ಜಾತಿಗಣತಿ: ಸಮೀಕ್ಷಕರ ನಿಯೋಜನೆಯಲ್ಲಿ ಗೊಂದಲ, ತಾರತಮ್ಯ; ನೌಕರರ ಸಂಘದಿಂದ ಮನವಿ

ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಚಿವಾಲಯದ ನೌಕರರಿಗೆ, ಅವರು ಆಯ್ಕೆ ಮಾಡಿಕೊಂಡ 10 ಆದ್ಯತೆಯ ವಾರ್ಡ್‌ಗಳನ್ನು ಹೊರತುಪಡಿಸಿ, 20 ರಿಂದ 45 ಕಿ.ಮೀ. ದೂರದ ವಾರ್ಡ್‌ಗಳಿಗೆ ನಿಯೋಜಿಸಲಾಗಿದೆ.

Update: 2025-10-06 10:12 GMT

ಸರ್ಕಾರಕ್ಕೆ ಪತ್ರ ಬರೆದಿರುವ ನೌಕರರು

Click the Play button to listen to article

ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (ಜಾತಿಗಣತಿ) ಕಾರ್ಯದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಸಚಿವಾಲಯದ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘವು ಸರ್ಕಾರದ ಗಮನ ಸೆಳೆದಿದೆ.

ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಚಿವಾಲಯದ ನೌಕರರಿಗೆ, ಅವರು ಆಯ್ಕೆ ಮಾಡಿಕೊಂಡ 10 ಆದ್ಯತೆಯ ವಾರ್ಡ್‌ಗಳನ್ನು ಹೊರತುಪಡಿಸಿ, 20 ರಿಂದ 45 ಕಿ.ಮೀ. ದೂರದ ವಾರ್ಡ್‌ಗಳಿಗೆ ನಿಯೋಜಿಸಲಾಗಿದೆ. ಬೆಂಗಳೂರಿನ ವಾಹನ ದಟ್ಟಣೆಯಲ್ಲಿ ಪ್ರತಿದಿನ 2-3 ಗಂಟೆಗಳ ಕಾಲ ಪ್ರಯಾಣಿಸಿ, ದೂರದ ವಾರ್ಡ್‌ಗಳಿಗೆ ತೆರಳಿ ಸಮೀಕ್ಷೆ ನಡೆಸುವುದು ಕಷ್ಟಸಾಧ್ಯವಾಗಿದ್ದು, ಇದರಿಂದ ಸಮೀಕ್ಷೆಯ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಂಘವು ಆರೋಪಿಸಿದೆ.

ಸಮೀಕ್ಷಾ ಗುರಿಯಲ್ಲಿ ತಾರತಮ್ಯ

ರಾಜ್ಯದ ಇತರ ಜಿಲ್ಲೆಗಳಲ್ಲಿ ಒಬ್ಬ ಸಮೀಕ್ಷರಿಗೆ 150 ಮನೆಗಳ ಗುರಿ ನೀಡಲಾಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ 250 ಮನೆಗಳ ಗುರಿ ನಿಗದಿಪಡಿಸಲಾಗಿದೆ. ಇದು ಸಮಂಜಸವಲ್ಲದ ಕ್ರಮವಾಗಿದ್ದು, ಬೆಂಗಳೂರಿನಲ್ಲಿಯೂ ಸಹ 150 ಮನೆಗಳ ಗುರಿಯನ್ನೇ ನಿಗದಿಪಡಿಸಬೇಕು ಎಂದು ಸಂಘವು ಒತ್ತಾಯಿಸಿದೆ.

ವಿಶೇಷ ಚೇತನರಿಗೆ ವಿನಾಯಿತಿ ನೀಡಲು ಆಗ್ರಹ

ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ವಿಶೇಷಚೇತನ ನೌಕರರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ಒಂಟಿ ಪೋಷಕರು ಮತ್ತು 50 ವರ್ಷ ಮೇಲ್ಪಟ್ಟ ನೌಕರರಿಗೆ ಸಮೀಕ್ಷಾ ಕಾರ್ಯದಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಸಂಘವು ಆಗ್ರಹಿಸಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ, ಸಮೀಕ್ಷಾ ಕಾರ್ಯವು ಸುಗಮವಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಸಂಘವು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಒತ್ತಾಯಿಸಿದೆ.

Tags:    

Similar News