ಶಾಲಾ ಶಿಕ್ಷಣ ಇಲಾಖೆ | ಪ್ರತಿಪಕ್ಷಗಳು ಮುಗಿಬೀಳಲು ಕಾರಣವಾದ ಸರಣಿ ಯಡವಟ್ಟುಗಳು
x

ಶಾಲಾ ಶಿಕ್ಷಣ ಇಲಾಖೆ | ಪ್ರತಿಪಕ್ಷಗಳು ಮುಗಿಬೀಳಲು ಕಾರಣವಾದ ಸರಣಿ ಯಡವಟ್ಟುಗಳು

ಶಾಲಾ ಶಿಕ್ಷಣದಂತಹ ಸೂಕ್ಷ್ಮ ವಿಷಯದಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗುವ ಮುನ್ನ ಇಲಾಖೆ ಕನಿಷ್ಟ ಭಾಗಿದಾರರಾದ ಪೋಷಕರು, ಶಾಲಾ ಆಡಳಿತ ಮಂಡಳಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸುವುದು ವಾಡಿಕೆ. ಆದರೆ, ಪಬ್ಲಿಕ್ ಪರೀಕ್ಷೆ, ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಮೂರು ಪರೀಕ್ಷೆ ನಡೆಸುವ ವಿಷಯದಲ್ಲಿ ಇಲಾಖೆ ಅಂತಹ ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂಬುದು ವ್ಯಾಪಕ ಟೀಕೆಗೆ ಗ್ರಾಸವಾಗಿದೆ.


ಪೋಷಕರು, ಶಾಲಾ ಆಡಳಿತ ಮಂಡಳಿ ಸೇರಿದಂತೆ ಸಂಬಂಧಪಟ್ಟ ಯಾರೊಬ್ಬರೊಂದಿಗೂ ಚರ್ಚಿಸದೆ, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಪಬ್ಲಿಕ್ ಪರೀಕ್ಷೆ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ, ಸುಮಾರು 30 ಲಕ್ಷ ಮಕ್ಕಳು, ಕನಿಷ್ಟ 60 ಲಕ್ಷ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಅದರ ಬೆನ್ನಲ್ಲೇ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶದ ಭಾರೀ ಕುಸಿತವನ್ನು ಮರೆಮಾಚಲು ಗ್ರೇಸ್ ಅಂಕ ನೀಡುವ ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಲಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ಸರಣಿ ಯಡವಟ್ಟುಗಳು ಇದೀಗ ಪ್ರತಿಪಕ್ಷಗಳು ಸರ್ಕಾರ ಮತ್ತು ಇಲಾಖೆಯ ಸಚಿವರ ಮೇಲೆ ಮುಗಿಬೀಳಲು ಕಾರಣವಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೇರಿದಂತೆ ಪ್ರತಿಪಕ್ಷ ಮುಖಂಡರು ಶಿಕ್ಷಣ ಇಲಾಖೆಯ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಂತಹ ಸೂಕ್ಷ್ಮ ವಿಷಯದಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗುವ ಮುನ್ನ ಇಲಾಖೆ ಮತ್ತು ಸಚಿವರು ಕನಿಷ್ಟ ಭಾಗಿದಾರರಾದ ಪೋಷಕರು, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸುವುದು ವಾಡಿಕೆ. ಆದರೆ, ಪಬ್ಲಿಕ್ ಪರೀಕ್ಷೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿಗೆ ವರ್ಷದಲ್ಲಿ ಮೂರು ಪರೀಕ್ಷೆ ನಡೆಸುವ ವಿಷಯದಲ್ಲಿ ಇಲಾಖೆ ಅಂತಹ ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಪಬ್ಲಿಕ್ ಪರೀಕ್ಷೆ ವಿಷಯದಲ್ಲಿ ನ್ಯಾಯಾಲಯವೇ ಈ ವಿಷಯದಲ್ಲಿ ಇಲಾಖೆಗೆ ಛೀಮಾರಿ ಹಾಕಿದ್ದರೆ, ಮೂರು ಮೂರು ಪರೀಕ್ಷೆ ನಡೆಸುವುದು ಮತ್ತು ಮನಸೋ ಇಚ್ಛೆ ಗ್ರೇಸ್ ಅಂಕ ನೀಡುವ ವಿಷಯದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳಿಗೆ ಛೀಮಾರಿ ಹಾಕಿದ್ದಾರೆ.

