The Federal Explainer | ಕನ್ನಡಿಗರಿಗೆ ಮೀಸಲಾತಿ: ಹೊಸ ಮಸೂದೆ ಏನು? ವಿವಾದವೇಕೆ?
ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದ ಈ ಮಸೂದೆಗೆ ಐಟಿ ಮತ್ತು ಬಿಟಿ ವಲಯದ ಉದ್ಯಮಗಳಿಂದ ವಿರೋಧ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ನೂತನ ಮಸೂದೆ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಈ ಮಸೂದೆ ಏನು? ಅದರ ಉದ್ದೇಶವೇನು? ಕನ್ನಡಿಗರಿಗೆ ಅನುಕೂಲವೇನು? ಉದ್ಯಮಿಗಳು ವಿರೋಧಕ್ಕೆ ಕಾರಣವೇನು? ಎಂಬ ಎಲ್ಲಾ ವಿವರಗಳು ಇಲ್ಲಿವೆ...;
ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ನೂತನ ಮಸೂದೆಗೆ ರಾಜ್ಯ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ನಿಗದಿತ ಪ್ರಮಾಣದ ಉದ್ಯೋಗಗಳನ್ನು ಕಾಯ್ದಿರಿಸುವ ʼಕರ್ನಾಟಕ ರಾಜ್ಯ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ-2024ʼ ಸಂಪುಟ ಅನುಮೋದನೆಯೊಂದಿಗೆ ವಿಧಾನಸಭೆಯಲ್ಲಿ ಮಂಡನೆಗೆ ಸಜ್ಜಾಗಿದೆ.
ರಾಜ್ಯ ಕಾರ್ಮಿಕ ಇಲಾಖೆ ಸಿದ್ಧಪಡಿಸಿರುವ ಈ ಮಸೂದೆ, ಡಾ ಸರೋಜಿನಿ ಮಹಿಷಿ ವರದಿ ಸೇರಿದಂತೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಮತ್ತು ಅವಕಾಶಗಳು ಎಂಬ ಸೂತ್ರದ ಹಿನ್ನೆಲೆಯಲ್ಲಿ ಸಿದ್ಧಗೊಂಡಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬೇಕು ಎಂಬ ದಶಕಗಳ ಕನ್ನಡಿಗರ ಹೋರಾಟಕ್ಕೆ ಅಂತಿಮವಾಗಿ ಸರ್ಕಾರ, ಮಸೂದೆಯ ಕಾನೂನು ಚೌಕಟ್ಟು ರೂಪಿಸಿದೆ.
ರಾಜ್ಯದಲ್ಲಿ ಕಳೆದ ಎರಡು ದಶಕದಿಂದ ಈಚೆಗೆ ತಳಮಟ್ಟದ ಕೂಲಿ ಕೆಲಸದಿಂದ ಆರಂಭವಾಗಿ ಕಚೇರಿಗಳ ಉನ್ನತ ಅಧಿಕಾರಿ ಹುದ್ದೆಗಳವರೆಗೆ ಉತ್ತರಭಾರತೀಯರ ಪಾರುಪಥ್ಯ ಹೆಚ್ಚಾಗಿದೆ. ರಾಜ್ಯದ ನೀರು, ಭೂಮಿ, ತೆರಿಗೆ ವಿನಾಯ್ತಿ, ಸಾರಿಗೆ, ಸೌಕರ್ಯ ಮುಂತಾದ ಎಲ್ಲಾ ಮೂಲಸೌಲಭ್ಯಗಳನ್ನು ಬಳಸಿಕೊಳ್ಳುವ ಖಾಸಗಿ ಕಂಪನಿಗಳು ಉದ್ಯೋಗ ನೀಡುವಾಗ ಮಾತ್ರ ಉತ್ತರ ಭಾರತೀಯರಿಗೆ ಆದ್ಯತೆ ನೀಡುತ್ತಿವೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡಿಗರೇ ದ್ವಿತೀಯ ದರ್ಜೆ ನಾಗರಿಕರಂತೆ ಬದುಕುವಂತಾಗಿದೆ. ಹಾಗಾಗಿ ಕನ್ನಡ ನಾಡಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಖಾತರಿಪಡಿಸಲು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಾಯ್ದಿರಿಸುವ ಮೀಸಲಾತಿ ನೀತಿ ಜಾರಿಗೆ ಬರಬೇಕು ಎಂದು ಹತ್ತಾರು ವರ್ಷಗಳಿಂದ ರಾಜ್ಯದ ವಿವಿಧ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಲೇ ಇದ್ದವು. ಈ ಕೂಗಿನ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆ ವಿಧಾನಸಭೆಯಲ್ಲಿ ಮಂಡನೆಗೆ ಸಿದ್ಧವಾಗಿದೆ.
