ಉಕ್ರೇನ್ ಯುದ್ಧದಿಂದ ಭಾರತದ ವಿಶ್ವಾಸಾರ್ಹ ಅಲಿಪ್ತ ನೀತಿಗೆ ಬೆದರಿಕೆ
ಭಾರತದ ʻಅಲಿಪ್ತʼ ವಿದೇಶಾಂಗ ನೀತಿ ಈಗ ಅಡಚಣೆಯೆಂದು ಪರಿಗಣಿಸಲ್ಪಟ್ಟಿದೆ; ಉಕ್ರೇನ್‌ನ ಯುದ್ಧವನ್ನು ಗೆಲ್ಲುವ ಝೆಲೆನ್ಸ್ಕಿ ಗುರಿಗೆ ಅಡಚಣೆಯಾಗಿದೆ. ವಾಸ್ತವವೆಂದರೆ, ಭಾರತವು ಅಮೆರಿಕ ಅಥವಾ ಮಾಸ್ಕೋಗೆ ಅನಿವಾರ್ಯವಲ್ಲ ಎನ್ನುವ ಸ್ಥಿತಿಯಿದೆ.;
ಉಕ್ರೇನ್ ಭೇಟಿಯಿಂದ ಹಿಂದಿರುಗಿದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಸ್ಪಷ್ಟ ಕೆಲಸವೊಂದನ್ನು ಮಾಡಿದರು; ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಉಕ್ರೇನ್ ಭೇಟಿ ಕುರಿತು ವಿವರಣೆ ನೀಡಿದರು.
ಈ ಮಾತುಕತೆಯು ಮೋದಿಯವರ ಉಕ್ರೇನ್ ಪ್ರವಾಸವು ಒಂದು ತಿಂಗಳ ಹಿಂದಿನ ಅವರ ರಷ್ಯಾ ಭೇಟಿಯನ್ನು ಸರಿದೂಗಿಸಲು ನಡೆದಿದೆ ಎಂಬ ವರದಿಗಳಿಗೆ ಇದು ಸಾಕ್ಷಿ ಒದಗಿಸಿತು.ಮೋದಿ ಅವರ ರಷ್ಯಾ ಭೇಟಿಯು ವೊಲೊಡಿಮಿರ್ ಝೆಲೆನ್ಸ್ಕಿ, ಅಮೆರಿಕ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ಕೆರಳಿಸಿತ್ತು.
ಬೈಡೆನ್ ಅವರಿಗೆ ಕರೆ ಮಾಡಿದ ಒಂದು ದಿನದ ನಂತರ ಮೋದಿ ಅವರು ಉಕ್ರೇನ್ ಭೇಟಿ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವಿವರಣೆ ನೀಡಿದರು.
ಈ ಹಿಂದೆ ಅಮೆರಿಕಕ್ಕೆ ಮಾಡಿದಂತೆ, ರಷ್ಯಾವನ್ನು ಕೂಡ ಸರಪಳಿಯಲ್ಲಿ ಸೇರಿಸುವ ಭಾರತದ ಪ್ರಯತ್ನವನ್ನು ಇದು ಮರುದೃಢಪಡಿಸಿತು.
ರಷ್ಯಾ ಮತ್ತು ಅಮೆರಿಕ ಬೆಂಬಲಿತ ಉಕ್ರೇನ್‌ನೊಂದಿಗೆ ಏಕಕಾಲದಲ್ಲಿ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಭಾರತದ ದಶಕಗಳ ಹಿಂದಿನ ʻಆಲಿಪ್ತʼ ವಿದೇಶಾಂಗ ನೀತಿಯ ಮುಂದುವರಿಕೆಯಾಗಿದೆ. ಹೊಸದಿಲ್ಲಿಗೆ ಅಮೆರಿಕದಷ್ಟೇ ರಷ್ಯಾ ಕೂಡ ಬೇಕು. ಭಾರತ ಎರಡೂ ದೇಶಗಳ ವಿರೋಧವನ್ನು ಕಟ್ಟಿಕೊಳ್ಳಲು ಸಿದ್ಧವಿಲ್ಲ. ರಷ್ಯಾ ಅಲ್ಲದೆ ಅಮೆರಿಕ ಮೇಲಿನ ಅದರ ಅವಲಂಬನೆ ವೇಗವಾಗಿ ಹೆಚ್ಚುತ್ತಿದೆ; ವಿಶೇಷವಾಗಿ, 1990 ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟವು ವಿಭಜನೆಯಾದ ನಂತರದಿಂದ.