ಆ ಹಿನ್ನೆಲೆಯಲ್ಲಿ ತೀವ್ರ ಸಾರ್ವಜನಿಕ ಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಯಡವಟ್ಟುಗಳು ಯಾವುವು? ಅದೇಕೆ ಇಲಾಖೆಯ ನಿರ್ಧಾರಗಳು ವ್ಯಾಪಕ ಟೀಕೆಗೆ ಒಳಗಾಗಿವೆ ಎಂಬುದನ್ನು ʼದ ಫೆಡರಲ್ ಕರ್ನಾಟಕʼ ಇಲ್ಲಿ ವಿವರಿಸಿದೆ.

ಬಗೆಹರಿಯದ ಪಬ್ಲಿಕ್ ಪರೀಕ್ಷೆ ಗೊಂದಲ

5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ವಿಷಯದಲ್ಲಿ ಶಿಕ್ಷಣ ಇಲಾಖೆ ಪ್ರತಿ ಹಂತದಲ್ಲೂ ಎಡವಿದೆ. ಮೊದಲನೆಯದಾಗಿ ಕೇಂದ್ರ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯ ಭಾಗವಾಗಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪಬ್ಲಿಕ್ ಪರೀಕ್ಷೆ(ಬೋರ್ಡ್ ಪರೀಕ್ಷೆ)ಯನ್ನು ಮುಂದುವರಿಸಿದ್ದೇ ಕಾಂಗ್ರೆಸ್ ಸರ್ಕಾರದ ಚುನಾವಣಾಪೂರ್ವ ಘೋಷಣೆಗೆ ಸಂಪೂರ್ಣ ತದ್ವಿರುದ್ಧ. ಎರಡನೆಯದಾಗಿ, ಕಳೆದ ಬಾರಿ ಪಬ್ಲಿಕ್ ಪರೀಕ್ಷೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್, ಮುಂದಿನ ಬಾರಿ ಪರೀಕ್ಷೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಿ ಎಂದು ಸೂಚನೆ ನೀಡಿದ್ದರೂ, ಇಲಾಖೆ ಒಂದು ವರ್ಷವಿಡೀ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಏಕಾಏಕಿ ಮತ್ತೆ ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿತ್ತು.

ಇಂತಹ ಏಕಪಕ್ಷೀಯ ನಿರ್ಧಾರದ ಫಲವಾಗಿ ಈ ಬಾರಿಯೂ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಎರಡು ವಿಷಯದ ಪರೀಕ್ಷೆ ನಡೆದ ಬಳಿಕ ಕೋರ್ಟ್ ತಡೆಯಾಜ್ಞೆ ಬಂದಿತು. ಆಗಲಾದರೂ ಇಲಾಖೆ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಪರೀಕ್ಷೆ ಕೈಬಿಡುವ ಬದಲು, ಹಠಕ್ಕೆ ಬಿದ್ದಂತೆ ಮೇಲ್ಮನವಿ ಸಲ್ಲಿಸಿ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪರೀಕ್ಷೆ ನಡೆಸಿದ ಬಳಿಕ ಮೌಲ್ಯಮಾಪನದ ಬಿಕ್ಕಟ್ಟು ಶುರುವಾಯಿತು. ಚುನಾವಣಾ ತರಬೇತಿ, ಅತ್ಯಲ್ಪ ಕಾಲದಲ್ಲಿ ಮೌಲ್ಯಮಾಪನ ಮಾಡುವ ಸವಾಲಿನ ನಡುವೆ ತರಾತುರಿಯಲ್ಲಿ ಮೌಲ್ಯಮಾಪನ ಮಾಡಿದ್ದರಿಂದ ತಪ್ಪು ಟೋಟಲಿಂಗ್, ದೋಷಪೂರಿತ ಮೌಲ್ಯಮಾಪನ, ಮೌಲ್ಯಮಾಪನ ಮಾಡದೇ ಉತ್ತರಪತ್ರಿಕೆಗಳ ಬಂಡಲುಗಳನ್ನು ಶಾಲೆಗೆ ವಾಪಸು ಕಳಿಸಿದ್ದು ಸೇರಿದಂತೆ ನೂರೆಂಟು ಯಡವಟ್ಟುಗಳು ಮೌಲ್ಯಮಾಪನದಲ್ಲೂ ಕಾಣಿಸಿಕೊಂಡವು.

