಾನಾ ಸಶಸ್ತ್ರ ಬಂಡಾಯಗಳನ್ನು ನಿಭಾಯಿಸುವಲ್ಲಿ ಭಾರತ ತೋರಿದ ಭಿನ್ನ ನೀತಿಗಳು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತವೆ.
ವಾಸ್ತವವಾಗಿ, ಇಂತಹ ದಂಗೆಗಳಿಗೆ ತಕ್ಕ ಶಾಸ್ತಿ ಮಾಡಲು ಸಾಮ (ಸಂಧಾನ), ದಾನ (ಹಣದ ಪ್ರಲೋಭನೆ), ದಂಡ (ಬಲ ಪ್ರಯೋಗ) ಮತ್ತು ಭೇದ (ಒಡಕು ಸೃಷ್ಟಿಸುವುದು) ಪ್ರಯೋಗ ಮಾಡಬೇಕು ಎಂದು ಹೇಳಿದ ಪೌರಾಣಿಕ ತಂತ್ರಜ್ಞ ಕೌಟಿಲ್ಯ ಅಥವಾ ಚಾಣಕ್ಯ ನೀತಿಯನ್ನು ಬಳಸುವುದು ಅತ್ಯಂತ ಸೂಕ್ತವೂ ಆಗಿದೆ.
ಒಂದು ಕಡೆ, ಭಾರತೀಯ ಪಡೆಗಳ ಮೇಲೆ ಸತತ ದಾಳಿ ನಡೆಸುತ್ತಿರುವ ನಾಗಾ ಬಂಡುಕೋರರ ಗುಂಪನ್ನು ನಿಭಾಯಿಸಲು ಭಾರೀ ಬಲಪ್ರಯೋಗ ಬಳಸಲಾಯಿತು. ವಾಸ್ತವವಾಗಿ, ನಾಗಾಲ್ಯಾಂಡ್ ರಾಷ್ಟ್ರೀಯ ಸಮಾಜವಾದಿ ಮಂಡಳಿ (ಎನ್‌ಎಸ್‌ಸಿಎನ್) (ಖಪ್ಲಾಂಗ್-ಯಿನ್ ಆಂಗ್ ಬಣ-ಕೆ-ವೈಎ) ಗೆರಿಲ್ಲಾಗಳು ಅಕ್ಟೋಬರ್ 16ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ ಪಡೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ ಕೇವಲ ಎರಡು ದಿನಗಳಲ್ಲಿ ಮ್ಯಾನ್ಮಾರ್‌ನೊಳಗಿರುವ ಅದರ ನೆಲೆಯ ಮೇಲೆ ಪ್ರತೀಕಾರದ ಕ್ರಮವಾಗಿ ಭಾರೀ ಡ್ರೋನ್ ದಾಳಿ ನಡೆಯಿತು.
ಮುಯಿವಾ ಇನ್ನು ಮುಂದೆ ಶತ್ರುವಲ್ಲ
ಮತ್ತೊಂದೆಡೆ, 1997ರಿಂದ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಲೇ ಬಂದಿರುವ ನಾಗಾ ಬಂಡುಕೋರ ನಾಯಕ ತುಯಿಂಗಲೇಂಗ್ ಮುಯಿವಾ ಅವರಿಗೆ, ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಅವರ ತವರಿಗೆ ಭೇಟಿ ನೀಡಲು ಅನುಕೂಲ ಕಲ್ಪಿಸಲಾಯಿತು. ನಾಗಾ ಬಂಡಾಯ ಚಳವಳಿಗೆ ಸೇರಲು ತಮ್ಮ ಪೂರ್ವಜರ ಗ್ರಾಮವನ್ನು ತೊರೆದ ಆರು ದಶಕಗಳ ನಂತರ ಈ ಬೆಳವಣಿಗೆ ನಡೆಯಿತು.
