ರಾಜಕೀಯದ ಕುದಿ ಕಡಾಯಿಯಲ್ಲಿ ಬಾಂಗ್ಲಾ: ಸಕಾಲದಲ್ಲಿ ಚುನಾವಣೆ ನಡೆಯುವುದೇ ಅನುಮಾನ

ಸಕಾಲದಲ್ಲಿ, ಸ್ಥಿರ ಚುನಾವಣೆಗಳನ್ನು ನಡೆಸಬೇಕು ಎಂಬುದು ಭಾರತದ ಬಯಕೆ. ಆದರೆ ಅದು ಕೈಗೂಡುವಂತೆ ಕಾಣುತ್ತಿಲ್ಲ., ಯಾಕೆಂದರೆ ಪ್ರಜಾಪ್ರಭುತ್ವ ಸುಧಾರಣೆಗಾಗಿ ರೂಪಿಸಲಾದ ನೀಲ ನಕ್ಷೆಯನ್ನು ಎನ್.ಸಿ.ಪಿ ಮತ್ತು ಎಡಪಕ್ಷಗಳು ಸೇರಿದಂತೆ ಪ್ರಮುಖ ಬಾಂಗ್ಲದೇಶ ಪಕ್ಷಗಳು ತಿರಸ್ಕರಿಸಿವೆ.

Update: 2025-11-02 02:30 GMT
ಅಕ್ಟೋಬರ್ 17ರಂದು ಸಹಿಹಾಕಲಾದ ‘ಜುಲೈ ಸನ್ನದು’ ಪ್ರದರ್ಶಿಸುತ್ತಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮದ್ ಯೂನಸ್

“ಇಂದು ನಾವು ಜೊತೆಯಲ್ಲಿ ನುಡಿಸಿದ ರಾಗ ಏಕತೆಯ ರಾಗವಾಗಿದೆ” ಅಕ್ಟೋಬರ್ 17ರಂದು ಬಹುನಿರೀಕ್ಷಿತ ‘ಜುಲೈ ಸನ್ನದು’ವಿಗೆ ಸಹಿಹಾಕಿದ ಬಳಿಕ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಿಸ್ ಅವರು ಹೇಳಿದ ಮಾತಿದು.

ವಿಪರ್ಯಾಸವೆಂದರೆ ಈ ಒಪ್ಪಂದದ ಬಗ್ಗೆ ನಾನಾ ರಾಜಕೀಯ ಪಕ್ಷಗಳಿಂದ ಹೊರಹೊಮ್ಮಿದ ಭಿನ್ನ-ವಿಭಿನ್ನ ಸ್ವರಗಳು ಈಗ ಎಚ್ಚರಿಕೆಯ ಗಂಟೆಯನ್ನು ಬಾರಿಸಿವೆ.

ಫೆಬ್ರುವರಿ ತಿಂಗಳಲ್ಲಿ ನಡೆಯಬೇಕೆಂದು ನಿಗದಿಯಾಗಿರುವ ಚುನಾವಣೆಗಳನ್ನು ಹೇಳಿದ ಮಾತಿನಂತೆ ಸಕಾಲದಲ್ಲಿ ನಡೆಸಲು ಭಾರತದ ನೆರೆಯ ರಾಷ್ಟ್ರ ಶಕ್ತವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ಬಳಿಕ ರಚನೆಯಾದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿರುವ ಯೂನಸ್ ಅವರು ರಾಜಕೀಯ ವಲಯದ ಎಲ್ಲ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಜುಲೈ ಸನ್ನದಿನಂತೆ ರಚಿಸಲಾದ ರಾಷ್ಟ್ರೀಯ ಸಹಮತ ಆಯೋಗದ ನೇತೃತ್ವ ವಹಿಸಿದ್ದರು.

