ಬೆಂಗಳೂರು ಸಂಚಾರ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದ ಮಹಿಳೆ ಸೇರಿ ಇಬ್ಬರ ಬಂಧನ

ಈ ಘಟನೆಯ ಕುರಿತು ಬೆಂಗಳೂರು ನಗರ ಪೊಲೀಸರು ಸ್ಪಷ್ಟ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ: "ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ ಎಂದಿದ್ದಾರೆ.;

Update: 2025-08-16 04:36 GMT

ಸಂಚಾರ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ರಸ್ತೆಯಲ್ಲೇ ಗಲಾಟೆ ಮಾಡಿದ್ದ ಮಹಿಳೆ ಮತ್ತು ಆಕೆಯ ಸಹ ಸವಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಗುರುವಾರ (ಆಗಸ್ಟ್ 14ರಂದ) ಬೆಂಗಳೂರಿನ ಯಲಹಂಕ ಸಮೀಪದ ಶೇಷಾದ್ರಿಪುರಂ ಕಾಲೇಜು ಬಳಿ ಈ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಸಹ ಸವಾರರು ತಮ್ಮ ದ್ವಿಚಕ್ರ ವಾಹನವನ್ನು 'ನೋ ಪಾರ್ಕಿಂಗ್' ವಲಯದಲ್ಲಿ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಸಂಚಾರ ಪೊಲೀಸರು ಬೈಕ್ಗೆ ವೀಲ್ ಕ್ಲಾಂಪ್ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಮಹಿಳೆ, ಕರ್ತವ್ಯ ನಿರತ ಸಂಚಾರ ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಳು. ಪುರುಷ ಪೊಲೀಸರಲ್ಲದೆ, ಅಲ್ಲಿದ್ದ ಸಂಚಾರ ಮಹಿಳಾ ಪೊಲೀಸರ ಮೇಲೂ ಅವಾಚ್ಯವಾಗಿ ನಿಂದನೆ ಮಾಡಿದ್ದಳು. ಈ ವೇಳೆ ಪೊಲೀಸರು ಮಹಿಳೆ ಜತೆಗಿದ್ದ ಬೈಕ್ ಸವಾರನಿಗೆ ಈ ರೀತಿ ವರ್ತಿಸಿದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಮತ್ತು ಬಂಧನ:

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿನ ಆಕ್ರೋಶ ಮತ್ತು ಸಾರ್ವಜನಿಕ ಒತ್ತಡಕ್ಕೆ ಮಣಿದ ಬೆಂಗಳೂರು ಸಂಚಾರ ಪೊಲೀಸರು ಕೊನೆಗೂ ಮಹಿಳೆ ಮತ್ತು ಆಕೆಯ ಸಹ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಯಲಹಂಕ ನಿವಾಸಿಗಳಾದ ಮಹಮದ್ ಸರ್ಬಸ್ (ಸಹ ಸವಾರ) ಮತ್ತು 37 ವರ್ಷದ ಮಹಿಳೆ ಹಿರಲ್ವ್ಯಾಸ್ ಎಂದು ಗುರುತಿಸಲಾಗಿದೆ.

ಪೊಲೀಸರ ಎಚ್ಚರಿಕೆ:

ಈ ಘಟನೆಯ ಕುರಿತು ಬೆಂಗಳೂರು ನಗರ ಪೊಲೀಸರು ಸ್ಪಷ್ಟ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ: "ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್​ಗೆ ಕಾರಣವಾಗಬಹುದು. ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ!... ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ," ಎಂದು ಅಪರಾಧ ಎಸಗುವವರಿಗೆ ಪೊಲೀಸರು ಖಡಕ್ ಸಂದೇಶ ನೀಡಿದ್ದಾರೆ.

Tags:    

Similar News