ರಾಷ್ಟ್ರಪತಿಗಳ ಈ ಪ್ರಸ್ತಾಪ ತೀರಾ ಕಳಪೆ

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ನಡವಳಿಕೆ ಮೇಲೆ ನಿಯಂತ್ರಣ ಹೇರುವ ನ್ಯಾಯಾಲಯದ ಪರಮಾಧಿಕಾರದ ಕುರಿತು ರಾಷ್ಟ್ರಪತಿಯವರು ಇತ್ತೀಚೆಗೆ ಮಾಡಿರುವ ಉಲ್ಲೇಖವು ಜನರ ಇಚ್ಛೆಯನ್ನು ಹತ್ತಿಕ್ಕುವ ಹಾಗೂ ಬಹುಮುಖ್ಯ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನದಂತೆ ಕಾಣುತ್ತಿದೆ.;

By :  TK Arun
Update: 2025-05-23 03:42 GMT

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ನಡವಳಿಕೆ ಮೇಲೆ ನಿಯಂತ್ರಣ ಹೇರುವ ನ್ಯಾಯಾಲಯದ ಪರಮಾಧಿಕಾರದ ಕುರಿತು ರಾಷ್ಟ್ರಪತಿಯವರು ಇತ್ತೀಚೆಗೆ ಮಾಡಿರುವ ಉಲ್ಲೇಖವು ಜನರ ಇಚ್ಛೆಯನ್ನು ಹತ್ತಿಕ್ಕುವ ಹಾಗೂ ಬಹುಮುಖ್ಯ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನದಂತೆ ಕಾಣುತ್ತಿದೆ.

“ಯುದ್ಧವನ್ನು ಯಾವತ್ತೂ ಸೇನಾಧಿಕಾರಿಗಳಿಗೆ ಬಿಡುವಷ್ಟು ಮಹತ್ವದ್ದಾಗಿದೆ” ಎಂದು ಫ್ರಾನ್ಸಿನ ಹಿರಿಯ ಮುತ್ಸದ್ಧಿ ಹಾಗೂ ಮೊದಲನೇ ಜಾಗತಿಕ ಯುದ್ಧ ಸಂಭವಿಸಿದಾಗ ಅಲ್ಲಿನ ಪ್ರಧಾನಿಯಾಗಿದ್ದ ಜಾರ್ಜ್ ಕ್ಲೆಮೆನ್ಸೊ ಅವರು ಹೇಳಿದ್ದ ಮಾತು ನೆನಪಾಗುತ್ತಿದೆ.

ಅದೇ ರೀತಿ ಸಾಂವಿಧಾನಿಕವಾಗಿ ಪ್ರದತ್ತವಾಗಿರುವ ಅಧಿಕಾರವನ್ನು ಕಾನೂನು ತಜ್ಞರಿಗೇ ಬಿಡುವುದು ಔಚಿತ್ಯಪೂರ್ಣ. ತಮಿಳು ನಾಡು ಶಾಸಕಾಂಗವು ಅಂಗೀಕರಿಸಿದ ಹತ್ತು ಮಸೂದೆಗಳಿಗೆ ಸಂಬಂಧಿಸಿದಂತೆ ಆ ರಾಜ್ಯದ ರಾಜ್ಯಪಾಲ ಆರ್.ಎನ್.ರವಿ ಅವರ ಅಸಂವಿಧಾನಿಕ ವರ್ತನೆಯನ್ನು ಅಸಿಂಧುಗೊಳಿಸುವ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟಿಗೆ ಕೇಳಿರುವ 14  ಪ್ರಶ್ನೆಗಳು ಚರ್ಚೆಗೆ ಯೋಗ್ಯವಾಗಿವೆ.