ಅದಾದ ಬಳಿಕ ಫಲಿತಾಂಶದಲ್ಲೂಅದೇ ಗೊಂದಲಗಳು ಪುನರಾವರ್ತನೆಯಾದವು. ಸುಪ್ರೀಂಕೋರ್ಟಿನ ಆದೇಶದ ನಿರೀಕ್ಷೆಯಲ್ಲಿದ್ದ ಇಲಾಖೆಯ ಅಧಿಕಾರಿಗಳು, ರಂಗೋಲಿ ಕೆಳಗೆ ನುಸುಳುವ ಜಾಣತನ ತೋರಲು ಹೋಗಿ ಕೋರ್ಟ್ ಆದೇಶ ಹೊರಬೀಳುವ ಮುನ್ನವೇ ಫಲಿತಾಂಶ ಪ್ರಕಟಿಸಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸಿದರು. ಅಧಿಕಾರಿಗಳ ಅಂತಹ ನಡೆಯ ಅರಿವಿದ್ದ ಕೋರ್ಟ್, ಒಂದು ವೇಳೆ ಆದೇಶ ಹೊರಬೀಳುವ ಮುನ್ನ ಫಲಿತಾಂಶ ಪ್ರಕಟಿಸಿದ್ದರೂ ಅದನ್ನು ಮಕ್ಕಳ ಪ್ರಗತಿ ದಾಖಲಿಸುವ ಸ್ಯಾಟ್ಸ್ ಜಾಲತಾಣಕ್ಕೆ ಅಪ್ಲೋಡ್ ಮಾಡದಂತೆ ಮತ್ತು ಫಲಿತಾಂಶವನ್ನು ಯಾವುದೇ ಉದ್ದೇಶಕ್ಕೂ ಬಳಸದಂತೆ ಕಟ್ಟಾಜ್ಞೆ ಹೊರಡಿಸಿತು. ಆ ಮೂಲಕ ಫಲಿತಾಂಶ ರದ್ದುಪಡಿಸಿ ಇಲಾಖೆಗ ಚಾಟಿ ಬೀಸಿತು.

ಇದೀಗ ಸರ್ಕಾರಿ ಶಾಲೆಗಳು ಆರಂಭಕ್ಕೆ ಒಂದು ವಾರ ಬಾಕಿ ಇದೆ. ಇನ್ನು ಖಾಸಗಿ ಶಾಲೆಗಳು ಆರಂಭವಾಗಿ ವಾರ ಕಳೆದಿದೆ. ಆದರೂ 5, 8 ಮತ್ತು 9ನೇ ತರಗತಿ ಮಕ್ಕಳ ಫಲಿತಾಂಶ ಅಧಿಕೃತವಾಗಿ ಪ್ರಕಟವೇ ಆಗಿಲ್ಲ. ಮಕ್ಕಳ ಅಂಕ ಗಳಿಕೆಯ ಮಾಹಿತಿಯಾಗಲೀ ಅವರ ಶೈಕ್ಷಣಿಕ ಪ್ರಗತಿಯ ಮಾಹಿತಿಯಾಗಲೀ ತಿಳಿಯದೇ ಮುಂದಿನ ತರಗತಿಗಳಲ್ಲಿ ಆ ಮಕ್ಕಳಿಗೆ ಎಷ್ಟು ಮತ್ತು ಹೇಗೆ ಬೋಧನೆ ಮಾಡಬೇಕು ಎಂಬುದನ್ನು ಶಿಕ್ಷಕರು ಹೇಗೆ ನಿರ್ಧರಿಸುವುದು ? ಎಂಬ ಪ್ರಶ್ನೆ ಎದ್ದಿದೆ.

ಎಸ್ಎಸ್ಎಲ್ಸಿ ಪರೀಕ್ಷೆ, ಗ್ರೇಸ್ ಅಂಕದ ಯಡವಟ್ಟು

ಎಸ್ಎಸ್ಎಲ್ಸಿ ಪರೀಕ್ಷೆಯ ವಿಷಯದಲ್ಲಿ ಕೂಡ ದಿಢೀರನೇ ಮೂರು ಬಾರಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಗೊಂಡ ಇಲಾಖೆ, ಆ ಮುನ್ನ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳ ಜೊತೆಯಾಗಲೀ, ಪೋಷಕರ ಜೊತೆಯಾಗಲೀ ಅಥವಾ ರಾಜ್ಯದ ಶಿಕ್ಷಣ ತಜ್ಞರ ಜೊತೆಯಾಗಲೀ ಸಮಾಲೋಚನೆ ನಡೆಸಿರಲಿಲ್ಲ. ಅಷ್ಟೇ ಅಲ್ಲ; ಸ್ವತಃ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಜೊತೆಯೂ ಆ ಬಗ್ಗೆ ಚರ್ಚಸಿರಲೇ ಇಲ್ಲ ಎಂಬುದು ಇದೀಗ ಬಯಲಾಗಿದೆ.

