The Federal Impact | ಪಬ್ಲಿಕ್ ಪರೀಕ್ಷೆ ಗೊಂದಲ: 5, 8, 9ನೇ ತರಗತಿ ಮೌಲ್ಯಾಂಕನ ಪರಿಗಣಿಸಲು ಇಲಾಖೆ ನಿರ್ಧಾರ
ಪಬ್ಲಿಕ್ ಪರೀಕ್ಷೆಯ ಗೊಂದಲ, ನಿರ್ಲಕ್ಷ್ಯ ಕುರಿತು ಸರಣಿ ವರದಿ ಪ್ರಕಟಿಸಿದ್ದ ʼದ ಫೆಡರಲ್ ಕರ್ನಾಟಕʼ, ಸ್ಯಾಟ್ಸ್ ತಂತ್ರಾಂಶಕ್ಕೆ ವಿದ್ಯಾರ್ಥಿಗಳ ಮಾಹಿತಿ ಅಪ್ಲೋಡ್ ಮಾಡದೇ ಇರುವುದರಿಂದಾಗಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೂಡ ಕಳೆದ ವಾರ ವರದಿ ಮಾಡಿತ್ತು.;
ಕಳೆದ ಎರಡೂವರೆ ತಿಂಗಳಿನಿಂದ ಗೊಂದಲದ ಗೂಡಾಗಿದ್ದ 5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶವನ್ನು ಕೈಬಿಟ್ಟು, ಎಫ್ಎ(ಫಾರ್ಮೇಟಿವ್ ಅಸೆಸ್ಮೆಂಟ್) ಮತ್ತುಎಸ್ಎ(ಸಮ್ಮೇಟಿವ್ ಅಸೆಸ್ಮೆಂಟ್) ಪರೀಕ್ಷೆಗಳ ಅಂಕಗಳನ್ನೇ ಪರಿಗಣಿಸಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಸೋಮವಾರ(ಮೇ 20) ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಪ್ರವೇಶ ಪಡೆಯಲು, ಶುಲ್ಕ ಕಟ್ಟಲು, ವರ್ಗಾವಣೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಷಕರ ದೂರುಗಳನ್ನು ಪರಿಗಣಿಸಿ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಇಲಾಖೆಯ ಗೊಂದಲಕಾರಿ ನಡೆಗಳು ಮತ್ತು ನಿರ್ಲಕ್ಷ್ಯ ಧೋರಣೆಯ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿದ್ದ ʼದ ಫೆಡರಲ್ ಕರ್ನಾಟಕʼ, ಪಬ್ಲಿಕ್ ಪರೀಕ್ಷೆ ಗೊಂದಲದಿಂದಾಗಿ ವಿದ್ಯಾರ್ಥಿಗಳ ಪ್ರಗತಿಯನ್ನು ಸ್ಯಾಟ್ಸ್ ತಂತ್ರಾಂಶ(Student Achievement Tracking System)ಕ್ಕೆ ಅಪ್ಲೋಡ್ ಮಾಡದೇ ಇರುವುದರಿಂದಾಗಿ ಪ್ರವೇಶಾತಿ, ವರ್ಗಾವಣೆ ಮತ್ತಿತರ ವಿಷಯದಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಳೆದ ವಾರ ವರದಿ ಮಾಡಿತ್ತು.
