THE FEDERAL EXPLAINER | ಪಬ್ಲಿಕ್ ಪರೀಕ್ಷೆ: ಯಾಕಿಷ್ಟು ಗೊಂದಲ? ಏನಿದು ವಿವಾದ?
ಪಬ್ಲಿಕ್(ಬೋರ್ಡ್) ಪರೀಕ್ಷೆಯ ವಿಷಯದಲ್ಲಿ ಪದೇಪದೆ ಗೊಂದಲ, ಅನಿಶ್ಚಿತತೆಗಳಿಂದಾಗಿ ಮಕ್ಕಳು, ಪೋಷಕರು, ಶಿಕ್ಷಕರು ಸೇರಿದಂತೆ ಎಲ್ಲರೂ ರೋಸಿ ಹೋಗಿದ್ದಾರೆ. ಹಾಗಾದರೆ, ಈ ಪರೀಕ್ಷೆ ಯಾಕಿಷ್ಟು ಗೋಜಲಾಗಿದೆ? ಏನು ಸಮಸ್ಯೆ? ವಿಷಯ ನ್ಯಾಯಾಲಯದ ಕಟಕಟೆಗೆ ಹೋಗಿದ್ದು ಯಾಕೆ? ಎಂಬುದೂ ಸೇರಿದಂತೆ ನಿಮಗೆ ಗೊತ್ತಿರಬೇಕಾದ ಸಂಗತಿಗಳನ್ನು ʼದ ಫೆಡರಲ್ ಕರ್ನಾಟಕʼ ಇಲ್ಲಿ ವಿವರಿಸಿದೆ…;
5, 8 ಮತ್ತು 9ನೇ ತರಗತಿ ಬೋರ್ಡ್ (ಪಬ್ಲಿಕ್) ಪರೀಕ್ಷೆ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದಿರುವ ಗೊಂದಲ, ಅವ್ಯವಸ್ಥೆ ಇದೀಗ ಪರೀಕ್ಷೆಯ ಮೌಲ್ಯಮಾಪನ ಮತ್ತು ಫಲಿತಾಂಶದ ವಿಷಯದಲ್ಲೂ ಮುಂದುವರಿದಿದೆ.
ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಗಳ ಒಕ್ಕೂಟಗಳ ನಡುವೆ ಬೋರ್ಡ್ ಪರೀಕ್ಷೆ ವಿಷಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟ, ಅಂತಿಮವಾಗಿ ರಾಜ್ಯದ 28 ಲಕ್ಷ ಮಕ್ಕಳು ಮತ್ತು ಅವರ ಪೋಷಕರ ಪಾಲಿಗೆ ಸಂಕಷ್ಟ ತಂದಿದೆ. ರಾಜ್ಯ ಹೈಕೋರ್ಟ್ ಮತ್ತು ದೆಹಲಿಯ ಸುಪ್ರೀಂಕೋರ್ಟ್ ನಡುವೆ ಕೆರೆ-ದಡದ ಆಟದಂತೆ ನಡೆಯುತ್ತಿರುವ ಈ ಕಾನೂನು ಹೋರಾಟ ಸೃಷ್ಟಿಸಿರುವ ಗೊಂದಲ ಮತ್ತು ಆತಂಕಕ್ಕೆ ಕೊನೆಯೇ ಇಲ್ಲದಂತಾಗಿದೆ.
ಇದೀಗ ಏ.8ರಂದು ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಕೊನೇ ಘಳಿಗೆಯಲ್ಲಿ ಸುಪ್ರೀಂಕೋರ್ಟ್ ಫಲಿತಾಂಶ ಮತ್ತು ಮೌಲ್ಯಮಾಪನ ಎರಡೂ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದ್ದು, ಪಬ್ಲಿಕ್ ಪರೀಕ್ಷೆ ನಡೆಸುವಂತೆ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶವೇ ದೋಷಪೂರಿತ. ಹಾಗಾಗಿ ಇಡೀ ಪರೀಕ್ಷೆಯ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಿರಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಾರ್ಚ್ 11ರಂದು ಬೋರ್ಡ್ ಪರೀಕ್ಷೆಯ ಮೊದಲದಿಂದಲೇ ಆರಂಭವಾದ ಗೊಂದಲ ಇದೀಗ ಫಲಿತಾಂಶದ ವಿಷಯದಲ್ಲಿ ಇನ್ನಷ್ಟು ಗೋಜಲಾಗಿದೆ. ಈಗ ಮಕ್ಕಳು ಮತ್ತು ಪೋಷಕರು ಅಷ್ಟೇ ಅಲ್ಲ; ಶಾಲಾ ಶಿಕ್ಷಕರು, ಮುಖ್ಯುಸ್ಥರು, ಆಡಳಿತ ಮಂಡಳಿಗಳು ಕೂಡ ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ.
