Loksabha Election: ಒಕ್ಕಲಿಗ ಅಸ್ತ್ರ ಬಳಿಸಿ ಡಿಕೆಶಿ-ಎಚ್‌ಡಿಕೆ ಫೈಟ್

ಚುನಾವಣೆ ಸಮಯದಲ್ಲಿ ಪ್ರಭಾವಿ ಒಕ್ಕಲಿಗ ನಾಯಕರ ನಡುವೆ ವಾಕ್ಸಮರ ಪ್ರಾರಂಭವಾಗಿದೆ. ಒಕ್ಕಲಿಗ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.;

Update: 2024-04-10 13:14 GMT
ಎಚ್‌ ಡಿ ಕುಮಾರಸ್ವಾಮಿ Vs ಡಿ.ಕೆ ಶಿವಕುಮಾರ್‌

ಲೋಕಸಭೆ ಚುನಾವಣೆ ಸಮಯದಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಒಕ್ಕಲಿಗ ನಾಯಕರ ನಡುವೆ ವಾಕ್ಸಮರ ಪ್ರಾರಂಭವಾಗಿದೆ. ರಾಜ್ಯದ ಪ್ರಮುಖ ಒಕ್ಕಲಿಗ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಅವರು ಪರಸ್ಪರ ಬೈದಾಡಿಕೊಂಡಿದ್ದಾರೆ.

ಒಕ್ಕಲಿಗರು, ಒಕ್ಕಲಿಗ ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳುಹಿಸುತ್ತಾರೆ. ಅವರು ಯಾರ ಪರವೂ ಅಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸ್ವಾಮೀಜಿಗಳು ಬುದ್ಧಿವಂತರು ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ. ಜೆಡಿಎಸ್‌ನವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ನಮ್ಮ ಜನ ಸಹ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಮೈತ್ರಿ (ಕಾಂಗ್ರೆಸ್ – ಜೆಡಿಎಸ್) ಸರ್ಕಾರ ಪತನವಾದ ನಂತರ ನಮ್ಮ ಸಮಾಜದ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಿದ್ದೀರಿ ಎಂದು ಸ್ವಾಮೀಜಿಗಳು ಬಿಜೆಪಿಯರನ್ನು ಪ್ರಶ್ನಿಸಬಹುದಿತ್ತು. ಇದನ್ನು ಕೇಳುವ ಶಕ್ತಿ ಸ್ವಾಮೀಜಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನೇ ಇಂದು ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಎಂಟು ಜನ ಒಕ್ಕಲಿಗರಿಗೆ ಲೋಕಸಭೆ ಟಿಕೆಟ್ ನೀಡಿದ್ದೇವೆ. ನಾನು ಉಪಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ. ನಮ್ಮ ಸಮಾಜದವರು ದಡ್ಡರಲ್ಲ. ಎಚ್.ಡಿ ಕುಮಾರಸ್ವಾಮಿ ಅವರು ಮಠದ ಸ್ವಾಮೀಜಿಗಳನ್ನು ಬಿಟ್ಟಿಲ್ಲ. ಎರಡು ಮಠ ಮಾಡಿದ್ದಾರೆ. ಈಗ  ನಿತ್ಯ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ. ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿಲ್ಲ. ಹೀಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಕುಮಾರಸ್ವಾಮಿ ಅವರು ಯಾರನ್ನ ಟೀಕೆ ಮಾಡಿಲ್ಲ, ಕಾಂಗ್ರೆಸ್‌ನ ಪ್ರಣಾಳಿಕೆಯನ್ನಷ್ಟೇ ಅಲ್ಲ, ನಮ್ಮ ಪ್ರತಿ ವಿಚಾರವನ್ನು ಟೀಕೆ ಮಾಡುತ್ತಾರೆ. ಮೇಕೆದಾಟು ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ್ದರು. ಈಗ ಮೇಕೆದಾಟು ಯೋಜನೆ ಜಾರಿಗೆ ಶಪಥ ಮಾಡುವುದಾಗಿ ಹೇಳಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು, ಕುಮಾರಸ್ವಾಮಿ ಬಗ್ಗೆ ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರ ಬಗ್ಗೆ ಎಚ್.ಡಿ ದೇವೇಗೌಡ ಅವರು ಮಾತನಾಡಿದ್ದನ್ನು ನಾವು ನೋಡಿದ್ದೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಸಿ.ಪಿ.ಯೋಗಿಶ್ವರ್,ಅಶ್ವಥ್ ನಾರಾಯಣ, ಅಶೋಕ್ ಸೇರಿಕೊಂಡು ಸರ್ಕಾರ ಬೀಳಿಸಿದರು. ಆದರೆ, ಈಗ ಕುಮಾರಸ್ವಾಮಿ ಅವರು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಈಗ ಕಾಂಗ್ರೆಸ್  ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ದೂರಿದರು.

