Language Policy Part 1: ಕೇಂದ್ರದ ʼತ್ರಿಭಾಷಾʼ ಸೂತ್ರಕ್ಕೆ ʼದ್ವಿಭಾಷೆʼಯ ಸೆಡ್ಡು; ಏನಿದು ವಿವಾದ?
ತ್ರಿಭಾಷಾ ನೀತಿಗೆ ತಮಿಳುನಾಡು ಸೆಡ್ಡು ಹೊಡೆದು ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಈಗ ತಮಿಳುನಾಡಿನ ಮಾದರಿಯನ್ನೇ ಅಳವಡಿಸಿಕೊಳ್ಳಲು ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮುಂದಡಿ ಇಟ್ಟಿವೆ.;
ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತದ ಹಿಂದಿ ಹೇರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉತ್ತರ ಭಾರತೀಯರಿಗೆ ಅನುಕೂಲ ಸಿಂಧುವಾದ ತ್ರಿಭಾಷಾ ನೀತಿಯು ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕತೆಗೆ ದೊಡ್ಡ ಅಪಾಯದ ಆತಂಕ ತಂದೊಡ್ಡಿದೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡದ ಅಸ್ಮಿತೆಗಾಗಿ ದ್ವಿಭಾಷಾ ನೀತಿ ಜಾರಿಗೆ ಒತ್ತಡ ಹೆಚ್ಚುತ್ತಿದೆ.
ಹಿಂದಿ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ಹುನ್ನಾರ ಅರಿತ ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿವೆ. ಈಗಾಗಲೇ ತಮಿಳುನಾಡು ತ್ರಿಭಾಷಾ ನೀತಿಗೆ ಸೆಡ್ಡು ಹೊಡೆದು ತನ್ನದೇ ಆದ ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಈಗ ತಮಿಳುನಾಡಿನ ಮಾದರಿಯನ್ನೇ ಅಳವಡಿಸಿಕೊಳ್ಳಲು ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮುಂದಡಿ ಇಟ್ಟಿವೆ. ಆ ಮೂಲಕ ಕೇಂದ್ರ ಸರ್ಕಾರದ ಬಲವಂತದ ಹಿಂದಿ ಹೇರಿಕೆಗೆ ತೀವ್ರ ಪ್ರತಿರೋಧ ಎದುರಾಗಿದೆ.
ಏನಿದು ದ್ವಿಭಾಷಾ ನೀತಿ?
ಆಡಳಿತ ಹಾಗೂ ಶಿಕ್ಷಣದಲ್ಲಿ ಮಾತೃಭಾಷೆ ಜೊತೆಗೆ ವ್ಯಾವಹಾರಿಕ ಭಾಷೆಯಾಗಿ ಮತ್ತೊಂದು ಭಾಷೆ ಬಳಸಲು ಅನುವು ಮಾಡಿಕೊಡುವ ನೀತಿಯೇ ದ್ವಿಭಾಷಾ ಸೂತ್ರ. ಪ್ರಸ್ತುತ, ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡದ ಜೊತೆಗೆ ವ್ಯಾವಹಾರಿಕವಾಗಿ ಇಂಗ್ಲಿಷ್ ಭಾಷೆ ಬಳಸಲಾಗುತ್ತಿದೆ. ತೃತೀಯ ಭಾಷೆಯನ್ನಾಗಿ ಹಿಂದಿ ಬಳಸುತ್ತಿದ್ದರೂ ಅದು ಅಧಿಕೃತವಲ್ಲ. ಹಾಗಾಗಿ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯನ್ನೇ ಬೆಂಬಲಿಸಿದೆ. ಆದಾಗ್ಯೂ, ಸಾಹಿತಿಗಳು, ಹೋರಾಟಗಾರರ ಆಗ್ರಹವೂ ದ್ವಿಭಾಷಾ ನೀತಿಯೇ ಆಗಿದೆ.
ಮಾತೃಭಾಷೆ ಜೊತೆಗೆ ಹೊಸ ಭಾಷೆ ಕಲಿಯಲು ಭಾಷಾ ನೀತಿ ನೆರವಾಗಲಿದೆ. ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ತ್ರಿಭಾಷಾ ನೀತಿ ಜಾರಿಗೆ ಮುಂದಾಗಿರುವುದರ ಹಿಂದೆ ಹಿಂದಿ ಭಾಷೆ ಹೇರಿಕೆಯ ಹುನ್ನಾರ ಅಡಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ತ್ರಿಭಾಷಾ ನೀತಿ ವಿರೋಧಿಸಲು ಪ್ರಮುಖ ಕಾರಣವಾಗಿದೆ.
ತ್ರಿಭಾಷಾ ನೀತಿ ಏನು?
ಹಿಂದಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸಲುವಾಗಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಕೊಠಾರಿ ಆಯೋಗ ರಚಿಸಿತ್ತು. 1968 ರಲ್ಲಿ ಆಯೋಗವು ಹಲವು ಶಿಫಾರಸುಗಳನ್ನು ಮಾಡಿತ್ತು. ಅದರಂತೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ(ಎನ್‌ಇಪಿ) ಕೇಂದ್ರ ಸರ್ಕಾರ ತ್ರಿಭಾಷಾ ನೀತಿ ಜಾರಿಗೆ ತಂದಿತು.