Also Read- ಶಾಲಾ ಶಿಕ್ಷಣ ಇಲಾಖೆ | ಪ್ರತಿಪಕ್ಷಗಳು ಮುಗಿಬೀಳಲು ಕಾರಣವಾದ ಸರಣಿ ಯಡವಟ್ಟುಗಳು
ಇದೀಗ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ಮನವಿಗಳಿಗೆ ಕೊನೆಗೂ ಶಾಲಾ ಶಿಕ್ಷಣ ಮಂಡಳಿ ಕಿವಿಗೊಟ್ಟಿದ್ದು, ತಡವಾಗಿಯಾದರೂ ಸಾರ್ವಜನಿಕ ಟೀಕೆ ಮತ್ತು ಇಲಾಖೆಯ ವಿರುದ್ಧದ ಆಕ್ರೋಶಗಳಿಗೆ ಮಣಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಪಬ್ಲಿಕ್ ಪರೀಕ್ಷೆಯನ್ನು ಎಸ್ಎ-2 ಎಂದು ಮರು ವ್ಯಾಖ್ಯಾನ ಮಾಡಿರುವ ಇಲಾಖೆಯ, “ಎಸ್ಎ-2 ಫಲಿತಾಂಶ ಪ್ರಕಟಿಸಲು ಕೋರ್ಟ್ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪ್ರವೇಶ ನೀಡಲು, ಇತರೆ ಶಾಲೆಗಳಿಗೆ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ಅವರ ಹಿಂದಿನ ತರಗತಿಯ(2023-24ನೇ ಸಾಲಿನ) ಎಫ್ಎ- 1, 2, 3, 4 ಮತ್ತು ಎಸ್ಎ-1 ರ ಮೌಲ್ಯಾಂಕನದ ಆಧಾರದ ಮೇಲೆ ಮುಂದಿನ ತರಗತಿಗೆ ಮುಂದುವರಿಸಲು ಅವಕಾಶ ನೀಡುವುದು” ಎಂದು ಸುತ್ತೋಲೆಯಲ್ಲಿ ಹೇಳಿದೆ.
ಆದರೆ, ಸ್ಯಾಟ್ಸ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ವಿವರಗಳ ಕುರಿತು ಸುತ್ತೋಲೆಯಲ್ಲಿ ಪ್ರಸ್ತಾಪವಿಲ್ಲ. ಸುಪ್ರೀಂಕೋರ್ಟ್ ತಡೆಯಾಜ್ಞೆಯ ಪ್ರಕಾರ ಸ್ಯಾಟ್ಸ್ ತಂತ್ರಾಂಶಕ್ಕೆ ಫಲಿತಾಂಶವನ್ನು ಅಪ್ಲೋಡ್ ಮಾಡುವಂತಿಲ್ಲ. ಆದರೆ ಸ್ಯಾಟ್ಸ್ನಲ್ಲಿ ವಿದ್ಯಾರ್ಥಿಗಳ ಪ್ರಗತಿ ಅಪ್ಲೋಡ್ ಮಾಡದೇ ಇದ್ದರೆ ವಿದ್ಯಾರ್ಥಿಗಳ ದಾಖಲಾತಿ, ವರ್ಗಾವಣೆ ಮತ್ತಿತರ ಕಾರ್ಯಗಳಿಗೆ ತೊಡಕಾಗಲಿದೆ.
Also Read- ಪಬ್ಲಿಕ್ ಪರೀಕ್ಷೆ ಅವಾಂತರ | ಸ್ಯಾಟ್ಸ್ ಅಪ್ಲೋಡ್ ಆಗದೆ ದಾಖಲಾತಿ ಬಿಕ್ಕಟ್ಟು
ಆ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ʼದ ಫೆಡರಲ್ ಕರ್ನಾಟಕʼ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹಾಗಾಗಿ ಪೋಷಕರು ಮತ್ತು ಆಡಳಿತ ಮಂಡಳಿಗಳ ಒತ್ತಾಯಕ್ಕೆ ಮಣಿದು ಇಲಾಖೆ, ಸುತ್ತೋಲೆ ಹೊರಡಿಸಿ ಪಬ್ಲಿಕ್ ಪರೀಕ್ಷೆ ವಿಷಯದಲ್ಲಿ ಕಳೆದ ಎರಡೂವರೆ ತಿಂಗಳಿಂದ ಮುಂದುವರಿದಿರುವ ಗೊಂದಲಗಳಿಗೆ ತೇಪೆ ಹಾಕುವ ಯತ್ನ ನಡೆಸಿದರೂ, ಗೊಂದಲಗಳು ಇನ್ನೂ ಬಾಕಿ ಇವೆ.