ಒಮ್ಮತವೆಂಬ ಮರೀಚಿಕೆಯ ಬೆನ್ನು ಹತ್ತಿ

ಮುಂಬರುವ ಜತೀಯ ಸಂಸದ್ ಚುನಾವಣೆಯಲ್ಲಿಯೂ ಕೂಡ ಇದೇ ಏಕತೆಯ ಮನೋಭಾವ ಇರಲಿದೆ ಎಂಬ ವಿಶ್ವಾಸ ಯೂನಸ್ ಅವರದ್ದು. ಜುಲೈ ಒಪ್ಪಂದದ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಇರುವುದರಿಂದ ಇದು ಅಸಂಭವವೆಂದೇ ಕಾಣಿಸುತ್ತಿದೆ. ಒಪ್ಪಂದಕ್ಕೆ ಒಪ್ಪಿಗೆ ನೀಡಿದ ರಾಜಕೀಯ ಪಕ್ಷಗಳು ಪ್ರಸ್ತಾಪಿಸಲಾದ ಒಟ್ಟು 84 ಸುಧಾರಣೆಗಳಲ್ಲಿ ಕೇವಲ 28ಕ್ಕೆ ಮಾತ್ರ ಸಮಾನ ಅಭಿಪ್ರಾಯಗಳನ್ನು ಹೊಂದಿದ್ದವು. ಹಾಗಾಗಿ ಎಲ್ಲ ಅಂಶಗಳಿಗೆ ಸಹಮತ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ.

ಅಂದು ಚರ್ಚೆಯಲ್ಲಿ ಭಾಗಿಯಾದ 30 ಪಕ್ಷಗಳ ಪೈಕಿ ಕೇವಲ 24 ಪಕ್ಷಗಳು ಮಾತ್ರ ಒಪ್ಪಂದಕ್ಕೆ ಸಹಿಹಾಕಿವೆ. ಉದಾಹರಣೆಗೆ ಬಾಂಗ್ಲಾದೇಶದಲ್ಲಿ ಕಳೆದ ವರ್ಷ ಹಸೀನಾ ವಿರುದ್ಧ ರಾಷ್ಟ್ರಾದ್ಯಂತ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಹಾಗೂ ವಿದ್ಯಾರ್ಥಿಗಳೇ ರಚಿಸಿದ್ದ ಜತಿಯೋ ನಾಗರಿಕ ಪಕ್ಷ ಅಥವಾ ರಾಷ್ಟ್ರೀಯ ನಾಗರಿಕ ಪಕ್ಷ (ಎನ್.ಸಿ.ಪಿ) ಒಪ್ಪಂದಕ್ಕೆ ಸಹಿಹಾಕಿಲ್ಲ. ಜೊತೆಗೆ ನಾಲ್ಕು ಎಡಪಕ್ಷಗಳು ಕೂಡ ಸಹಿಹಾಕಿಲ್ಲ.

ಆದರೆ ಖಲೀದಾ ಜೀಯಾ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿ.ಎನ್.ಪಿ) ಮತ್ತು ರಾಷ್ಟ್ರದ ಬೃಹತ್ ಇಸ್ಲಾಂ ಪಕ್ಷವಾದ ಜಮಾತ್-ಎ-ಇಸ್ಲಾಮಿ ಒಪ್ಪಂದಕ್ಕೆ ಸಹಿಹಾಕಿದೆ. ಒಂದು ಕಾಲದಲ್ಲಿ ನಿಕಟ ಮಿತ್ರಪಕ್ಷಗಳಾಗಿದ್ದ ಈ ಎರಡೂ ಪಕ್ಷಗಳ ನಡುವೆಯೇ ಈ ಬಾರಿ ಚುನಾವಣೆ ನಡೆಯುವ ಸಾಧ್ಯತೆಗಳು ಕಾಣಿಸುತ್ತಿವೆ. ದೇಶದ ಸಣ್ಣ ಪುಟ್ಟ ಪಕ್ಷಗಳು ಈ ಎರಡು ಪಕ್ಷಗಳ ಜೊತೆ ಕೈಜೋಡಿಸಿವೆ.

ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ತರಲು ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ತರುವ ದೃಷ್ಟಿಯಿಂದ ಈ ಸನ್ನದು ನೀಲನಕ್ಷೆಯಾಗಿದೆ. ಆದರೆ ಪ್ರಸ್ತಾಪಿತ ಸುಧಾರಣೆಗಳ ಪೈಕಿ ಬಹುತೇಕ ವಿಚಾರಗಳ ಬಗ್ಗೆ ಪಕ್ಷಗಳ ನಡುವೆ ಯಾವುದೇ ಸಹಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಸುಧಾರಣೆಗಳನ್ನು ಯಾವಾಗ ಮತ್ತು ಹೇಗೆ ಜಾರಿಗೆ ತರಲಾಗುತ್ತದೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಜನಮತ ಸಂಗ್ರಹದ ಬೇಡಿಕೆ