91 ವರ್ಷದ ವಯೋವೃದ್ಧ ಮುಯಿವಾ ಅವರು ಹೆಲಿಕಾಪ್ಟರ್‌ನಲ್ಲಿ ಉಖ್ರುಲ್ ಪಟ್ಟಣಕ್ಕೆ ಮತ್ತು ನಂತರ ತಮ್ಮ ಸೊಮ್ದಾಲ್ ಹಳ್ಳಿಗೆ ಬಂದಿಳಿದಾಗ ಅವರಿಗೆ ವೀರೋಜಿತ ಸ್ವಾಗತ ದೊರೆಯಿತು. ಹಿಂದೆಲ್ಲಾ ದಟ್ಟ ಕಾಡುಗಳ ಮೂಲಕ ನೂರಾರು ಕಿಲೋಮೀಟರ್ ದೂರ ಪಾದಯಾತ್ರೆ ಮಾಡುತ್ತಿದ್ದ ಮುಯಿವಾ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಕುಂಟುತ್ತಿದ್ದರು. ವಯಸ್ಸು ಅವರನ್ನು ಸ್ಪಷ್ಟವಾಗಿ ಮಾಗುವಂತೆ ಮಾಡಿತ್ತು.
ಮುಯಿವಾ ಅವರು ನಾಗಾ ಬಂಡಾಯದ ಬಹುಮುಖ್ಯ ನಾಯಕರು. ಇವರು 1966ರಲ್ಲಿ ತರಬೇತಿ ಮತ್ತು ಶಸ್ತ್ರಾಸ್ತ್ರಗಳಿಗಾಗಿ ನಾಗಾ ಬಂಡುಕೋರರ ಮೊದಲ ತಂಡವನ್ನು ಚೀನಾಕ್ಕೆ ಕರೆದೊಯ್ದರು. 1975ರ ಶಿಲ್ಲಾಂಗ್ ಒಪ್ಪಂದವನ್ನು ಹಾಳುಗೆಡಹುವಲ್ಲಿ ಅವರದ್ದೇ ಪ್ರಮುಖ ಪಾತ್ರ. ಈ ಒಪ್ಪಂದಕ್ಕೆ ನಾಗಾ ರಾಷ್ಟ್ರೀಯ ಮಂಡಳಿ (ಎನ್‌ಎನ್‌ಸಿ) ಭಾರತ ಸರ್ಕಾರದೊಂದಿಗೆ ಸಹಿ ಹಾಕಿತ್ತು. ಆದರೆ, ಅವರು ವಿಭಜಿತ ಎನ್‌ಎಸ್‌ಸಿಎನ್ ರಚಿಸುವ ಮೂಲಕ ಸಶಸ್ತ್ರ ನಾಗಾ ದಂಗೆ ನಿಲ್ಲದಂತೆ ನೋಡಿಕೊಂಡರು.
ಆದರೆ, 1997ರಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ಆರಂಭಿಸಿದ ದಿನದಿಂದ, ಮುಯಿವಾ ಅವರನ್ನು ಇನ್ನು ಮುಂದೆ ರಾಷ್ಟ್ರ ವಿರೋಧಿ ಎಂದು ಪರಿಗಣಿಸಲಾಗುವುದಿಲ್ಲ. ನರೇಂದ್ರ ಮೋದಿ ಸರ್ಕಾರದೊಂದಿಗೆ ಅವರ ಗುಂಪು 2015ರ ಒಪ್ಪಂದಕ್ಕೆ ಸಹಿ ಹಾಕಿ 10 ವರ್ಷಗಳ ನಂತರವೂ ಅವರು ಭಾರತದೊಂದಿಗೆ ಅಂತಿಮ ಒಪ್ಪಂದಕ್ಕೆ ಬದ್ಧರಾಗಬೇಕಿದೆ. ಒಪ್ಪಂದವನ್ನು ಅರ್ಥೈಸುವಲ್ಲಿ ಮತ್ತು “ಹಂಚಿಕೆಯ ಸಾರ್ವಭೌಮತ್ವ”ದ ಪರಿಕಲ್ಪನೆಯಲ್ಲಿನ ಭಿನ್ನಾಭಿಪ್ರಾಯದ ಫಲವಾಗಿ ಮಾತುಕತೆಗಳು ಸ್ಥಗಿತಗೊಂಡಿವೆ. ಆದರೆ ಅವರು ಮಾತುಕತೆ ನಡೆಸುತ್ತಿರುವುದರಿಂದ ಮತ್ತು ತಮ್ಮ ಹೋರಾಟಗಾರರನ್ನು ಕಾಡಿಗೆ ಕರೆದೊಯ್ಯುವ ಯಾವುದೇ ಒಲವು ತೋರಿಸದೇ ಇರುವುದರಿಂದ, ಅವರು ಇನ್ನು ಮುಂದೆ ಸರ್ಕಾರದ ಶತ್ರುವಾಗುವುದಿಲ್ಲ.