1990ಕ್ಕೆ ಮೊದಲು ಅಲಿಪ್ತ ಜಗತ್ತಿನ ನಾಯಕರಲ್ಲಿ ಒಬ್ಬನಾಗಿದ್ದ ಭಾರತ, ವಾಸ್ತವದಲ್ಲಿ ಅದು ಅಮೆರಿಕವನ್ನು ಸಿಟ್ಟಿಗೆಬ್ಬಿಸಿದರೂ, ಸೋವಿಯತ್ ಒಕ್ಕೂಟದ ಕಡೆಗೆ ಹೆಚ್ಚು ವಾಲಿತು. ಶೀತಲ ಸಮರದ ಸಮಯದಲ್ಲಿ ಪ್ರಪಂಚವು ಈ ಎರಡು ಸೂಪರ್ ಪವರ್‌ಗಳ ನಡುವೆ ಅಸ್ತಿತ್ವದಲ್ಲಿದ್ದ ಸಮತೋಲದಿಂದ ನಿಯಂತ್ರಿಸಲ್ಪಟ್ಟಿತ್ತು.
ಭಾರತದ ಅಲಿಪ್ತ ನೀತಿ: ಭಾರತದ ಅಲಿಪ್ತ ನೀತಿಯ ಪರೀಕ್ಷೆ ನಡೆದಿರಲಿಲ್ಲ ಮತ್ತು ಅದು ಸೋವಿಯತ್ ಬಣಕ್ಕೆ ಹತ್ತಿರವಿರುವ ರಾಷ್ಟ್ರಗಳ ಪರ ನಿಲ್ಲಬಹುದಿತ್ತು. ಉದಾಹರಣೆಗೆ, ನವದೆಹಲಿಯು ಇಸ್ರೇಲ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ; ಪ್ಯಾಲೆಸ್ಟೀನ್ ಮತ್ತು ಇರಾನ್ ಪರವಿದೆ ಮತ್ತು ಅಮೆರಿಕ ನೇತೃತ್ವದ ಪಶ್ಚಿಮದ ವಿರುದ್ಧ ನಿಂತುಕೊಂಡಿದೆ. ಇದೆಲ್ಲವೂ ಸೋವಿಯತ್ ಒಕ್ಕೂಟವು ನವದೆಹಲಿಯ ಪ್ರಶ್ನಾತೀತ ಬೆಂಬಲಿಗನೆಂದು ದೃಢವಾದ ತಿಳಿವಳಿಕೆಯಲ್ಲಿ ನಡೆದಿತ್ತು. ಚೀನಾ ಆಗ ಆ ಚಿತ್ರಣದಲ್ಲಿ ಎಲ್ಲೂ ಇರಲಿಲ್ಲ.
ಕಳೆದ ಮೂರು ದಶಕಗಳ ಬಳಿಕ ಪರಿಸ್ಥಿತಿ ಈಗ ನಾಟಕೀಯವಾಗಿ ಬದಲಾಗಿದೆ. ಭಾರತವು ಅಮೆರಿಕದ ಕಡೆಗೆ ಸೆಳೆಯಲ್ಪಟ್ಟಿದೆ, ಇಸ್ರೇಲ್ ಜತೆಗೆ ಬಲವಾದ ಸಂಬಂಧವನ್ನು ಹೊಂದಿದೆ ಮತ್ತು ಪ್ಯಾಲೇಸ್ಟಿನಿನ ಬೇಷರತ್ ಬೆಂಬಲಿಗನಾಗಿ ಉಳಿದಿಲ್ಲ. ಇರಾನ್ ಬಗ್ಗೆ ಅದರ ನೀತಿ ಇಬ್ಬಗೆಯದು; ಅಂತಾರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ(ಐಎಇಎ)ಯಂಥ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೆಲವೊಮ್ಮೆ ಟೆಹ್ರಾನ್ ವಿರುದ್ಧ ಮತ ಚಲಾಯಿಸುತ್ತದೆ.