ನ್ಯಾಯಮೂರ್ತಿ ಪರ್ದಿವಾಲಾ ಮತ್ತು ಮಹಾದೇವನ್ ಅವರು ನೀಡಿರುವ ಈ ತೀರ್ಪು ರಾಜ್ಯಪಾಲರ ಪ್ರತಿಕ್ರಿಯೆಗಾಗಿ ಒಂದು ಕಾಲಮಿತಿಯನ್ನು ನಿಗದಿಪಡಿಸಿದೆ. ಈ ಕಾಲಮಿತಿಯಿಂದಾಗಿ ರಾಜ್ಯಪಾಲರು ಮತ್ತು ಭಾರತದ ರಾಷ್ಟ್ರಪತಿಯವರ ಅನುಮೋದನೆಗಾಗಿ ಕಳುಹಿಸಿರುವ ಮಸೂದೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಲಭ್ಯವಿರುವ ಅವಧಿಗೆ ಹೊರಮಿತಿ ನಿಗದಿಮಾಡಿದಂತಾಗಿದೆ.

ಇಬ್ಬರು ನ್ಯಾಯಮೂರ್ತಿಗಳು ನೀಡಿದ ಈ ತೀರ್ಪು ಕಾರ್ಯಾಂಗದ ಕಾರ್ಯಕ್ಷೇತ್ರವನ್ನು ಬಲಿಕೊಟ್ಟು ನ್ಯಾಯಾಂಗದ ಅಧಿಕಾರವನ್ನು ವಿಸ್ತರಿಸುವುದಿಲ್ಲ ಎಂಬುದನ್ನು ಮೊದಲು ಮನಗಾಣಬೇಕು. ಅನೇಕರು ಹಾಗೆಂದು ತಿಳಿದಿದ್ದರೆ ಆ ಅಭಿಪ್ರಾಯ ತಪ್ಪಾಗುತ್ತದೆ.

ಯಾವುದೇ ತೀರ್ಪು ಜನರ ಇಚ್ಛೆಯನ್ನು ಎತ್ತಿಹಿಡಿಯುವ ಪ್ರಜಾಪ್ರಭುತ್ವದ ಅನಿವಾರ್ಯತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ರಾಜ್ಯ ಸರ್ಕಾರದ ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರ ಸಂಭಾವ್ಯ ಅನಿರ್ಬಂಧಿತ ವರ್ತನೆಯ ಕುರಿತು ಸಂವಿಧಾನದ ಅಸ್ಪಷ್ಟತೆಗೆ ಇದು ಬೆಳಕು ಚೆಲ್ಲುತ್ತದೆ.

ಶಾಸಕಾಂಗದಿಂದ ಅಂಗೀಕಾರವಾದ ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸಲಾಗಿತ್ತು. ಅಂತಹ ಹನ್ನೆರಡು ಮಸೂದೆಗಳು ಅವರ ಬಳಿ ತೆಪ್ಪಗೆ ಕುಳಿತಿದ್ದವು. ತಿಂಗಳುಗಳ ಕಾಲ ಅಲ್ಲ, ವರ್ಷಗಳ ಕಾಲ. ರಾಜ್ಯಪಾಲರು ಅವುಗಳಿಗೆ ಅಂಕಿತ ಹಾಕಿ ಕಳುಹಿಸಬಹುದಾಗಿತ್ತು. ಆಕ್ಷೇಪಗಳಿದ್ದಿದ್ದರೆ ತಿಳಿಸಿ ವಾಪಸು ಕಳುಹಿಸಬಹುದಿತ್ತು ಕೂಡ. ಅದೂ ಅಲ್ಲವೆಂದಿದ್ದರೆ ರಾಷ್ಟ್ರಪತಿಯವರಿಗೆ ಒಪ್ಪಿಸುವ ಅವಕಾಶವೂ ಇತ್ತು. ಅದಾವುದನ್ನೂ ಅವರು ಮಾಡಲಿಲ್ಲ.