ಕೌಟಿಲ್ಯನ ಕಾರ್ಯನೀತಿ
ಇದು ವಸಾಹತೋತ್ತರ ಭಾರತದಲ್ಲಿ ಸತತ ಅಧಿಕಾರಕ್ಕೆ ಬಂದ ಸರ್ಕಾರಗಳು ಕೌಟಿಲ್ಯನ ರಾಜನೀತಿಗಳನ್ನು ಬಳಸಿಕೊಂಡಿರುವುದಕ್ಕೆ ಸ್ಪಷ್ಟ ನಿದರ್ಶನ. ಇದರಲ್ಲಿ ಸಶಸ್ತ್ರ ಪ್ರತ್ಯೇಕತಾವಾದಿ ಅಥವಾ ಕ್ರಾಂತಿಕಾರಿ ಚಳವಳಿಗಳನ್ನು ನಿಭಾಯಿಸಲು ಮನವೊಲಿಕೆ ಮತ್ತು ಸಂವಾದಕ್ಕೆ ಆದ್ಯತೆ ನೀಡಲಾಗುತ್ತದೆ ಮತ್ತು ಬಲ ಪ್ರಯೋಗವನ್ನು ಕೊನೆಯ ಆಯ್ಕೆಯಾಗಿ ಬಳಸಲಾಗುತ್ತದೆಯೇ ವಿನಾ ಮೊದಲ ಆಯ್ಕೆಯಾಗಿ ಅಲ್ಲ. ಮೊದಲನೆಯದಾಗಿ, ಸಶಸ್ತ್ರ ಚಳವಳಿಯ ತೀವ್ರತೆಯನ್ನು ತಗ್ಗಿಸಲು ಮತ್ತು ಅವರು ಸರ್ಕಾರದೊಂದಿಗೆ ಮಾತುಕತೆಗೆ ಬರಲು ಇದು ನೆರವಾಗಿದೆ.
ಆದ್ದರಿಂದ, ಭಾರತವು ಎನ್.ಎಸ್.ಸಿ.ಎನ್.ನ ಮುಯಿವಾ ಬಣದೊಂದಿಗೆ 'ಶಾಮ'ವನ್ನು ಅನುಸರಿಸಿದರೆ, ಭಾರತೀಯ ಪಡೆಗಳ ಮೇಲೆ ದಾಳಿ ಮುಂದುವರೆಸುತ್ತಿರುವ ಗುಂಪಿನ ಕೆ-ವೈಎ ಬಣದೊಂದಿಗೆ ಅದು 'ದಂಡ' ತಂತ್ರವನ್ನು ಅಳವಡಿಸಿಕೊಳ್ಳುತ್ತದೆ. ಮತ್ತು 1960ರ ದಶಕದಿಂದೀಚೆಗೆ ನಾಗಾ ಬಂಡಾಯ ಚಳವಳಿಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಒಡಕುಗಳು (ಎನ್‌ಎಸ್‌ಸಿಎನ್ ಒಂದರಲ್ಲೇ ಈಗ ಐದು ಬಣಗಳಿವೆ) ಬಂಡಾಯ ಚಳವಳಿಯನ್ನು ದುರ್ಬಲಗೊಳಿಸಲು 'ಭೇದ' (ಒಡಕು) ನೀತಿಯನ್ನು ಬಳಸಬೇಕು ಎಂಬುದನ್ನು ಸೂಚಿಸುತ್ತದೆ.