ಶುಕ್ರವಾರ(ಮೇ 17) ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜಂಟಿ ಪ್ರಗತಿಪರಿಶೀಲನೆ ಸಭೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ವಿಷಯದಲ್ಲಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಎಸ್ಎಸ್ಎಲ್ಸಿ ಗೆ ಮೂರು ಮೂರು ಪರೀಕ್ಷೆ ನಡೆಸಲು ನಿಮಗೆ ಯಾರು ಹೇಳಿದ್ದರು ಎಂದು ಅವರೇ ಕೇಳಿದ್ದಾರೆ.

ಮೂರು ಮೂರು ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತ ಗಂಭೀರತೆಯೇ ಇಲ್ಲದಂತಾಗಿದೆ ಎಂಬ ಟೀಕೆ ಪೋಷಕರು ಮತ್ತು ಶಿಕ್ಷಣ ತಜ್ಞರ ವಲಯದಿಂದ ಕೇಳಿಬಂದಿದೆ. ಜೊತೆಗೆ ಮೂರು ಪರೀಕ್ಷೆ, ಮೂರು ಬಾರಿ ಮೌಲ್ಯಮಾಪನ ಮತ್ತು ಪರೀಕ್ಷಾ ತಯಾರಿಗಾಗಿ ವಿಶೇಷ ತರಗತಿಗಾಗಿ ತಮ್ಮ ರಜೆ ಕಡಿತ ಮತ್ತು ಹೆಚ್ಚುವರಿ ಕೆಲಸದ ಹೊರೆ ಬಿದ್ದಿದೆ ಎಂದು ಶಿಕ್ಷಕರ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.

ಜೊತೆಗೆ, ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಭಾರೀ ಕುಸಿತದ ಹಿನ್ನೆಲೆಯಲ್ಲಿ ಶೇ.20ರಷ್ಟು ಗ್ರೇಸ್ ಅಂಕ ನೀಡಿರುವುದು ಕೂಡ ಶೈಕ್ಷಣಿಕ ವಲಯದ ಟೀಕೆಗೆ ಮತ್ತು ಸ್ವತಃ ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಶೇ.30ರಷ್ಟು ಫಲಿತಾಂಶ ಕುಸಿತವಾದ ಹಿನ್ನೆಲೆಯಲ್ಲಿ ಇಲಾಖೆ, ತನ್ನ ಆಡಳಿತ ವೈಫಲ್ಯ, ಕಲಿಕಾ ಗುಣಮಟ್ಟದ ಕುಸಿತವನ್ನು ಮುಚ್ಚಿಡಲು ಶೇ.20ರಷ್ಟು ಗ್ರೇಸ್ ಅಂಕ ನೀಡಿ ಫಲಿತಾಂಶವನ್ನು ಹೆಚ್ಚು ತೋರಿಸುವ ದುಸ್ಸಾಹಸ ಮಾಡಿದೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪ್ರತಿಪಕ್ಷಗಳು, ಪೋಷಕರು, ಶೈಕ್ಷಣಿಕ ತಜ್ಞರು ಈ ಬಗ್ಗೆ ಸರ್ಕಾರದ ನಿಲುವುದನ್ನು ತರಾಟೆಗೆ ತೆಗೆದುಕೊಂಡಿದ್ದರು.