ಇದರಿಂದ ಬೇಸತ್ತ ರಾಜ್ಯ ಸರ್ಕಾರ ಕೊನೆಯ ಅಸ್ತ್ರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗ ಎಚ್ಚೆತ್ತುಕೊಂಡ ರಾಜ್ಯಪಾಲರು ಎರಡು ಮಸೂದೆಗಳನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಟ್ಟರು. ಉಳಿದ ಹತ್ತು ಮಸೂದೆಗಳನ್ನು ಶಾಸಕಾಂಗಕ್ಕೆ ವಾಪಸು ಕಳಿಸಿದರು. ಅಸಲಿಗೆ ಯಾಕೆ ವಾಪಸು ಕಳುಹಿಸುತ್ತಿದ್ದೇನೆ ಎಂಬುದಕ್ಕೆ ಸಣ್ಣ ಸಂದೇಶವೂ ಅದರಲ್ಲಿ ಇರಲಿಲ್ಲ. ಶಾಸಕಾಂಗವು ಸುಮ್ಮನಿರಲಿಲ್ಲ, ಅಷ್ಟೂ ಮಸೂದೆಗಳನ್ನು ಮತ್ತೆ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಹಿಂದಿರುಗಿಸಿತು. ಆಗ ರಾಜ್ಯಪಾಲ ರವಿ ಅವರು ಅವುಗಳನ್ನು ರಾಷ್ಟ್ರಪತಿಯವರಿಗೆ ಒಪ್ಪಿಸಿದರು. ಈ ಮಸೂದೆಗಳಲ್ಲಿ ಕೆಲವು ೨೦೨೦ರಲ್ಲಿಯೇ ಅಂಗೀಕಾರವಾದವು ಎಂಬುದು ಗಮನಾರ್ಹ.

ಸಂವಿಧಾನದ ಪ್ರಕಾರ ರಾಜ್ಯದ ಶಾಸಕಾಂಗವು ಒಂದು ಮಸೂದೆಯನ್ನು ಅಂಗೀಕರಿಸಿದಾಗ ಮತ್ತು ಅದನ್ನು ರಾಜ್ಯಪಾಲರ ಅನುಮತಿಗಾಗಿ ಸಲ್ಲಿಕೆ ಮಾಡಿದಾಗ ಅದಕ್ಕೆ ಅವರು ಒಪ್ಪಿಗೆ ನೀಡಬಹುದು ಅಥವಾ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ಹಿಂದಿರುಗಿಸಬಹುದು ಅಥವಾ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಬಹುದು.

ಒಂದು ವೇಳೆ ಮಸೂದೆಯನ್ನು ರಾಷ್ಟ್ರಪತಿಯವರಿಗೆ ಕಳುಹಿಸದೇ ಇದ್ದರೆ ರಾಜ್ಯಪಾಲರು ತಮ್ಮ ಅಭಿಪ್ರಾಯ ಮತ್ತು ತಿದ್ದುಪಡಿಯ ಸಲಹೆಗಳೊಂದಿಗೆ ಮರಳಿ ಶಾಸಕಾಂಗಕ್ಕೆ ಕಳುಹಿಸಬಹುದು. ಶಾಸಕಾಂಗವು ರಾಜ್ಯಪಾಲರ ಸಲಹೆಗಳಿಗೆ ತಕ್ಕಂತೆ ತಿದ್ದುಪಡಿ ಮಾಡಿ ಅಥವಾ ಮೂಲ ಸ್ವರೂಪದಲ್ಲಿಯೇ ಹಿಂದಕ್ಕೆ ಕಳುಹಿಸಬಹುದು. ಆಗ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಲೇಬೇಕಾಗುತ್ತದೆ.

ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಯವರ ಗಮನಕ್ಕೆ ತಂದಿದ್ದೇ ಹೌದಾದರೆ ಅದನ್ನು ರಾಷ್ಟ್ರಪತಿಯವರ ಸಂದೇಶದೊಂದಿಗೆ ಶಾಸಕಾಂಗಕ್ಕೆ ಮರಳಿ ಕಳುಹಿಸಬೇಕಾಗುತ್ತದೆ. ಇಷ್ಟಾದ ಬಳಿಕ ಶಾಸಕಾಂಗವು ರಾಷ್ಟ್ರಪತಿಯವರ ಸಲಹೆಯನ್ನು ಸ್ವೀಕರಿಸಿ ಅಥವಾ ನಿರ್ಲಕ್ಷಿಸಿ ಮಸೂದೆಯನ್ನು ಅಂಗೀಕರಿಸಿದರೆ ರಾಜ್ಯಪಾಲರು ಮತ್ತೆ ಅದನ್ನು ರಾಷ್ಟ್ರಪತಿಯವರ ಗಮನಕ್ಕೆ ತರಬೇಕು.

ಸಂವಿಧಾನವು ಈ ಪ್ರಕ್ರಿಯೆಗೆ ಇಂತಿಷ್ಟೇ ಸಮಯವೆಂದೇನೂ ನಿಗದಿಮಾಡಿಲ್ಲ. ಅದು ‘ಸಾಧ್ಯವಾದಷ್ಟು ತ್ವರಿತವಾಗಿ’ ಎಂದಷ್ಟೇ ತಿಳಿಸುತ್ತದೆ. ಸದ್ಯದ ನ್ಯಾಯಾಲಯದ ಆದೇಶವು ಸಮ್ಮತಿಯನ್ನು ಕಾಯ್ದಿರಿಸುವ ತಮ್ಮ ನಿರ್ಧಾರವನ್ನು ತಿಳಿಸಲು ರಾಜ್ಯಪಾಲರಿಗೆ ಒಂದು ತಿಂಗಳ ಕಾಲಮಿತಿಯನ್ನು ವಿಧಿಸಿದೆ. ಶಾಸಕಾಂಗಕ್ಕೆ ಸಂದೇಶವನ್ನು ಕಳುಹಿಸಿ ಮಸೂದೆಯನ್ನು ಹಿಂದಿರುಗಿಸಲು ಅಥವಾ ರಾಷ್ಟ್ರಪತಿಯವರ ಗಮನಕ್ಕೆ ತರಲು ಮೂರು ತಿಂಗಳ ಕಾಲಾವಕಾಶವನ್ನು ನೀಡುತ್ತದೆ.

ಒಂದು ನಿರ್ದಿಷ್ಟ ಸಂದೇಶದೊಂದಿಗೆ ರಾಜ್ಯಪಾಲರು ಮಸೂದೆಯನ್ನು ಹಿಂದಕ್ಕೆ ಕಳುಹಿಸಿದರೆ ಶಾಸಕಾಂಗವು ಆ ಸಲಹೆಯನ್ನು ಪರಿಗಣಿಸಿ ಅಥವಾ ಕಡೆಗಣಿಸಿ ಮತ್ತೆ ಅದನ್ನು ರಾಜ್ಯಪಾಲರ ಅಂಗಳಕ್ಕೆ ರವಾನಿಸಬಹುದು. ಇಂತಹ ಸಂದರ್ಭ ಎದುರಾದರೆ ರಾಜ್ಯಪಾಲರು ಒಂದು ತಿಂಗಳ ಒಳಗಾಗಿ ತಮ್ಮ ಅನುಮತಿಯನ್ನು ನೀಡಬೇಕು ಮತ್ತು ಅದನ್ನು ತಿರಸ್ಕರಿಸುವಂತಿಲ್ಲ ಅಥವಾ ವಿಟೊ ಚಲಾಯಿಸುವಂತಿಲ್ಲ ಎಂದು ಕೋರ್ಟ್ ಹೇಳುತ್ತದೆ.

