ಉಪರಾಷ್ಟ್ರಪತಿ ಚುನಾವಣೆ| ನಕ್ಸಲರಿಗೆ ಬಲ ತುಂಬಿದ ಸಲ್ವಾ ಜುದುಂ: ಸತ್ಯ ತಿರುಚಿದರೇ ಅಮಿತ್ ಶಾ? ನ್ಯಾ.ರೆಡ್ಡಿ ತೀರ್ಪು ಕಾರಣವೇ?
ನ್ಯಾಯಮೂರ್ತಿ ರೆಡ್ಡಿ ಅವರ 2011ರ ಸಲ್ವಾ ಜುದುಂ ತೀರ್ಪಿನ ವಿಷಯದಲ್ಲಿ ಅಮಿತ್ ಶಾ ಅವರು ರೆಡ್ಡಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಪ್ರಯೋಗವು ಹೇಗೆ ತಿರುಗುಬಾಣವಾಯಿತು?;
ಸಲ್ವಾ ಜುದುಂ ಚಳುವಳಿಯ ಸಮಯದಲ್ಲಿ, ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ನೇಮಕಾತಿಗೆ ಸಂಬಂಧಿಸಿದಂತೆ 2011ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿನಲ್ಲಿ ನಕ್ಸಲ್-ವಾದವನ್ನು ಬೆಂಬಲಿಸಿದ್ದಕ್ಕಾಗಿ ವಿರೋಧ ಪಕ್ಷದ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರ ವಿರುದ್ಧ ಆರೋಪ ಹೊರಿಸುವ ಮೂಲಕ ಅಮಿತ್ ಶಾ ಅವರು ಉಪರಾಷ್ಟ್ರಪತಿ ಚುನಾವಣೆ ಕಣವನ್ನು ಕೆಸರೆರಚಾಟಕ್ಕೆ ಇಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಹೇಳಿಕೆಗೆ ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿ, ಇದು ದುರದೃಷ್ಟಕರ ಹಾಗೂ ಪೂರ್ವಗ್ರಹ ಪೀಡಿತ ದೃಷ್ಟಿಕೋನ ಎಂದು ಟೀಕಿಸಿದ್ದಾರೆ.
ಆಗಿನ ಛತ್ತೀಸಗಢದ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ನಕ್ಸಲೀಯರ ವಿರುದ್ಧ ಹೋರಾಟಕ್ಕಾಗಿ ಬುಡಕಟ್ಟು ಯುವಕರಿಗೆ ಶಸ್ತ್ರಾಸ್ತ್ರಗಳನ್ನು ನೀಡುವ ಪರಿಪಾಠವನ್ನು ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಅಕ್ರಮ ಎಂದು ತಳ್ಳಿಹಾಕಿತ್ತು. ಕಾರ್ಯಕರ್ತೆ ನಂದಿನಿ ಸುಂದರ್ ಅವರು ಸಲ್ವಾ ಜುದುಂ ವಿರುದ್ಧ ಸಲ್ಲಿಸಿದ್ದ ಅರ್ಜಿಯ ನಂತರ ಸುಪ್ರೀಂ ಕೋರ್ಟ್ ಈ ತೀರ್ಪನ್ನು ನೀಡಿತ್ತು.
ದೋಷಪೂರಿತ ದಾಳಿ
ಅಮಿತ್ ಶಾ ಅವರ ಆರೋಪ ಅಸಭ್ಯ ಮತ್ತು ಅಸಹ್ಯಕರವಾಗಿದೆ, ಏಕೆಂದರೆ ಅವರು ಸಂಪೂರ್ಣವಾಗಿ ತಪ್ಪು ತಿಳುವಳಿಕೆಯ ಮೂಲಕ ರೆಡ್ಡಿಯವರನ್ನು ಟಾರ್ಗೆಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ರೆಡ್ಡಿಯವರ ತೀರ್ಪನ್ನು ಉಪರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಅವರನ್ನು ಟೀಕಿಸಲು ಒಂದು ಅಸ್ತ್ರವಾಗಿ ಬಳಸಲು ಸಾಧ್ಯವಿಲ್ಲ. ಯಾಕೆಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರಲಿಲ್ಲ. ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ ಅವರ ಮುಂದೆ ಅನಾವರಣಗೊಂಡ ಸತ್ಯಾಂಶಗಳ ಫಲಿತಾಂಶವಾಗಿತ್ತು.
ಆದರೆ, ಬಿಜೆಪಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ತತ್ವ-ಸಿದ್ಧಾಂತಗಳನ್ನು ಪಾಲಿಸುವುದಿಲ್ಲ ಮತ್ತು ಯಾವ ಹಂತಕ್ಕಾದರೂ ಇಳಿಯುತ್ತದೆ ಎಂಬುದು ನಿರೀಕ್ಷಿತ. ಶಾ ಹೇಳುವುದು ಕೇವಲ ತತ್ವಹೀನವಾಗಿಲ್ಲ, ಬದಲಾಗಿ ಅದು ಸತ್ಯಗಳನ್ನು ತಿರುಚುವ ಪ್ರಯತ್ನ.
ಸತ್ಯಾಂಶವು ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದ್ದವು. ಆಗಿನ ಬಿಜೆಪಿ ಸರ್ಕಾರವು ಪ್ರಾಯೋಜಿಸಿದ ಅಕ್ರಮ ಸಲ್ವಾ ಜುದುಂ ಜಾಗೃತ ಚಳುವಳಿಯು ಛತ್ತೀಸ್ಗಢದ ದಟ್ಟ ಅರಣ್ಯಗಳಿಂದ ಕೂಡಿದ ಬಸ್ತರ್ ಪ್ರದೇಶದಲ್ಲಿ ನಕ್ಸಲ್ ಚಳುವಳಿಗೆ ಇನ್ನಷ್ಟು ಬಲ ತುಂಬಲು ನೆರವಾಯಿತು. ಆ ಪ್ರದೇಶವು ಮಾವೋವಾದಿ ಬಂಡುಕೋರರ (ಸಾಮಾನ್ಯವಾಗಿ ನಕ್ಸಲೀಯರು ಎಂದು ಕರೆಯಲಾಗುತ್ತದೆ) ಪ್ರಸಿದ್ಧ ಕೇಂದ್ರ ಕಚೇರಿಯಾಗಿತ್ತು ಮತ್ತು ವಾಸ್ತವವಾಗಿ ಸ್ವತಂತ್ರ ವಲಯವಾಗಿತ್ತು.
ಆದಿವಾಸಿಗಳ ವಿರುದ್ಧದ ಯುದ್ಧ
ಸಲ್ವಾ ಜುದುಂ ಪ್ರಯೋಗವು ಬುಡಕಟ್ಟು ಜನಾಂಗದವರಲ್ಲಿ ಹಿಂದೆಂದೂ ಕಾಣದ ಸಹೋದರ ಹತ್ಯಾ ಯುದ್ಧಕ್ಕೆ ನಾಂದಿ ಹಾಡಿತು, ಇದರಿಂದಾಗಿ ಬಾಧಿತವಾದ ಹಳ್ಳಿಗಳ ಜನರು ಸಾಮೂಹಿಕವಾಗಿ ವಲಸೆ ಹೋದರು. ನೂರಾರು ಭದ್ರತಾ ಸಿಬ್ಬಂದಿ, ಹಾಗೂ ಅಮಾಯಕ ಬುಡಕಟ್ಟು ಜನಾಂಗದವರು, ನಕ್ಸಲ್-ಜುಡುಂ ಗುಂಡಿನ ಚಕಮಕಿಯಲ್ಲಿ ಹತರಾದರು. ಇದು ಕಾರ್ಯಕರ್ತರು ಮತ್ತು ಎಸ್ಪಿಒಗಳೆಂದು ಸೋಗು ಹಾಕಿದ್ದ ಜುದುಂ ನಾಯಕರು ಮತ್ತು ಅವರ ಬೆಂಬಲಿಗರ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಜುದುಂ ಹೋರಾಟದ ದಿನಗಳಲ್ಲಿ ಸಂಭವಿಸಿದ ಬುಡಕಟ್ಟು ಜನಾಂಗದವರ ನಡುವಿನ ಆಂತರಿಕ ಕಲಹಕ್ಕೆ ದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಗಾರನಾಗಿ ನಾನೇ ಸಾಕ್ಷಿಯಾಗಿದ್ದೇನೆ.
