'ದ ಫೆಡರಲ್' ವರದಿಗೆ ಎಚ್ಚೆತ್ತ ಸರ್ಕಾರ: ಒಳ ಮೀಸಲಾತಿ ಜಾತಿ ಪ್ರಮಾಣಪತ್ರ ಗೊಂದಲ ಪರಿಹಾರದ ಭರವಸೆ

ಶೀಘ್ರವೇ ಜಾತಿ ಪ್ರಮಾಣಪತ್ರ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು. ತಪ್ಪಿದಲ್ಲಿ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋರಾಟದಂತೆ ಮತ್ತೊಂದು ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಸ್ಪರ್ಧಾರ್ಥಿಯೊಬ್ಬರು ತಿಳಿಸಿದ್ದರು.

Update: 2025-10-06 13:36 GMT

ಎಐ ಚಿತ್ರ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಒಂದು ತಿಂಗಳು ಕಳೆದರೂ, ಹೊಸ ಜಾತಿ ಪ್ರಮಾಣಪತ್ರಗಳನ್ನು ವಿತರಿಸುವಲ್ಲಿನ ಗೊಂದಲದಿಂದಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಅತಂತ್ರವಾಗಿದೆ. ಈ ಆಡಳಿತಾತ್ಮಕ ಮತ್ತು ತಾಂತ್ರಿಕ ವೈಫಲ್ಯದಿಂದಾಗಿ, ಬಹುನಿರೀಕ್ಷಿತ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿರುವ ಕುರಿತು 'ದ ಫೆಡರಲ್ ಕರ್ನಾಟಕ' ಪ್ರಕಟಿಸಿದ ಸರಣಿ ವರದಿಗಳಿಗೆ ಇದೀಗ ಸರ್ಕಾರ ಸ್ಪಂದಿಸಿದ್ದು, ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗುವ ಭರವಸೆ ಮೂಡಿದೆ.

'ದ ಫೆಡರಲ್ ಕರ್ನಾಟಕ'ದ ತನಿಖಾ ವರದಿಗಳು

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ'ಗೆ ತಲಾ ಶೇ. 6 ಹಾಗೂ ಗ್ರೂಪ್ 'ಸಿ' ಪ್ರವರ್ಗಕ್ಕೆ ಶೇ. 5ರಷ್ಟು ಒಳ ಮೀಸಲಾತಿ ನೀಡಿ ಆದೇಶಿಸಿತ್ತು. ಆದರೆ, ಈ ನೂತನ ಪ್ರವರ್ಗಗಳಿಗೆ ಅನುಗುಣವಾಗಿ ಜಾತಿ ಪ್ರಮಾಣಪತ್ರ ನೀಡಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗಳು ವಿಫಲವಾಗಿವೆ. ನಾಡಕಚೇರಿಗಳಲ್ಲಿನ ತಂತ್ರಾಂಶವನ್ನು ಉನ್ನತೀಕರಿಸದಿರುವುದೇ ಈ ಗೊಂದಲಕ್ಕೆ ಮೂಲ ಕಾರಣವಾಗಿದೆ. ಈ ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಉದ್ಯೋಗಾಕಾಂಕ್ಷಿಗಳು ಹೇಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದರ ಕುರಿತು 'ದ ಫೆಡರಲ್ ಕರ್ನಾಟಕ' ಐದು ಕಂತುಗಳಲ್ಲಿ ವಿಸ್ತೃತ ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರದ ಗಮನ ಸೆಳೆದಿತ್ತು.

ವರದಿಯ ಬೆನ್ನಲ್ಲೇ ಸರ್ಕಾರದ ಸ್ಪಂದನೆ

'ದ ಫೆಡರಲ್ ಕರ್ನಾಟಕ'ದ ವರದಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಸಮಾಜ ಕಲ್ಯಾಣ ಇಲಾಖೆಯು ತನ್ನ ಅಧಿಕೃತ 'ಎಕ್ಸ್' ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದೆ. "ಜಾತಿ ಪ್ರಮಾಣ ಪತ್ರ ವಿತರಿಸುವ ವಿಷಯವು ಸರ್ಕಾರದ ಪರಿಶೀಲನಾ ಹಂತದಲ್ಲಿದೆ. ಶೀಘ್ರವೇ ಅಧಿಕೃತ ಸುತ್ತೋಲೆ ಹೊರಡಿಸಿ, ಈ ಬಗ್ಗೆ ಮಾಹಿತಿ ನೀಡಲಾಗುವುದು," ಎಂದು ಇಲಾಖೆ ತಿಳಿಸಿದೆ. ಸರ್ಕಾರದ ಈ ಸ್ಪಂದನೆಯು, ಕೋವಿಡ್ ಮತ್ತು ನೇಮಕಾತಿ ವಿಳಂಬದಿಂದಾಗಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ವಿದ್ಯಾರ್ಥಿಗಳ ಆಕ್ರೋಶ ಮತ್ತು ಹೋರಾಟದ ಎಚ್ಚರಿಕೆ

