ಮಾಜಿ ಐಎಎಸ್‌ ಅಧಿಕಾರಿ, ನಟ-ರಾಜಕಾರಣಿ ಕೆ. ಶಿವರಾಮು ನಿಧನ

ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೆ. ಶಿವರಾಮು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Update: 2024-02-29 13:08 GMT
Photo: K Shivaramu/Facebook

ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಹಿರಿಯ ನಟ, ಮಾಜಿ ಐಎಎಸ್‌ ಅಧಿಕಾರಿ ಕೆ ಶಿವರಾಮು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ ಶಿವರಾಮ್‌ ಅವರು ನಂತರದ ದಿನಗಳಲ್ಲಿ ಸಿನಿಲೋಕದಲ್ಲೂ ಮಿಂಚಿದ್ದರು.

ʼಬಾ ನಲ್ಲೆ ಮಧು ಚಂದ್ರಕೆʼ, ವಸಂತ ಕಾವ್ಯ, ಸಾಂಗ್ಲಿಯಾನ 3, ಪ್ರತಿಭಟನೆ ಮೊದಲಾದ ಹಲವಾರು ಸಿನೆಮಾಗಳಲ್ಲಿ ನಟಿಸಿದ್ದ ಶಿವರಾಮ್‌ ನಟರಾಗಿಯೂ ಸೈ ಎನಿಸಿಕೊಂಡಿದ್ದರು.

ಆರಂಭಿಕ ಜೀವನ ಮತ್ತು ಶಿಕ್ಷಣ

6 ಏಪ್ರಿಲ್ 1953 ರಂದು ರಾಮನಗರ ಜಿಲ್ಲೆಯ ಉರಗಲ್ಲಿಯಲ್ಲಿ ಜನಿಸಿದ ಶಿವರಾಮು ಅವರು ತಮ್ಮ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲೆ ಓದಿದರು. ತಮ್ಮ ಪ್ರೌಢಶಾಲಾ ಶಿಕ್ಷಣದ ನಂತರ ವಿವಿ ಪುರಂ ಈವ್ನಿಂಗ್ ಕಾಲೇಜ್ ಆಫ್ ಆರ್ಟ್ಸ್ & ಕಾಮರ್ಸ್‌ ನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ಬಳಿಕ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂಎ (ಇತಿಹಾಸ) ಪದವಿ ಪಡೆದರು.1985 ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರು ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದರು.

ಸೇವೆಯಲ್ಲಿದ್ದಾಗಲೂ ತಮ್ಮ ಅಧ್ಯಯನವನ್ನು ಮುಂದುವರೆಸಿದ ಅವರು ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾದರು.

ಸಿನಿ ಜೀವನ

ಸರ್ಕಾರಿ ಅಧಿಕಾರಿಯಾಗಿ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಶಿವರಾಮು ಅವರು ಚಿತ್ರರಂಗಕ್ಕೂ ಕಾಲಿಟ್ಟು, ಅಲ್ಲೂ ಸೈ ಎನಿಸಿಕೊಂಡರು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಕಾದಂಬರಿ ಆಧಾರಿತ ʼಬಾ ನಲ್ಲೆ ಮಧುಚಂದ್ರಕೆʼ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಶಿವರಾಮು, ನಂತರದ ದಿನಗಳಲ್ಲಿ ವಸಂತ ಕಾವ್ಯ, ಸಾಂಗ್ಲಿಯಾನ 3, ಪ್ರತಿಭಟನೆ, ಓ ಪ್ರೇಮ ದೇವತೆ, ಖಳ ನಾಯಕ, ಯಾರಿಗೆ ಬೇಡ ದುಡ್ಡು, ಗೇಮ್‌, ನಾಗಾ ಮೊದಲಾದ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ರಾಜಕೀಯ ಜೀವನ

ಐಎಎಸ್ ಅಧಿಕಾರಿಯಾಗಿ ನಿವೃತ್ತ ಪಡೆದ ಬಳಿಕ ರಾಜಕೀಯದಲ್ಲಿ ಸಕ್ರಿಯರಾದ ಕೆ. ಶಿವರಾಮ್, 2013ರಲ್ಲಿ ಜೆಡಿಎಸ್‌ಗೆ ಸೇರ್ಪಡೆ ಆದರು. ಆ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಅವರು 2016ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಛಲವಾದಿ ಮಹಾಸಭಾದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ದಲಿತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತರಬೇತಿ ಮತ್ತು ಮಾರ್ಗದರ್ಶನ ಸಂಸ್ಥೆಗಳನ್ನು ಕಟ್ಟಿ ಸಮುದಾಯದ ಏಳಿಗೆಗೆ ಶ್ರಮಿಸಿದ್ದರು.

Tags:    

Similar News