ಆ ಪ್ರದೇಶವು ಅಕ್ಷರಶಃ ಯುದ್ಧ ವಲಯದಂತೆಯೇ ಇತ್ತು. ಅಲ್ಲಿ ಸಾಮಾನ್ಯ ಬುಡಕಟ್ಟು ಜನಾಂಗದ ಸಾವಿರಾರು ಜನರು ತಮ್ಮ ಹಳ್ಳಿಗಳಿಂದ ಪಲಾಯನ ಮಾಡಬೇಕಾಯಿತು. ಅದರಿಂದಾಗಿ ಅವರು ತಮ್ಮದೇ ನೆಲದಲ್ಲಿ ಬಂಧಿಗಳ ರೀತಿಯಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದರು. ಅವರೆಲ್ಲ ಹೊಸ, ಭದ್ರತಾ ಪಡೆ ಸಿಬ್ಬಂದಿ ಸುಲಭವಾಗಿ ತಲುಪಬಹುದಾದ ರಸ್ತೆಗಳ ಬದಿಯಲ್ಲಿ ಸ್ಥಾಪಿಸಲಾದ ಜುದುಂ ಶಿಬಿರಗಳಲ್ಲಿ ಸಂಕಟದ ದಿನಗಳನ್ನು ದೂಡಬೇಕಾಯಿತು. ಅಂತಹ ವಸಾಹತುಗಳನ್ನು ಭದ್ರತಾ ಸಿಬ್ಬಂದಿ ಯಾವತ್ತೂ ಕಾವಲು ಕಾಯುತ್ತಿದ್ದರು.
ಹಳ್ಳಿಗಳು ನಿರ್ಜನವಾಗಿದ್ದವು, ಅಲ್ಲಿ ದಂಡು ದಂಡಾಗಿ ಸೇರಿಕೊಂಡಿದ್ದ ಕೆಲ ದನಕರುಗಳು ಮತ್ತು ಕೆಲವು ವೃದ್ಧ ಪುರುಷರು ಮತ್ತು ಮಹಿಳೆಯರನ್ನು ಮಾತ್ರ ಕಾಣಬಹುದಾಗಿತ್ತು.
ಆದಿವಾಸಿಗಳ ವಿಭಜನೆಯ ಲಾಭ
ಸಲ್ವಾ ಜುದುಂ ಹಿನ್ನಲೆಯು ವಾಸ್ತವವಾಗಿ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದ ಸಹೋದರ ಹತ್ಯೆಯ ಕಥೆಯಾಗಿತ್ತು. ನಕ್ಸಲರನ್ನು ಎದುರಿಸುವ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಬಡ ಆದಿವಾಸಿಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಅವರನ್ನು ಅಪಾಯಕ್ಕೆ ದೂಡಿದ್ದು ರಾಜ್ಯ ಸರ್ಕಾರ.
ಆದಿವಾಸಿಗಳ ಆಂತರಿಕ ವಿಭಜನೆ
ಆದಿವಾಸಿಗಳ ಸಮುದಾಯದಲ್ಲಿ ಅಷ್ಟರಲ್ಲಾಗಲೇ ಗುಪ್ತವಾದ ವಿಭಜನೆಯಿತ್ತು: ಸಾಂಪ್ರದಾಯಿಕವಾಗಿ ಪ್ರಬಲರಾದ ಆದಿವಾಸಿಗಳಿಗೆ ನಕ್ಸಲರ ಬಗ್ಗೆ ಅಸಮಾಧಾನವಿತ್ತು. ಯಾಕೆಂದರೆ ನಕ್ಸಲರು ಮುರಿಯರು ಎಂದು ಕರೆಯಲಾಗುತ್ತಿದ್ದ ಮೇಲ್ವರ್ಗದ ಆದಿವಾಸಿಗಳ ಸಾಂಪ್ರದಾಯಿಕ ಪ್ರಾಬಲ್ಯವನ್ನು ಕೊನೆಗೊಳಿಸಿದ್ದರು. ಈ ಆದಿವಾಸಿಗಳು ಬಹಳ ಬೇಗ ಜುದುಂ ಚಳವಳಿಯನ್ನು ಸೇರಲು ಮುಂದಾದರು.
ಆಗ ರಮಣ್ ಸಿಂಗ್ ಸರ್ಕಾರವು ವಿರೋಧ ಪಕ್ಷದ ಕಾಂಗ್ರೆಸ್ನಿಂದ ಅನಿರೀಕ್ಷಿತ ಬೆಂಬಲವನ್ನು ಕೂಡ ಪಡೆದಿತ್ತು. ಕಾಂಗ್ರೆಸ್ನ ಯುವ ನಾಯಕ, ಮುರಿಯಾ ಆದಿವಾಸಿಯಾದ ಮಹೇಂದ್ರ ಕಾರ್ಮ, ಜುದುಮ್ನ ಸಕ್ರಿಯ ಬೆಂಬಲಿಗರಾಗಿದ್ದರು.
ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು; ಯಾಕೆಂದರೆ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವು ಇದಕ್ಕೆ ದೊಡ್ಡ ಬೆಲೆ ತೆತ್ತಿತು. ಮೇ 2013ರಲ್ಲಿ ಝೀರಂ ಘಾಟಿಯಲ್ಲಿ ನಡೆದ ನಕ್ಸಲರ ದಾಳಿಯಲ್ಲಿ, ವಿರೋಧ ಪಕ್ಷದ ನಾಯಕ ಮಹೇಂದ್ರ ಕಾರ್ಮ, ಮಾಜಿ ಮುಖ್ಯಮಂತ್ರಿ ವಿದ್ಯಾಚರಣ್ ಶುಕ್ಲಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್ ಸೇರಿದಂತೆ ಕಾಂಗ್ರೆಸ್ನ ಉನ್ನತ ನಾಯಕರೇ ಜೀವ ಕಳೆದುಕೊಂಡರು. ನಕ್ಸಲರು ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ವಾಹನಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು.
ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದುದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಗೃಹ ಸಚಿವರಾಗಿದ್ದವರು ಪಿ. ಚಿದಂಬರಂ. ಎಸ್ಪಿಒಗಳ ನೇಮಕಾತಿಗೆ ಹಣ ನೀಡಿ, ಜುಡೂಮ್ಗೆ ಸಹಾಯ ಮಾಡಿದ್ದೇ ಈ ಕಾಂಗ್ರೆಸ್ ಸರ್ಕಾರ.
ಎಲ್ಲಾ ಸಂಗತಿಗಳನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಸಲ್ವಾ ಜುದುಂ ಚಳುವಳಿಯ ಹೆಸರಿನಲ್ಲಿ ಎಸ್ಪಿಒ ನೇಮಕಾತಿ ಮತ್ತು ಹಿಂಸಾಚಾರವನ್ನು ತಕ್ಷಣ ನಿಲ್ಲಿಸುವಂತೆ ನೀಡಿದ ಆದೇಶ ಸರಿಯಾಗಿಯೇ ಇತ್ತು.
ಈ ಜುದುಂ ಚಳುವಳಿ ಎಷ್ಟು ಅಪಾಯಕಾರಿಯಾಗಿತ್ತು ಎಂಬುದು ಆಂತರಿಕ ನಕ್ಸಲ್ ದಾಖಲೆಗಳು ಮತ್ತು ಗುಪ್ತಚರ ವರದಿಗಳಿಂದ ಸ್ಪಷ್ಟವಾಗುತ್ತದೆ. ಜುದುಂ ಸೃಷ್ಟಿಸಿದ ಸಾಮಾಜಿಕ ಅಶಾಂತಿಯಿಂದಾಗಿ ನೂರಾರು ಆದಿವಾಸಿ ಯುವಕರು ನಕ್ಸಲ್ ಸಮೂಹ ಸೇರಲು ಪ್ರೇರೇತರಾದರು ಎಂದು ವರದಿಗಳು ತಿಳಿಸುತ್ತವೆ. ಆ ಸಂದರ್ಭದಲ್ಲಿ ಹೀಗೆ ನಕ್ಸಲ್ ಚಳವಳಿಗೆ ಸೇರಿದವರ ಸಂಖ್ಯೆ 500ಕ್ಕೂ ಅಧಿಕ ಎಂದು ದಾಖಲೆಗಳು ಹೇಳುತ್ತವೆ. ಇದು ನಕ್ಸಲರಿಗೆ ಭಾರೀ ದೊಡ್ಡ ಬಲವನ್ನು ನೀಡಿತು ಮತ್ತು ನಕ್ಸಲ್-ವಿರೋಧಿ ಕಾರ್ಯಾಚರಣೆಯನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿತು.