ಇಲಾಖೆ ತರಾಟೆಗೆ ತೆಗೆದುಕೊಂಡಿದ್ದ ಸಿಎಂ
ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ನಡೆಗಳು ಸ್ವತಃ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೇ ತೀವ್ರ ಮುಜಗರ ತಂದಿವೆ. ಪೋಷಕರು, ಆಡಳಿತ ಮಂಡಳಿಗಳು, ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ತೀವ್ರ ಟೀಕೆಗಳಿಂದ ಮುಜಗರಕ್ಕೀಡಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಳೆದ ವಾರದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಯಾರನ್ನು ಕೇಳಿ ನೀವು ನಿರ್ಧಾರ ಕೈಗೊಂಡಿದ್ದೀರಿ? ಯಾಕೆ ಅಷ್ಟೊಂದು ಗೊಂದಲ? ಎಂದು ಅವರು ಕಿಡಿಕಾರಿದ್ದರು.
ಏನಿದು ಪಬ್ಲಿಕ್ ಪರೀಕ್ಷೆ ಗೊಂದಲ?
5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ವಿಷಯದಲ್ಲಿ ಶಿಕ್ಷಣ ಇಲಾಖೆ ಪ್ರತಿ ಹಂತದಲ್ಲೂ ಎಡವಿದೆ. ಮೊದಲನೆಯದಾಗಿ ಕೇಂದ್ರ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯ ಭಾಗವಾಗಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪಬ್ಲಿಕ್ ಪರೀಕ್ಷೆ(ಬೋರ್ಡ್ ಪರೀಕ್ಷೆ)ಯನ್ನು ಮುಂದುವರಿಸಿದ್ದೇ ಕಾಂಗ್ರೆಸ್ ಸರ್ಕಾರದ ಚುನಾವಣಾಪೂರ್ವ ಘೋಷಣೆಗೆ ಸಂಪೂರ್ಣ ತದ್ವಿರುದ್ಧ. ಎರಡನೆಯದಾಗಿ, ಕಳೆದ ಬಾರಿ ಪಬ್ಲಿಕ್ ಪರೀಕ್ಷೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್, ಮುಂದಿನ ಬಾರಿ ಪರೀಕ್ಷೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಿ ಎಂದು ಸೂಚನೆ ನೀಡಿದ್ದರೂ, ಇಲಾಖೆ ಒಂದು ವರ್ಷವಿಡೀ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಏಕಾಏಕಿ ಮತ್ತೆ ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿತ್ತು.
Also Read - THE FEDERAL EXPLAINER | ಪಬ್ಲಿಕ್ ಪರೀಕ್ಷೆ: ಯಾಕಿಷ್ಟು ಗೊಂದಲ? ಏನಿದು ವಿವಾದ?
ಇಂತಹ ಏಕಪಕ್ಷೀಯ ನಿರ್ಧಾರದ ಫಲವಾಗಿ ಈ ಬಾರಿಯೂ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಎರಡು ವಿಷಯದ ಪರೀಕ್ಷೆ ನಡೆದ ಬಳಿಕ ಕೋರ್ಟ್ ತಡೆಯಾಜ್ಞೆ ಬಂದಿತು. ಆಗಲಾದರೂ ಇಲಾಖೆ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಪರೀಕ್ಷೆ ಕೈಬಿಡುವ ಬದಲು, ಹಠಕ್ಕೆ ಬಿದ್ದಂತೆ ಮೇಲ್ಮನವಿ ಸಲ್ಲಿಸಿ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪರೀಕ್ಷೆ ನಡೆಸಿದ ಬಳಿಕ ಮೌಲ್ಯಮಾಪನದ ಬಿಕ್ಕಟ್ಟು ಶುರುವಾಯಿತು. ಚುನಾವಣಾ ತರಬೇತಿ, ಅತ್ಯಲ್ಪ ಕಾಲದಲ್ಲಿ ಮೌಲ್ಯಮಾಪನ ಮಾಡುವ ಸವಾಲಿನ ನಡುವೆ ತರಾತುರಿಯಲ್ಲಿ ಮೌಲ್ಯಮಾಪನ ಮಾಡಿದ್ದರಿಂದ ತಪ್ಪು ಟೋಟಲಿಂಗ್, ದೋಷಪೂರಿತ ಮೌಲ್ಯಮಾಪನ, ಮೌಲ್ಯಮಾಪನ ಮಾಡದೇ ಉತ್ತರಪತ್ರಿಕೆಗಳ ಬಂಡಲುಗಳನ್ನು ಶಾಲೆಗೆ ವಾಪಸು ಕಳಿಸಿದ್ದು ಸೇರಿದಂತೆ ನೂರೆಂಟು ಯಡವಟ್ಟುಗಳು ಮೌಲ್ಯಮಾಪನದಲ್ಲೂ ಕಾಣಿಸಿಕೊಂಡವು.