ನಾಗಾ ಬಂಡುಕೋರರ ವಿರುದ್ಧ 'ದಂಡ'
ಅಸ್ಸಾಂ ರೈಫಲ್ಸ್ ಗಸ್ತು ಪಡೆಯ ಮೇಲೆ ದಾಳಿ ನಡೆದ ತಕ್ಷಣವೇ, ಭಾರತೀಯ ರಕ್ಷಣಾ ಪಡೆಗಳು ಗಡಿಯುದ್ದಕ್ಕೂ ಇರುವ ಲೊಂಗ್ವಾ ಗ್ರಾಮದ ಪಕ್ಕದ ಮ್ಯಾನ್ಮಾರ್‌ನ ಕಾಮ್ಮೋಯಿ ಗ್ರಾಮದ ಮೇಲೆ ಡ್ರೋನ್ ದಾಳಿ ಕೈಗೊಂಡವು. ಈ ದಾಳಿಯು ಎನ್‌ಎಸ್‌ಸಿಎನ್-ಕೆ (ವೈಎ)ಯ ಮೇಜರ್ ಜನರಲ್ ಪಿಯೊಂಗ್ ಕೊನ್ಯಾಕ್ ಮನೆಯನ್ನು ಗುರಿಯಾಗಿ ಮಾಡಿಕೊಳ್ಳಲಾಗಿತ್ತೆಂದು ಹೇಳಲಾಗಿದೆ. ಈ ದಾಳಿಯಲ್ಲಿ ಕೊನ್ಯಾಕ್ ಅವರ ಮಗ ಮತ್ತು ಮೊಮ್ಮಗಳು ಸೇರಿದಂತೆ ಅನೇಕ ಮಂದಿ ಎನ್‌ಎಸ್‌ಸಿಎನ್-ಕೆ (ವೈಎ) ಕಾರ್ಯಕರ್ತರು ಸಾವನ್ನಪ್ಪಿದರೆ, ಅವರು ಮತ್ತು ಅವರ ಪತ್ನಿ ತೀವ್ರ ಗಾಯಗೊಂಡಿದ್ದರು ಎಂದು ವರದಿಯಾಗಿದೆ.
ಜುಲೈನಲ್ಲಿ ಅಸ್ಸಾಮಿ ಪ್ರತ್ಯೇಕತಾವಾದಿ ಸಂಘಟನೆ ಉಲ್ಫಾ ಸ್ವತಂತ್ರ ಬಣದ ಮ್ಯಾನ್ಮಾರ್ ನೆಲೆಯ ಮೇಲೆ ನಡೆದ ಇದೇ ರೀತಿಯ ಡ್ರೋನ್ ದಾಳಿಯು ಆ ಗುಂಪಿನ ಉನ್ನತ ನಾಯಕ ನಯನ್ ಮೇಧಿ ಮತ್ತು ಅವರ ಕೆಲವೇ ಕೆಲವು ಅಂಗರಕ್ಷಕರನ್ನು ಬಲಿ ತೆಗೆದುಕೊಂಡಿತು. ಭಾರತವು ಕಳೆದ 30 ವರ್ಷಗಳಿಂದ ಗಡಿಯಾಚೆಗಿನ ಕಮಾಂಡೋ ದಾಳಿಗಳಿಗೆ ಮೊರೆ ಹೋಗುವ ಮೂಲಕ ಮ್ಯಾನ್ಮಾರ್‌ನ ಸಾಂಗೈಂಗ್ ಪ್ರದೇಶದಲ್ಲಿರುವ ಈಶಾನ್ಯದ ಬಂಡಾಯ ನೆಲೆಗಳ ಮೇಲೆ ನಿಯಮಿತವಾಗಿ ದಾಳಿ ಮಾಡುತ್ತಿದೆ. ಆದರೆ ಅಂತಹ ದಾಳಿಗಳ ಯಶಸ್ಸು ಸೀಮಿತವಾಗಿತ್ತು - ಅಪರೂಪಕ್ಕೆ ಮಾತ್ರ ಹಿರಿಯ ಬಂಡಾಯ ನಾಯಕರ ಸಾವಿಗೆ ಕಾರಣವಾಗಿದೆ.
