ಕೇಂದ್ರದ ಅಸ್ಪಷ್ಟ ನಿಲುವು: ರಾಜ್ಯದ ಪ್ರಥಮ ರೋಪ್‌ವೇ ಯೋಜನೆ ಮತ್ತೆ ಅನಿಶ್ಚಿತ!
ನಂದಿಬೆಟ್ಟದ ಆಕರ್ಷಣೆಯನ್ನು ಇಮ್ಮಡಿಗೊಳಿಸಿ, ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ 'ರೋಪ್ ವೇ ಯೋಜನೆ' ದಶಕಗಳಿಂದ ಕನಸಾಗಿಯೇ ಉಳಿದಿದೆ. ಕೇಂದ್ರ ಅರಣ್ಯ ಇಲಾಖೆಯ ತಾಂತ್ರಿಕ ತಗಾದೆಯೇ ಇದಕ್ಕೆ ಕಾರಣವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೊಂದಿಕೊಂಡಿರುವ ಐತಿಹಾಸಿಕ, ನೈಸರ್ಗಿಕ ಸೌಂದರ್ಯ ತಾಣವಾಗಿರುವ ನಂದಿಬೆಟ್ಟವು ಕನ್ನಡಿಗರ ಪಾಲಿಗೆ ಹೆಮ್ಮೆ ಪ್ರವಾಸಿ ಕೇಂದ್ರ. ಈ ಗಿರಿಧಾಮದ ಆಕರ್ಷಣೆಯನ್ನು ಇಮ್ಮಡಿಗೊಳಿಸಿ, ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಮಹತ್ವಾಕಾಂಕ್ಷೆಯ 'ರೋಪ್ ವೇ ಯೋಜನೆ'ಯು ದಶಕಗಳಿಂದ ಕೇವಲ ಕನಸಾಗಿಯೇ ಉಳಿದಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬ್ಬರದ ಶಂಕುಸ್ಥಾಪನೆಯೊಂದಿಗೆ ಜೀವ ಪಡೆದಿದ್ದ ಈ ಯೋಜನೆ, ಇದೀಗ ಕೇಂದ್ರ ಅರಣ್ಯ ಇಲಾಖೆಯ ತಾಂತ್ರಿಕ ತಗಾದೆಗಳಿಂದಾಗಿ ಮತ್ತೆ ಸ್ಥಗಿತವಾಗಿದೆ. ಭೂಸ್ವಾಧೀನ, ಇಲಾಖೆಗಳ ಸಮನ್ವಯದ ಕೊರತೆ, ರಾಜಕೀಯ ಇಚ್ಛಾಶಕ್ತಿಯ ಅಭಾವದಂತಹ ವಿಘ್ನಗಳ ಸುದೀರ್ಘ ಸರಮಾಲೆಯನ್ನೇ ದಾಟಿ ಬಂದಿರುವ ಈ ಯೋಜನೆಗೆ ಇದೀಗ 'ನಿರಾಕ್ಷೇಪಣಾ ಪತ್ರ' (No Objection Certificate-NOC)ವೇ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಯೋಜನೆ ದಶಕಗಳಿಂದಲೂ ಕಡತಗಳ ನಡುವೆಯೇ ಸಿಲುಕಿಕೊಂಡಿದ್ದರೂ ತಾಂತ್ರಿಕ, ಆಡಳಿತಾತ್ಮಕ ಮತ್ತು ಅನುಮತಿ ಸಂಬಂಧಿತ ಅಡೆತಡೆಗಳನ್ನು ತಪ್ಪಿಸಿಕೊಂಡು ಮುಂದೆ ಸಾಗುತ್ತಿತ್ತು. ಆದರೆ, ಕೇಂದ್ರ ಅರಣ್ಯ ಇಲಾಖೆಯು ಯೋಜನೆಗೆ ಸಂಬಂಧಿಸಿದ ನಕ್ಷೆ ಮತ್ತು ಭೂಮಿ ದಾಖಲೆಗಳ ಗೊಂದಲಕ್ಕೆ ಸ್ಪಷ್ಟನೆ ಕೋರಿ, ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದ್ದು, ರೋಪ್ ವೇ ಯೋಜನೆಗೆ ಮತ್ತೆ ಬ್ರೇಕ್ ಬಿದ್ದಂತಾಗಿದೆ.
ನಂದಿಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಲು ಉದ್ದೇಶಿಸಿರುವ ರೋಪ್‌ವೇ ಯೋಜನೆಗೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಕೇಂದ್ರದಿಂದಲೂ ಕೇಂದ್ರದ ಅನುಮತಿ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಗಿರಿಧಾಮ ಗ್ರಾಮದ ಸರ್ವೇ ಸಂಖ್ಯೆ1ರಲ್ಲಿನ 0.36 ಹೆಕ್ಟೇರ್ ಅರಣ್ಯ ಬಳಕೆಗೆ ಪ್ರವಾಸೋದ್ಯರು ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ನೀಡಿದರೂ, ಕೇಂದ್ರದ ಅರಣ್ಯ ಇಲಾಖೆಯು ತಗಾದೆ ತೆಗೆದಿದೆ.
ದಾಖಲೆಯಲ್ಲಿನ ವ್ಯತ್ಯಾಸದಿಂದಾಗಿ ತಡೆ
ರೋಪ್ ವೇ ನಿರ್ಮಿಸುವ ಜಾಗದಲ್ಲಿರುವ ಅರಣ್ಯ ಪ್ರದೇಶವು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಕ್ಕೆ ಸೇರಿಲ್ಲ. ಹೀಗಾಗಿ ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು ಚಿಕ್ಕಬಳ್ಳಾಪುರ ಅರಣ್ಯಾಧಿಕಾರಿಗಳು ವರದಿ ನೀಡಿದ್ದರು. ಈ ವರದಿ ಆಧಾರದ ಮೇಲೆ ರಾಜ್ಯ ಅರಣ್ಯ ಇಲಾಖೆಯು ಸಹ ಒಪ್ಪಿಗೆ ನೀಡಿತ್ತು. ಯೋಜನೆಗೆ ಅನುಮೋದನೆ ನೀಡುವಂತೆ ರಾಜ್ಯ ಅರಣ್ಯ ಇಲಾಖೆಯು ಕೇಂದ್ರ ಅರಣ್ಯ ಇಲಾಖೆಗೆ ಕಳೆದ ಮೇ ತಿಂಗಳಲ್ಲಿ ಶಿಫಾರಸ್ಸು ಮಾಡಲಾಗಿತ್ತು.
ಆದರೆ ನಕ್ಷೆಯಲ್ಲಿ ಒಂದು ರೀತಿ ಮತ್ತು ದಾಖಲೆಗಳಲ್ಲಿ ಮತ್ತೊಂದು ರೀತಿಯಲ್ಲಿ ಭೂ ಒಡೆತನ ಉಲ್ಲೇಖವಾಗಿರುವುದನ್ನು ಅರಣ್ಯ ಇಲಾಖೆ ಗಮನಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸ್ಪಷ್ಟನೆ ಕೋರಿದೆ. ಯೋಜನೆಯ ನಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ನಮೂದಿಸಲಾದ ಜಾಗದ ವಿಸ್ತೀರ್ಣದಲ್ಲಿ ವ್ಯತ್ಯಾಸಗಳಿರುವುದು ಈ ತಗಾದೆಗೆ ಮೂಲ ಕಾರಣ. ಅರಣ್ಯ ಭೂಮಿಯ ನಿಖರವಾದ ಗಡಿ ಗುರುತಿಸುವಿಕೆ, ಯೋಜನಾ ವ್ಯಾಪ್ತಿಗೆ ಬರುವ ಭೂಮಿಯ ವರ್ಗೀಕರಣ (ಅರಣ್ಯ, ಕಂದಾಯ, ಖಾಸಗಿ) ಮತ್ತು ಗೋಪುರಗಳನ್ನು ನಿರ್ಮಿಸುವ ಸ್ಥಳಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ಕೇಂದ್ರ ಇಲಾಖೆ ಕೇಳಿದೆ. ಇದು ರಾಜ್ಯ ಸರ್ಕಾರಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಅರಣ್ಯೇತರ ಚಟುವಟಿಕೆಗಳಿಗೆ ಕೇಂದ್ರ ಅನುಮತಿ ಕಡ್ಡಾಯ!