ಆದರೆ, ಭಾರತದ ಬಹು ದೊಡ್ಡ ದಿಕ್ಚ್ಯುತಿಯು ಹಿಂದಿನ ಸೋವಿಯತ್ ಒಕ್ಕೂಟದ ಪ್ರಾಂತ್ಯವಾದ ರಷ್ಯಾದಿಂದ ದೂರವಿರುವುದಾಗಿತ್ತು. ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲ, ಶತಮಾನದ ಆರಂಭದವರೆಗೂ, ವಾಷಿಂಗ್ಟನ್ ಜೊತೆಗಿನ ಭಾರತದ ನಿಕಟತೆ ಹೆಚ್ಚಳಕ್ಕೆ ಯಾವುದೇ ಸ್ಪಷ್ಟವಾದ ಕಾರಣ ಇರಲಿಲ್ಲ. ಮಾಸ್ಕೋ ಸೋವಿಯತ್ ಒಕ್ಕೂಟವನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ.
ಭಾರತದ ವಿದೇಶಾಂಗ ನೀತಿಯು ಕಾಗದದ ಮೇಲೆ, ಅಲಿಪ್ತವಾಗಿ ಮುಂದುವರಿಯಿತು. ಆದರೆ, ಔಪಚಾರಿಕ ಅಲಿಪ್ತ ಆಂದೋಲನ (ನಾಮ್), ಸತ್ತಿರಲಿಲ್ಲ; ಆದರೆ, ಜಡವಾಗಿತ್ತು. ಅಮೆರಿಕ ಏಕೈಕ ಮಹಾಶಕ್ತಿಯಾಗಿ ಹೊರಹೊಮ್ಮುವ ಮೂಲಕ ಜಗತ್ತು ಏಕ ಧ್ರುವೀಕರಣಗೊಳ್ಳುತ್ತಿತ್ತು.
ವಾಸ್ತವವೆಂದರೆ, ನವದೆಹಲಿಯ ಅಲಿಪ್ತ ನೀತಿಯು ಈಗ ರಷ್ಯಾಕ್ಕಿಂತ ಅಮೆರಿಕಕ್ಕೆ ಹತ್ತಿರವಾಗಿದೆ. ಆದರೆ, ಎರಡರೊಂದಿಗೂ ಸಮಾನವಾಗಿ ಸ್ನೇಹಪರವಾಗಿದೆ ಎಂಬಂತೆ ತೋರುತ್ತದೆ. ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧ ಹೊಂದಿರದ ರಷ್ಯಾ, ಮಧ್ಯ ಏಷ್ಯಾದ ಕೆಲವು ರಾಷ್ಟ್ರಗಳೊಂದಿಗೆ ಜಂಟಿ ಸಮ್ಮೇಳನ ಸೇರಿದಂತೆ, 2010 ರಲ್ಲಿ ಇಸ್ಲಾಮಾಬಾದಿಗೆ ಹತ್ತಿರವಾದಾಗ ಭಾರತ ಆಘಾತಗೊಂಡಿತು. ಸ್ವಲ್ಪ ಕಾಲದಲ್ಲೇ ಪುಟಿನ್ ಪಾಕಿಸ್ತಾನದೊಂದಿಗೆ ಮಿಲಿಟರಿ ತರಬೇತಿ ಒಪ್ಪಂದಕ್ಕೆ ಸಹಿ ಹಾಕಿದರು.
ಮಾಸ್ಕೋವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅರಿತ ಹೊಸದೆಹಲಿಯಲ್ಲಿ ಎಚ್ಚರಿಕೆಯ ಗಂಟೆಗಳು ರಿಂಗಣಿಸಿದವು. ಅಮೆರಿಕ ಜೊತೆ ವೇಗವಾಗಿ ಬೆಳೆಯುತ್ತಿದ್ದ ಸಂಬಂಧವನ್ನು ನಿಧಾನಗೊಳಿಸಲಾಯಿತು ಮತ್ತು ರಷ್ಯಾದ ಸ್ನೇಹವನ್ನು ಮರಳಿ ಪಡೆಯಲು ಕೆಲಸ ಮಾಡಲಾಯಿತು. ಅಂದಿನಿಂದ ಭಾರತವು ತನ್ನ ಸಾಂಪ್ರದಾಯಿಕ ಸ್ನೇಹಿತ ರಷ್ಯಾವನ್ನು ಬಿಟ್ಟುಕೊಡದೆ, ಅಮೆರಿಕದ ಜೊತೆಗಿನ ಬಾಂಧವ್ಯದಲ್ಲಿ ಸಮತೋಲ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ವಿದೇಶಾಂಗ ನೀತಿಯ ಮುಂದುವರಿಕೆ: ಬಿಜೆಪಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಿತು. ವಿದೇಶಾಂಗ ನೀತಿ ನಿರೂಪಣೆಗಳಲ್ಲಿ ಹಿಂದಿನ ಕಾಂಗ್ರೆಸ್ ಮತ್ತು ಜನತಾ ದಳ ನೇತೃತ್ವದ ಸರ್ಕಾರವನ್ನು ಅನುಸರಿಸಿತು. ಫೆಬ್ರವರಿ 24, 2022 ರವರೆಗೆ ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡುವವರೆಗೆ, ಅಮೆರಿಕ ಮತ್ತು ರಷ್ಯಾದೊಂದಿಗೆ ಸ್ನೇಹ ಸಂಬಂಧ ಕಾಪಾಡಿಕೊಳ್ಳುವಲ್ಲಿ ಇದು ಸಾಕಷ್ಟು ಯಶಸ್ವಿಯಾಗಿದೆ.