ಈ ಎಲ್ಲಾ ಗೊಂದಲ, ಆತಂಕಗಳನ್ನು ದೂರ ಮಾಡಬೇಕಾದ ಶಿಕ್ಷಣ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮಾತ್ರ ತಮಗೂ ಈ ಎಲ್ಲದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದಿದ್ದಾರೆ!
ಇಂತಹ ದುರವಸ್ಥೆಯ ನಡುವೆ, ನಿಜಕ್ಕೂ ಈ ಪರೀಕ್ಷೆ ಯಾಕಿಷ್ಟು ಗೋಜಲಾಗಿದೆ? ಏನು ಸಮಸ್ಯೆ? ವಿಷಯ ನ್ಯಾಯಾಲಯದ ಕಟಕಟೆಗೆ ಹೋಗಿದ್ದು ಯಾಕೆ? ಹೋದವರು ಯಾರು? ಅವರ ವಾದವೇನು? ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಅದರ ನಿಷ್ಕ್ರಿಯತೆಗೆ ಕಾರಣವೇನು? ಎಂಬುದೂ ಸೇರಿದಂತೆ ನಿಮಗೆ ಗೊತ್ತಿರಬೇಕಾದ ಸಂಗತಿಗಳನ್ನು ʼದ ಫೆಡರಲ್ ಕರ್ನಾಟಕʼ ಇಲ್ಲಿ ನಿಮ್ಮ ಮುಂದಿಡುತ್ತಿದೆ…
ಈಗ ಸುಪ್ರೀಂಕೋರ್ಟ್ ತಡೆಯಾಜ್ಞೆ ಏನು ಹೇಳಿದೆ?
5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಪರೀಕ್ಷೆ ವಿಷಯದಲ್ಲಿ ಹಠಕ್ಕೆ ಬಿದ್ದಿರುವ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರುವ ಸರ್ಕಾರ, ಪೋಷಕರು ಮತ್ತು ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳಿಗೆ ಅನಗತ್ಯ ಸಂಕಷ್ಟ ಒಡ್ಡುತ್ತಿದೆ ಎಂದು ಕೋರ್ಟ್ ಚಾಟಿ ಬೀಸಿದೆ. ಅಲ್ಲದೆ, ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ಮಧ್ಯಂತರ ಆದೇಶ, ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಗೆ ವಿರುದ್ಧವಾಗಿದೆ. ಹಾಗಾಗಿ ಈ ಪರೀಕ್ಷೆ ಮೌಲ್ಯಮಾಪನ ಮತ್ತು ಫಲಿತಾಂಶವನ್ನು ಕೂಡಲೇ ತಡೆಹಿಡಿಯಬೇಕು ಎಂದು ಹೇಳಿದೆ.
ಪಬ್ಲಿಕ್ ಪರೀಕ್ಷೆ ಕುರಿತ ವಿವಾದಕ್ಕೆ ಕಾರಣವೇನು?
ರಾಜ್ಯ ಸರ್ಕಾರ 2022ರ ಅಕ್ಟೋಬರಿನಲ್ಲಿಯೇ ಎನ್ ಇಪಿ ಅಡಿಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ವೃದ್ಧಿಗಾಗಿ ಮತ್ತು 10ನೇ ತರಗತಿ ಬೋರ್ಡ್ ಪರೀಕ್ಷೆಗೆ ತಯಾರಿ ಮಾಡಲು 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿತ್ತು. ಆಗಿನ ಬಿಜೆಪಿ ಸರ್ಕಾರದ ಆ ನಿರ್ಧಾರವನ್ನು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ(ರುಪ್ಸಾ), ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು, ಶಿಕ್ಷಣ ತಜ್ಞರು ವಿರೋಧಿಸಿದ್ದರು. ಆಗಲೂ ಅವರೆಲ್ಲಾ ಈ ಪರೀಕ್ಷೆ ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಎಚ್ಚರಿಸಿದ್ದವು.