ಆದರೆ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದ ಈ ಮಸೂದೆಗೆ ಐಟಿ ಮತ್ತು ಬಿಟಿ ವಲಯದ ಉದ್ಯಮಗಳಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕ ಸರ್ಕಾರದ ತೆರಿಗೆ ವಿನಾಯ್ತಿ, ಕಡಿಮೆ ಬೆಲೆಯ ಭೂಮಿ ಮತ್ತು ನೀರು ಪಡೆದು ಬೆಳೆದಿರುವ ಬೃಹತ್ ಐಟಿ ಮತ್ತು ಬಿಟಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರೇ ಈ ಬಗ್ಗೆ ತೀವ್ರ ಅಪಸ್ವರ ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ನೂತನ ಮಸೂದೆ ರಾಷ್ಟ್ರವ್ಯಾಪಿ ಚರ್ಚೆಯ ವಸ್ತುವಾಗಿ ಹೊರಹೊಮ್ಮಿದೆ.
ಹಾಗಾದರೆ ಈ ಮಸೂದೆ ಏನು? ಅದರ ಉದ್ದೇಶವೇನು? ಅದರಿಂದ ಕನ್ನಡಿಗರಿಗೆ ಅನುಕೂಲವೇನು? ಉದ್ಯಮಿಗಳು ವಿರೋಧಕ್ಕೆ ಕಾರಣವೇನು? ಎಂಬ ಎಲ್ಲಾ ವಿವರಗಳು ಇಲ್ಲಿವೆ..
ಹೊಸ ಮಸೂದೆ ಯಾವುದು? ಅದರ ಉದ್ದೇಶವೇನು?
ʼಕರ್ನಾಟಕ ರಾಜ್ಯ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ-2024ʼ ಎಂಬುದು ಹೊಸ ಮಸೂದೆಯ ಹೆಸರು. ರಾಜ್ಯದ ಕೈಗಾರಿಕೆಗಳು ಮತ್ತು ಇತರೆ ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲಿ ಕರ್ನಾಟಕದ ನಿವಾಸಿಗಳಾದ ಮತ್ತು ಕನ್ನಡ ಮಾತನಾಡುವ ಸ್ಥಳೀಯರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸುವುದು ಈ ಮಸೂದೆಯ ಉದ್ಧೇಶ.
ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿರುವಂತೆ “ಕನ್ನಡಿಗರು ಕನ್ನಡ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಬೇಕು” ಎಂಬುದು ಮಸೂದೆಯ ಆಶಯ. “ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ” ಎಂಬ ಘೋಷಣೆಯೊಂದಿಗೆ ಸಿದ್ದರಾಮಯ್ಯ ಅವರು ಈ ಮಸೂದೆಯ ಕುರಿತ ತಮ್ಮ ಬದ್ಧತೆಯನ್ನೂ ಈಗಾಗಲೇ ಸಾರಿ ಹೇಳಿದ್ದಾರೆ.
ಮಸೂದೆಯಲ್ಲಿ ಏನೇನಿದೆ? ಉದ್ಯೋಗ ಮೀಸಲಾತಿ ಕುರಿತು ಏನು ಹೇಳಿದೆ?
ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ಖಾಸಗಿ ಉದ್ಯಮ, ಕಾರ್ಖಾನೆ, ಕೈಗಾರಿಕೆ ಮತ್ತು ಇತರೆ ಸಂಸ್ಥೆಗಳಲ್ಲಿ ನಿಗದಿತ ಪ್ರಮಾಣದ ಹುದ್ದೆಗಳನ್ನು ಸ್ಥಳೀಯ ಕನ್ನಡಿಗರಿಗೆ ಮೀಸಲಿಡಬೇಕು. ನಿರ್ವಹಣಾ ವಿಭಾಗಗಳಲ್ಲಿ(ಮ್ಯಾನೇಜ್ಮೆಂಟ್ ಹಂತದಲ್ಲಿ) ಶೇ.50ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ನಿರ್ವಹಣೇತರ(ಮ್ಯಾನೇಜ್ಮೆಂಟ್ ಹಂತವಲ್ಲದ) ಹುದ್ದೆಗಳಲ್ಲಿ ಶೇ.75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಮಸೂದೆ ಹೇಳುತ್ತದೆ.