ಉಕ್ರೇನ್-ರಷ್ಯಾ ಯುದ್ಧವು ಭಾರತದ ವಿದೇಶಾಂಗ ನೀತಿಯನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ಅಲುಗಾಡಿಸುವಲ್ಲಿ ಯಶಸ್ವಿಯಾಗಿದೆ. ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ಅಮೆರಿಕ, ನವದೆಹಲಿಯ ಅಲಿಪ್ತ ಅಥವಾ ಅಲಿಪ್ತವಲ್ಲದ ವಿದೇಶಾಂಗ ನೀತಿ ಬಗ್ಗೆ ತಾಳ್ಮೆ ಕಳೆದುಕೊಳ್ಳು ತ್ತಿದೆ. ಭಾರತವು ವಾಸ್ತವವೆಂದರೆ, ಸಂಕೀರ್ಣ ಅಸ್ತಿತ್ವವನ್ನು ಹೊಂದಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉಪಾಹಾರ ಸೇವಿಸುತ್ತಿರುವಾಗಲೇ, ಅವರ ಪ್ರತಿಸ್ಪರ್ಧಿ ಜೋ ಬೈಡೆನ್ ಅವರೊಂದಿಗೆ ಸಿಹಿತಿನಿಸು ಆನಂದಿಸುತ್ತಿರುವಂತೆ ಇದೆ.
ಇತ್ತೀಚಿನವರೆಗೂ ಬೈಡೆನ್, ಪ್ರಧಾನಿ ಮೋದಿ ಅವರಿಗೆ ಮುಕ್ತ ರಹದಾರಿ ನೀಡಿದ್ದರು. ಪುಟಿನ್ ಕೂಡ ಅಂಥದ್ದೇ ಅವಕಾಶ ಕೊಟ್ಟಿದ್ದರು. ಸೋವಿಯತ್ ಕಾಲಕ್ಕಿಂತ ಭಿನ್ನವಾಗಿ, ಚೀನಾ ಈಗ ದೊಡ್ಡ ಶಕ್ತಿಯಾಗಿದ್ದು, ವಾಷಿಂಗ್ಟನ್‌ಗೆ ಸವಾಲು ಹಾಕುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಇದನ್ನು ಗುರುತಿಸಿದ ಅಮೆರಿಕ, ಚೀನಾವನ್ನು ಎದುರಿಸಲು ಭಾರತದ ಲಾಜಿಸ್ಟಿಕ್ಸ್ ಬೆಂಬಲವನ್ನು ಅವಲಂಬಿಸಿದೆ.
ಆದ್ದರಿಂದ, ಭಾರತವು ಅಮೆರಿಕ ನೇತೃತ್ವದ ಕ್ವಾಡ್ ಗುಂಪಿನಲ್ಲಿದೆ (ಜಪಾನ್ ಮತ್ತು ಆಸ್ಟ್ರೇಲಿಯ ಇತರ ಎರಡು ರಾಷ್ಟ್ರಗಳು). ಇದು ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯುವ ಉದ್ದೇಶ ಹೊಂದಿದೆ.