ಅರಣ್ಯ ಸಂರಕ್ಷಣಾ ಕಾಯ್ದೆ, 1980ರ ಅಡಿಯಲ್ಲಿ, ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲು ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಈ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷಗಳಿದ್ದರೂ ಅನುಮತಿ ಸಿಗುವುದಿಲ್ಲ. ಹೀಗಾಗಿ, ರಾಜ್ಯದ ಅಧಿಕಾರಿಗಳು ಮಾಡಿದ ಸಣ್ಣಪುಟ್ಟ ತಪ್ಪುಗಳಿಂದಾಗಿ, ದಶಕಗಳ ಕಾಲ ಶ್ರಮಪಟ್ಟು ಪಡೆದಿದ್ದ ಎಲ್ಲಾ ಅನುಮತಿಗಳು ವ್ಯರ್ಥವಾಗುವ ಹಂತ ತಲುಪಿವೆ. ಬೆಟ್ಟದ ಮೇಲೆ ರೋಪ್ ವೇ ಮಾರ್ಗ ಸುಮಾರು 86ಗುಂಟೆ ಇದ್ದು, ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. ರೋಪ್ ವೇ ಕಾಮಗಾರಿಗೆ ಪಿಲ್ಲರ್‌ಗಳೇ ಪ್ರಮುಖವಾಗಿರುತ್ತವೆ.
ಕೇಂದ್ರದ ಅನುಮತಿ ದೊರಕಿದ ಬಳಿಕ ಕಾಮಗಾರಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿತ್ತು. ರೋಪ್ ವೇ ನಿರ್ಮಾಣ ಮಾಡುವ ಜಾಗವು ಅರಣ್ಯ ಪ್ರದೇಶಕ್ಕೆ ಸೇರಿದ್ದರಿಂದ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇದೀಗ ಕೇಂದ್ರ ಅರಣ್ಯ ಇಲಾಖೆಯ ತೊಡಕು ಎದುರಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಪತ್ರ ಪ್ರಕ್ರಿಯೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೊಡಗಿದ್ದಾರೆ.
ಪ್ರವಾಸೋದ್ಯಮದ ದೊಡ್ಡ ಕನಸು
ಬೆಂಗಳೂರು ನಗರದಿಂದ ಕೇವಲ 70 ಕಿ.ಮೀ. ದೂರದಲ್ಲಿರುವ ನಂದಿಬೆಟ್ಟ ರಾಜ್ಯದ ಅತ್ಯಂತ ಹೆಚ್ಚು ಭೇಟಿಯಾಗುವ ಗಿರಿಧಾಮಗಳಲ್ಲಿ ಒಂದಾದಗಿದೆ. ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಈ ಬೆಟ್ಟದಲ್ಲಿ ಸಂಚಾರದ ಒತ್ತಡ, ವಾಹನ ನಿಲುಗಡೆ ಕೊರತೆ, ಸಂಚಾರ ದಟ್ಟಣೆ, ಪರಿಸರ ಹಾನಿ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಾರಿಗೆ ಒತ್ತಡ ಕಡಿಮೆ ಮಾಡಲು ಮತ್ತು ಪ್ರವಾಸಿಗರಿಗೆ ಹೊಸ ಅನುಭವ ಒದಗಿಸಲು ರೋಪ್ ವೇ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿತ್ತು. ರಾಜ್ಯದಲ್ಲಿಯೇ ಪ್ರಪ್ರಥಮ ರೋಪ್ ವೇ ಯೋಜನೆ ಇದಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಕೂತೂಹಲ ಮೂಡಿಸಿದೆ. ಈ ಯೋಜನೆ ಅನುಷ್ಠಾನಗೊಂಡರೆ ನಂದಿಬೆಟ್ಟಕ್ಕೆ ಹೋಗುವ ಮಾರ್ಗದ ಸಂಚಾರ ತೀವ್ರತೆ ಕಡಿಮೆಯಾಗುವುದಲ್ಲದೆ, ಪ್ರವಾಸಿಗರ ಸುರಕ್ಷಿತ ಚಲನವಲನ, ಪರಿಸರ ಸ್ನೇಹಿ ಸಂಚಾರದ ಉತ್ತೇಜನ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಸಹಾಯವಾಗಲಿದೆ ಎಂಬುದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿವೆ.