ಮ್ಯಾನೇಜ್ಮೆಂಟ್ನಲ್ಲಿ ಸೂಪರ್ವೈಸರ್, ಮ್ಯಾನೇಜಿರಿಯಲ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ.50ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು. ನಾನ್ ಮ್ಯಾನೇಜ್ಮೆಂಟ್ ಹುದ್ದೆಗಳಾದ ಕ್ಲರ್ಕ್, ಕೌಶಲ ಮತ್ತು ಕೌಶಲರಹಿತ ಹಾಗೂ ಅರೆ ಕೌಶಲ, ಗುತ್ತಿಗೆ ಮತ್ತು ಐಟಿ ಹುದ್ದೆಗಳಲ್ಲಿ ಶೇ.75ರಷ್ಟು ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಮಸೂದೆ ವಿವರಿಸಿದೆ.
ನಿಯಮ ಉಲ್ಲಂಘಿಸಿದರೆ ಏನು? ಸ್ಥಳೀಯರು ಲಭ್ಯವಿಲ್ಲದಿದ್ದರೆ ಏನು ಮಾಡುವುದು?
ಈ ಮಸೂದೆ ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆಯಾಗಿ ಜಾರಿಯಾದ ಬಳಿಕ ಸ್ಥಳೀಯ ಅಭ್ಯರ್ಥಿಗಳಿಗೆ ಕಾನೂನು ರೀತಿಯಲ್ಲಿ ನೀಡಬೇಕಾದ ಮೀಸಲಾತಿ ನೀಡದೇ ಹೋದಲ್ಲಿ, ಅಂತಹ ಖಾಸಗಿ ಸಂಸ್ಥೆಗಳ ವಿರುದ್ಧ 10 ಸಾವಿರ ರೂ.ನಿಂದ 25 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಅಲ್ಲದೆ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವ ಅವಕಾಶ ಕೂಡ ಇದೆ.
ಒಂದು ವೇಳೆ ನಿಗದಿತ ಉದ್ಯೋಗಕ್ಕೆ ಸರ್ಕಾರದ ನಿಗದಿಪಡಿಸಿದ ಶೇಕಡವಾರು ಪ್ರಮಾಣದಲ್ಲಿ ನೇಮಕಾತಿಗೆ ಸ್ಥಳೀಯ ಕನ್ನಡಿಗರು ಲಭ್ಯವಿಲ್ಲದೇ ಹೋದಲ್ಲಿ ಆಯಾ ಕಂಪನಿಗಳು ಕಾಯ್ದೆಯ ನಿಬಂಧನೆ ಸಡಿಲಿಸಿ ಇತರರನ್ನು ಆ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬಹುದು.
ಈ ಮೀಸಲಾತಿಗೆ ಯಾರು ಅರ್ಹರು? ಸ್ಥಳೀಯರು ಮತ್ತು ಕನ್ನಡಿಗರು ಎಂದರೆ ಯಾರು?
ಕನ್ನಡಿಗರಿಗೆ ಇರುವ ಈ ಉದ್ಯೋಗ ಮೀಸಲಾತಿಯನ್ನು ಪಡೆಯಲು ಅರ್ಹತೆ ಎಂದರೆ ಅದು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರಬೇಕು, ಇಲ್ಲವೇ ಕನಿಷ್ಟ 15 ವರ್ಷ ಇಲ್ಲಿ ನೆಲೆಸಿದ್ದು ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿತಿರಬೇಕು. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿದ್ದರೂ ಅವರಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರದೇ ಹೋದಲ್ಲಿ ಅವರಿಗೆ ಈ ಅವಕಾಶ ಸಿಗಲಾರದು.
ಹಾಗೆಯೇ ಒಂದು ವೇಳೆ ಅವರ ಮಾತೃಭಾಷೆ ಕನ್ನಡವಲ್ಲದೇ ಹೋದರೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವ ಮಾಧ್ಯಮಿಕ ಶಾಲಾ ಪ್ರಮಾಣಪತ್ರ ಅಥವಾ ನಿರ್ದಿಷ್ಟಪಡಿಸಿರುವ ಕನ್ನಡ ಪ್ರಾವಿಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಅಂಥವರು ಈ ಮೀಸಲಾತಿಗೆ ಅರ್ಹರಾಗಲಿದ್ದಾರೆ.
ಮಸೂದೆ ವಿರೋಧಿಸುತ್ತಿರುವ ಉದ್ಯಮಿಗಳ ವಾದವೇನು?