ಒಂದೊಮ್ಮೆ ಮಸೂದೆ ರಾಷ್ಟ್ರಪತಿಯವರ ಪರಿಶೀಲನೆಗೆ ಒಳಪಟ್ಟರೆ ಅದನ್ನು ಇತ್ಯರ್ಥಪಡಿಸಲು ಮೂರು ತಿಂಗಳ ಕಾಲಾವಕಾಶವಿರುತ್ತದೆ. ಆ ಅವಧಿಯೊಳಗೆ ಅವರು ರಾಜ್ಯಪಾಲರ ಮೂಲಕ ಶಾಸಕಾಂಗಕ್ಕೆ ಮಸೂದೆಯನ್ನು ಹಿಂದಿರುಗಿಸಬೇಕು ಎಂದು ಕೋರ್ಟ್ ಹೇಳುತ್ತದೆ.

ನ್ಯಾಯಾಲಯವು ನಿಗದಿಮಾಡಿರುವ ಕಾಲಮಿತಿಗೆ ತಕ್ಕಂತೆ ಶಾಸಕಾಂಗವು ಮಸೂದೆಯನ್ನು ಅಂಗೀಕರಿಸಿದ ಆರು ತಿಂಗಳ ಒಳಗಾಗಿ ಅದು ರಾಷ್ಟ್ರಪತಿಯವರ ಸಮ್ಮತಿ ಅಥವಾ ಆಕ್ಷೇಪಣೆಯೊಂದಿಗೆ ಶಾಸನಸಭೆಗೆ ಮರಳಿ ಬರಬೇಕಾಗುತ್ತದೆ. ಶಾಸನಸಭೆಯು ಅಂತಹ ಆಕ್ಷೇಪಣೆಯನ್ನು ಸೇರ್ಪಡೆಗೊಳಿಸಬಹುದು ಅಥವಾ ನಿರಾಕರಿಸಲೂಬಹುದು.

ಇಷ್ಟೆಲ್ಲ ಪ್ರಕ್ರಿಯೆಯ ಬಳಿಕ ಶಾಸಕಾಂಗವು ಮತ್ತೊಮ್ಮೆ ಆ ಮಸೂದೆಯನ್ನು ಅಂಗೀಕರಿಸಿ ರಾಷ್ಟ್ರಪತಿಗೆ ಸಲ್ಲಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಈಗಿನ ಕೋರ್ಟ್ ತೀರ್ಪಿನ ಪ್ರಕಾರ ರಾಷ್ಟ್ರಪತಿಯವರ ಆಕ್ಷೇಪದ ಸಿಂಧುತ್ವವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ನ್ಯಾಯಲಯದ ಮೆಟ್ಟಿಲು ಹತ್ತಬಹುದು.

ಎಷ್ಟು ಧೈರ್ಯ?

ರಾಷ್ಟ್ರಪತಿ ಮತ್ತು ರಾಜ್ಯಪಾಲ ಇವೆರಡೂ ಸಾಂವಿಧಾನಿಕ ಹುದ್ದೆಗಳು. ಅವುಗಳ ನಡವಳಿಕೆಯ ಮೇಲೆ ನಿಯಮಗಳನ್ನು ಹೇರಲು ಸುಪ್ರೀಂ ಕೋರ್ಟಿಗೆ ಎಷ್ಟು ಧೈರ್ಯ? ಒಂದು ಮಸೂದೆಯು ವಿಧಾನಸಭೆಯಿಂದ ರಾಜ್ಯಪಾಲರು/ರಾಷ್ಟ್ರಪತಿಯವರ ಕಚೇರಿಗೆ ತಲುಪಿ ಕಾನೂನಾಗುವ ಪ್ರಕ್ರಿಯೆಗೆ ಕಾಲಮಿತಿ ನಿಗದಿಪಡಿಸುವುದು ಅಗತ್ಯವೆಂದು ಸಂವಿಧಾನವೇ ಪರಿಗಣಿಸದೇ ಇದ್ದಾಗ ರಾಜ್ಯದ ಮುಖ್ಯಸ್ಥರ ಮೇಲೆ ನ್ಯಾಯಾಲಯವು ಅಂತಹ ಕಾಲದ ನಿರ್ಬಂಧವನ್ನು ವಿಧಿಸುವುದು ಎಷ್ಟು ಮಟ್ಟಿಗೆ ಸರಿ?

