Manmohan Singh | ಮನಮೋಹನ್‌ ಸಿಂಗ್‌ ಹೆಸರಿನಲ್ಲಿ ಅಧ್ಯಯನ ಕೇಂದ್ರ: ಡಿ ಕೆ ಶಿವಕುಮಾರ್‌ ಘೋಷಣೆ

ಮಹಾನ್ ಮೇಧಾವಿಯ ಹೆಸರಿನಲ್ಲಿ ಬೆಂಗಳೂರು ವಿವಿಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ನೀತಿ ಸಂಶೋಧನಾ ಕೇಂದ್ರ ಮಾಡಬೇಕು. ಉನ್ನತ ಶಿಕ್ಷಣ ಸಚಿವರು ಇಲ್ಲೆ ಇದ್ದಾರೆ. ಅವರ ಬಳಿ ಮನವಿ ಮಾಡ್ತೇನೆ. ಜಾಗತಿಕ ಮಟ್ಟದ ಅಧ್ಯಯನ ಕೇಂದ್ರ ಆರಂಭಿಸಲಾಗುವುದು ಎಂದರು ಡಿ ಕೆ ಶಿವಕುಮಾರ್ ಘೋಷಿಸಿದರು.

Update: 2024-12-28 06:02 GMT

ಮಾಜಿ ಪ್ರಧಾನಿ ಹಾಗೂ ಜಾಗತಿಕ ಮನ್ನಣೆಯ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ ಮನಮೋಹನ ಸಿಂಗ್ ಅವರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ವತಿಯಿಂದ ಶುಕ್ರವಾರ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ರೂಪದಲ್ಲಿ ನಾವು ಮತ್ತೊಬ್ಬ ಗಾಂಧಿಯನ್ನು ಕಳೆದುಕೊಂಡಿದ್ದೇವೆ. ಮನಮೋಹನ್ ಸಿಂಗ್ ಅವರ ಅಗಲಿಕೆ ಭಾರತಕ್ಕಷ್ಟೇ ಅಲ್ಲ; ಇಡೀ ಜಗತ್ತಿಗೇ ದೊಡ್ಡ ನಷ್ಟ. ಅವರ ಜ್ಞಾನ ಮತ್ತು ಜನಪರ ಕಾಳಜಿಗೆ ಅವರೇ ಸಾಟಿ. ಅಂತಹ ಮಹಾನ್ ವ್ಯಕ್ತಿಯ ಹೆಸರಲ್ಲಿ ಬೆಂಗಳೂರು ವಿವಿಯಲ್ಲಿ ಅಧ್ಯಯನ ಕೇಂದ್ರ ಆರಂಭಿಸಿ, ಜಗತ್ತಿನ ಮೂಲೆಮೂಲೆಯಿಂದ ಆಸಕ್ತರು ಅಧ್ಯಯನಕ್ಕೆ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ದೇಶದ ಆರ್ಥ ವ್ಯವಸ್ಥೆ ಜಗತ್ತಿಗೆ ತೆರೆದುಕೊಂಡಿರಲಿಲ್ಲ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳ ಮೂಲಕ ಅವರು ದೇಶದ ಆರ್ಥಿಕತೆಯನ್ನು ಮುಕ್ತಗೊಳಿಸಿದರು. ಆ ಮೂಲಕ ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬಿದರು ಎಂದು ಹೇಳಿದರು.

ಪ್ರಧಾನಿ ಹುದ್ದೆಗೆ ಅವರನ್ನು ಆಯ್ಕೆ ಮಾಡಿದ್ದು ಸೋನಿಯಾ ಗಾಂಧಿ ಅವರು. ಸೋನಿಯಾ ಗಾಂಧಿಯವರ ತ್ಯಾಗದಿಂದ ದೇಶಕ್ಕೆ ಒಬ್ಬ ದೂರದೃಷ್ಟಿಯ, ಜನಪರ ಪ್ರಧಾನಿ ಸಿಕ್ಕರು. ಹತ್ತು ವರ್ಷ ಕಾಲ ದೇಶವನ್ನು ಸಂಕಷ್ಟದ ಹೊತ್ತಲ್ಲಿ ಅತ್ಯಂತ ದಿಟ್ಟತನದಿಂದ ಮುನ್ನಡೆಸಿದ್ದಲ್ಲದೆ ಭದ್ರ ಆರ್ಥಿಕ ಅಡಿಪಾಯ ಹಾಕಿದರು. ಜನಪರ ಕಾಯ್ದೆಗಳು ಮತ್ತು ಯೋಜನೆಗಳ ಮೂಲಕ ಪ್ರತಿ ಬಡವ, ಪ್ರತಿ ರೈತ, ಪ್ರತಿ ಮಹಿಳೆ, ಪ್ರತಿ ದಲಿತ, ಪ್ರತಿ ಅಲ್ಪಸಂಖ್ಯಾತರ ಬದುಕಿಗೆ ಆಸರೆ ಕಲ್ಪಿಸಿದರು. ಆ ಮೂಲಕ ಸೋನಿಯಾ ಗಾಂಧಿಯವರ ಆಯ್ಕೆ ಎಷ್ಟು ಮುಂದಾಲೋಚನೆಯಿಂದ ಕೂಡಿತ್ತು ಎಂಬುದನ್ನು ಡಾ ಮನಮೋಹನ್ ಸಿಂಗ್ ಸಾಬೀತು ಮಾಡಿದರು ಎಂದರು.

ಅಂತಹ ಮಹಾನ್ ಮೇಧಾವಿಯ ಹೆಸರಿನಲ್ಲಿ ಬೆಂಗಳೂರು ವಿವಿಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ನೀತಿ ಸಂಶೋಧನಾ ಕೇಂದ್ರ ಮಾಡಬೇಕು. ಉನ್ನತ ಶಿಕ್ಷಣ ಸಚಿವರು ಇಲ್ಲೆ ಇದ್ದಾರೆ. ಅವರ ಬಳಿ ಮನವಿ ಮಾಡ್ತೇನೆ. ಜಾಗತಿಕ ಮಟ್ಟದ ಅಧ್ಯಯನ ಕೇಂದ್ರ ಆರಂಭಿಸಲಾಗುವುದು ಎಂದರು ಡಿ ಕೆ ಶಿವಕುಮಾರ್ ಘೋಷಿಸಿದರು.

Tags:    

Similar News