'ಬಸವ ಮೆಟ್ರೋ' ನಾಮಕರಣ ಭರವಸೆ; ಸಿಎಂ ನಿಲುವಿಗೆ ಒಕ್ಕಲಿಗರ ಆಕ್ಷೇಪ, ಕೆಂಪೇಗೌಡರ ಹೆಸರಿಡಲು ಆಗ್ರಹ
ನಮ್ಮ ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು ಇರುವುದರಿಂದ 'ಬಸವ ಮೆಟ್ರೋ' ಎಂದು ನಾಮಕರಣ ಮಾಡಲು ಶಿಫಾರಸು ಮಾಡಲಾಗುವುದು ಎಂದು ಸಿ.ಎಂ ಘೋಷಿಸಿದ್ದರು.
ನಮ್ಮ ಮೆಟ್ರೋ
ನಮ್ಮ ಮೆಟ್ರೋಗೆ 'ಬಸವ ಮೆಟ್ರೋ' ಎಂದು ನಾಮಕರಣ ಮಾಡುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಒಕ್ಕಲಿಗ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರನ್ನು ಮೆಟ್ರೋಗೆ ಇಡುವಂತೆ ವಿಶ್ವ ಒಕ್ಕಲಿಗ ಮಹಾ ವೇದಿಕೆಯು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದೆ. ಮೆಟ್ರೋ ನಾಮಕರಣ ವಿಚಾರ ಇದೀಗ ವಿವಾದ ಹಾಗೂ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಸಿಎಂ ಹೇಳಿದ್ದೇನು?
ಅ. 4 ರಂದು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು, 'ನಮ್ಮ ಮೆಟ್ರೋ'ಗೆ ಬಸವಣ್ಣನವರ ಹೆಸರಿಡುವಂತೆ ವೀರಶೈವ-ಲಿಂಗಾಯತ ಸಮಾಜದಿಂದ ಬಂದ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದರು. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆಯಾಗಿದ್ದರೆ ಇವತ್ತೇ 'ಬಸವ ಮೆಟ್ರೋ' ಎಂದು ಘೋಷಿಸುತ್ತಿದ್ದೆ. ಕೇಂದ್ರದ ಅನುಮತಿ ಬೇಕಿರುವುದರಿಂದ 'ಬಸವ ಮೆಟ್ರೋ' ಎಂದು ನಾಮಕರಣ ಮಾಡಲು ಶಿಫಾರಸು ಮಾಡುತ್ತೇನೆ ಎಂದು ಘೋಷಿಸಿದ್ದರು.
ವಿಶ್ವ ಒಕ್ಕಲಿಗರ ಮಹಾ ವೇದಿಕೆ ಆಕ್ಷೇಪ
ಸಿಎಂ ಹೇಳಿಕೆ ಖಂಡಿಸಿರುವ ವಿಶ್ವ ಒಕ್ಕಲಿಗ ಮಹಾ ವೇದಿಕೆ, ಹಳೆಯ ಘಟನೆಯೊಂದನ್ನು ನೆನಪಿಸಿದೆ. 2015ರಲ್ಲೇ ಮಾಜಿ ಸಚಿವ ಎಂ.ಕೃಷ್ಣಪ್ಪ ಅವರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ 'ಕೆಂಪೇಗೌಡ ಮೆಟ್ರೋ' ಎಂದು ನಾಮಕರಣಕ್ಕೆ ಕೋರಿದ್ದರು. ಅಂದು ಮುಕ್ತ ಮನಸ್ಸಿನಿಂದ ಪರಿಗಣಿಸುವುದಾಗಿ ವಾಗ್ದಾನ ನೀಡಿದ್ದ ಸಿಎಂ, ಈಗ ಏಕಾಏಕಿ 'ಬಸವ ಮೆಟ್ರೋ' ಎಂದು ಶಿಫಾರಸು ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿಎಂ, ಡಿಸಿಎಂಗೆ ಪತ್ರದ ಮೂಲಕ ಆಗ್ರಹ
ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಹೆಸರನ್ನೇ ಮೆಟ್ರೋಗೆ ಇಡಬೇಕು ಎಂದು ಆಗ್ರಹಿಸಿ ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ʼಕೆಂಪೇಗೌಡ ಮೆಟ್ರೋ' ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿದ್ದಾರೆ. ಬೆಂಗಳೂರಿನ 28 ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಈ ಕುರಿತು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.
'ಬಸವಣ್ಣನವರ ಕೊಡುಗೆ ಉತ್ತರ ಕರ್ನಾಟಕಕ್ಕೆ ಮಾತ್ರ'
ಬೆಂಗಳೂರಿಗೆ ಬಸವಣ್ಣನವರ ಕೊಡುಗೆ ಏನೂ ಇಲ್ಲ. ಅವರು ಉತ್ತರ ಕರ್ನಾಟಕಕ್ಕೆ ಮಾತ್ರ ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್ ಹೇಳಿಕೆ ನೀಡಿದ್ದಾರೆ. 'ನಮ್ಮ ಬಸವ ಮೆಟ್ರೋ' ಎಂದು ಹೆಸರಿಡಲು ಮುಂದಾದರೆ ಕಾನೂನು ಮೂಲಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸಹ 'ಕೆಂಪೇಗೌಡ ಮೆಟ್ರೋ' ನಾಮಕರಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ. ಈ ಶನಿವಾರ (ಅ.18) ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಕರೆದಿದ್ದೇವೆ ಎಂದು ರವಿಶಂಕರ್ ತಿಳಿಸಿದ್ದಾರೆ.