ರಷ್ಯಾ ತನ್ನ ಆರ್ಥಿಕತೆಯನ್ನು ಮುನ್ನಡೆಸಲು ಭಾರತವನ್ನು ಅವಲಂಬಿಸಿದೆ. ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ವಿಧಿಸಿರುವ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿರುವ ಮಾಸ್ಕೋ, ತೈಲವನ್ನು ನವದೆಹಲಿ ಮೂಲಕ ಸಾಗಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಅದು ಉಕ್ರೇನ್‌ನೊಂದಿಗಿನ ಸುದೀರ್ಘ ಸಂಘರ್ಷದ ಸಂದರ್ಭದಲ್ಲಿ ತನ್ನನ್ನು ಉಳಿಸಿಕೊಳ್ಳಲು ಅಗತ್ಯವಾದ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ.
ರಷ್ಯಾದ ಕಚ್ಚಾ ತೈಲ ಮತ್ತು ಭಾರತ: ಉಕ್ರೇನ್ ಯುದ್ಧಕ್ಕಿಂತ ಮೊದಲು ತನ್ನ ಅಗತ್ಯದ ಶೇ.2 ರಷ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಈಗ ಶೇ. 40 ರಷ್ಟನ್ನು ಖರೀದಿಸುತ್ತಿದೆ ಎಂದು ವರದಿಯಾಗಿದೆ. ಭಾರತೀಯ ಸಂಸ್ಕರಣೆಗಾರರು ತೈಲವನ್ನು ಸಂಸ್ಕರಿಸಿ, ದೇಶಿ ಮಾರುಕಟ್ಟೆಗೆ ಬಳಸುತ್ತಾರೆ ಮತ್ತು ಉಳಿದದ್ದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಾರೆ. ಉಕ್ರೇನ್ ನ್ನು ಬೆಂಬಲಿಸುವ ಯುರೋಪಿಯನ್ ಯೂನಿಯನ್‌ನ ದೇಶಗಳು ಭಾರತ ಸಂಸ್ಕರಿಸಿದ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿವೆ.
ಆದ್ದರಿಂದ, ಅಮೆರಿಕ, ಅದರ ಮಿತ್ರರಾಷ್ಟ್ರಗಳು ಮತ್ತು ರಷ್ಯಾ, ಭಾರತವನ್ನು ಸ್ಪರ್ಶಿಸದೆ ಇರಲು ತಮ್ಮದೇ ಆದ ಕಾರಣಗಳನ್ನು ಹೊಂದಿವೆ. ಕಳೆದ ಎರಡೂವರೆ ವರ್ಷಗಳಿಂದ ಉಕ್ರೇನ್ ಯುದ್ಧದ ಪರಿಣಾಮಗಳನ್ನು ನಿಭಾಯಿಸಲು ಜಗತ್ತು ಹೆಣಗಾಡುತ್ತಿರುವಾಗ, ನವದೆಹಲಿಯ ನೀತಿಗಳು ಎಲ್ಲರಿಗೂ ಅನುಕೂಲಕರವಾಗಿತ್ತು.
ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ರಷ್ಯಾ ಕಡಿಮೆ ಒತ್ತಡದಲ್ಲಿದೆ ಅಥವಾ ಯಾವುದೇ ಒತ್ತಡದಲ್ಲಿ ಇಲ್ಲ ಎಂದು ಝೆಲೆನ್ಸ್ಕಿ ಸರ್ಕಾರಕ್ಕೆ ಅರಿವಾಗಿದೆ. ವಾಸ್ತವವೆಂದರೆ, ಉಕ್ರೇನಿನ ಆಕ್ರಮಣದಲ್ಲಿ ರಷ್ಯಾ ಯಶಸ್ವಿಯಾಗುತ್ತಿದೆ. ಝೆಲೆನ್ಸ್ಕಿ ಸಹಜವಾಗಿ ಪುಟಿನ್ ವಿರುದ್ಧ ಪರಿಸ್ಥಿತಿಯನ್ನು ತಿರುಗಿಸಲು ಬಯಸುತ್ತಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಝೆಲೆನ್ಸ್ಕಿ ಅವರು ಮಧ್ಯಸ್ಥಿಕೆ ಪ್ರಯತ್ನ ಹೆಚ್ಚಿಸಬೇಕೆಂದು ಮತ್ತು ರಷ್ಯಾವನ್ನು ತಡೆಯಲು ತನಗೆ ಶಸ್ತ್ರಾಸ್ತ್ರ ಸರಬರಾಜು ಹೆಚ್ಚಿಸ ಬೇಕೆಂದು ಅಮೆರಿಕದ ಮೇಲೆ ಒತ್ತಡ ಹೆಚ್ಚಿಸಿದ್ದಾರೆ.
ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ಆಕ್ರಮಣವು ಪಶ್ಚಿಮದ ಮನವೊಲಿಸುವಲ್ಲಿ ಝೆಲೆನ್ಸ್ಕಿಅವರ ಯಶಸ್ಸಿನ ಪ್ರತಿಬಿಂಬವಾಗಿದೆ. ಭಾರತದ ʻಅಲಿಪ್ತʼ ವಿದೇಶಾಂಗ ನೀತಿಯನ್ನು ಈಗ ಅಡಚಣೆಯಂಬಂತೆ ನೋಡಲಾಗುತ್ತಿದೆ, ಅದು ಸಂಘರ್ಷವನ್ನು ಗೆಲ್ಲುವ ಉಕ್ರೇನ್‌ನ ಗುರಿಗೆ ಅಡ್ಡಿಯಾಗುತ್ತಿದೆ.
ಭಾರತದ ಲೆಕ್ಕಾಚಾರದ ಸಮಯ: ಆದ್ದರಿಂದ ಭಾರತದ ವಿದೇಶಾಂಗ ನೀತಿಯು ಅಮೆರಿಕದ ಕಣ್ಗಾವಲಿನಲ್ಲಿ ಇದೆ. ಬೈಡೆನ್ ಆಡಳಿತದ ಎದುರಿಸುತ್ತಿರುವ ಸಮಸ್ಯೆ ಎಂದರೆ, ವಾಷಿಂಗ್ಟನ್ ಯುರೋಪಿಯನ್ ಮಿತ್ರ ರಾಷ್ಟ್ರಗಳಿಗೆ ಹಾಗೂ ಭಾರತದ ಆಂತರಿಕ ಮಾರುಕಟ್ಟೆಗೆ ಹಾನಿಯಾದರೂ ಕೂಡ ರಷ್ಯಾದ ತೈಲವನ್ನು ಖರೀದಿಸದಂತೆ ಭಾರತವನ್ನು ಒತ್ತಾಯಿಸಬೇಕೆ? ಯುದ್ಧ ಮುಂದುವರಿದರೆ ಮತ್ತು ಪುಟಿನ್ ಹಿಂದಡಿ ಇಡುವ ಯಾವುದೇ ಲಕ್ಷಣ ತೋರಿಸದಿದ್ದರೆ, ರಷ್ಯಾದ ತೈಲವನ್ನು ಖರೀದಿಸದಂತೆ ಭಾರತದ ಮೇಲೆ ಅಮೆರಿಕದ ಒತ್ತಡ ಹೆಚ್ಚಾಗುತ್ತದೆ.
ಆಗ ಹೊಸದಿಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ. ಅದು ಅಮೆರಿಕವನ್ನು ವಿರೋಧಿಸಿದರೆ, ವೈವಿಧ್ಯಮಯ ಮತ್ತು ಅನಿರೀಕ್ಷಿತ ಪರಿಣಾಮ ಆಗಬಹುದು. ಭಾರತದ ನೆರೆಹೊರೆಯಲ್ಲಿ, ವಿಶೇಷವಾಗಿ ಪಾಕಿಸ್ತಾನದೊಂದಿಗಿನ ಪ್ರಕ್ಷುಬ್ಧ ಗಡಿಯಲ್ಲಿ ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಕಷ್ಟಕರವಾಗಿಸುವ ಸಾಮರ್ಥ್ಯ ವಾಷಿಂಗ್ಟನ್ ಗೆ ಇದೆ. ಬಾಂಗ್ಲಾದೇಶದಲ್ಲಿ ಹಸೀನಾ ಅವರ ಪದಚ್ಯುತಿಯಲ್ಲಿ ಅಮೆರಿಕದ ಕೈವಾಡವಿದೆ ಎಂಬ ಭಾರತ ಹಾಗೂ ಬಾಂಗ್ಲಾದ ಕೆಲವು ರಾಜಕಾರಣಿಗಳ ಆರೋಪಗಳನ್ನು ಪರಿಗಣಿಸಿದರೆ, ಇದು ನವದೆಹಲಿಗೆ ಎಚ್ಚರಿಕೆ ಎಂದು ನೋಡಬಹುದು.
