ಟೆಸ್ಕೋದಿಂದ ರಾಜ್ಯದಲ್ಲಿ 15 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಎಂ. ಬಿ. ಪಾಟೀಲ್‌

ಭಾರತ ಮತ್ತು ಬ್ರಿಟನ್‌ ಮಧ್ಯೆ ಇತ್ತೀಚೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಎರಡೂ ದೇಶಗಳ ನಡುವೆ ಪ್ರಸ್ತುತ ವಾರ್ಷಿಕ 25 ಬಿಲಿಯನ್‌ ಪೌಂಡ್‌ ಮೊತ್ತದ ವಹಿವಾಟು ನಡೆಯಲಿದೆ ಎಂದು ಸಚಿವ ಎಂ. ಬಿ. ಪಾಟೀಲ್‌ ತಿಳಿಸಿದರು.;

Update: 2025-08-13 15:08 GMT

ಸಚಿವ ಎಂ.ಬಿ. ಪಾಟೀಲ್‌

ಬ್ರಿಟನ್‌ ಮೂಲದ ಟೆಸ್ಕೋ ಕಂಪನಿಯು ರಾಜ್ಯದಲ್ಲಿ ತನ್ನ ನೂತನ ವಿತರಣಾ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಇದರಿಂದ 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ರೋಲ್ಸ್‌ರಾಯ್ಸ್‌ ಕಂಪನಿ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ವಹಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಬುಧವಾರ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಏರ್ಪಡಿಸಿದ್ದ ಸಂತೋಷಕೂಟ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಮತ್ತು ಬ್ರಿಟನ್‌ ಮಧ್ಯೆ ಇತ್ತೀಚೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಎರಡೂ ದೇಶಗಳ ನಡುವೆ ಪ್ರಸ್ತುತ ವಾರ್ಷಿಕ 25 ಬಿಲಿಯನ್‌ ಪೌಂಡ್‌ ಮೊತ್ತದ ವಹಿವಾಟು ನಡೆಯಲಿದೆ. ಇದು ಮುಂದಿನ ಐದು ವರ್ಷಗಳಲ್ಲಿ 90 ಬಿಲಿಯನ್‌ ಪೌಂಡ್‌ಗೆ ಹೆಚ್ಚಲಿದೆ ಎಂದರು.

ಮುಖ್ಯವಾಗಿ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಸರಕುಗಳ ಪೈಕಿ ಶೇ. 99ರಷ್ಟು ಉತ್ಪನ್ನಗಳಿಗೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಶೇ. 90ರಷ್ಟು ಉತ್ಪನ್ನಗಳಿಗೆ ಸುಂಕ ಇರುವುದಿಲ್ಲ. ಈ ಒಪ್ಪಂದದಿಂದ ದ್ವಿಪಕ್ಷೀಯ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಬ್ರಿಟಿಷ್‌ ಮೂಲದ ಬಿಎಇ ಸಿಸ್ಟಮ್ಸ್‌, ಎಆರ್‌ಎಂ, ಎಚ್‌ಎಸ್‌ಬಿಸಿ, ಅವಿವಾ ಮುಂತಾದ ಕಂಪನಿಗಳಿದ್ದು, 30 ಸಾವಿರ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಬ್ರಿಟನ್ನಿನ ಕಂಪನಿಗಳು ರಾಜ್ಯದಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗಲಿದೆ. ನಮ್ಮಲ್ಲಿರುವ ತಂತ್ರಜ್ಞಾನ, ಮೂಲಸೌಕರ್ಯ, ಕೈಗಾರಿಕಾಸ್ನೇಹಿ ವಾತಾವರಣ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

Tags:    

Similar News