ಈ ಸನ್ನದನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಜನಮತ ಸಂಗ್ರಹ ನಡೆಸಬೇಕು ಎಂದು ರಾಜಕೀಯ ಪಕ್ಷಗಳು ಬೇಡಿಕೆ ಇಟ್ಟಿವೆ. ಆದರೆ ಅದನ್ನು ಯಾವಾಗ ನಡೆಸಬೇಕು ಎನ್ನುವ ವಿಚಾರದಲ್ಲಿ ಅವರಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಚುನಾವಣೆ ನಡೆಸುವುದಕ್ಕೂ ಮೊದಲೇ ಜನಮತ ಸಂಗ್ರಹ ಮುಗಿದುಬಿಡಬೇಕು ಎಂಬುದು ಜಮಾತ್ ಮತ್ತು ಎನ್.ಸಿ.ಪಿ ಬೇಡಿಕೆ. ಆದರೆ ಬಿ.ಎನ್.ಪಿ. ಚುನಾವಣೆಯ ಬಳಿಕ ಅದನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

ಹೀಗೆ ರಾಜಕೀಯ ಪಕ್ಷಗಳ ನಡುವೆ ಇರುವ ಒಮ್ಮತಾಭಿಪ್ರಾಯದ ಕೊರತೆಯ ಕಾರಣದಿಂದ ಸಂಸದೀಯ ಚುನಾವಣೆಯ ಸುತ್ತ ಅನಿಶ್ಚಿತ ವಾತಾವರಣವನ್ನೂ ಸೃಷ್ಟಿಸಿದೆ. ಹಾಗಾಗಿ ರಾಜಕೀಯದ ಕಡಾಯಿ ಕುದಿಯುತ್ತಿರುವ ಹೊತ್ತಿನಲ್ಲಿ ಯಾವಾಗ ಚುನಾವಣೆ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ. ಬಿ.ಎನ್.ಪಿ ಮುಂಚೂಣಿಯಲ್ಲಿರುವ ಪಕ್ಷವಾದ ಕಾರಣ ಅದಕ್ಕೆ ಸಕಾಲದಲ್ಲಿ ಚುನಾವಣೆ ನಡೆಯಲಿ ಎಂಬ ಬಯಕೆಯಿದೆ. ಆದರೆ ಜಮಾತ್ ಮತ್ತು ಎನ್.ಸಿ.ಪಿ ತಮ್ಮ ಗೆಲುವಿನ ಸಾಧ್ಯತೆಗಳನ್ನು ಸುಧಾರಿಸಿಕೊಳ್ಳಬೇಕಿದೆ. ಹಾಗಾಗಿ ಅದಕ್ಕೆ ಹೆಚ್ಚು ಕಾಲಾವಕಾಶ ಸಿಕ್ಕಷ್ಟು ಲಾಭ.

ಢಾಕಾದಲ್ಲಿ ಮುಂದೆ ಸ್ಥಾಪನೆಗೊಳ್ಳುವ ಸರ್ಕಾರ ಹಿಂದಿನ ಶೇಖ್ ಹಸೀನಾ ಅವರಷ್ಟು ಸ್ನೇಹಪರವಾಗಿ ಇರುವುದಿಲ್ಲ ಎಂಬುದು ಖಾತರಿಯಾಗಿದ್ದರೂ ಬಾಂಗ್ಲಾ ಚುನಾವಣೆ ಭಾರತದ ಮಟ್ಟಿಗೆ ನಿಸ್ಸಂದೇಹವಾಗಿ ಆತಂಕವನ್ನು ಉಂಟುಮಾಡಿದೆ. ಯಾಕೆಂದರೆ ಬಾಂಗ್ಲಾದೇಶದಲ್ಲಿ ಸ್ಥಿರವಾದ ಸರ್ಕಾರವಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಬಹಳ ಮುಖ್ಯ. ಅಲ್ಲಿನ ಆಡಳಿತದ ಜೊತೆ ರಾಜತಾಂತ್ರಿಕವಾಗಿ ವ್ಯವಹರಿಸುವುದು ಸೌಹಾರ್ದಪೂರ್ಣವಾಗಿರದು ಎಂಬುದರ ಅರಿವು ಅದಕ್ಕಿದೆ. ಆದರೆ ಅಲ್ಲಿ ಯಾರೇ ಅಧಿಕಾರದಲ್ಲಿದ್ದರೂ ತನ್ನದೇ ನೆರೆಹೊರೆಯ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಲುವುದು ಅದಕ್ಕೆ ಮುಖ್ಯ.