ನಂದಿಬೆಟ್ಟವು ರಾಜ್ಯದ ಪ್ರಮುಖ ಗಿರಿಧಾಮವಾಗಿದೆ. ಪ್ರತಿ ದಿನ ಪ್ರವಾಸಿಗಳ ಸಂಖ್ಯೆಯ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ನಂದಿಬೆಟ್ಟದ ಮೇಲೆ ತೆರಳಬೇಕಾದರೆ ಸಂಚಾರ ದಟ್ಟಣೆ ಉಂಟಾಗಲಿದೆ. ಬೆಟ್ಟದ ಆಸುಪಾಸು ಹಾಗೂ ತಪ್ಪಲಿನಲ್ಲಿ ರೆಸಾರ್ಟ್‌ಗಳಿದ್ದು, ಪ್ರವಾಸಿಗರ ದಂಡೇ ಆಗಮಿಸಲಿದೆ. ಹಾಗಾಗಿ, ರಾಜ್ಯ ಸರ್ಕಾರ ತ್ವರಿತವಾಗಿ ರೋಪ್ ವೇ ನಿರ್ಮಿಸಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಯೋಜನೆ ಸಂಬಂಧ ಸರ್ಕಾರದ ಜವಾಬ್ದಾರಿ
ನಂದಿಬೆಟ್ಟದ ರೋಪ್ ವೇ ಯೋಜನೆ ಇದೀಗ ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿದೆ. ಈ ಯೋಜನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕಿದೆ. ಸರ್ಕಾರ ಕೈಗೊಳ್ಳಬೇಕಾದ ಜವಾಬ್ದಾರಿ ಇಂತಿವೆ.
1. ತಾಂತ್ರಿಕ ದೋಷಗಳ ಸರಿಪಡಿಸುವಿಕೆ:
ಕೇಂದ್ರ ಅರಣ್ಯ ಇಲಾಖೆ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಮತ್ತು ಸ್ಪಷ್ಟೀಕರಣವನ್ನು ಒದಗಿಸಬೇಕು. ಇದಕ್ಕಾಗಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ನಡೆಸಿ, ಗೊಂದಲಗಳನ್ನು ಬಗೆಹರಿಸಬೇಕಾಗಿದೆ.
2. ರಾಜಕೀಯ ಇಚ್ಛಾಶಕ್ತಿ:
ರಾಜ್ಯ ಸರ್ಕಾರವು ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಶೀಘ್ರವಾಗಿ ಅನುಮೋದನೆ ಪಡೆಯಲು ಪ್ರಯತ್ನಿಸಬೇಕಾಗಿದೆ.
3. ಪರಿಸರ ಸ್ನೇಹಿ ಮಾದರಿ:
ಪರಿಸರವಾದಿಗಳ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಿ, ಕನಿಷ್ಠ ಪರಿಸರ ಹಾನಿಯಾಗುವಂತೆ ಯೋಜನೆಯ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಬೇಕು. ಕಡಿಯುವ ಪ್ರತಿ ಮರಕ್ಕೆ ಪ್ರತಿಯಾಗಿ ಹತ್ತು ಪಟ್ಟು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸುವಂತಹ ಕಠಿಣ ಷರತ್ತುಗಳನ್ನು ವಿಧಿಸಬೇಕು.