ದ್ವಿತೀಯ ಪಿಯುಸಿಗೂ ಮೂರು ಪರೀಕ್ಷೆ

ಎಸ್ಎಸ್ಎಲ್ಸಿ ಮಾದರಿಯಲ್ಲೇ ದ್ವಿತೀಯ ಪಿಯುಸಿಗೂ ಮೂರು ಪರೀಕ್ಷೆ ನಡೆಸುವ ಇಲಾಖೆಯ ನಿರ್ಧಾರದ ವಿಷಯದಲ್ಲಿಯೂ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಶಿಕ್ಷಕರಿಗೆ ವರ್ಷವಿಡೀ ಪರೀಕ್ಷೆ, ಮೌಲ್ಯಮಾಪನ, ಪೂರಕ ತರಗತಿಗಳಲ್ಲೇ ಸಮಯ ಹೋಗುವುದರಿಂದ ರೆಗ್ಯುಲರ್ ತರಗತಿಗಳನ್ನು ಸಕಾಲದಲ್ಲಿ ನಡೆಸಿ ಸಿಲಬಸ್ ಪೂರ್ಣಗೊಳಿಸುವುದು ಸವಾಲಾಗಿದೆ. ಜೊತೆಗೆ ರಜೆರಹಿತ ಇಲಾಖೆ ಎಂಬ ಕಾರಣಕ್ಕೆ ರಜೆ ಮತ್ತು ವೇತನದ ವಿಷಯದಲ್ಲಿ ಇತರೆ ಇಲಾಖೆಗಳಿಗೂ ಶಿಕ್ಷಣ ಇಲಾಖೆಗೆ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ, ಬೇಸಿಗೆ ರಜೆಯನ್ನು ಬಹುತೇಕ ಪರೀಕ್ಷೆ, ಮೌಲ್ಯಮಾಪನದಲ್ಲೇ ಕಳೆಯುವುದಾದರೆ ಈ ಶಿಕ್ಷಕರಿಗೆ ರಜೆ ಮತ್ತು ವೇತನದ ವಿಷಯದಲ್ಲಿ ಅನ್ಯಾಯವಾಗುತ್ತಿದೆ ಎಂಬ ಆಕ್ಷೇಪ ಶಿಕ್ಷಕರ ವಲಯದಲ್ಲಿದೆ.

ಅನಧಿಕೃತ ಶಾಲಾ- ಕಾಲೇಜುಗಳ ಪಟ್ಟಿಯೇ ಇಲ್ಲ!

ಪ್ರತಿ ಶೈಕ್ಷಣಿಕ ವರ್ಷ ಆರಂಭಕ್ಕೆ ತಿಂಗಳುಗಳ ಮುಂಚೆಯೇ ರಾಜ್ಯದಲ್ಲಿ ಇರುವ ಅನಧಿಕೃತ ಶಾಲಾ- ಕಾಲೇಜುಗಳ ಪಟ್ಟಿ ಪ್ರಕಟಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ಅಕ್ರಮ ಶಾಲಾ-ಕಾಲೇಜುಗಳಿಗೆ ಪ್ರವೇಶ ಪಡೆದು ಸಂಕಷ್ಟಕ್ಕೆ ಸಿಲುಕದಂತೆ ತಡೆಯುವುದು ವಾಡಿಕೆಯಾಗಿತ್ತು. ಆದರೆ, ಈಗಾಗಲೇ ಬಹುತೇಕ ಖಾಸಗಿ ಶಾಲಾ- ಕಾಲೇಜುಗಳು ಪ್ರಾರಂಭವಾಗಿದ್ದರೂ ಈವರೆಗೂ ಶಿಕ್ಷಣ ಇಲಾಖೆ ಅನಧಿಕೃತ ಶಾಲಾ- ಕಾಲೇಜುಗಳ ಪಟ್ಟಿಯನ್ನೇ ಪ್ರಕಟಿಸಿಲ್ಲ.

ಇಲಾಖೆಯ ಈ ನಡೆ ಹೊಣಗೇಡಿತನದ್ದು ಎಂಬ ವ್ಯಾಪಕ ಟೀಕೆಗಳು ಪ್ರತಿಪಕ್ಷಗಳು ಮತ್ತು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಂತೂ, ಈ ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಸಚಿವರೇ ಇಲ್ಲ. ಇರುವವರಿಗೆ ಚುನಾವಣೆಯೇ ಮುಖ್ಯವಾಗಿದೆ ವಿನಃ ಮಕ್ಕಳ ಭವಿಷ್ಯವಾಗಲೀ, ಪೋಷಕರ ಹಿತವಾಗಲೀ ಮುಖ್ಯವಾಗಿಯೇ ಇಲ್ಲ. ಹಾಗಾಗಿ ಪ್ರತಿ ವಿಷಯದಲ್ಲೂ ಇಲಾಖೆ ದಿಕ್ಕೆಟ್ಟು ಹೋಗಿದೆ ಎಂದು ಕಿಡಿಕಾರಿದ್ದಾರೆ.

Read More
Next Story