ಪರಿಣಾಮಕಾರಿ ಡ್ರೋನ್ ದಾಳಿ
ಆದರೆ ಡ್ರೋನ್ ದಾಳಿಗಳು ಗುಣಾತ್ಮಕವಾಗಿ ವಿಭಿನ್ನವಾಗಿವೆ. ಅವುಗಳು ಬಹು ಮೂಲಗಳಿಂದ ಪಡೆದ ಮತ್ತು ಶರಣಾದ ಬಂಡುಕೋರರ ಆವೃತ್ತಿಗಳೊಂದಿಗೆ ಸಂಗ್ರಹಿಸಿದ ಉತ್ತಮ ಗುಣಮಟ್ಟದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸುವ ನಿಖರ ದಾಳಿಗಳಾಗಿವೆ. ಮ್ಯಾನ್ಮಾರ್ ಸೇನೆಯು ಅನೇಕ ಬಂಡುಕೋರ ಗುಂಪುಗಳೊಂದಿಗೆ ಹೋರಾಟ ನಡೆಸುವಲ್ಲಿ ನಿರತವಾಗಿರುವ ಕಾರಣ ಗಡಿಯಲ್ಲಿರುವ ಕೆಲವು ಬಂಡಾಯ ನೆಲೆಗಳ ಮೇಲೆ ಭಾರತೀಯ ಪಡೆ ಡ್ರೋನ್ ದಾಳಿ ನಡೆಸುವ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಈ ದಾಳಿಗಳು ನಡೆದೇ ಇಲ್ಲ ನಿರಾಕರಿಸುವ ಅಂಶವನ್ನೂ ಹೊಂದಿರುತ್ತವೆ.
ಅಲ್ಲದೆ, ಯಶಸ್ವಿ ಡ್ರೋನ್ ದಾಳಿಗಳು ನಮ್ಮ ಮೇಲೆ ಕಣ್ಗಾವಲು ಇಡಲಾಗಿದೆ ಮತ್ತು ಅಡಗಿಕೊಳ್ಳಲು ಸ್ಥಳವಿಲ್ಲ ಎಂದು ಸಾಬೀತುಪಡಿಸುವ ಕಾರಣ ಈ ಸಾವು-ನೋವುಗಳು ಬಂಡಾಯಗಾರರಲ್ಲಿ ಭೀತಿಯನ್ನು ಉಂಟುಮಾಡುತ್ತವೆ.
ಮ್ಯಾನ್ಮಾರ್‌ನಲ್ಲಿರುವ ಖಾಪ್ಲಾಂಗ್ ಗುಂಪಿನ ನೆಲೆ ಮೇಲೆ ಯುದ್ಧ ಡ್ರೋನ್‌ಗಳಿಂದ ದಾಳಿಯಾದ ವಾರದಲ್ಲಿಯೇ ಮುಯಿವಾ ಅವರಿಗೆ ಅವರ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಲು ಅನುಕೂಲ ಮಾಡಿಕೊಡುವುದರಿಂದ, ಈಶಾನ್ಯ ಮತ್ತು ಇತರ ಕಡೆಗಳಲ್ಲಿನ ಎಲ್ಲಾ ಬಂಡಾಯ ಗುಂಪುಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದಂತಾಗಿದೆ.
ದಂಗೆಕೋರರ ನಿಯಂತ್ರಣಕ್ಕೆ ಕೌಟಿಲ್ಯರ ತಂತ್ರ
ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ಉಲ್ಫಾ (ULFA) ಅಥವಾ ಬೋಡೋ ಬಂಡುಕೋರ ನಾಯಕರು ನಿಧಾನವಾಗಿ ರಾಜಕೀಯ ವ್ಯವಸ್ಥೆಯ ಭಾಗವಾಗುತ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಬಹುದು, ಮಂತ್ರಿಗಳಾಗಬಹುದು ಅಥವಾ ಸ್ವಾಯತ್ತ ಮಂಡಳಿ ಮುಖ್ಯಸ್ಥರಾಗಬಹುದು, ಇದರಿಂದ ಅವರಿಗೆ ಸರ್ಕಾರಿ ಹಣ ಪಡೆಯಲು ಅವಕಾಶ ಕಲ್ಪಿಸುತ್ತದೆ. ಇಲ್ಲಿಯೇ ಕೌಟಿಲ್ಯರ 'ದಾನ' ತಂತ್ರವು ಕಾರ್ಯರೂಪಕ್ಕೆ ಬರುತ್ತದೆ.