ಯೋಜನೆಗೆ ಎದುರಾಗಿರುವ ತಾಂತ್ರಿಕ ಅಡ್ಡಿಗಳು:
1. ನಕ್ಷೆಯಲ್ಲಿನ ಭೂಮಿಯ ವ್ಯಾಪ್ತಿ ಮತ್ತು ದಾಖಲೆಯಲ್ಲಿನ ಆಯಾಮಗಳ ವ್ಯತ್ಯಾಸ ಇದೆ. ಕೆಲವು ಸ್ಥಳಗಳಲ್ಲಿ ಅರಣ್ಯ ಭೂಮಿ ಮಿತಿಗಳು ನಕ್ಷೆಗಳಲ್ಲಿ ಸೂಕ್ತವಾಗಿ ಗುರುತಿಸಿಲ್ಲ ಮತ್ತು ಪೇಪರ್ ದಾಖಲೆಗಳು ಹಾಗೂ ಜಿಯೊ-ಟ್ಯಾಗ್ ಮಾಡಿದ ನಕ್ಷೆಗಳಲ್ಲಿ ಅಸಮಾನತೆ.
2. ಭೂಸ್ವಾಧೀನ ಮತ್ತು ಜಮೀನು ಹಸ್ತಾಂತರ ಪ್ರಕ್ರಿಯೆಗಳ ಅಪೂರ್ಣತೆ ಇದೆ. ರಾಜ್ಯ ಸರ್ಕಾರ ಕೆಲವು ಹಂತಗಳನ್ನು ಪೂರ್ಣಗೊಳಿಸಿದರೂ, ಕೇಂದ್ರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಸಂಪೂರ್ಣ ಚಿತ್ರಣ ಲಭ್ಯವಾಗಿಲ್ಲ.
3. ಪರಿಸರ ಪರಿಣಾಮ ಅಧ್ಯಯನದಲ್ಲಿ ಕೆಲವು ಸ್ಪಷ್ಟನೆಗಳ ಕೊರತೆ ಇರುವುದು ಗೊತ್ತಾಗಿದೆ. ರೋಪ್‌ವೇ ಯಂತ್ರ, ಪಿಲ್ಲರ್‌ಗಳ ಸ್ಥಾಪನೆಗೆ ಬೇಕಾದ ಭೂಮಿಯ ವಿವರಗಳು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಹೇಳಲಾಗಿದೆ.
ಪರಿಸರವಾದಿಗಳ ವಿರೋಧ ಮತ್ತು ಕಾಳಜಿ
ಈ ಯೋಜನೆಯು ಕೇವಲ ಆಡಳಿತಾತ್ಮಕ ವಿಳಂಬವನ್ನಷ್ಟೇ ಎದುರಿಸುತ್ತಿಲ್ಲ. ಬದಲಿಗೆ ಪರಿಸರವಾದಿಗಳಿಂದಲೂ ತೀವ್ರ ವಿರೋಧವನ್ನು ಎದುರಿಸುತ್ತಿದೆ. ನಂದಿಬೆಟ್ಟವು ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಆಶ್ರಯ ತಾಣವಾಗಿದೆ. ರೋಪ್ ವೇ ನಿರ್ಮಾಣದಿಂದ ಆಗಬಹುದಾದ ಪರಿಸರ ಹಾನಿಯ ಕುರಿತು ಆತಂಕ ವ್ಯಕ್ತವಾಗಿದೆ. ಗೋಪುರಗಳ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ನೂರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದು ಬೆಟ್ಟದ ಪರಿಸರ ಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತದೆ. ವನ್ಯಜೀವಿಗಳಿಗೆ ತೊಂದರೆ: ನಿರ್ಮಾಣ ಕಾರ್ಯದ ಶಬ್ದ ಮತ್ತು ನಿರಂತರ ಮಾನವ ಚಟುವಟಿಕೆಗಳಿಂದಾಗಿ ಇಲ್ಲಿನ ವನ್ಯಜೀವಿಗಳು ಮತ್ತು ಪಕ್ಷಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತದೆ. ಭೂಕುಸಿತದ ಅಪಾಯ: ಬೆಟ್ಟದ ಇಳಿಜಾರಿನಲ್ಲಿ ಭಾರೀ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡರೆ, ಮಳೆಗಾಲದಲ್ಲಿ ಭೂಕುಸಿತದಂತಹ ನೈಸರ್ಗಿಕ ವಿಕೋಪಗಳು ಸಂಭವಿಸುವ ಅಪಾಯವಿದೆ.
