Public Exam Issue | ಜನರನ್ನು ಯಾಕೆ ಗೋಳು ಹೊಯ್ದುಕೊಳ್ಳುತ್ತಿದ್ದೀರಿ? ಸರ್ಕಾರಕ್ಕೆ ಸುಪ್ರೀಂ ಚಾಟಿ
ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಗೋಳು ಹೊಯ್ದುಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಧೋರಣೆಗೆ ಸುಪ್ರೀಂಕೋರ್ಟ್ ಮಂಗಳವಾರ ಮತ್ತೊಮ್ಮೆ ಚಾಟಿ ಬೀಸಿದೆ
ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಗೋಳು ಹೊಯ್ದುಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಧೋರಣೆಗೆ ಸುಪ್ರೀಂಕೋರ್ಟ್ ಮಂಗಳವಾರ ಮತ್ತೊಮ್ಮೆ ಚಾಟಿ ಬೀಸಿದ್ದು, ಜನರನ್ನು ಗೋಳು ಹೊಯ್ದುಕೊಳ್ಳಲು ರಾಜ್ಯ ಸರ್ಕಾರ ಪಣ ತೊಟ್ಟಿರುವುದು ಯಾಕೆ? ಎಂದು ಕಿಡಿ ಕಾರಿದೆ.
5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ (ಬೋರ್ಡ್) ಪರೀಕ್ಷೆ ನಡೆಸುವಂತಿಲ್ಲ ಮತ್ತು ಒಂದು ವೇಳೆ ಈಗಾಗಲೇ ಪರೀಕ್ಷೆ ನಡೆಸಿದ್ದರೆ ಅದರ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂದು ಕಳೆದ ಏಪ್ರಿಲ್‌ನಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ತನ್ನ ಆದೇಶವನ್ನು ಉಲ್ಲಂಘಿಸಿ, ನ್ಯಾಯಾಂಗದ ಕಣ್ತಪ್ಪಿಸಿ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿರುವ ಇಲಾಖೆಗೆ ಚಾಟಿ ಬೀಸಿದೆ. ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅನುಮತಿ ಇಲ್ಲ ಎಂದು ನ್ಯಾಯಾಲಯ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದೆ.
5, 8 ಮತ್ತು 9ನೇ ತರಗತಿಗಳಿಗೆ 2024-25ನೇ ಸಾಲಿಗೆ ಬೋರ್ಡ್ ಪರೀಕ್ಷೆ ನಡೆಸಲು ಸೆ.4 ಮತ್ತು ಸೆ.15ರಂದು ಇಲಾಖೆ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರ ಪರ ವಕೀಲ ಕೆ ವಿ ಧನಂಜಯ ಅವರು ನ್ಯಾಯಾಲಯದ ಗಮನ ಸೆಳೆದಿದ್ದರು. ಅವರ ಮನವಿಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದೆ.
ಕೋರ್ಟ್ ಛೀಮಾರಿಯ ಬಳಿಕ ರಾಜ್ಯ ಸರ್ಕಾರದ ಪರ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2024-25ನೇ ಸಾಲಿಗೆ ಬೋರ್ಡ್ ಪರೀಕ್ಷೆ ನಡೆಸಲು ಸೆ.4 ಮತ್ತು ಸೆ.15ರಂದು ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು.
“ಪ್ರಕರಣದ ಸಂಬಂಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗುವ ಮೊದಲೇ ಸರ್ಕಾರ ಅಧಿಸೂಚನೆಯನ್ನು ವಾಪಸ್ ಪಡೆದಿದೆ. ಒಂದು ವೇಳೆ ಈಗಾಗಲೇ ಯಾವುದಾದರೂ ಪರೀಕ್ಷೆ ನಡೆದಿದ್ದರೂ ಕೂಡ ಅದರ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಮೆಹ್ತಾ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಆಗ ಹಿರಿಯ ವಕೀಲ ಕೆ ವಿ ಧನಂಜಯ ಅವರು, ಮಧ್ಯಂತರ ತಡೆಯಾಜ್ಞೆ ಇದ್ದರೂ ಕರ್ನಾಟಕ ಸರ್ಕಾರವು ಪರೀಕ್ಷೆಗಳನ್ನು ನಡೆಸಿದೆ. ಈ ಸಂಬಂಧ ಫಲಿತಾಂಶ ಪ್ರಕಟಿಸಬೇಕಾದರೆ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮಧ್ಯಂತರ ಆದೇಶದ ಹೊರತಾಗಿಯೂ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ವಿಷಯ ಕೇಳಿ ಕೆರಳಿದ ನ್ಯಾಯಾಪೀಠ, ರಾಜ್ಯ ಸರ್ಕಾರ ಜನರನ್ನು ಶೋಷಣೆ ಮಾಡಲೆಂದೇ ಪಣ ತೊಟ್ಟಿದೆ ಯಾಕೆ? ಇಲ್ಲಿ ಸರ್ಕಾರಕ್ಕೆ ಅಹಂನ ಪ್ರಶ್ನೆ ಎದುರಾಗುತ್ತಿದೆ ಯಾಕೆ? ಎಂದು ಕಿಡಿ ಕಾರಿತು.
ಅಲ್ಲದೆ, ಈ ಪ್ರಸಕ್ತ ವರ್ಷದಲ್ಲಿಯೂ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್(ಬೋರ್ಡ್) ಪರೀಕ್ಷೆ ನಡೆಸುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ಇರುವುದಾಗಿ ಹೇಳಿದ ನ್ಯಾಯಪೀಠ, ನ್ಯಾಯಾಲಯದ ಆದೇಶ ಉಲ್ಲಂಘಿಸುವಂತಹ ಯಾವುದೇ ಹೆಜ್ಜೆ ಇಡದಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.