'ಬೆಂಗಳೂರು ಪೊಲೀಸರು ನಿಷ್ಪ್ರಯೋಜಕ': ಯುಪಿ ಸಂಸದನ ಟೀಕೆಗೆ ಡಿಕೆಶಿ ತಿರುಗೇಟು
ಬೆಂಗಳೂರಿಗೆ ಭೇಟಿ ನೀಡಿದ್ದ ಸಂಸದ ರಾಜೀವ್ ರಾಯ್, ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಅವರ ವಾಹನ ಸಿಲುಕಿಕೊಂಡಿತ್ತು.
ಎಸ್‌ಪಿ ಸಂಸದ ರಾಜೀವ್ ರಾಯ್
ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ರಾಜೀವ್ ರಾಯ್ ಅವರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಪೊಲೀಸರ ಕಾರ್ಯವೈಖರಿ ಬಗ್ಗೆ ಕಿಡಿಕಾರಿರುವ ಪ್ರಸಂಗವೊಂದು ನಡೆದಿದೆ. ಬೆಂಗಳೂರಿನ ಟ್ರಾಫಿಕ್ ಪೊಲೀಸರನ್ನು "ಅತ್ಯಂತ ಬೇಜವಾಬ್ದಾರಿ ಮತ್ತು ನಿಷ್ಪ್ರಯೋಜಕರು" ಎಂದು ಜರಿದಿದ್ದು ದೊಡ್ಡ ಮಟ್ಟದ ಸುದ್ದಿಯಾಗಿದೆ. ಆದರೆ, ಈ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದರಿಗೆ ದೆಹಲಿಯ ಟ್ರಾಫಿಕ್ ದರ್ಶನ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ.
ಭಾನುವಾರ (ನವೆಂಬರ್ 30) ಬೆಂಗಳೂರಿಗೆ ಭೇಟಿ ನೀಡಿದ್ದ ಸಂಸದ ರಾಜೀವ್ ರಾಯ್, ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಅವರ ವಾಹನ ಸಿಲುಕಿಕೊಂಡಿತು. ಒಂದೇ ಸ್ಥಳದಲ್ಲಿ ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯುವಂತಾಗಿದ್ದರಿಂದ ಅವರು ತೀವ್ರ ಹತಾಶರಾಗಿದ್ದರು. ವಿಮಾನ ತಪ್ಪಿಸಿಕೊಳ್ಳುವ ಆತಂಕ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಸಂಸದರ ಗಂಭೀರ ಆರೋಪಗಳೇನು?
'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ರಾಜೀವ್ ರಾಯ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್ ಆಯುಕ್ತರು ಮತ್ತು ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. . "ನಿಷ್ಪ್ರಯೋಜಕ ಪೊಲೀಸರು": "ಕ್ಷಮಿಸಿ, ನಿಮ್ಮದು ಅತ್ಯಂತ ಕಳಪೆ ಟ್ರಾಫಿಕ್ ನಿರ್ವಹಣೆ. ನಿಮ್ಮ ಟ್ರಾಫಿಕ್ ಪೊಲೀಸರು ಅತ್ಯಂತ ಬೇಜವಾಬ್ದಾರಿ ಮತ್ತು ನಿಷ್ಪ್ರಯೋಜಕರು," ಎಂದು ನೇರವಾಗಿಯೇ ಟೀಕಿಸಿದ್ದರು. ಟ್ರಾಫಿಕ್ ಸಮಸ್ಯೆಯ ಬಗ್ಗೆ ದೂರು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿದರೆ ಯಾರೂ ಕರೆ ಸ್ವೀಕರಿಸಲಿಲ್ಲ ಎಂದು ಆರೋಪಿಸಿರುವ ಅವರು, ತಾವು ಮಾಡಿದ ಕರೆಗಳ ಸ್ಕ್ರೀನ್‌ಶಾಟ್‌ಗಳನ್ನೂ ಹಂಚಿಕೊಂಡಿದ್ದಾರೆ.
"ಒಂದು ಗಂಟೆಯಿಂದ ಒಂದೇ ಕಡೆ ಸಿಲುಕಿದ್ದೇವೆ. ಆದರೆ ಸುತ್ತಮುತ್ತ ಒಬ್ಬನೇ ಒಬ್ಬ ಪೊಲೀಸ್ ಪೇದೆ ಕೂಡ ಕಾಣಿಸುತ್ತಿಲ್ಲ. ಇಂತಹ ಅಸಮರ್ಥ ಅಧಿಕಾರಿಗಳಿಂದಾಗಿ ಸುಂದರ ಬೆಂಗಳೂರು ನಗರದ ಹೆಸರು ಮತ್ತು ವರ್ಚಸ್ಸು ಹಾಳಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಕುಖ್ಯಾತಿ ಪಡೆದಿರುವುದರಲ್ಲಿ ಆಶ್ಚರ್ಯವಿಲ್ಲ," ಎಂದು ಹರಿಹಾಯ್ದಿದ್ದಾರೆ.
ಡಿಕೆಶಿ ಖಡಕ್ ತಿರುಗೇಟು
ಸಂಸದರ ಈ ಟೀಕೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿಯೇ ಉತ್ತರಿಸಿದ್ದಾರೆ. "ಸರಿ, ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾಗುತ್ತೇನೆ. ಅಲ್ಲಿನ (ದೆಹಲಿಯ) ಟ್ರಾಫಿಕ್ ಪರಿಸ್ಥಿತಿ ಹೇಗಿದೆ ಎಂದು ಅವರಿಗೆ ತೋರಿಸುತ್ತೇನೆ. ನಾನೂ ಅವರಿಗೊಂದು ಪೋಸ್ಟ್ ಟ್ಯಾಗ್ ಮಾಡುತ್ತೇನೆ," ಎಂದು ಹೇಳುವ ಮೂಲಕ, ಟ್ರಾಫಿಕ್ ಸಮಸ್ಯೆ ಕೇವಲ ಬೆಂಗಳೂರಿಗೆ ಸೀಮಿತವಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿ
ಸಂಸದರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಗಿರೀಶ್ ಎಂಬುವವರು, "ಕರ್ನಾಟಕ ಇಷ್ಟವಿಲ್ಲದಿದ್ದರೆ ನೀವು ಎಲ್ಲಿಗಾದರೂ ಹೋಗಬಹುದು, ಬೇಜವಾಬ್ದಾರಿಯಿಂದ ಮಾತನಾಡಬೇಡಿ," ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಸಿಟ್ಟಾದ ರಾಜೀವ್ ರಾಯ್, "ಬಾಯಿ ಮುಚ್ಚು (Shut up).. ಈ ಭಾಷೆಯಲ್ಲಿ ಮಾತನಾಡಬೇಡಿ," ಎಂದು ತಿರುಗೇಟು ನೀಡಿದ್ದಾರೆ.