ಆರ್ಥಿಕ ದಿವಾಳಿ ಸುಳಿಯೊಳಗೆ ಸಿಲುಕಲಿವೆ ಜಿಬಿಎ ಐದು ಪಾಲಿಕೆಗಳು; ಬಿಜೆಪಿಯಿಂದ ಸಿಎಂಗೆ ಪತ್ರ

ಐದು ನಗರ ಪಾಲಿಕೆಗಳಲ್ಲಿ ಅತ್ಯಾವಶ್ಯಕತೆ ಇರುವ 6,326 ಅಧಿಕಾರಿ, ನೌಕರರರೂ ಹಾಗೂ 17,000 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಪ್ರತೀ ವರ್ಷವೊಂದಕ್ಕೆ ಸರಿಸುಮಾರು 6,300 ಕೋಟಿ ರೂ. ಗಳಷ್ಟು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ.

Update: 2025-12-01 11:03 GMT

ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿ

Click the Play button to listen to article

ರಾಜ್ಯ ಸರ್ಕಾರ ಬಿಬಿಎಂಪಿಯನ್ನು ವಿಭಜಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ಐದು ನಗರ ಪಾಲಿಕೆಗಳನ್ನು ಸೃಷ್ಟಿಸಿದ್ದು, ಅವುಗಳು ಕೇವಲ ಒಂದೇ ವರ್ಷದಲ್ಲಿ ದಿವಾಳಿ ಸ್ಥಿತಿ ತಲುಪಲಿವೆ ಎಂದು ಬಿಜೆಪಿ ನಾಯಕ ಎನ್‌.ಆರ್‌. ರಮೇಶ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ 17 ಇಲಾಖೆಗಳಲ್ಲಿ ಒಟ್ಟು 2,818 ಮಂದಿ ಅಧಿಕಾರಿ ಹಾಗೂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಲ್ಲಿ ಅತ್ಯಾವಶ್ಯಕತೆ ಇರುವ 6,326 ಅಧಿಕಾರಿ, ನೌಕರರು ಕಾರ್ಯನಿರ್ವಹಿಸಬೇಕಿದೆ. 17,000 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಪ್ರತೀ ವರ್ಷವೊಂದಕ್ಕೆ ಸರಿಸುಮಾರು 6,300 ಕೋಟಿ ರೂ. ಗಳಷ್ಟು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ಆದರೆ ಆದಾಯವೇ ವೆಚ್ಚಕ್ಕಿಂತ ಕಡಿಮೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಸದ್ಯ ಸಂಗ್ರಹವಾಗುತ್ತಿರುವ ಆಸ್ತಿ ತೆರಿಗೆ 4,500 ಕೋಟಿ ರೂ, ನಕ್ಷೆ ಮಂಜೂರಾತಿ ಶುಲ್ಕ 1,200 ಕೋಟಿ ರೂ, ರಸ್ತೆ ಅಗೆತದ ಶುಲ್ಕ 150 ಕೋಟಿ ರೂ. ಗಳಷ್ಟು ಇದ್ದು ಒಟ್ಟಾರೆಯಾಗಿ 5,850 ಕೋಟಿ ರೂ. ಆದಾಯವಿದೆ. ಆದರೆ ಪಾಲಿಕೆಗಳಿಗೆ ಅವಶ್ಯಕತೆ ಇರುವ 6,326 ಮಂದಿ ಅಧಿಕಾರಿ ಮತ್ತು ನೌಕರರ ವೇತನ, ಪಿಂಚಿಣಿಗಳಿಗೆಂದು 3,492 ಕೋಟಿ ರೂ, ಉದ್ಯಾನವನಗಳ ನಿರ್ವಹಣೆ ಕಾರ್ಯಗಳು, ವಿದ್ಯುತ್ ದೀಪಗಳ ನಿರ್ವಹಣೆ ಕಾರ್ಯಗಳು, ರಸ್ತೆಗಳ ನಿರ್ವಹಣೆ ಕಾರ್ಯಗಳು, ಐದು ಪಾಲಿಕೆಗಳ ವ್ಯಾಪ್ತಿಯ ಪಾಲಿಕೆ ಕಟ್ಟಡಗಳ ನಿರ್ವಹಣೆ ಕಾರ್ಯಗಳು ಮತ್ತು ಗ್ರೇಟರ್‌ ಬೆಂಗಳೂರು ಕೇಂದ್ರ ಕಚೇರಿ ಹಾಗೂ ಅಧಿಕಾರಿಗಳ ಕಚೇರಿ ನಿರ್ವಹಣೆಗೆ ಪ್ರತೀ ವರ್ಷಕ್ಕೆ ಕನಿಷ್ಠ 1,500 ರಿಂದ 1,700 ಕೋಟಿ ರೂ. ಗಳಷ್ಟು ಮೊತ್ತ ವೆಚ್ಚವಾಗಲಿದೆ.