ಸಾಂವಿಧಾನಿಕ ತಜ್ಞತೆಯ ಉನ್ನತ ಜಗತ್ತಿನಲ್ಲಿ ಇಂತಹ ಪ್ರಶ್ನೆಗಳು ಮಹತ್ವಪೂರ್ಣ ಹಾಗೂ ಸಂಕೀರ್ಣವಾಗಿ ಕಾಣಿಸಬಹುದು. ಆದರೆ ಸಮುದ್ರದ ಅಲೆಗಳಂತೆ ಕ್ಷಣ ಕ್ಷಣಕ್ಕೂ ಬದಲಾಗುವ ರಾಜಕೀಯ ಕ್ಷೇತ್ರದಲ್ಲಿ ಪ್ರಶ್ನೆಯು ನೇರಾನೇರವಾಗಿದೆ:

ಈ ತೀರ್ಪು ಜನರ ಇಚ್ಛೆಯನ್ನು ಮತ್ತು ಅಂತಿಮ ಸಾರ್ವಭೌಮತೆಯನ್ನು ಎತ್ತಿಹಿಡಿದಿದೆಯೇ ಅಥವಾ ಅಡ್ಡಿಪಡಿಸಿದೆಯೇ?

‘ಸಾಧ್ಯವಾದಷ್ಟು ತ್ವರಿತವಾಗಿ’ ಎಂದು ಸಂವಿಧಾನವು ಹೇಳಿದ್ದರೂ ರಾಜ್ಯಪಾಲರು ಆ ಅಸ್ಪಷ್ಟ ಪದಗುಚ್ಛದಡಿ ನೀಡಲಾದ ಅವಕಾಶವನ್ನೇ ದುರುಪಯೋಗಪಡಿಸಿಕೊಂಡು ತಮಗೆ ಇಷ್ಟವಿಲ್ಲದ ಮಸೂದೆಗಳನ್ನು ವರ್ಷಗಟ್ಟಳೆ ತಮ್ಮ ಬಳಿಯೇ ಇಟ್ಟುಕೊಳ್ಳದೇ ಹೋಗಿದ್ದರೆ ಕಾರ್ಯಾಂಗಕ್ಕೆ ನ್ಯಾಯಾಲಯ ನಿರ್ದೇಶನ ನೀಡುವ ಅಗತ್ಯವಿರಲಿಲ್ಲ.

ಆದರೆ ರಾಜ್ಯಪಾಲರ ವ್ಯಕ್ತಿತ್ವದಲ್ಲಿಯೇ ಪಕ್ಷಪಾತದ ರಾಜಕೀಯವು ಕೆಟ್ಟಾ ಕೊಳಕ ಅಹಂಕಾರದೊಂದಿಗೆ ಮೈದಾಳಿದ್ದರೆ ಮತ್ತು ಶಾಸಕಾಂಗದಿಂದ ವ್ಯಕ್ತವಾದ ಜನರ ಇಚ್ಛೆಯನ್ನೇ ಬುಡಮೇಲು ಮಾಡಿದರೂ ತಮಗೆ ಶಿಕ್ಷೆಯಾಗುವುದಿಲ್ಲ ಎಂದು ಭಾವಿಸಿಬಿಟ್ಟರೆ ಮತ್ತು ನ್ಯಾಯಾಲಯವು ಮೌನವಾಗಿ ಉಳಿದುಬಿಟ್ಟರೆ ಅಥವಾ ಕಾರ್ಯಾಂಗವು ಪ್ರದರ್ಶಿಸುವ ಅತಿಯಾದ ಅಧಿಕಾರಕ್ಕೆ ತಲೆಬಾಗಿಬಿಟ್ಟರೆ ತಪ್ಪಾಗುತ್ತದೆ.