"ಕಳೆದ ಮೂರು ವರ್ಷಗಳಿಂದ ಧಾರವಾಡ, ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇವೆ. ಕೋವಿಡ್, ನಂತರ ಒಳ ಮೀಸಲಾತಿ ಗೊಂದಲಗಳಿಂದಾಗಿ ಯಾವುದೇ ನೇಮಕಾತಿ ಅಧಿಸೂಚನೆ ಹೊರಬಿದ್ದಿಲ್ಲ. ಈಗ ಮುಖ್ಯಮಂತ್ರಿಗಳು ಹೊಸ ನೇಮಕಾತಿಗಳ ಬಗ್ಗೆ ಭರವಸೆ ನೀಡಿದ್ದರೂ, ಜಾತಿ ಪ್ರಮಾಣಪತ್ರದ ಸಮಸ್ಯೆಯಿಂದಾಗಿ ನಮ್ಮ ಭವಿಷ್ಯ ಅಂಧಕಾರದಲ್ಲಿದೆ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸದಿದ್ದರೆ, ಧಾರವಾಡದಲ್ಲಿ ನಡೆದಂತಹ ಮತ್ತೊಂದು ಬೃಹತ್ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ," ಎಂದು ಮೊಳಕಾಲ್ಮೂರಿನ ಸ್ಪರ್ಧಾರ್ಥಿ ಎಸ್. ತಿಪ್ಪೇಸ್ವಾಮಿ 'ದ ಫೆಡರಲ್‌ ಕರ್ನಾಟಕ'ದ ಮೂಲಕ ಎಚ್ಚರಿಕೆ ನೀಡಿದ್ದರು.

ಸಂಘಟನೆಗಳಿಂದ ನಿರಂತರ ಒತ್ತಡ

ಈ ಮಧ್ಯೆ, ಅಕ್ಸರಾ ಸಂಘಟನೆಯ ಸಂತೋಷ್ ಮರೂರ್ ಅವರು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಪತ್ರ ಬರೆದು, ಶೀಘ್ರ ಇತ್ಯರ್ಥಕ್ಕೆ ಆಗ್ರಹಿಸಿದ್ದಾರೆ. ಕೆಪಿಎಸ್ಸಿ, ಕೆಇಎ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳು ನೇಮಕಾತಿಗೆ ಸಿದ್ಧತೆ ನಡೆಸಿರುವಾಗ, ತಂತ್ರಾಂಶದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಅಲ್ಲಿಯವರೆಗೆ, ಜಾತಿ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಯ ಸ್ವೀಕೃತಿಯನ್ನೇ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಪರಿಗಣಿಸಬೇಕು ಮತ್ತು ದಾಖಲೆ ಪರಿಶೀಲನೆ ಹಂತದಲ್ಲಿ ಮೂಲ ಪ್ರಮಾಣಪತ್ರವನ್ನು ಹಾಜರುಪಡಿಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಅಲ್ಲದೆ, ವಿದ್ಯಾರ್ಥಿಗಳ ದೂರುಗಳಿಗೆ ಸ್ಪಂದಿಸಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಕೋಶ ಅಥವಾ ಸಹಾಯವಾಣಿ ತೆರೆಯುವಂತೆಯೂ ಆಗ್ರಹಿಸಲಾಗಿತ್ತು. ಸರ್ಕಾರದ ಇತ್ತೀಚಿನ ಸ್ಪಂದನೆಯು ಈ ಎಲ್ಲಾ ಬೇಡಿಕೆಗಳು ಈಡೇರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ದ ಫೆಡರಲ್‌ ಕರ್ನಾಟಕ ಮಾಡಿದ್ದ ವರದಿಗಳು ಇಲ್ಲಿವೆ

Delay in Recruitment Part -1| ನೇಮಕಾತಿ ಪ್ರಕ್ರಿಯೆ ಕಗ್ಗಂಟು ; ರಾಜ್ಯವ್ಯಾಪಿ ಹಬ್ಬಲಿದೆಯೇ ವಯೋಮಿತಿ ಬಾಧಿತ ಸ್ಪರ್ಧಾರ್ಥಿಗಳ ಹೋರಾಟದ ಕಿಚ್ಚು
Delay in Recruitment Part -3 | ನೇಮಕಾತಿಗೆ ಸರ್ಕಾರ ವಿಳಂಬ; ಸ್ಪರ್ಧಾರ್ಥಿಗಳಲ್ಲಿ ವಯೋಮಿತಿ ಮೀರುವ ಆತಂಕ!
Delay in Recruitment Part-4 | ಒಳಮೀಸಲಾತಿ ಜಾರಿಯಾದರೂ ಸಮನ್ವಯದ ಕೊರತೆಯಿಂದ ನೇಮಕಾತಿ ಆಮೆಗತಿ !
Delay in Recruitment Part-5 | ಉಪಜಾತಿ ಉಲ್ಲೇಖಿಸದವರಿಗೆ ಜಾತಿ ಪ್ರಮಾಣ ಪತ್ರ ಇಲ್ಲ; ಕಗ್ಗಂಟಾದ ನೇಮಕಾತಿ ಪ್ರಕ್ರಿಯೆ, ಸಂಪುಟ ಸಭೆಯತ್ತ ಎಲ್ಲರ ಚಿತ್ತ..!







 




Tags:    

Similar News