ಯೋಜನೆಯ ಉದ್ದೇಶ
ಪ್ರವಾಸೋದ್ಯಮ ಇಲಾಖೆಯು ನಂದಿಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಅವರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುವ ಉದ್ದೇಶದಿಂದ ಈ ರೋಪ್ ವೇ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ, ನಂದಿಬೆಟ್ಟಕ್ಕೆ ತೆರಳಲು ಕಿರಿದಾದ ಘಾಟ್ ರಸ್ತೆಯೊಂದೇ ಮಾರ್ಗವಾಗಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ರೋಪ್ ವೇ ನಿರ್ಮಾಣವಾದರೆ, ವಾಹನಗಳನ್ನು ತಪ್ಪಲಿನಲ್ಲಿಯೇ ನಿಲ್ಲಿಸಿ, ಪ್ರವಾಸಿಗರು ಸುಲಭವಾಗಿ ಬೆಟ್ಟವನ್ನು ತಲುಪಬಹುದು. ಇದರಿಂದ ಮಾಲಿನ್ಯ ಮತ್ತು ಶಬ್ದಕ್ಕೂ ಕಡಿವಾಣ ಬೀಳಲಿದೆ. ರೋಪ್ ವೇ ಮೂಲಕ ಆಗಸದಲ್ಲಿ ತೇಲುತ್ತಾ, ಹಸಿರು ಹೊದ್ದ ಬೆಟ್ಟಗಳ ವಿಹಂಗಮ ನೋಟವನ್ನು ಸವಿಯುವುದು ಪ್ರವಾಸಿಗರಿಗೆ ಒಂದು ರೋಮಾಂಚಕ ಅನುಭವ ನೀಡುತ್ತದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೆ ಒಂದು ಹೊಸ ಆಕರ್ಷಣೆಯಾಗಿ ಸೇರ್ಪಡೆಯಾಗಲಿದೆ. ಯೋಜನೆಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಹೋಟೆಲ್, ವ್ಯಾಪಾರ-ವಹಿವಾಟುಗಳಿಗೂ ಉತ್ತೇಜನ ಸಿಗಲಿದೆ. ಈ ಯೋಜನೆಯು ಸುಮಾರು 2.93 ಕಿಲೋಮೀಟರ್ ಉದ್ದವಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು 18 ಗೋಪುರಗಳನ್ನು ನಿರ್ಮಿಸಲಾಗುತ್ತದೆ ಮತ್ತು ಪ್ರತಿ ಕ್ಯಾಬಿನ್‌ನಲ್ಲಿ 8-10 ಮಂದಿ ಪ್ರಯಾಣಿಸಬಹುದಾಗಿದೆ ಎಂಬುದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ನಂದಿಬೆಟ್ಟದ ರೋಪ್ ವೇ ಯೋಜನೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಬಲಿಕೊಡುವುದು ಸಮರ್ಥನೀಯವಲ್ಲ. ಆಡಳಿತಾತ್ಮಕ ನಿರ್ಲಕ್ಷ್ಯ, ತಾಂತ್ರಿಕ ದೋಷಗಳು ಮತ್ತು ಪರಿಸರ ಕಾಳಜಿಗಳ ನಡುವೆ ಸಿಲುಕಿರುವ ಈ ಯೋಜನೆಯ ಹಗ್ಗಜಗ್ಗಾಟವನ್ನು ಸರ್ಕಾರವು ಶೀಘ್ರವಾಗಿ ಕೊನೆಗೊಳಿಸಬೇಕಿದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸಿ, ದಶಕಗಳ ಈ ಕನಸನ್ನು ನನಸು ಮಾಡುವ ಜವಾಬ್ದಾರಿ ಮತ್ತು ಸವಾಲು ಸರ್ಕಾರದ ಮುಂದಿದೆ.