ಶಾಲಾ ಶಿಕ್ಷಣ ಇಲಾಖೆಯ ವಾದವೇನು?
ಪಬ್ಲಿಕ್ ಅಥವಾ ಬೋರ್ಡ್ ಪರೀಕ್ಷೆ ಕುರಿತ ಆಕ್ಷೇಪ, ವಿರೋಧಗಳಿಗೆ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಇಲಾಖೆ, ತನ್ನದೇ ಆದ ವಾದ ಮುಂದಿಡುತ್ತಾ ಬಂದಿದೆ. ಕಡ್ಡಾಯ ಶಿಕ್ಷಣ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ಕುರಿತ ಪ್ರಶ್ನೆಗಳಿಗೆ ಅದು, ಈ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆ ಎಂದು ಕರೆದರೂ ಯಾವುದೇ ಮಕ್ಕಳನ್ನು ಫೇಲ್ ಮಾಡುವುದಿಲ್ಲ. ಬದಲಾಗಿ ಮಕ್ಕಳ ಕಲಿಕಾ ಗುಣಮಟ್ಟದ ಮಾಪನಕ್ಕಾಗಿ ಮತ್ತು ಶಿಕ್ಷಕರ ಬೋಧನಾ ಸಾಮರ್ಥ್ಯದ ಅಳತೆಗೋಲಾಗಿ ಮಾತ್ರ ಈ ಪರೀಕ್ಷೆಗಳನ್ನು ನಡೆಸಲಾಗುವುದು. ಇದರಲ್ಲಿ ಬೋರ್ಡ್ ಪರೀಕ್ಷೆಗಳಲ್ಲಿ ಇರುವಂತೆ ರಾಜ್ಯಮಟ್ಟದಲ್ಲಿ ರಹಸ್ಯ ಮೌಲ್ಯಮಾಪನ(ವಿದ್ಯಾರ್ಥಿ ಗುರುತು ಇರದೆ) ಮತ್ತು ಕೋಡ್ ಆಧಾರಿತ ಫಲಿತಾಂಶ ಪ್ರಕಟಣೆ ಇರುವುದಿಲ್ಲ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.
ನ್ಯಾಯಾಲಯ ಕಳೆದ ವರ್ಷ ಏನು ಹೇಳಿತ್ತು?
2022ರಲ್ಲಿಯೇ ಪಬ್ಲಿಕ್ ಪರೀಕ್ಷೆಯ ವಿಷಯ ನ್ಯಾಯಾಲಯದ ಕಟಕಟೆ ಏರಿತ್ತು. ಆಗ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರುಪ್ಸಾ, ಈ ಪರೀಕ್ಷೆ ನಡೆಸುವುದರಿಂದ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಅನಗತ್ಯ ಭಯ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಭೀತಿ ಉಂಟಾಗಲಿದೆ. ಆದರೆ, ಕಡ್ಡಾಯ ಮತ್ತು ಮುಕ್ತ ಕಲಿಕೆಯ ಆಶಯದ ಕಡ್ಡಾಯ ಶಿಕ್ಷಣ ಕಾಯ್ದೆ, 14 ವರ್ಷದ ವರೆಗೆ ಮಕ್ಕಳಿಗೆ ಒತ್ತಡರಹಿತ, ಭೀತಿ ರಹಿತ ಮತ್ತು ಪರೀಕ್ಷೆ ರಹಿತ ಕಲಿಕಾ ವ್ಯವಸ್ಥೆ ಇರಬೇಕು ಎಂದಿದೆ. ಹಾಗಾಗಿ ಸರ್ಕಾರದ ಈ ಹೊಸ ಪರೀಕ್ಷೆ ಮಕ್ಕಳ ಹಕ್ಕು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ವಿರುದ್ಧ ಎಂದು ವಾದಿಸಿತ್ತು. ಆಗಲೂ ಸರ್ಕಾರ ಇದು ಬೋರ್ಡ್ ಪರೀಕ್ಷೆ ಅಲ್ಲ; ಮೌಲ್ಯಾಂಕನ ಪದ್ಧತಿ ಎಂದು ಪ್ರತಿ ವಾದ ಹೂಡಿತ್ತು. ಆ ಬಾರಿ ಕೂಡ ಪರೀಕ್ಷೆಗಳ ನಡುವೆ ಈ ಪ್ರಕರಣ ವಿಚಾರಣೆ ನಡೆಯುತ್ತಿದ್ದರಿಂದ ಕೋರ್ಟ್, ಸದ್ಯಕ್ಕೆ ಆ ವರ್ಷಕ್ಕೆ ಸೀಮಿತವಾಗಿ ಪರೀಕ್ಷೆ ನಡೆಸಲು ಅನುಮತಿ ನೀಡಿ, ಮುಂದಿನ ಬಾರಿ ಪರೀಕ್ಷೆ ನಡೆಸುವ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಪೋಷಕರು, ಶಾಲಾ ಆಡಳಿತ ಮಂಡಳಿಗಳು ಮತ್ತು ಶಿಕ್ಷಣ ಮತ್ತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಸೂಚಿಸಿತ್ತು.
ಮತ್ತೆ ಈ ಬಾರಿ ವಿವಾದಕ್ಕೆ ಕಾರಣವೇನು?
ಕಳೆದ ಬಾರಿ ರಾಜ್ಯ ಹೈಕೋರ್ಟ್ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮುಂದಿನ ಬಾರಿ ಪರೀಕ್ಷೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದರೂ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಈ ಬಾರಿಯ ಪರೀಕ್ಷೆಗಳು ಆರಂಭವಾಗುವವರೆಗೆ ಜಾಣ ಕಿವುಡಾಗಿತ್ತು. ಪರೀಕ್ಷೆ ಘೋಷಣೆ ಮಾಡಿ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ರುಪ್ಸಾ, ಅವರ್ ಸ್ಕೂಲ್ ಮತ್ತಿತರ ಸಂಘಟನೆಗಳು ಮತ್ತೆ ಕೋರ್ಟ್ ಮೆಟ್ಟಿಲೇರಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದವು. ಹಾಗಾಗಿ ಮತ್ತೊಮ್ಮೆ ಪಬ್ಲಿಕ್ ಪರೀಕ್ಷೆಯ ಗೊಂದಲ, ಆತಂಕ ಮತ್ತು ಕಾನೂನು ಹೋರಾಟಗಳು ಪುನರಾವರ್ತನೆಗೊಂಡವು.
ಈ ವರ್ಷ ಯಾವಾಗ, ಏನೇನಾಯಿತು?
ಈ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ 2023ರ ಅಕ್ಟೋಬರ್ 6 ಮತ್ತು 9ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎರಡು ಸುತ್ತೋಲೆ ಹೊರಡಿಸಿ, 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಇಲಾಖೆಯ ಅಧೀನ ಅಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಯಿತು.
ಈ ಸುತ್ತೋಲೆ ವಿರೋಧಿಸಿ ರುಪ್ಸಾ ಮತ್ತು ಅವರ್ ಸ್ಕೂಲ್ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ) ನ್ಯಾಯಾಲಯದಲ್ಲಿ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದವು.
2024 ಮಾರ್ಚ್ 6 ರಂದು ಹೈಕೋರ್ಟಿನ ನ್ಯಾ. ರವಿ ವಿ ಹೊಸಮನಿ ಅವರ ಏಕಸದಸ್ಯ ಪೀಠ, ಸರ್ಕಾರದ ಎರಡೂ ಸುತ್ತೋಲೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತು. ಹಾಗಾಗಿ ಅದೇ ಮಾರ್ಚ್ 11ರಿಂದ ಆರಂಭವಾಗಬೇಕಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದವು. ಆದರೆ, ಅಷ್ಟರಲ್ಲಾಗಲೇ 11ನೇ ತರಗತಿಯ ಪರೀಕ್ಷೆಗಳು ಮುಗಿದಿದ್ದವು. ಹಾಗಾಗಿ ಉಳಿದ ತರಗತಿಗಳ ಪರೀಕ್ಷೆಗೆ ಮಾತ್ರ ಆದೇಶ ಅನ್ವಯವಾಯಿತು.