ಶಿಕ್ಷಣ ವ್ಯವಸ್ಥೆ ಸುಧಾರಿಸುವ ಸಲುವಾಗಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಜತೆಗೆ ತ್ರಿಭಾಷಾ ಸೂತ್ರ ಅಳವಡಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಪ್ರಾದೇಶಿಕ ಭಾಷೆಯ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿತ್ತು. ಇದರ ಆಧಾರದ ಮೇಲೆ ತ್ರಿಭಾಷಾ ನೀತಿ ಜಾರಿಗೆ ತಂದಿತ್ತು.
ತಮಿಳುನಾಡಿನ ವಿರೋಧ
ತ್ರಿಭಾಷಾ ನೀತಿ ವಿರೋಧಿಸಿದ ತಮಿಳುನಾಡು ತನ್ನದೇ ಆದ ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಕಳೆದ 60 ವರ್ಷಗಳಿಂದ ದ್ವಿಭಾಷಾ ನೀತಿಯನ್ನೇ ತಮಿಳುನಾಡು ಅನುಸರಿಸುತ್ತಿದೆ. ಬಿಜೆಪಿ ಹೊರತುಪಡಿಸಿ ಉಳಿದ ಪ್ರಾದೇಶಿಕ ಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟು ತೋರಿದ ಹಿನ್ನೆಲೆಯಲ್ಲಿ ತ್ರಿಭಾಷಾ ನೀತಿ ಅನುಷ್ಟಾನ ಅಸಾಧ್ಯವಾಗಿದೆ.
ಸಂವಿಧಾನದಲ್ಲಿ ಯಾವುದೇ ಭಾಷೆಯನ್ನು ಅಧಿಕೃತವಾಗಿ ರಾಷ್ಟ್ರ ಭಾಷೆ ಎಂದು ಪರಿಗಣಿಸದ ಹಿನ್ನೆಲೆ ಕೇಂದ್ರ ಸರ್ಕಾರವು ತಮಿಳುನಾಡಿನ ಧೋರಣೆ ವಿರೋಧಿಸುವ ಧೈರ್ಯ ತೋರಿಲ್ಲ. ಹಾಗಾಗಿ ತಮಿಳುನಾಡು ಮಾದರಿಯನ್ನೇ ಉಳಿದ ದಕ್ಷಿಣ ಭಾರತದ ರಾಜ್ಯಗಳು ಅನುಸರಿಸಲು ನಿರ್ಧರಿಸಿವೆ ಎನ್ನಲಾಗಿದೆ.
ಹಿಂದಿ ಹೇರಿಕೆ ಹುನ್ನಾರ
ತ್ರಿಭಾಷಾ ನೀತಿಯಿಂದ ಪ್ರಾದೇಶಿಕ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ತ್ರಿಭಾಷಾ ನೀತಿ ಜಾರಿಗೆ ತರುವುದರ ಹಿಂದೆ ಹಿಂದಿ ಭಾಷೆ ಹೇರಿಕೆ ಹುನ್ನಾರ ಅಡಗಿದೆ ಎಂದು ಆರೋಪಗಳು ಕೇಳಿಬಂದಿವೆ.
60ರ ದಶಕದಲ್ಲಿ ಹಿಂದಿಯನ್ನು ದೇಶದ ಆಡಳಿತ ಭಾಷೆಯನ್ನಾಗಿ ಹೇರುವ ಕೇಂದ್ರದ ಪ್ರಯತ್ನವನ್ನು ವಿರೋಧಿಸಿದ್ದೇ ತ್ರಿಭಾಷಾ ನೀತಿ ಜಾರಿಗೆ ಕಾರಣವಾಯಿತು ಎಂಬುದು ದ್ವಿಭಾಷಾ ನೀತಿ ಪರ ಹೋರಾಟಗಾರರ ಅಂಬೋಣ.
ತ್ರಿಭಾಷಾ ಸೂತ್ರದಿಂದ ಯಾವುದೇ ಅನುಕೂಲ ಇಲ್ಲ. ಹಿಂದಿ ಉದ್ಧರಿಸಲು ಹೂಡಿದ ಷಡ್ಯಂತ್ರ್ಯ. ಹಿಂದಿಯವರ ಮೋಸದ ಬಲೆಗೆ ನಾವೆಲ್ಲ ಬಿದ್ದಿದ್ದೇವೆ. ಪರಿಣಾಮ 90 ಸಾವಿರ ವಿದ್ಯಾರ್ಥಿಗಳು ಕಳೆದ ವರ್ಷ ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ನಮ್ಮ ಕನ್ನಡ ಭಾಷೆ ಉಳಿಯಬೇಕಾದರೆ ಇಂದಲ್ಲ ನಾಳೆ ದ್ವಿಭಾಷಾ ನೀತಿಯನ್ನು ಸರ್ಕಾರ ಜಾರಿ ಮಾಡಲೇಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
2011ರ ಜನಗಣತಿ ಪ್ರಕಾರ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಕನ್ನಡಿಗರ ಸಂಖ್ಯೆ ಬೆರಳೆಣಿಗೆ ಇದೆ. ದೆಹಲಿಯಲ್ಲಿ 11 ಸಾವಿರ ಕನ್ನಡಿಗರು ವ್ಯವಹರಿಸಲು ಹಿಂದಿ ಅಗತ್ಯವಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕಲಿಯುತ್ತಿರುವ 60 ಲಕ್ಷ ವಿದ್ಯಾರ್ಥಿಗಳ ಮೇಲೆ ಹಿಂದಿ ಹೇರುವುದು ಅವೈಜ್ಞಾನಿಕ ಎಂದು ಆರೋಪಿಸಿದರು.
ಪ್ರಸ್ತುತ, ಅನಗತ್ಯ ಹಿಂದಿ ಹೇರಿಕೆಯ ಪರಿಣಾಮಗಳನ್ನು ಈಗಾಗಲೇ ಕಾಣುತ್ತಿದ್ದೇವೆ. ಬ್ಯಾಂಕಿಂಗ್ ಹಾಗೂ ರೈಲ್ವೆ ವಲಯದಲ್ಲಿ ಹೆಚ್ಚು ಉತ್ತರ ಭಾರತೀಯರೇ ಇದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಹೇಳುವುದೇನು?
ಸಂವಿಧಾನದ ಎಂಟನೇ ಪರಿಚ್ಛೇಧವು 22 ಭಾಷೆಗಳಿಗೆ ಸಮಾನ ಸ್ಥಾನಮಾನ ಒದಗಿಸಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಯಾವುದೇ ಭಾಷಾ ಪ್ರಾಬಲ್ಯಕ್ಕೆ ಅವಕಾಶ ನೀಡಿಲ್ಲ. ಅಲ್ಲದೇ ಯಾವುದೇ ಒಂದು ನಿರ್ದಿಷ್ಟ ಭಾಷೆಯನ್ನು "ರಾಷ್ಟ್ರೀಯ ಭಾಷೆ" ಎಂದೂ ಸಹ ಉಲ್ಲೇಖಿಸಿಲ್ಲ.ಹಾಗಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ತ್ರಿಭಾಷಾ ನೀತಿಯಿಂದ ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಪಾಯ ಎದುರಾಗಲಿದೆ ಎಂಬುದು ದಕ್ಷಿಣ ಭಾರತದ ರಾಜ್ಯಗಳ ಆತಂಕವಾಗಿದೆ.
ದ್ವಿಭಾಷಾ ನೀತಿಯ ಪ್ರಯೋಜನವೇನು?
ದ್ವಿಭಾಷಾ ನೀತಿಯಿಂದ ರಾಜ್ಯದಲ್ಲಿ ಭಾಷಾ ಶಿಕ್ಷಣಕ್ಕೆ ಮರು ವ್ಯಾಖ್ಯಾನ ನೀಡಬಹುದಾಗಿದೆ. ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಾತಾವರಣ ಕಲ್ಪಿಸಬಹುದಾಗಿದೆ. ಪ್ರಾದೇಶಿಕ ಹೆಗ್ಗುರುತು ಮತ್ತು ರಾಷ್ಟ್ರೀಯ ಭಾಷಾ ನಿರ್ದೇಶನಗಳ ನಡುವೆ ಸಮತೋಲನದ ಪರಾಮರ್ಶೆಗೆ ಇತರ ರಾಜ್ಯಗಳನ್ನು ಪ್ರೇರೇಪಿಸಲಿದೆ.
ದ್ವಿಭಾಷಾ ನೀತಿ ಜಾರಿಗೆ ಅಭಿಯಾನ
ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗಾಗಿ ಕನ್ನಡದ ಸಾಹಿತಿಗಳು, ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. 2024 ರಲ್ಲೇ 'ನಮ್ಮ ನಾಡು ನಮ್ಮಆಳ್ವಿಕೆ' ಸಂಘಟನೆಯ ಸದಸ್ಯ ಹಾಗೂ ಚಿತ್ರ ಸಾಹಿತಿ ಕವಿರಾಜ್ ಅವರು ಅಭಿಯಾನ ಕೈಗೊಂಡಿದ್ದರು.
ಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ನ.1ರಂದು ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ನಡೆಸಿದ್ದರು. ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 1 ಲಕ್ಷ ಕರಪತ್ರ ಹಂಚುವ ಮೂಲಕ ಜಾಗೃತಿ ಅಭಿಯಾನ ಮಾಡಲಾಗಿತ್ತು. ಕನ್ನಡದ ಅಭಿವೃದ್ಧಿ ಪ್ರಾಧಿಕಾರವು ದ್ವಿಭಾಷಾ ನೀತಿ ಜಾರಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸುಗಳನ್ನು ಮಾಡಿತ್ತು.