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸರ್ಕಾರದ ಮಹತ್ವದ ನಡೆಯ ವಿರುದ್ಧ ರಾಜ್ಯದ ಐಟಿ ಮತ್ತು ಬಿಟಿ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಯೋಟೆಕ್ನಾಲಜಿ(ಬಿಟಿ) ವಲಯದ ಪ್ರಮುಖರಾದ ಕಿರಣ್ ಮಜುಂದಾರ್ ಶಾ ಅವರು ಈ ಕುರಿತು ಟ್ವೀಟ್ ಮಾಡಿದ್ದು, “ಟೆಕ್ ಹಬ್ ಆಗಿ ನಮಗೆ ಕೌಶಲ್ಯಯುತ ಪ್ರತಿಭೆಗಳು ಬೇಕಾಗುತ್ತದೆ. ಸ್ಥಳೀಯರಿಗೆ ಕೆಲಸ ಕೊಡಬೇಕು ಎಂದು ನಾವು ತಂತ್ರಜ್ಞಾನದಲ್ಲಿ ಈಗ ಇರುವ ನಮ್ಮ ಸ್ಥಾನವನ್ನು ಕಳೆದುಕೊಳ್ಳಲಾಗದು. ಉನ್ನತ ಕೌಶಲ ಬೇಡುವ ಉದ್ಯೋಗಗಳನ್ನು ಈ ನೀತಿಯಿಂದ ಹೊರಗಿಡುವ ಅವಕಾಶಗಳನ್ನು ಮಸೂದೆಯಲ್ಲಿ ಕಲ್ಪಿಸಬೇಕಿದೆ” ಎಂದು ಹೇಳಿದ್ದಾರೆ. ಆ ಮೂಲಕ ಕನ್ನಡಿಗರು ಪ್ರತಿಭಾವಂತರಲ್ಲ ಎಂಬ ಅಭಿಪ್ರಾಯ ಕಿರಣ್ ಶಾ ಅವರದ್ದೇ? ಎಂಬ ಟೀಕೆಗಳಿಗೂ ಅವರ ಟ್ವೀಟ್ ಕಾರಣವಾಗಿದೆ.
ಹಾಗೆಯೇ ಮತ್ತೊಬ್ಬ ಉದ್ಯಮಿ ಟಿ ವಿ ಮೋಹನದಾಸ್ ಪೈ ಕೂಡ ಸರ್ಕಾರದ ಮಸೂದೆಯನ್ನು ಟೀಕಿಸಿದ್ದು, “ನೀವು ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿಸಬೇಕೆಂದಿದ್ದರೆ ಅವರಿಗೆ ಉನ್ನತ ಶಿಕ್ಷಣ ಕೊಡಿಸಲು, ತರಬೇತಿ ಮತ್ತು ಕೌಶಲ್ಯ ಕಲಿಸಲು ಹೆಚ್ಚು ಹೂಡಿಕೆ ಮಾಡಿ. ಆ ಮೂಲಕ ಅವರನ್ನು ಪರಿಣಿತರನ್ನಾಗಿ ಮಾಡಿ. ಅದು ಬಿಟ್ಟು ಹೀಗೆ ಮೀಸಲಾತಿ ಕೊಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನೀವು ಏನು ಸಾಧಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಉದ್ಯಮ ವಲಯದ ಟೀಕೆಗೆ ಸರ್ಕಾರದ ಸಮರ್ಥನೆ ಏನು?
ಮಸೂದೆಗೆ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ರಾಜ್ಯದ ಉದ್ಯಮಿಗಳಿಂದ ಅಪಸ್ವರ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ತಾಂತ್ರಿಕ ಸಮಸ್ಯೆಗಳನ್ನು ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ವಿರೋಧ ಮಾಡಿದ ಉದ್ಯಮಿಗಳು ಕೂಡ ರಾಜ್ಯದಿಂದಲೇ ಬೆಳೆದಿರುವವರು ಎಂದು ಹೇಳುವ ಮೂಲಕ ಉದ್ಯಮಿಗಳಿಗೆ ರಾಜ್ಯದ ಹಿತ ಬಿಟ್ಟು ನೀವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಹಾಗೇ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಪರಿಣತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಮಸೂದೆಯನ್ನು ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಯಾರೂ ಭಯಪಡುವ ಅಗತ್ಯವಿಲ್ಲ. ಸುದೀರ್ಘ ಸಮಾಲೋಚನೆ ನಡೆಸುತ್ತೇವೆ. ಸ್ಥಳೀಯರಿಗೆ ಉದ್ಯೋಗ ಒದಗಿಸುವುದು ಮತ್ತು ಹೂಡಿಕೆ ಆಕರ್ಷಿಸುವುದು; ಎರಡೂ ರಾಜ್ಯ ಸರ್ಕಾರದ ಗುರಿ ಎಂದು ಹೇಳಿದ್ದಾರೆ.