2024 ಮಾರ್ಚ್ 7ರಂದು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ನ್ಯಾ. ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ವಿಭಾಗೀಯ ಪೀಠವು, ಹಿಂದಿನ ದಿನ ಏಕಸದಸ್ಯ ಪೀಠ ನೀಡಿದ್ದ ಸುತ್ತೋಲೆ ರದ್ದು ಆದೇಶವನ್ನು ರದ್ದುಪಡಿಸಿತು. ಆ ಮೂಲಕ ಮಾರ್ಚ್ 11ರಿಂದ ಆರಂಭವಾಗಲಿದ್ದ ನಿಗದಿತ ಪರೀಕ್ಷೆ ನಡೆಸಲು ಅನುಮತಿ ನೀಡಿತು.
2024 ಮಾರ್ಚ್ 12ರಂದು ಸುಪ್ರೀಂಕೋರ್ಟಿನಲ್ಲಿ ರುಪ್ಸಾ ಮತ್ತು ಅವರ್ ಸ್ಕೂಲ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಯಿತು. ನ್ಯಾ. ಬೇಲಾ ಎಂ ತ್ರಿವೇದಿ ಮತ್ತು ನ್ಯಾ ಪಂಕಜ್ ಮಿತ್ತಲ್ ಅವರ ದ್ವಿಸದಸ್ಯ ಪೀಠ, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ತಡೆಯೊಡ್ಡಿತು. ಜೊತೆಗೆ ಹೈಕೋರ್ಟಿನ ಅದೇ ಪೀಠದಲ್ಲೇ ಅರ್ಜಿ ಇತ್ಯರ್ಥವಾಗಲಿ ಎಂದು ಸೂಚಿಸಿತು. ಅದರಿಂದಾಗಿ ಮಾರ್ಚ್ 11ರಿಂದ ಆರಂಭವಾಗಿ ಎರಡು ವಿಷಯ ಪರೀಕ್ಷೆ ಮುಗಿದಿದ್ದ ಬೋರ್ಡ್ ಪರೀಕ್ಷೆಗೆ ಮತ್ತೆ ಬ್ರೇಕ್ ಬಿತ್ತು. ಸರ್ಕಾರ ಪರೀಕ್ಷೆಯನ್ನು ಮುಂಡೂಡಿ ಆದೇಶ ಹೊರಡಿಸಿತು.
2024 ಮಾರ್ಚ್ 18ರಂದು ಪರ ವಿರೋಧ ವಾದ ಆಲಿಸಿದ ಹೈಕೋರ್ಟಿನ ವಿಭಾಗೀಯ ಪೀಠ, ಅಂತಿಮವಾಗಿ ಮಾರ್ಚ್ 22ರಂದು ಪರೀಕ್ಷೆಗಳನ್ನು ಮುಂದುವರಿಸಲು ಅನುಮತಿ ನೀಡಿ ತೀರ್ಪಿತ್ತಿತ್ತು. ಹಾಗಾಗಿ ಮಾರ್ಚ್ 25ರಿಂದ ಪರೀಕ್ಷೆಗಳು ಪುನರಾರಂಭವಾಗಿ ಮಾರ್ಚ್ 28ರಂದು ಮುಕ್ತಾಯವಾಗಿದ್ದವು.
2024 ಏಪ್ರಿಲ್ 8 : ಪರೀಕ್ಷೆ ನಡೆಸಲು ಅನುಮತಿ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ಆದೇಶ ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಎಂದು ರುಪ್ಸಾ ಮತ್ತು ಅವರ್ ಸ್ಕೂಲ್ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ಪಬ್ಲಿಕ್ ಪರೀಕ್ಷೆಯ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕ್ರಿಯೆಗೆ ಸಂಪೂರ್ಣ ತಡೆಯಾಜ್ಞೆ ನೀಡಿ, ಯಾವುದೇ ಕಾರಣಕ್ಕೂ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.