ದಂಗೆ ನಿಗ್ರಹದ ಸಂಪೂರ್ಣ ತಂತ್ರವು “ದಂಡ”ದಿಂದ (ಬಲಪ್ರಯೋಗ) ಪ್ರಾರಂಭವಾಗಿ, ಮಾತುಕತೆ ಮಾರ್ಗ ಅನುಸರಿಸಿದಾಗ ಶಾಮ (ಸಂಧಾನ) ಜಾರಿಗೆ ಬರುತ್ತದೆ. ಈ ಮಧ್ಯೆ, ಸಶಸ್ತ್ರ ದಂಗೆಕೋರರ ದಾಳಿ ಸಾಮರ್ಥ್ಯವನ್ನು ಕುಗ್ಗಿಸಲು, ಅವರೊಳಗಿನ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು 'ಭೇದ'ದ ತಂತ್ರಕ್ಕೆ ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ, ಒಪ್ಪಂದಗಳ ಮೂಲಕ ಅಧಿಕಾರದ ರಚನೆಗೆ ಅವರನ್ನು ಸೇರಿಸಿಕೊಂಡಾಗ, 'ದಾನ'ವು ಆ ಬಂಡುಕೋರರನ್ನು ಮುಖ್ಯವಾಹಿನಿಯ ರಾಜಕೀಯ ವ್ಯವಸ್ಥೆಯಲ್ಲಿ ಸಹಕರಿಸಲು ತನ್ನ ಪಾತ್ರವನ್ನು ನಿರ್ವಹಿಸುತ್ತದೆ.
ಹೋರಾಟ ಅಥವಾ ಶಾಂತಿ ಮಾರ್ಗದ ಆಯ್ಕೆ
ವಸಾಹತುಶಾಹಿ ಕೊನೆಗೊಂಡ ನಂತರದ ಭಾರತದಲ್ಲಿ ಒಂದರ ನಂತರ ಒಂದರಂತೆ ನಡೆಯುತ್ತಿರುವ ದಂಗೆ ನಿಗ್ರಹದ ರಂಗಭೂಮಿಯಲ್ಲಿ, ಸಶಸ್ತ್ರ ದಂಗೆಗಳನ್ನು ನಿಯಂತ್ರಿಸಲು ಮತ್ತು ಕೊನೆಗೊಳಿಸಲು ಈ ಕೌಟಿಲ್ಯ ನೀತಿ ಕಾರ್ಯನಿರ್ವಹಿಸಿದೆ. ಅಂದರೆ ಸಂದೇಶವಂತೂ ಸ್ಪಷ್ಟವಾಗಿದೆ: ನೀವು ಪ್ರಭುತ್ವದ ವಿರುದ್ಧ ಹೋರಾಡಲು ಆಯ್ಕೆಮಾಡಿಕೊಂಡರೆ, ಕಾನೂನಿನ ಕಠಿಣ ಕ್ರಮಗಳನ್ನು ಎದುರಿಸುತ್ತೀರಿ, ಆದರೆ ನೀವು ಸಾಂವಿಧಾನಿಕ ಚೌಕಟ್ಟಿನೊಳಗೆ ಒಪ್ಪಂದ ಮಾಡಿಕೊಳ್ಳಲು ಬಯಸಿದರೆ, ಅದಕ್ಕೆ ಸರ್ಕಾರ ಯಾವತ್ತೂ ಸಿದ್ಧವಾಗಿರುತ್ತದೆ. ಕಬ್ಬಿಣದ ಮುಷ್ಟಿಯೋ, ಮಕಮಲ್ ಕೈಗವಸೋ- ಆಯ್ಕೆ ಬಂಡುಕೋರರಿಗೆ ಬಿಟ್ಟಿದ್ದು.