ಇನ್ನು ಬೃಹತ್ ಕೈಗಾರಿಕಾ ಸಚಿವ ಡಾ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿ, ಮೀಸಲಾತಿ ವಿಚಾರವಾಗಿ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆಗೆ ಸಿದ್ಧ. ನಾವು ಚೀನಾದಂತಹ ದೇಶದೊಂದಿಗೆ ಸೆಣಸಾಡಬೇಕಿದೆ. ಕನ್ನಡಿಗರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಸಿಎಂ, ಡಿಸಿಎಂ ಹಾಗೂ ಕಾರ್ಮಿಕ ಸಚಿವರು, ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಕನ್ನಡಿಗರ ರಕ್ಷಣೆಯ ಜೊತೆಗೆ ಉದ್ಯಮಗಳ ರಕ್ಷಣೆಯೂ ಆಗಬೇಕಿದೆ ಎಂದು ಹೇಳಿದ್ದಾರೆ.
ಕನ್ನಡಪರ ಹೋರಾಟಗಾರರು ಏನೆನ್ನುತ್ತಾರೆ?
ಈ ಮಹತ್ವದ ಮಸೂದೆಯ ಕುರಿತು ಉದ್ಯಮ ವಲಯದ ಪ್ರತಿರೋಧದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆಯೇ ಮುಖ್ಯಮಂತ್ರಿಗಳು ಪ್ರಮುಖ ಕನ್ನಡಪರ ಸಂಘಟನೆಗಳ ಪ್ರಮುಖರು ಹಾಗೂ ಬುದ್ದಿಜೀವಿಗಳು, ತಜ್ಞರ ಸಭೆ ಕರೆದು ಚರ್ಚಿಸಿದ್ದಾರೆ. ಉದ್ಯಮ ವಲಯವನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಕನ್ನಡಿಗರ ಹಿತಾಸಕ್ತಿಯನ್ನು ಕಾಯುವ ಬದ್ಧತೆ ತಮಗಿದೆ. ಆದರೆ, ಮಸೂದೆಗೆ ಕಾನೂನು ತೊಡಕುಗಳು ಬಾರದಂತೆ ಅದನ್ನು ಬಲಪಡಿಸುವ ಕೆಲಸ ಕೂಡ ಸರ್ಕಾರದಿಂದ ನಡೆಯಲಿದೆ. ಆವರೆಗೆ ಸಂಘಟನೆಗಳು, ಕನ್ನಡಪರ ಹೋರಾಟಗಾರರು ತಾಳ್ಮೆಯಿಂದ ಸಹಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ ಎನ್ನಲಾಗಿದೆ.
"ಸರ್ಕಾರಿ ಸೇವೆ ಮತ್ತು ಕೈಗಾರಿಕಾ ವಲಯದಲ್ಲಿ ಸಾರ್ವಜನಿಕ ಉದ್ಯೋಗಾವಕಾಶಗಳು ಗಣನೀಯವಾಗಿ ಕುಗ್ಗುತ್ತಿರುವ ಮತ್ತು ಅದೇ ಹೊತ್ತಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ದೊಡ್ಡ ಮಟ್ಟದಲ್ಲಿ ಹಿಗ್ಗುತ್ತಿರುವ ಹೊತ್ತಿನಲ್ಲಿ ಸರ್ಕಾರದ ಈ ಹೊಸ ಮಸೂದೆ ಕನ್ನಡಿಗರ ಪಾಲಿಗೆ ದೊಡ್ಡ ಬದಲಾವಣೆ ತರಬಲ್ಲದು. ನಮ್ಮ ರಾಜ್ಯದಲ್ಲಿ ಅಗ್ಗದ ಜಮೀನು ಪಡೆದು, ಪುಕ್ಕಟೆ ವಿದ್ಯುತ್, ನೀರು ಪಡೆದು, ಮೇಲಾಗಿ ತೆರಿಗೆ ವಿನಾಯ್ತಿಯನ್ನೂ ಪಡೆದು ಉದ್ಯಮ ನಡೆಸುವವರು ನಮಗೇ ಉದ್ಯೋಗಾವಕಾಶ ಕೊಡುವುದಿಲ್ಲ ಎಂದರೆ ಯಾವ ನ್ಯಾಯ ಇದು?, ಸರ್ಕಾರ ಇಂತಹ ವಾದಗಳಿಗೆ ಸೊಪ್ಪು ಹಾಕದೆ ಕನ್ನಡಿಗರ ಹಿತ ಕಾಯುವ ದಿಸೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು" ಎಂಬುದು ಕನ್ನಡಪರ ಹೋರಾಟಗಾರ ಪಟ್ಟು.