ಮೋದಿ ಸರ್ಕಾರದ ಭಿನ್ನ ನಿಲುವು
ಮೋದಿ ಸರ್ಕಾರವು ನಂತರ ನಕ್ಸಲರ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿತು ಮತ್ತು ಜುದುಂ ಜಾಗೃತ ಹೋರಾಟದ ಬದಲಿಗೆ, ಕಾನೂನುಬದ್ಧ ಭದ್ರತಾ ವ್ಯವಸ್ಥೆಯನ್ನು ಬಳಸಿಕೊಂಡು ನಕ್ಸಲರನ್ನು ಮೂಲೆಗುಂಪು ಮಾಡಿತು. ಈ ಕ್ರಮವು ನಕ್ಸಲ್ ಚಳುವಳಿಯನ್ನು ಗಣನೀಯವಾಗಿ ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಮಾವೋವಾದಿ ಬಂಡುಕೋರರ ವಿರುದ್ಧದ ಹೋರಾಟಕ್ಕಾಗಿ ಆದಿವಾಸಿ ಯುವಕರನ್ನು ಭದ್ರತಾ ವ್ಯವಸ್ಥೆಗೆ ಸೇರಿಸಿಕೊಂಡರೂ, ಜುದುಂ ಆಂದೋಲನ ದಿನಗಳಲ್ಲಿ ಮಾಡಿದಂತೆ ಅನಿಯಂತ್ರಿತ ವಿಧಾನವನ್ನು ಅನುಸರಿಸದೆ, ಕಟ್ಟುನಿಟ್ಟಾದ ಕಾನೂನು ನಿಯಮಗಳನ್ನು ಪಾಲಿಸುವ ಮೂಲಕ ಈ ಕಾರ್ಯವನ್ನು ಅನುಷ್ಠಾನಕ್ಕೆ ತರಲಾಯಿತು.
‘ಬಸ್ತರ್ ಫೈಟರ್ಸ್’ ಎಂಬುದು ಆದಿವಾಸಿ ಯುವಕರೇ ಹೆಚ್ಚಾಗಿರುವ ಒಂದು ವಿಶೇಷ ಪಡೆ. ಇದು ನಕ್ಸಲರ ಪಾಲಿಗೆ ಜೀವನ ದುಸ್ತರವಾಗಿ ಮಾಡಿದೆ ಮತ್ತು ಅವರನ್ನು ಮೂಲೆಗುಂಪು ಮಾಡಿದೆ. ಇದೆಲ್ಲದರ ಪರಿಣಾಮವಾಗಿ ಬಸ್ತರ್ ವಲಯದಲ್ಲಿ ಬದುಕುಳಿಯುವುದೇ ಕಷ್ಟವಾಗಿದೆ.
ದ ಫೆಡರಲ್, ಬಸ್ತರ್‌ಗೆ ತೆರಳಿ ಸರಣಿ ವರದಿಗಳನ್ನು ಪ್ರಕಟಿಸಿದೆ. ಮತ್ತು ಇತ್ತೀಚೆಗೆ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳು ಸಾಧಿಸಿದ ದೊಡ್ಡ ಯಶಸ್ಸನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ.
ಆಡಳಿತದ ಒಂದು ಸಾಧನವಾಗಿ ಶಾಂತಿಪಾಲನಾ ವ್ಯವಸ್ಥೆಯನ್ನು ಸಡಿಲಿಸುವ ತಮ್ಮ ಪಕ್ಷದ ಪ್ರವೃತ್ತಿಯನ್ನು ತಡೆದಿದ್ದರೆ, ನಕ್ಸಲರ ವಿರುದ್ಧದ ಹೋರಾಟವು ಇನ್ನಷ್ಟು ಬೇಗ ಯಶಸ್ವಿಯಾಗುತ್ತಿತ್ತು ಎಂದು ಶಾ ಅವರಿಗೆ ಹೇಳಬೇಕಾಗಿದೆ.
ನಕ್ಸಲರ ವಿರುದ್ಧ ಸಾಧಿಸಲಾಗಿರುವ ಯಶಸ್ಸು ವಿಳಂಬಗೊಳ್ಳಲು ಬಿಜೆಪಿಯ ಅಸ್ವಸ್ಥ ಕಲ್ಪನೆಯ ಸಲ್ವಾ ಜುದುಂ ಯೋಜನೆಯೇ ಹೊರತು, ನ್ಯಾಯಮೂರ್ತಿ ರೆಡ್ಡಿ ಅವರು ನೀಡಿದ ಸುಪ್ರೀಕೋರ್ಟಿನ ತೀರ್ಪಲ್ಲ.
(Disclaimer: ದ ಫೆಡರಲ್ ಎಲ್ಲಾ ದೃಷ್ಟಿಕೋನಗಳಿಂದ ಲೇಖನಗಳನ್ನು ಪ್ರಕಟಿಸುತ್ತದೆ. ಈ ಲೇಖನದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ದ ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ The Federal ಇಂಗ್ಲಿಷ್ ತಾಣದಲ್ಲಿ ಪ್ರಕಟವಾಗಿದೆ.)