ಈಗಾಗಲೇ ಯುದ್ಧದ ಮಧ್ಯದಲ್ಲಿರುವ ಮತ್ತು ದಣಿದಿರುವ ರಷ್ಯಾಕ್ಕೆ ಭಾರತದ ನೆರೆಹೊರೆಯಲ್ಲಿ ಅಮೆರಿಕವನ್ನು ತಟಸ್ಥಗೊಳಿಸುವ ಅಥವಾ ಅಗತ್ಯವಿದ್ದರೆ ಹೊಸ ದೆಹಲಿಯ ಸಹಾಯಕ್ಕೆ ಬರುವ ಸಾಮರ್ಥ್ಯವಿಲ್ಲ.
ಒಂದುವೇಳೆ ಭಾರತವು ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಿದರೆ ಅಥವಾ ಕಡಿಮೆ ಮಾಡಿದರೆ, ಅದರಿಂದ ಮಾಸ್ಕೋಗೆ ತೊಂದರೆ ಆಗಲಿದೆ. ಆದರೆ, ಆಗ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿರುವ ಚೀನಾ, ಪುಟಿನ್ ಅವರನ್ನು ರಕ್ಷಿಸಬಹುದು.
ವಾಸ್ತವವೆಂದರೆ, ಭಾರತವು ಅಮೆರಿಕ ಅಥವಾ ಮಾಸ್ಕೋ ಎರಡಕ್ಕೂ ಅನಿವಾರ್ಯವಲ್ಲ ಎನ್ನುವ ಸ್ಥಿತಿಯಲ್ಲಿದೆ.
ಹೊಸದಿಲ್ಲಿಯು ಅಲಿಪ್ತ ನೀತಿಗೆ ಬದ್ಧವಾಗಿ ನಿಂತರೆ ಮತ್ತು ತನ್ನ ವಿದೇಶಾಂಗ ನೀತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರತಿಪಾದಿಸಲು ಮುಂದಾದರೆ, ಮಾಸ್ಕೋ ಅಥವಾ ವಾಷಿಂಗ್ಟನ್‌ನಿಂದ ಪ್ರತೀಕಾರ ಎದುರಿಸಲು ಸಿದ್ಧವಾಗಿರ ಬೇಕಾಗುತ್ತದೆ. ಉಕ್ರೇನ್‌ಗೆ ಮೋದಿಯವರ ಇತ್ತೀಚಿನ ಸಮತೋಲಗೊಳಿಸುವ ಭೇಟಿಯು ಯಾವುದೇ ಸೂಚನೆಯಾಗಿದ್ದರೆ, ಪುಟಿನ್ ಅವರನ್ನು ಕೆರಳಿಸುವ ಮತ್ತು ಅದರಿಂದ ಆಗಬಹುದಾದ ಪರಿಣಾಮಗಳನ್ನು ತೆತ್ತಾದರೂ ನವದೆಹಲಿಯು ವಾಷಿಂಗ್ಟನ್‌ನತ್ತ ವಾಲುವ ಸಾಧ್ಯತೆಯಿದೆ.
ಮಧ್ಯಪ್ರಾಚ್ಯದಲ್ಲಿರುವ ತನ್ನ ಮಿತ್ರರಾಷ್ಟ್ರಗಳಿಂದ ಭಾರತಕ್ಕೆ ಕಚ್ಚಾ ತೈಲದ ಹರಿವನ್ನು ಅಮೆರಿಕ ಖಚಿತಪಡಿಸಬಹುದಾದರೂ, ರಾಜಕೀಯವಾಗಿ ಮಾಸ್ಕೋ ಚೀನಾವನ್ನು ಬಳಸಿಕೊಂಡು ನವದೆಹಲಿ ಮೇಲೆ ಗುಂಡು ಹಾರಿಸುವುದನ್ನು ತಡೆಯುವುದು ವಾಷಿಂಗ್ಟನ್ನಿಗೆ ಕಷ್ಟವಾಗಲಿದೆ.
ತಪ್ಪಿಸಿಕೊಳ್ಳಲಾಗದ ತೀರ್ಮಾನ ಇದು. ಉಕ್ರೇನ್ ಯುದ್ಧ ಮುಂದುವರಿದರೆ, ಭಾರತದ ಲೆಕ್ಕಾಚಾರದ ಸಮಯ, ಇಂದಲ್ಲ ನಾಳೆ ಬಂದೇ ಬರುತ್ತದೆ.