ರಾಷ್ಟ್ರಪತಿಯವರು ಎತ್ತಿದ ಹದಿನಾಲ್ಕು ಪ್ರಶ್ನೆಗಳಲ್ಲಿ ಅತ್ಯಂತ ಗಂಭೀರವಾದ ಪ್ರಶ್ನೆಯೊಂದಿದೆ. ಅದೆಂದರೆ; ಇಂತಹ ಸಾಂವಿಧಾನಿಕ ಸಂಕೀರ್ಣತೆಗಳ ಜೊತೆ ಹೋರಾಟ ನಡೆಸಬೇಕಾದ ಸಂದರ್ಭದಲ್ಲಿ ಈ ವಿಷಯವನ್ನು ಕನಿಷ್ಠ ಐದು ಸದಸ್ಯರ ಪೀಠಕ್ಕೆ ಯಾಕೆ ಒಪ್ಪಿಸಬಾರದಿತ್ತು ಎಂಬುದು.

ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಪೀಠವು ತನ್ನ ಅಭಿಪ್ರಾಯಕ್ಕೆ ಬರಲು ದೊಡ್ಡ ಪೀಠಗಳ ಅಭಿಪ್ರಾಯಗಳನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಪರ್ದಿವಾಲಾ ಮತ್ತು ಮಹಾದೇವನ್ ಅವರು ನೀಡಿರುವ ತೀರ್ಪು ಅತ್ಯಂತ ಕರಾರುವಕ್ಕಾಗಿದೆ. ಆದರೆ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ (Principia Mathematica)ದ ಲೇಖಕರು ಎರಡು ಮತ್ತು ಎರಡು ಸೇರಿದರೆ ನಾಲ್ಕು ಎಂದು ಹೇಳಿದರೆ ಸರಿ ಸರಿ ಎಂದು ತಲೆಯಾಡಿಸುವ ಜನರು ಅದನ್ನೇ ಎರಡನೇ ತರಗತಿಯ ಗುಡ್ಡು ಹೇಳಿದರೆ ತಪ್ಪು ಎಂದು ವಾದಿಸುತ್ತಾರೆ.

142ನೇ ವಿಧಿ ಏನು ಹೇಳುತ್ತದೆ?

ರಾಷ್ಟ್ರಪತಿಯವರ ಈ ಪ್ರಸ್ತಾಪವನ್ನು ಸರ್ಕಾರವೇನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

ಪ್ರಶ್ನೆ ಸಂಖ್ಯೆ 13ರಲ್ಲಿ ಇರುವ ಪದಪ್ರಯೋಗವನ್ನೇ ಗಮನಿಸಿ: “ಭಾರತದ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟಿನ ಅಧಿಕಾರಗಳು ಕಾರ್ಯವಿಧಾನದ ಕಾನೂನಿನ ವಿಚಾರಗಳಿಗೆ ಸೀಮಿತವಾಗಿದೆಯೇ ಅಥವಾ “ಭಾರತದ ಸಂವಿಧಾನದ ೧೪೨ನೇ ವಿಧಿಯು ಸಂವಿಧಾನದ ಅಥವಾ ಜಾಲ್ತಿಯಲ್ಲಿರುವ ಕಾನೂನಿನ ವ್ಯಾಪ್ತಿಯಲ್ಲಿರುವ ಮೂಲಭೂತ ಅಥವಾ ಕಾರ್ಯವಿಧಾನದ ನಿಬಂಧನೆಗಳಿಗೆ ವಿರುದ್ಧ ಅಥವಾ ಅಸಂಗತವಾದ ನಿರ್ದೇಶನಗಳನ್ನು ನೀಡಲು/ಆದೇಶಗಳನ್ನು ಹೊರಡಿಸಲು ವಿಸ್ತೃತವಾಗಿದೆಯೇ?”

