ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್: ಸಿದ್ದರಾಮಯ್ಯಗೆ ಕಾದಿದೆ ನಾಟಿ ಕೋಳಿ, ಕಾಲು ಸೂಪ್ ಔತಣ!

ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದಿದ್ದ ಉಪಹಾರ ಕೂಟದಲ್ಲಿ ಡಿಕೆಶಿಯವರಿಗೆ ಇಡ್ಲಿ, ಸಾಂಬಾರ್ ಮತ್ತು ಉಪ್ಪಿಟ್ಟು ಬಡಿಸಲಾಗಿತ್ತು.

Update: 2025-12-01 11:35 GMT
Click the Play button to listen to article

ರಾಜ್ಯ ರಾಜಕೀಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಹುದ್ದೆಯ 'ಗುದ್ದಾಟ'ಕ್ಕೆ ಇದೀಗ ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್ ಮೂಲಕ ಫುಲ್‌ಸ್ಟಾಪ್ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಭಾನುವಾರವಷ್ಟೇ "ನಾನು ಮತ್ತು ಸಿಎಂ ಅಣ್ಣ-ತಮ್ಮಂದಿರಂತೆ ಇದ್ದೇವೆ," ಎಂದು ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಗಳವಾರ (ಡಿಸೆಂಬರ್ 2) ತಮ್ಮ ಸದಾಶಿವನಗರದ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭರ್ಜರಿ ಆತಿಥ್ಯ ನೀಡಲು ಸಜ್ಜಾಗಿದ್ದಾರೆ.

ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದಿದ್ದ ಉಪಹಾರ ಕೂಟದಲ್ಲಿ ಡಿಕೆಶಿಯವರಿಗೆ ಇಡ್ಲಿ, ಸಾಂಬಾರ್ ಮತ್ತು ಉಪ್ಪಿಟ್ಟು ಬಡಿಸಲಾಗಿತ್ತು. ಆದರೆ, ನಾಳೆಯ ಉಪಹಾರ ಕೂಟದಲ್ಲಿ ಇದರ ತದ್ವಿರುದ್ಧವಾದ ಮೆನು ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಾಳೆ ಮಂಗಳವಾರವಾಗಿರುವುದರಿಂದ ಮಾಂಸಹಾರಿ ಪ್ರಿಯರಾದ ಸಿದ್ದರಾಮಯ್ಯ ಅವರಿಗಾಗಿ ಡಿ.ಕೆ. ಶಿವಕುಮಾರ್ ಮನೆಯಲ್ಲಿ 'ನಾಟಿ ಸ್ಟೈಲ್' ಬಾಡೂಟದ ಘಮಘಮ ಇರಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಡಿಕೆಶಿ ಅಡುಗೆ ಮನೆಯಲ್ಲಿ ನಾಳೆ ಬೆಳಗ್ಗೆಯೇ ಬಿಸಿ ಬಿಸಿ ರಾಗಿ ಮುದ್ದೆ, ಖಾರವಾದ ನಾಟಿ ಕೋಳಿ ಸಾರು, ಕಾಲು ಸೂಪ್ (ಮಟನ್), ಭರ್ಜರಿ ಮಿಲಿಟರಿ ಹೋಟೆಲ್ ಶೈಲಿಯ ಖಾದ್ಯಗಳು ತಯಾರಾಗಲಿವೆ ಎಂದು ತಿಳಿದುಬಂದಿದೆ. ತಾವೇ ಖುದ್ದು ನಿಂತು ಸಿಎಂಗೆ ಉಪಚರಿಸಲು ಡಿಕೆಶಿ ಉತ್ಸುಕರಾಗಿದ್ದಾರೆ.

ತಣ್ಣಗಾದ ಸಿಎಂ ಕುರ್ಚಿ ಫೈಟ್?

ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು. ಇದು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಕೊಂಚ ತಳಮಳವನ್ನೂ ಸೃಷ್ಟಿಸಿತ್ತು. ಆದರೆ, ಹೈಕಮಾಂಡ್ ಮಧ್ಯಪ್ರವೇಶದ ನಂತರ ಉಭಯ ನಾಯಕರು ಕದನ ವಿರಾಮ ಘೋಷಿಸಿದಂತಿದೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿಕೆ ಶಿವಕುಮಾರ್, "ನನ್ನ ಮತ್ತು ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಯಾರ ಬೆನ್ನಿಗೂ ಚೂರಿ ಹಾಕುವವನಲ್ಲ, ನೇರ ರಾಜಕಾರಣ ಮಾಡುವವನು. ನಾವಿಬ್ಬರೂ 2028ರ ಚುನಾವಣೆ ಗುರಿಯಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದ್ದರು.

ನಾಳೆಯ ಈ 'ನಾಟಿ ಕೋಳಿ ಔತಣಕೂಟ' ಕೇವಲ ಊಟಕ್ಕಷ್ಟೇ ಸೀಮಿತವಾಗಿರದೆ, ಇಬ್ಬರು ನಾಯಕರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ವಿರೋಧ ಪಕ್ಷಗಳಿಗೆ 'ಆಲ್ ಈಸ್ ವೆಲ್' ಎಂಬ ಸಂದೇಶ ರವಾನಿಸುವ ತಂತ್ರಗಾರಿಕೆಯ ವೇದಿಕೆಯಾಗಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. 

Tags:    

Similar News