ತ್ಯಾಜ್ಯ ವಿಲೇವಾರಿಗೆ 1,100 ಕೋಟಿ ರೂ. ವೆಚ್ಚ

ಬೆಂಗಳೂರು ಮಹಾನಗರದ ತ್ಯಾಜ್ಯ ವಿಲೇವಾರಿ ಕಾರ್ಯಗಳ ನಿರ್ವಹಿಸಲು ಗುತ್ತಿಗೆದಾರರಿಗೆ ಪ್ರತೀ ವರ್ಷವೊಂದಕ್ಕೆ 600 ಕೋಟಿ ರೂ, ಎಂಟು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ 40 ಕೋಟಿ ರೂ, ಭೂಭರ್ತಿ ಕೇಂದ್ರದ ಶುಲ್ಕ 60 ಕೋಟಿ ರೂ, ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತ ಮುತ್ತಲ ಪ್ರದೇಶಗಳಲ್ಲಿ ಉಂಟಾಗುವ ಪರಿಸರ ಹಾನಿಯನ್ನು ಸರಿಪಡಿಸುವ ಅಭಿವೃದ್ಧಿ ಕಾರ್ಯಗಳಿಗೆಂದು ಪ್ರತೀ ವರ್ಷವೊಂದಕ್ಕೆ ಕನಿಷ್ಠ 400 ಕೋಟಿ ರೂ. ಗಳು ಸೇರಿದಂತೆ ಒಟ್ಟು1,100 ಕೋಟಿ ರೂ. ಗಳನ್ನು ವರ್ಷವೊಂದಕ್ಕೆ ಕಡ್ಡಾಯವಾಗಿ ವೆಚ್ಚ ಮಾಡಬೇಕು.

ಅಭಿವೃದ್ಧಿಗಿಲ್ಲ ಹಣ

ಐದು ಪಾಲಿಕೆಗಳ ಎಲ್ಲಾ ಆದಾಯ ಮೂಲಗಳಿಂದ ಪ್ರತೀ ವರ್ಷವೊಂದಕ್ಕೆ ಲಭಿಸುವ ಆದಾಯದ ಮೊತ್ತ 5,850 ಕೋಟಿ ರೂ. ಗಳಾದರೆ, ಪ್ರತೀ ವರ್ಷವೊಂದಕ್ಕೆ ವೆಚ್ಚವೇ ಕನಿಷ್ಠ 6,300 ಕೋಟಿ ರೂ. ಗಳಷ್ಟಾಗುತ್ತದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ 1,980 ಕಿ. ಮೀ. ಉದ್ದದ ರಸ್ತೆಗಳು, ಸುಮಾರು 13,400 ಕಿ. ಮೀಟರ್‌ ಉದ್ದದ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ದಿ ಕಾರ್ಯಗಳು, 842 ಕಿ. ಮೀ. ಉದ್ದದ ಬೃಹತ್ ನೀರುಗಾಲುವೆಯ ಅಭಿವೃದ್ಧಿ ಕಾರ್ಯಗಳು ಮತ್ತು ಹೂಳೆತ್ತುವ ಕಾರ್ಯಗಳು, 183 ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಗಳು, 26 ಹೆರಿಗೆ ಆಸ್ಪತ್ರೆಗಳು, ಆರು ರೆಫರಲ್ ಆಸ್ಪತ್ರೆಗಳು ಮತ್ತು 144 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಕಾರ್ಯಗಳು, ನಗರ ಅರಣ್ಯೀಕರಣ ಕಾರ್ಯಗಳು, ಮರಗಳ ತೆರವುಗೊಳಿಸುವಿಕೆ ಮತ್ತು ರೆಂಬೆಗಳನ್ನು ಕತ್ತರಿಸುವ ಕಾರ್ಯಗಳು, ಪಶುಸಂಗೋಪನೆ ಇಲಾಖೆಯ ನಿರ್ವಹಣೆ ಮತ್ತು ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಕಾರ್ಯಗಳಿಗೆಂದು ಪ್ರತೀ ವರ್ಷವೊಂದಕ್ಕೆ ಕನಿಷ್ಠ 6,000 ಕೋಟಿ ರೂ. ಗಳಷ್ಟು ಅನಿವಾರ್ಯ ಅವಶ್ಯಕತೆ ಇರುತ್ತದೆ. ಇದಕ್ಕೆಲ್ಲವೂ ಸರ್ಕಾರ ಅನುದಾನ ನೀಡಬೇಕು ಎಂದು ತಿಳಿಸಿದ್ದಾರೆ.

ಐದು ಪಾಲಿಕೆಗಳು ದಿವಾಳಿ ಸ್ಥಿತಿಗೆ

ಎಲ್ಲಾ ವಿಧದ ಆದಾಯದ ಮೂಲಗಳಿಂದ ಸಂಗ್ರಹವಾಗುವ ಮೊತ್ತದ ಶೇ.60 ರಷ್ಟು ಹಣವನ್ನು ಕೇವಲ ಅಧಿಕಾರಿ ಹಾಗೂ ನೌಕರರ ವೇತನ ಪಿಂಚಿಣಿಗಳಿಗೆಂದೇ ವಿನಿಯೋಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವವಾಗುವುದರಿಂದ, ಅಭಿವೃದ್ಧಿ ಕಾರ್ಯಗಳು ಹಾಗೂ 17 ಇಲಾಖೆಗಳಿಗೆ ಸಂಬಂಧಿಸಿದ ನಿರ್ವಹಣೆ ಕಾರ್ಯಗಳಿಗೆ ಅಗತ್ಯವಿರುವ ಅನುದಾನಗಳನ್ನು ಕ್ರೋಢೀಕರಿಸಲು ಸಾಧ್ಯವಾಗದೇ  “ಕೇವಲ ಒಂದೇ ವರ್ಷದಲ್ಲಿ ಬೆಂಗಳೂರಿನ ಐದು ಪಾಲಿಕೆಗಳು ಆರ್ಥಿಕ ಅವನತಿಗೆ ತಲುಪಿ ದಿವಾಳಿಯಾಗುತ್ತದೆ” ಎಂಬ ಅಂಕಿ - ಅಂಶಗಳ ಬಗ್ಗೆ ಸರ್ಕಾರ ನಿಜಕ್ಕೂ ಗಮನ ಹರಿಸಿಲ್ಲ ಎಂದಿದ್ದಾರೆ.

Tags:    

Similar News