ಈ ವಾಕ್ಯವನ್ನು ಬಹುಷಃ ಅತಿ ಕೆಟ್ಟ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಬರೆದಿರಬೇಕು ಅಥವಾ ಏಳನೇ ಕ್ಲಾಸಿನ ಗುಡ್ಡುವೇ ಬರೆದಿರಬೇಕು ಅನಿಸುತ್ತದೆ. ವ್ಯಾಕರಣದ ದೃಷ್ಟಿಯಿಂದ ಇದು ಅಪೂರ್ಣವಾಗಿದೆ. ಅಷ್ಟೇ ಅಲ್ಲ, ವಿಷಯ ಮಂಡನೆಯಲ್ಲೂ ಹಾಸ್ಯಾಸ್ಪದವಾಗಿದೆ: 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನವನ್ನೇ ಉಲ್ಲಂಘಿಸುವ ನಿರ್ದೇಶನಗಳನ್ನು ನೀಡಲು ಸಾಧ್ಯವೇ ಅಥವಾ ಬರಿದೇ ಕಾರ್ಯವಿಧಾನದ ಕಾನೂನನ್ನು ಸ್ಪಷ್ಟಪಡಿಸಲು ಸಾಧ್ಯವಿದೆಯೇ?

142ನೇ ವಿಧಿಯು ಹೀಗೆ ಹೇಳುತ್ತದೆ

ಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾವಣೆ ಮಾಡುವ ಸಂದರ್ಭದಲ್ಲಿ ತನ್ನ ಮುಂದೆ ಬಾಕಿಯಿರುವ ಯಾವುದೇ ಪ್ರಕರಣ ಅಥವಾ ವಿಚಾರದಲ್ಲಿ ಸಂಪೂರ್ಣ ನ್ಯಾಯವನ್ನು ಒದಗಿಸಲು ಅಗತ್ಯವಾದ ತೀರ್ಪು ಅಥವಾ ಆದೇಶವನ್ನು ನೀಡಬಹುದು ಹಾಗೂ ಹಾಗೆ ಹೊರಡಿಸಲಾದ ಯಾವುದೇ ತೀರ್ಪು ಅಥವಾ ಆದೇಶವು, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಅಡಿಯಲ್ಲಿ ನಿಗದಿಮಾಡಬಹುದಾದ ರೀತಿಯಲ್ಲಿ ಮತ್ತು ಆ ಕುರಿತ ಅಂತಹ ಅವಕಾಶವನ್ನು ಕಲ್ಪಿಸುವ ತನಕ ರಾಷ್ಟ್ರಪತಿಯವರು ಆದೇಶದ ಮೂಲಕ ನಿಗದಿಪಡಿಸುವಂತೆ ದೇಶದಾದ್ಯಂತ ಜಾರಿಗೆ ತರಬಹುದಾಗಿದೆ.

ಅದೆಲ್ಲ ಒತ್ತಟ್ಟಿಗಿರಲಿ, ಕನಿಷ್ಠ ಈ ಸರ್ಕಾರಕ್ಕಾದರೂ 142ನೇ ವಿಧಿ ಎನ್ನುವುದು ಕೇವಲ ಕಾರ್ಯವಿಧಾನದ ಕಾನೂನಿಗಿಂತ ಹೆಚ್ಚಿನದನ್ನು ಒಳಗೊಂಡಿದೆ ಎಂಬುದರ ಅರಿವಿರಬೇಕು. ಇಷ್ಟೆಲ್ಲ ಆಗಿಯೂ, ರಾಮ ಜನ್ಮಭೂಮಿ ತೀರ್ಪನ್ನು 142ನೇ ವಿಧಿಯ ಅಡಿಯಲ್ಲಿ ಪ್ರದತ್ತವಾದ ನ್ಯಾಯಾಲಯದ ಅಧಿಕಾರಗಳನ್ನು ಬಳಸಿಕೊಂಡೇ ಹೊರಡಿಸಲಾಗಿತ್ತು ಎಂಬುದು ನೆನಪಿರಲಿ.

(ಮೂಲ ಲೇಖನ The Federal ನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Similar News