ಕೈ ತಪ್ಪಿದ ಟಿಕೆಟ್:‌ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ ರವೀಂದ್ರನಾಥ್‌ ಬೆಂಬಲಿಗ

ಎಸ್.ಎ.ರವೀಂದ್ರನಾಥ್ ಅವರಿಗೆ ಟಿಕೆಟ್ ನಿರಾಕರಿಸಿ, ಬಿಜೆಪಿ ಸಂಸದ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶಗೊಂಡ ಬೆಂಬಲಿಗ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Update: 2024-03-14 14:00 GMT

ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿಎಂ ಸಿದ್ದೇಶ್ವರ್ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದ್ದು, ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಗಾಯತ್ರಿ ಅವರಿಗೆ ಟಿಕೆಟ್‌ ನೀಡಿದ್ದನ್ನು ವಿರೋಧಿಸಿ ಓರ್ವ ಯುವಕ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.

ಒಂದೆಡೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ, ಇನ್ನೊಂದಡೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಬೆಂಬಲಿಗರು ಹೈ ಡ್ರಾಮ ನಡೆಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಸ್.ಎ.ರವೀಂದ್ರನಾಥ್ ಅವರಿಗೆ ಟಿಕೆಟ್ ನಿರಾಕರಿಸಿ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶಗೊಂಡ ರವೀಂದ್ರನಾಥ್ ಬೆಂಬಲಿಗನೋರ್ವ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಎಸ್‌.ಎ.ರವೀಂದ್ರನಾಥ್ ನಿವಾಸದ ಬಳಿ ಜಮಾವಣೆಗೊಂಡಿರುವ ಬೆಂಬಲಿಗರು, ʼಸಿದ್ದೇಶ್ವರ್ ಹಠಾವೋ, ದಾವಣಗೆರೆ ಬಚಾವೋʼ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದೇಶ್ವರ್ ಅವರ ಪತ್ನಿಗೆ ದಾವಣಗೆರೆ ಟಿಕೆಟ್ ನೀಡಿದ್ದಕ್ಕೆ ರೇಣುಕಾಚಾರ್ಯ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

“ಸರ್ವೆಯಲ್ಲಿಯೂ ಸಂಸದ ಸಿದ್ದೇಶ್ವರ ಕುಟುಂಬದ ಹೆಸರಿಲ್ಲ. ಸರ್ವೆ ಸಂಪೂರ್ಣ ಸಂಸದ ಸಿದ್ದೇಶ್ವರ್ ವಿರುದ್ಧವೇ ಬಂದಿದೆ. ಆದರೆ, ಅವರು ಗೂಂಡಾಗಳನ್ನ ಇಟ್ಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಹಾಲಿ ಸಂಸದರ ಕುಟುಂಬಕ್ಕೆ ನೀಡಿದ ಟಿಕೆಟ್ ಹಿಂಪಡೆಯಬೇಕು” ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

Tags:    

Similar News