ಬಿಜೆಪಿ ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಗದ್ದಲ ಸೃಷ್ಟಿ
ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ ಇರಲಿಲ್ಲ. ಅವರ ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಗಲಾಟೆ ಮಾಡಿ ಸದನದ ಬಾವಿಗೆ ಇಳಿದರು.;
“ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ ಇರಲಿಲ್ಲ. ಅವರ ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಗಲಾಟೆ ಮಾಡಿ ಸದನದ ಬಾವಿಗೆ ಇಳಿದರು. ಮುಖ್ಯಮಂತ್ರಿಗಳು ಉತ್ತರವನ್ನು ಕೊಡಬೇಕಾದರೆ ತೊಂದರೆ ಮಾಡಿದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು “ಬಿಜೆಪಿ ಸರ್ಕಾರದಲ್ಲಿ ಕೆಲವು ಹಗರಣಗಳನ್ನು ಮುಚ್ಚಿಹಾಕಿದ್ದಾರೆ, ಮುಚ್ಚಿಹಾಕಲು ಪ್ರಯತ್ನ ಪಟ್ಟಿದ್ದಾರೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಬಯಲಿಗೆ ಎಳೆದಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಹಗರಣ, ಗಂಗಾಕಲ್ಯಾಣ ಅಕ್ರಮ, ಬಿಟ್ ಕಾಯಿನ್ ಹಗರಣ, ಪಿಎಸ್ ಐ ಹಗರಣ ಸೇರಿದಂತೆ ಅನೇಕ ಹಗರಣಗಳು ನಡೆದಿವೆ” ಎಂದು ಹೇಳಿದರು.
ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ 750 ಕೋಟಿಗೂ ಹೆಚ್ಚು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅನೇಕ ಅಕ್ರಮಗಳ ದಾಖಲೆಗಳು ದೊರೆತಿವೆ. ಯಡಿಯೂರಪ್ಪ ಅವರ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಅದು ಸಹ ತನಿಖೆ ನಡೆಯುತ್ತಿದೆ. ಗುರು ರಾಘವೇಂದ್ರ ಬ್ಯಾಂಕ್ ಅಲ್ಲಿ ಸಾವಿರಾರು ಕೋಟಿ ರೂಪಾಯಿಗಳು ಹಗರಣವಾಗಿದ್ದರೂ ಸಿಬಿಐಗೆ ನೀಡಿಲ್ಲ. ಅದನ್ನು ಸಹ ತನಿಖೆಗೆ ನೀಡಲು ಚರ್ಚೆ ಮಾಡಲಾಗುವುದು” ಎಂದರು.
ಬಿಜೆಪಿ ಆರೋಪ ಮಾಡಿದ ನಂತರ ನೀವು ತನಿಖೆ ಮಾಡಲು ಮುಂದಾಗಿದ್ದೀರಿ ಎಂದು ಕೇಳಿದಾಗ “ಈ ರೀತಿ ಏನೂ ಆಗಿಲ್ಲ. ಯಾರನ್ನೂ ರಕ್ಷಿಸುವ ಉದ್ದೇಶ ನಮಗಿಲ್ಲ. ಎಲ್ಲವನ್ನು ಬಯಲಿಗೆ ಎಳೆದು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶ ನಮ್ಮದು” ಎಂದು ತಿಳಿಸಿದರು.