ಬಾಂಗ್ಲಾದೇಶದಲ್ಲಿ ಯಾವುದೇ ಕಾರಣಕ್ಕೂ ಚುನಾವಣೆ ವಿಳಂಬವಾಗಬಾರದು ಮತ್ತು ಅದು ಸ್ವತಂತ್ರ, ನ್ಯಾಯಸಮ್ಮತವಾಗಿ ನಡೆಯಬೇಕು ಹಾಗೂ ಅದರಲ್ಲಿ ಎಲ್ಲರೂ ಒಳಗೊಳ್ಳುವಂತಾಗಬೇಕು ಎಂಬುದು ಅದರ ಆಶಯವಾಗಿದೆ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಸತತ ಹದಿನೈದು ವರ್ಷಗಳ ಕಾಲ ಅಧಿಕಾರ ನಡೆಸಿದ ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷ ಸಹಜವಾಗಿ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ ಅಡಿಯಲ್ಲಿ ಎಲ್ಲ ರಾಜಕೀಯ ಚುವಟಿಕೆಗಳಿಂದ ನಿಷೇಧಿಸಲಾಗಿದೆ.

ಪಾಕಿಸ್ತಾನದ ಜೊತೆಗಿನ ಬಿ.ಎನ್.ಪಿ ನಂಟು

ಜಮಾತ್ ಮತ್ತು ಬಿ.ಎನ್.ಪಿಗೆ ಬಲವಾದ ನಂಟು ಇರುವುದು ಪಾಕಿಸ್ತಾನದ ಜೊತೆ. ಇಂತಹ ಪಕ್ಷಗಳು ಬಾಂಗ್ಲಾದಲ್ಲಿ ಅಧಿಕಾರ ಸೂತ್ರ ಹಿಡಿಯುವುದು ಭಾರತಕ್ಕೆ ತಲೆನೋವೇ ಆಗಿದೆ. ಈಗಿರುವ ಯೂನುಸ್ ಸರ್ಕಾರವೂ ಕೂಡ ಪಾಕಿಸ್ತಾನದ ಜೊತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಕಳೆದ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೆವದಲ್ಲಿ ಯೂನಸ್ ಅವರು ಪಾಕಿಸ್ತಾನ ಪ್ರಧಾನಿ ಶೇಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭಾರತಕ್ಕಿರುವ ಇನ್ನೊಂದು ಕಿರಿಕಿರಿಯ ಸಂಗತಿ ಏನೆಂದರೆ ಬಾಂಗ್ಲಾದಲ್ಲಿ ಇಸ್ಲಾಮಿಕ್ ಶಕ್ತಿಗಳ ಕೈಮೇಲಾಗುತ್ತಿರುವುದು.

ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಜೊತೆಗಿನ ಭಾರತದ ಸಂಬಂಧ ಹಳಸಿರುವುದಕ್ಕೆ ಮುಖ್ಯ ಕಾರಣ ಪದಚ್ಯುತೆ ಶೇಖ್ ಹಸೀನಾ ಇನ್ನೂ ಭಾರತದಲ್ಲಿ ಠಿಕಾಣಿ ಹೂಡಿರುವುದು. 2024ರ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದಲ್ಲಿ ವ್ಯಾಪಕ ಪ್ರಮಾಣದ ದಂಗೆ ನಡೆದ ಬಳಿಕ ಶೇಖ್ ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದರು. ಶೇಖ್ ಗಡಿಪಾರಾಗುವುದು ನಿಶ್ಚಿತ ಎಂಬುದು ಖಾತರಿಯಾಗುತ್ತಲೇ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು.

ಹಸೀನಾ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಮಾತ್ ನಾಯಕತ್ವದ ವಿರುದ್ಧ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯನ್ನು ರಚಿಸಿದ್ದರು. ಈಗ ಕಳೆದ ವರ್ಷದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ‘ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ’ ಅದೇ ನ್ಯಾಯಮಂಡಳಿಯ ಮುಂದೆ ಹಾಜರಾಗದೇ ವಿಚಾರಣೆಯನ್ನು ಎದುರಿಸಬೇಕಾಗಿದೆ.

