ಮುಡಾ ಹಗರಣ ಬುಡಕ್ಕೆ ಬಂದಾಗ ಅಹಿಂದ ನೆನಪಾಯ್ತೇ? ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ದಲಿತ ಸಮಾಜಕ್ಕೆ ಸೇರಿದ ನಿಂಗನಿಗೆ ಸಿಗಬೇಕಿದ್ದ ಬದಲಿ ನಿವೇಶನಗಳನ್ನು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಬಳಿಸಿದಾಗ ಅಹಿಂದ ಸಮುದಾಯ ನೆನಪಾಗಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಕಿದ್ದಾರೆ.;

Update: 2024-12-06 06:20 GMT

ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಆಯೋಜಿಸಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ದಲಿತ ಸಮಾಜಕ್ಕೆ ಸೇರಿದ ನಿಂಗನಿಗೆ ಸಿಗಬೇಕಿದ್ದ ಬದಲಿ ನಿವೇಶನಗಳನ್ನು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಬಳಿಸಿದಾಗ ಅಹಿಂದ ಸಮುದಾಯ ನೆನಪಾಗಲಿಲ್ಲವೇ ʼಸಿದ್ದಹಸ್ತ ಸಿದ್ದರಾಮಯ್ಯʼನವರೇ ಎಂದು ಕುಟುಕಿದ್ದಾರೆ.

ಮುಡಾ ಹಗರಣ ಬುಡಕ್ಕೆ ಬಂದಿರುವಾಗ ನಿಮಗೆ ಅಹಿಂದ ನೆನಪಾಗುತ್ತಿದೆ. ಮೆತ್ತಿಕೊಂಡಿರುವ ಕಪ್ಪುಮಸಿ ಅರ್ಥಾತ್ ʼವೈಟ್ನರ್ʼ ಮರೆಮಾಚಲು ಸ್ವರಕ್ಷಣೆಗಾಗಿ ಹಾಸನದಲ್ಲಿ ಸಮಾವೇಶ ಮಾಡಿರುವ ಡೋಂಗಿವಾದಿ ನೀವು. ಅಂದು ಜೆಡಿಎಸ್ ವೇದಿಕೆಯಲ್ಲಿಯೇ ಅಹಿಂದ ಸಮಾವೇಶ ಮಾಡಿದ್ದರೇ ಹೆಚ್.ಡಿ.ದೇವೇಗೌಡರು ನಿಮ್ಮನ್ನು ಯಾಕೆ ಉಚ್ಛಾಟಿಸುತ್ತಿದ್ದರು?, ನಾನು ಎಂಬ ಅಹಂನಿಂದ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ನಡೆಸಿದ್ದಕ್ಕೆ ನಿಮ್ಮನ್ನು ಉಚ್ಛಾಟಿಸಲಾಯಿತು ಎಂದು ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿವೃತ್ತರಾಗಿದ್ದ ಸ್ವಜಾತಿ ಐಪಿಎಸ್ ಅಧಿಕಾರಿಯೊಬ್ಬರನ್ನು ಗೃಹ ಇಲಾಖೆ ಸಲಹೆಗಾರಾಗಿ ನೇಮಿಸಿಕೊಂಡು, ಆ ಇಲಾಖೆ ನಿರ್ವಹಿಸುತ್ತಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಹತ್ತಿಕ್ಕಿದಾಗ ಅಹಿಂದ ನೆನಪಾಗಲಿಲ್ಲವೇ?, ದಲಿತ ಸಮಾಜದ ಜಿಲ್ಲಾಧಿಕಾರಿ ಶಿಖಾ ಅವರ ಮೇಲೆ ನಿಮ್ಮ ಆಪ್ತ ಹಲ್ಲೆ ನಡೆಸಿದರೂ ಸ್ವಜಾತಿ ವ್ಯಾಮೋಹಕ್ಕೆ ಒಳಗಾಗಿ ಮರೀಗೌಡನ ರಕ್ಷಣೆ ಮಾಡಿದಾಗ ಅಹಿಂದ ನೆನಪಾಗಲಿಲ್ಲವೇ?, ಕನಿಷ್ಠ ನಾಚಿಕೆಯೂ ಆಗಲಿಲ್ಲವೇ? ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.

ಮುಡಾದಲ್ಲಿ ಮುಕ್ಕಿ ತಿಂದಿರುವ ಜಾತಿವಾದಿ ಭ್ರಷ್ಟಾರಾಮಯ್ಯಗೆ "ಅಹಿಂದ" ಎಂಬುದು ಒಂದು ರಕ್ಷಾ ಕವಚಷ್ಟೇ. ಅಹಿಂದ ಎನ್ನುವ ಟ್ಯಾಗ್ ಇಟ್ಟುಕೊಂಡು ಇಷ್ಟೆಲ್ಲಾ ಅಸಹ್ಯ ಮಾಡಿಕೊಳ್ಳುತ್ತಿರುವ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಕಿಡಿಕಾರಿದ್ದಾರೆ.

ಹಾಸನದಲ್ಲಿ ಗುರುವಾರ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಅಹಿಂದ ಸಮಾವೇಶ ಮಾಡಿದ್ದಕ್ಕೆ ನನ್ನನ್ನು ಪಕ್ಷದಿಂದ ದೇವೇಗೌಡರು ಉಚ್ಛಾಟಿಸಿದ್ದರು. ಜೆಡಿಎಸ್‌ನಲ್ಲಿ ಪ್ರಮುಖ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸುವ ಕೆಲಸವನ್ನೂ ಮಾಡಿದ್ದರು. ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಸೇರಿದ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Tags:    

Similar News