ಹೀಗಾಗಿ, ಮಾವೋವಾದಿ ನಾಯಕ ಕೋಟೇಶ್ವರ ರಾವ್ ಅಲಿಯಾಸ್ ಕಿಶನ್‌ಜಿ ಪೊಲೀಸರ ಜೊತೆ ಕಾದಾಡಿ ಸಾಯುತ್ತಾನೆ, ಆದರೆ ಅವನ ಸಹೋದರ ವೇಣುಗೋಪಾಲ್ ರಾವ್ 60 ಮಂದಿ ಸಶಸ್ತ್ರ ಕಾರ್ಯಕರ್ತರೊಂದಿಗೆ ಶರಣಾದಾಗ, ಒಂದು ಪ್ರಮುಖ ಕಂಪನಿಯು ಅವನನ್ನು ತನ್ನ ‘ಬ್ರಾಂಡ್ ಅಂಬಾಸಿಡರ್’ (ರಾಯಭಾರಿ) ಆಗಿ ನೇಮಿಸಿಕೊಳ್ಳಲು ಮುಂದಾಗುತ್ತದೆ. ಅವರಿಗೆ ದೊರೆಯುವ ಪುನರ್ವಸತಿ ಪ್ಯಾಕೇಜ್ ಬಗ್ಗೆ ವಿಶೇಷವಾಗಿ ಪ್ರಸ್ತಾಪ ಮಾಡುವ ಅಗತ್ಯವೇ ಇಲ್ಲ.
ಮಿಲಿಟರಿ ಬಲವೊಂದೇ ಉತ್ತರವಲ್ಲ
ಭಾರತದ ಈ ಸೂಕ್ಷ್ಮ ಕಾರ್ಯತಂತ್ರವು ಪಾಕಿಸ್ತಾನದ ವಿರುದ್ಧ ಕೈಗೊಂಡ ಸೇನಾ ಕಾರ್ಯಾಚರಣೆಗೆ ಸಂಪೂರ್ಣ ತದ್ವಿರುದ್ಧವಾಗಿರುವುದು ಎದ್ದು ಕಾಣುತ್ತದೆ. 1971ರಲ್ಲಿ, ಕೆಲವು ಲಕ್ಷ ಬಂಗಾಳಿಗಳನ್ನು ಮುಗಿಸಿಬಿಟ್ಟರೆ ದೇಶದ ಪೂರ್ವ ಭಾಗದಲ್ಲಿ (ಈಗಿನ ಬಾಂಗ್ಲಾದೇಶ) ಪ್ರತಿಭಟನೆಗಳು ನಿಲ್ಲುತ್ತವೆ ಎಂದು ಪಾಕಿಸ್ತಾನಿ ಜನರಲ್‌ಗಳು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರು. ಆದರೆ, ಭಾರತದ ಬೆಂಬಲದೊಂದಿಗೆ ಸಶಸ್ತ್ರ ದಂಗೆಯು ಹರಡಿದ್ದರಿಂದ ಅವರು ಅರ್ಧ ದೇಶವನ್ನು ಕಳೆದುಕೊಂಡರು.
ಈಗ ಪಾಠವಂತೂ ಸ್ಪಷ್ಟವಾಗಿದೆ – ದಂಗೆಗಳನ್ನು ಸೃಷ್ಟಿಸುವ ಆಂತರಿಕ ಭಿನ್ನಾಭಿಪ್ರಾಯವನ್ನು ಮಿಲಿಟರಿ ಬಲದಿಂದ ಶಾಂತವಾಗಿಸಲು ಸಾಧ್ಯವಿಲ್ಲ. ಅವುಗಳಿಗೆ ಸಂವಾದ ಮತ್ತು ಸಾಮರಸ್ಯದ ಮೂಲಕ ಸಾಧಿಸಬಹುದಾದ ರಾಜಕೀಯ ಪರಿಹಾರಗಳು ಬೇಕಾಗುತ್ತವೆ. ಕಟ್ಟುನಿಟ್ಟಿನ ವೇಳಾಪಟ್ಟಿ ಮತ್ತು ದೊಡ್ಡ ದೊಡ್ಡ ಘೋಷಣೆಗಳು ಕೆಲಸ ಮಾಡುವುದಿಲ್ಲ; ತಾಳ್ಮೆ ಕೆಲಸ ಮಾಡುತ್ತದೆ.