ಪಬ್ಲಿಕ್ ಪರೀಕ್ಷೆ ಗೊಂದಲ | ಎಜಿ ಅಭಿಪ್ರಾಯ ಪಡೆದು ಮುಂದಿನ ಕ್ರಮ: ರಿತೇಶ್ ಕುಮಾರ್ ಸಿಂಗ್
ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಕಾರಣಕ್ಕೆ ಮತ್ತೆ ಶಾಲೆಗಳನ್ನು ತೆರೆಯಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇವಿಯಟ್ ಸಲ್ಲಿಸಿಲ್ಲ ಎಂದು ರಿತೇಶ್ ಕುಮಾರ್ ಸಿಂಗ್ ಹೇಳಿದ್ದಾರೆ/;
ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9 ನೇ ತರಗತಿ ಮೌಲ್ಯಾಂಕನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದರು.
5, 8 ಮತ್ತು 9 ನೇ ತರಗತಿಗಳಿಗೆ ವಿವಿಧ ಶಾಲಾ ಸಂಘಟನೆಗಳು ಮತ್ತು ಪೋಷಕರ ವಿರೋಧದ ಹೊರತಾಗಿಯೂ ರಾಜ್ಯ ಸರ್ಕಾರ ಬೋರ್ಡ್ ಪರೀಕ್ಷೆ ನಡೆಸಿತ್ತು. ಪರೀಕ್ಷೆಯ ಫಲಿತಾಂಶವನ್ನು ಏ.8 ರಂದು ಪ್ರಕಟಿಸಿತ್ತು, ಆದರೆ, ಸುಪ್ರೀಂಕೋರ್ಟ್ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.
ಆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಿತೇಶ್ ಕುಮಾರ್ ಸಿಂಗ್, ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಕಾರಣಕ್ಕೆ ಮತ್ತೆ ಶಾಲೆಗಳನ್ನು ತೆರೆಯಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇವಿಯಟ್ ಸಲ್ಲಿಸಿಲ್ಲ. ಆದ್ದರಿಂದ ನಾವು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್(ಎಜಿ) ಅವರಿಂದ ಸಲಹೆ ಪಡೆಯುತ್ತೇವೆ ಎಂದು ತಿಳಿಸಿದರು.
ಈ ನಡುವೆ, ಸೋಮವಾರ (ಏ.8) ಬೆಳಿಗ್ಗೆ 11 ಸುಮಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸಾಕಷ್ಟು ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿಲ್ಲ. ಮತ್ತೆ ಕೆಲವು ಶಾಲೆಗಳಲ್ಲಿ ಇಲಾಖೆಯ ಸೂಚನೆಯಂತೆ ಬೆಳಿಗ್ಗೆ 9ಕ್ಕೇ ಫಲಿತಾಂಶ ಪ್ರಕಟಿಸಲಾಗಿದೆ. ಹಾಗಾಗಿ ಹಲವು ಮಕ್ಕಳು ಮತ್ತು ಪೋಷಕರ ಗೊಂದಲ ಮತ್ತು ಆತಂಕ ಮುಂದುವರಿದಿದೆ. ಅಷ್ಟಕ್ಕೂ ಈ ಪರೀಕ್ಷೆಯ ವಿಷಯದಲ್ಲಿ ಇಲಾಖೆ ಯಾಕೆ ಇಷ್ಟೊಂದು ಅವ್ಯವಸ್ಥೆ, ಆತಂಕಗಳ ನಡುವೆಯೂ ಹಠಮಾರಿತನ ಸಾಧಿಸುತ್ತಿದೆ ಎಂಬುದು ಪೋಷಕರ ಪಾಲಿಗೆ ಬಗೆಹರಿಯದ ಒಗಟಿನಂತಾಗಿದೆ.