ಪೋಕ್ಸೊ ಪ್ರಕರಣ: ಮುರುಘಾ ಶರಣರು ಸೇರಿ ಎಲ್ಲ ಆರೋಪಿಗಳು ನಿರ್ದೋಷಿ; ನ್ಯಾಯಾಲಯ ತೀರ್ಪು

2022ರ ಆಗಸ್ಟ್‌ನಲ್ಲಿ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸ್ವಾಮೀಜಿಯವರು ಸೇಬಿನ ಹಣ್ಣಿಗೆ ಮಾದಕ ವಸ್ತು ಲೇಪಿಸಿ ನೀಡಿ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

Update: 2025-11-26 10:08 GMT
Click the Play button to listen to article

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ಮುರುಘಾ ಮಠದ ಪೋಕ್ಸೊ (POCSO) ಮತ್ತು ಅತ್ಯಾಚಾರ ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ದೊಡ್ಡ ನೆಮ್ಮದಿ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಮುರುಘಾ ಶರಣರು ಸೇರಿದಂತೆ ಮೂವರು ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿ ಬುಧವಾರ (ನ.26) ತೀರ್ಪು ನೀಡಿದೆ.

ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ತೀರ್ಪು ಪ್ರಕಟಿಸಿದ್ದು, "ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ಮತ್ತು ನಾಲ್ಕನೇ ಆರೋಪಿ ಮಠದ ಮ್ಯಾನೇಜರ್ ಪರಮಶಿವಯ್ಯ ಅವರನ್ನು ಖುಲಾಸೆಗೊಳಿಸಲಾಗಿದೆ," ಎಂದು ತಿಳಿಸಿದ್ದಾರೆ. ತೀರ್ಪು ಪ್ರಕಟವಾಗುವ ವೇಳೆ ಮುರುಘಾ ಶರಣರು ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದರು.

ಪ್ರಕರಣದ ಹಿನ್ನೆಲೆ

2022ರ ಆಗಸ್ಟ್‌ನಲ್ಲಿ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸ್ವಾಮೀಜಿಯವರು ಸೇಬಿನ ಹಣ್ಣಿಗೆ ಮಾದಕ ವಸ್ತು ಲೇಪಿಸಿ ನೀಡಿ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಪೋಕ್ಸೊ ಕಾಯಿದೆ ಹಾಗೂ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು.

ವಕೀಲರ ವಾದ ಮತ್ತು ನ್ಯಾಯಾಲಯದ ನಡೆ

ವಿಚಾರಣೆಯ ಸಂದರ್ಭದಲ್ಲಿ ಸ್ವಾಮೀಜಿ ಪರ ವಕೀಲರಾದ ಸಿ.ವಿ. ನಾಗೇಶ್ ಮತ್ತು ಕೆಬಿಕೆ ಸ್ವಾಮಿ ಅವರು ಪ್ರಬಲ ವಾದ ಮಂಡಿಸಿದ್ದರು. "ದೂರು ನೀಡಲು 32 ದಿನಗಳ ವಿಳಂಬವಾಗಿದ್ದು, ಈ ಅವಧಿಯಲ್ಲಿ ಬಾಲಕಿಯರು ಎಲ್ಲಿದ್ದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಇದು ಮಠದ ವರ್ಚಸ್ಸಿಗೆ ಹಾನಿ ಮಾಡುವ ಪಿತೂರಿ," ಎಂದು ವಾದಿಸಿದ್ದರು. ಈ ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಮುರುಘಾ ಶರಣರು ಖುಲಾಸೆಯಾಗಿದ್ದರೂ, ಅವರ ವಿರುದ್ಧ ಮತ್ತೊಂದು ಪೋಕ್ಸೊ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಆದರೆ, ಸದ್ಯಕ್ಕೆ ಆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಶರಣರು ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧವಿದೆ.

ಈ ತೀರ್ಪು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಹಾಗೂ ಧಾರ್ಮಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆರೋಪ ಸಾಬೀತಾಗಿದ್ದರೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿತ್ತು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು.

Tags:    

Similar News