ಅದಾದ ಬಳಿಕ ಫಲಿತಾಂಶದಲ್ಲೂಅದೇ ಗೊಂದಲಗಳು ಪುನರಾವರ್ತನೆಯಾದವು. ಸುಪ್ರೀಂಕೋರ್ಟಿನ ಆದೇಶದ ನಿರೀಕ್ಷೆಯಲ್ಲಿದ್ದ ಇಲಾಖೆಯ ಅಧಿಕಾರಿಗಳು, ರಂಗೋಲಿ ಕೆಳಗೆ ನುಸುಳುವ ಜಾಣತನ ತೋರಲು ಹೋಗಿ ಕೋರ್ಟ್ ಆದೇಶ ಹೊರಬೀಳುವ ಮುನ್ನವೇ ಫಲಿತಾಂಶ ಪ್ರಕಟಿಸಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸಿದರು. ಅಧಿಕಾರಿಗಳ ಅಂತಹ ನಡೆಯ ಅರಿವಿದ್ದ ಕೋರ್ಟ್, ಒಂದು ವೇಳೆ ಆದೇಶ ಹೊರಬೀಳುವ ಮುನ್ನ ಫಲಿತಾಂಶ ಪ್ರಕಟಿಸಿದ್ದರೂ ಅದನ್ನು ಮಕ್ಕಳ ಪ್ರಗತಿ ದಾಖಲಿಸುವ ಸ್ಯಾಟ್ಸ್ ಜಾಲತಾಣಕ್ಕೆ ಅಪ್ಲೋಡ್ ಮಾಡದಂತೆ ಮತ್ತು ಫಲಿತಾಂಶವನ್ನು ಯಾವುದೇ ಉದ್ದೇಶಕ್ಕೂ ಬಳಸದಂತೆ ಕಟ್ಟಾಜ್ಞೆ ಹೊರಡಿಸಿತು. ಆ ಮೂಲಕ ಫಲಿತಾಂಶ ರದ್ದುಪಡಿಸಿ ಇಲಾಖೆಗ ಚಾಟಿ ಬೀಸಿತು.
ಇದೀಗ ಸರ್ಕಾರಿ ಶಾಲೆಗಳು ಆರಂಭಕ್ಕೆ ಒಂದು ವಾರ ಬಾಕಿ ಇದೆ. ಇನ್ನು ಖಾಸಗಿ ಶಾಲೆಗಳು ಆರಂಭವಾಗಿ ವಾರ ಕಳೆದಿದೆ. ಆದರೂ 5, 8 ಮತ್ತು 9ನೇ ತರಗತಿ ಮಕ್ಕಳ ಫಲಿತಾಂಶ ಅಧಿಕೃತವಾಗಿ ಪ್ರಕಟವೇ ಆಗಿಲ್ಲ. ಮಕ್ಕಳ ಫಲಿತಾಂಶವಾಗಲೀ, ಅವರ ಶೈಕ್ಷಣಿಕ ಪ್ರಗತಿಯ ಮಾಹಿತಿ ಸ್ಯಾಟ್ಸ್ನಲ್ಲಿ ಅಪ್ಲೋಡ್ ಆಗದೇ ಮುಂದಿನ ತರಗತಿಗೆ ದಾಖಲಾತಿ, ಬೇರೆ ಶಾಲೆಗಳಿಗೆ ವರ್ಗಾವಣೆಯಂತಹ ಅಗತ್ಯ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು.