ಸಿಎಂ ಸಿದ್ದರಾಮಯ್ಯಗೂ, ಉಗ್ರರಿಗೂ ವ್ಯತ್ಯಾಸವಿಲ್ಲ; ಟೀಕೆಯ ಭರದಲ್ಲಿ ಉಗ್ರರಿಗೆ ಹೋಲಿಸಿದ ಅರವಿಂದ ಬೆಲ್ಲದ
ದೇಶದ ಮೇಲೆ ಪಾಕಿಸ್ತಾನ ಭಯೋತ್ಪಾದಕರು ದಾಳಿ ನಡೆಸಿದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಪರ ಮಾತನಾಡುತ್ತಿದ್ದಾರೆ. ದೇಶದ ಭದ್ರತೆ ವಿಷಯ ಬಂದಾಗ ಧರ್ಮ, ಜಾತಿಯ ಯಾವ ಗುಂಗು ಇರಬಾರದು ಎಂದು ಅರವಿಂದ ಬೆಲ್ಲದ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.;
ಅರವಿಂದ ಬೆಲ್ಲದ್
'ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಗುಂಡು ಹೊಡೆದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಅವರನ್ನು ಉಗ್ರರಿಗೆ ಹೋಲಿಸಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಉಗ್ರರ ಕೃತ್ಯವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ, ಭಯೋತ್ಪಾದಕರಿಗೂ, ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ದೇಶದ ಮೇಲೆ ಪಾಕಿಸ್ತಾನ ಭಯೋತ್ಪಾದಕರು ದಾಳಿ ನಡೆಸಿದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಪರ ಮಾತನಾಡುತ್ತಿದ್ದಾರೆ. ದೇಶದ ಭದ್ರತೆ ವಿಷಯ ಬಂದಾಗ ಯಾವುದೇ ಧರ್ಮ, ಜಾತಿಯ ಗುಂಗು ಇರಬಾರದು. ಪಾಕಿಸ್ತಾನದ ವಿರುದ್ಧ ಯುದ್ಧ ನಡೆದರೆ ರಾಜ್ಯದ ಮುಸ್ಲಿಮರು ಏನೆಂದುಕೊಳ್ಳುತ್ತಾರೋ ಎಂದು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ದೇಶದ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನವನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಮರ್ಥವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿಯಿತ್ತು. ಬಿಜೆಪಿ ಆಡಳಿತವಿದ್ದಾಗ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದರೆ, ಅವರದ್ದೇ ಪಕ್ಷದ ಸಚಿವ ಸಂತೋಷ ಲಾಡ್ ಅದರ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ' ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭಯೋತ್ಪಾದಕರಿಗೆ ಹೋಲಿಸಿದ ಅರವಿಂದ ಬೆಲ್ಲದ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭದ್ರತಾ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರನ್ನು ವಿನಾಕಾರಣ ಟೀಕಿಸಲಾಗುತ್ತಿದೆ ಎಂದು ಕಿಡಿಕಾರಿದೆ.