ವಿದ್ಯಾರ್ಥಿ ಚುನಾವಣೆಗಳಲ್ಲಿ ಜಮಾತ್ ಮೇಲುಗೈ

ಅಪಾರವಾದ ಹಣದ ಥೈಲಿಯ ಮೇಲೆ ಕುಳಿತಿರುವ ಜಮಾತ್ ಶೇಖ್ ಹಸೀನಾ ಸರ್ಕಾರ ಹೇರಿದ ನಿಷೇಧದಿಂದ ಮುಕ್ತವಾದ ಬಳಿಕ ಇನ್ನಷ್ಟು ಬಲಿತುಕೊಂಡಿದೆ. ಜಮಾತ್ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಚುನಾವಣಾ ಪ್ರಚಾರವನ್ನೂ ಆರಂಭಿಸಿದೆ. ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛಾತ್ರ ಶಿಬಿರ್ ಬಾಂಗ್ಲಾದೇಶದ ಎಲ್ಲ ವಿಶ್ವವಿದ್ಯಾನಿಲಯ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿ ಅತ್ಯಂತ ನಿರ್ಣಾಯಕವಾದುದು ಢಾಕಾ ವಿಶ್ವವಿದ್ಯಾಲಯ.

ಜಮಾತ್ ಚುನಾವಣಾ ಪ್ರಚಾರದಲ್ಲಿ ಈಗಾಗಲೇ ಮುನ್ನುಗಿದೆ. ಆದರೂ ಅದು ‘ಸಮಾನ ಅನುಪಾತದ’ ಆಧಾರದಲ್ಲಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಅದರ ಮುಖ್ಯ ತಂತ್ರಗಳಲ್ಲಿ ಒಂದಾಗಿದೆ. ಜಮಾತ್ ಪಕ್ಷದ ‘ಬಿ’ ಟೀಮ್ ಎಂದೇ ಗ್ರಹಿಸಲಾಗಿರುವ ಎನ್.ಸಿ.ಪಿ.ಯ ಬಹಳಷ್ಟು ಮಂದಿ ಸದಸ್ಯರು ಮದರಸಾ ಅಥವಾ ಜಮಾತ್ ಹಿನ್ನೆಲೆಯಿಂದ ಬಂದವರು. ಅವರು ತೀವ್ರಗಾಮಿ ಇಸ್ಲಾಮಿ ಸಂಘಟನೆ ಜೊತೆ ಭಿನ್ನಾಭಿಪ್ರಾಯ ಹೊಂದಿರುವಂತೆ ಕಾಣುತ್ತಿದೆ. ಉದಾಹರಣೆಗೆ ಜಮಾತ್ ಮುಂದಿಟ್ಟಿರುವ ಸಮಾನ ಅನುಪಾತದ ಪ್ರಾತಿನಿಧ್ಯವನ್ನು ವಿರೋಧಿಸಿದ್ದು, “ಇದೊಂದು ಯೋಜಿತ ರಾಜಕೀಯ ವಂಚನೆ’ ಎಂದು ಬಣ್ಣಿಸಿದೆ.

ತನ್ನ ನೆರೆಯ ರಾಷ್ಟ್ರದಲ್ಲಿ ಕಂಡುಬರುತ್ತಿರುವ ಈ ಎಲ್ಲ ರಾಜಕೀಯ ಮಂಥನದ ನಡುವೆ ಭಾರತಕ್ಕೆ ಕಾದು ನೋಡುವ ತಂತ್ರವನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಮುಂದೆ ಬಾಂಗ್ಲಾದೇಶದಲ್ಲಿ ಸ್ಥಾಪಿತವಾಗುವ ಯಾವುದೇ ಸರ್ಕಾರದ ಜೊತೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುವುದು ಸವಾಲಿನ ಕೆಲಸ ಎಂಬುದರ ಅರಿವಿದ್ದರೂ ಆ ದೇಶದಲ್ಲಿ ಬಹುಬೇಗ ಚುನಾವಣೆ ಮುಗಿದುಬಿಡಲಿ ಎಂಬ ಆಶಯವನ್ನು ಹೊಂದಿದೆ. 

Tags:    

Similar News