ಕುಮಾರಸ್ವಾಮಿ ಸಿದ್ಧಂತವನ್ನೇ ಮಾರಿಕೊಂಡಿದ್ದಾರೆ

ಎಚ್.ಡಿ ಕುಮಾರಸ್ವಾಮಿ ಅವರು ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು, ಎಲ್ಲರೂ ಅವರವರ ಬದುಕು ನೋಡಿಕೊಳ್ಳುತ್ತಾರೆ. ನಾವು ಈಗಾಗಲೇ ಅಧಿಕಾರದಲ್ಲಿದ್ದೇವೆ. ಮುಂದಿನ ಐದು ವರ್ಷವೂ ನಾವೇ ಇರುತ್ತೇವೆ. ಮುಂದೆ ನಾವು ಗೆಲ್ಲುವುದಿಲ್ಲ ಎಂದು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‌ ಸೋಲಿಸಲು ಮೈತ್ರಿ ಮಾಡಿಕೊಂಡಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ಧಾಂತವನ್ನೇ ಕುಮಾರಸ್ವಾಮಿ ಅವರು ಮಾರಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ವಿಚಾರ ಬಿಡಿ. ದೇವೇಗೌಡ ಅವರಿಗೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ ಎಂದರು. ಮೈತ್ರಿ ಸರ್ಕಾರ ಬೀಳಿಸಿದವರು ಕಾಂಗ್ರೆಸಿಗರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನು ತಬ್ಬಾಡುತ್ತಿದ್ದಾರೆ. ಜನಕ್ಕೆ ಇದಕ್ಕಿಂತ ಸಾಕ್ಷಿ ಬೇರೇನು ಬೇಕು, ಕುಮಾರಸ್ವಾಮಿ ಅವರು ಸರ್ಕಾರ ಬಿದ್ದಾಗ ಏನೆಲ್ಲಾ ಮಾತನಾಡಿದ್ದರು ಎಂದು ಪ್ರಶ್ನಿಸಿದರು.


ನಾನು ಪಾದಯಾತ್ರೆ ಮಾಡಿದ್ದು ನಿಜವಲ್ಲವೇ?

ಮೇಕೆದಾಟು ಪಾದಯಾತ್ರೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತೂರಾಡಿದ್ದರು ಎನ್ನುವ ಎಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್, ಜನರಿಗೆ ಎಲ್ಲವೂ ಗೊತ್ತಿದೆ. ನಾನು ಪಾದಯಾತ್ರೆ ಮಾಡಿದ್ದು ನಿಜವಲ್ಲವೇ, ನಾನು ಕುಡಿದು ತೂರಾಡಿಲ್ಲ. ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ನಡೆದಿದ್ದರೆ ಅವರಿಗೆ ತಿಳಿಯುತ್ತಿತ್ತು. ಈ ನಾಡು, ಕಾವೇರಿ ಜಲಾನಯನ ಪ್ರದೇಶದ ಜನರಿಗಾಗಿ ಹೋರಾಟ ಮಾಡಿದ್ದೇನೆ. ಈ ವಿಚಾರದಲ್ಲಿ ಅವರಿಗೆ ಸವಾಲು ಹಾಕುವುದಿಲ್ಲ. ನನ್ನ ಸವಾಲಿನಿಂದ ಅವರ ಆರೋಗ್ಯ ಏರುಪೇರಾದರೆ, ನಾನು ಜವಾಬ್ದಾರಿ ತೆಗುಕೊಳ್ಳುವುದಿಲ್ಲ. ಅವರು ಧೈರ್ಯವಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೆ ಶುಭ ಕೋರುತ್ತೇನೆ ಎಂದರು.

ಜೆಡಿಎಸ್ 1 ಸ್ಥಾನವನ್ನೂ ಗೆಲ್ಲುವುದಿಲ್ಲ

ಎಚ್.ಡಿ ದೇವೇಗೌಡ ಅವರು ನಾಲ್ಕು ಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ. ಡಾ. ಮಂಜುನಾಥ್ ಅವರು ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುವ ತೀರ್ಮಾನ ನನ್ನದಲ್ಲ (ಬಿಜೆಪಿ – ಜೆಡಿಎಸ್) ಅವರಿಬ್ಬರದೇ ಎಂದಿದ್ದಾರೆ. ಜೆಡಿಎಸ್ ನಾಲ್ಕು ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಿದ್ದ ತಜ್ಞರು ಮತ್ತು ಮಾಧ್ಯಮದವರು ಈಗ ಏಕೆ ಮಾತನಾಡುತ್ತಿಲ್ಲ. ಮಾಧ್ಯಮದವರು ಸಹ ವಸ್ತುನಿಷ್ಠವಾಗಿ ವರದಿ ಮಾಡುತ್ತಿಲ್ಲ. ಇದನ್ನು ಖಡಾಖಂಡಿತವಾಗಿ ಹೇಳುತ್ತಿದ್ದೇನೆ ಹಾಗೂ ಬಹಳ ತಾಳ್ಮೆಯಿಂದ ಎಲ್ಲವನ್ನು ನೋಡುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಕೋವಿಡ್ ಸಮಯದಲ್ಲಿ ಊಟ ಹಾಕಿಸಲಿಲ್ಲ

ಕುಮಾರಸ್ವಾಮಿ ಅವರ ತೋಟದಮನೆಯ ಔತಣಕೂಟದ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಕುಮಾರಸ್ವಾಮಿ ಅವರು ಈಗಲಾದರೂ ಮುಂದೆ ಬಂದು ಜನರಿಗೆ ಊಟ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಸಹಾಯ ಮಾಡಲಿಲ್ಲ. ಈಗಲಾದರೂ ಮಾಡುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಚುನಾವಣಾ ಆಯೋಗ ನೋಡಿಕೊಳ್ಳಲಿದೆ. ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.

ಸ್ವಾಮೀಜಿಗಳನ್ನು ದುರುಪಯೋಗಪಡಿಸಿಕೊಂಡಿಲ್ಲ: ಎಚ್.ಡಿ ಕುಮಾರಸ್ವಾಮಿ

ನನ್ನ ಅಧಿಕಾರ ಹೋಗುವಾಗ ನಮ್ಮ ಮಠದ ಪರಮಪೂಜ್ಯ (ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ) ಸ್ವಾಮೀಜಿಗಳನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸ್ವಾಮೀಜಿಗಳ ಬಳಿ ಬಂದು ಕಾಂಗ್ರೆಸ್‌ನವರು ಯಾವ ರೀತಿ ನಡೆದಿಕೊಂಡರು, ಪ್ರತಿಕೆಗಳಿಗೆ ಏನು ಹೇಳಿಕೆ ಕೊಟ್ಟಿದ್ದಾರೆ ಎಂದು ನೋಡಿದ್ದೇವೆ. ಕಾಂಗ್ರೆಸ್ ಪ್ರತಿದಿನ ಜಾತಿ ರಾಜಕೀಯ ಮಾಡುತ್ತಿದೆ ಅವರಿಗೆ ಜಾತ್ಯಾತೀತತೆಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಮಾಜದ ಜನರು ದಡ್ಡರಲ್ಲ, ಕಾಂಗ್ರೆಸ್‌ನವರ ಹೇಳಿಕೆಗಳನ್ನು ನಮ್ಮ ಸಮಾಜದ ಜನ ಗಮನಿಸುತ್ತಿದ್ದಾರೆ. ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಸ್ವಾಮೀಜಿಗಳು ಧಾರ್ಮಿಕವಾಗಿ ನಮ್ಮ ಗುರುಗಳು ಅವರನ್ನು ರಾಜಕೀಯವಾಗಿ ಯಾಕೆ ದುರ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.


ಸಿದ್ದರಾಮಯ್ಯ ಅವರು ಮೂರೇ ತಿಂಗಳಲ್ಲಿ (ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರ) ಸರ್ಕಾರ ಇರುವುದಿಲ್ಲ ಎಂದು ಹೇಳಿದ್ದರು. ಸಿದ್ಧವನದಲ್ಲಿ ಸಿದ್ದ ಔಷಧ ತಯಾರಿಸಿದ್ದರು. ಸಿದ್ದರಾಮಯ್ಯ ಅವರನ್ನು ಕೇಳಿದರೆ (ಕಾಂಗ್ರೆಸ್ –ಜೆಡಿಎಸ್ ಮೈತ್ರಿ ) ಮೈತ್ರಿ ಸರ್ಕಾರ ಪತನದ ಬಗ್ಗೆ ತಿಳಿಯಲಿದೆ ಇದಕ್ಕೆ ಸ್ವಾಮೀಜಿಗಳನ್ನು ಏಕೆ ಎಳೆದು ತರುತ್ತೀರಿ ಮಾರ್ಮಿಕವಾಗಿ ಪ್ರಶ್ನಿಸಿದರು.

ನನ್ನನ್ನು ನೋಡಿ, ಡಿ.ಕೆ ಶಿವಕುಮಾರ್ ಅವರು ಪಾಪ ಎನ್ನುವುದು ಬೇಡ. ನನ್ನನ್ನು ನೋಡಿ ಪಾಪ ಎನ್ನುವುದಕ್ಕೆ ಕೋಟ್ಯಾಂತರ ಜನ ಇದ್ದಾರೆ. ಇವರಿಂದ ನಾನು ಪಾಪ ಎಂದು ಅನಿಸಿಕೊಳ್ಳುವುದು ಬೇಡ. ಬಾಯ್ತಪ್ಪಿ ಜೆಡಿಎಸ್ ನಾಲ್ಕು ಸ್ಥಾನ ಗೆಲ್ಲುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿರಬೇಕು. ಇಲ್ಲ ಅವರ (ಕಾಂಗ್ರೆಸ್) ಪರಿಸ್ಥಿತಿ ಹೇಳಿಕೊಂಡಿರಬೇಕು ಎಂದು ವ್ಯಂಗ್ಯವಾಡಿದರು.   

Tags:    

Similar News